ಪದೇ ಪದೇ ಚೀನಾದ ಬಗ್ಗೆಯೇ ಹೇಳಬೇಕಾಗಿ ಬರ್ತಿದೆ. ಕಳೆದ ಹಲವು ದಶಕಗಳಿಂದಲೂ ಚೀನಾ ಬಗ್ಗೆ ಹೇಳಿದಷ್ಟೂ ಕಡಿಮೆಯೇ ಎಂಬಂತಾಗಿ ಬಿಟ್ಟಿದೆ. ಕಾರಣ ಚೀನಾದ ನಿರಂತರ ಆಕ್ರಮಣಕಾರಿ ಮನಸ್ಥಿತಿ. ಈಗಂತೂ ಜಗತ್ತಿನಲ್ಲಿ ಚೀನಾದ ಹೆಸರೇ ಎಲ್ಲಾ ಕಡೆ ಕೇಳಿಬರುತ್ತೆ. ಕಾರಣ ಕೊರೊನಾ ವೈರಸ್. ಆದ್ರೆ ನಾವು ಈಗ ಹೇಳ್ತಾ ಇರೋದು ಮತ್ತೆ ಅದೇ ಚೀನಾದ ಆಕ್ರಮಣಕಾರಿ ನಿಲುವಿನ ಬಗ್ಗೆ.

ದೊಡ್ಡ ದೊಡ್ಡ ಹಡಗುಗಳಲ್ಲಿರುವ ಯಂತ್ರಗಳು ಸಾಗರದಲ್ಲಿನ ಮರಳನ್ನು ಮೊಗೆದು ಮೊಗೆದು ದಡಕ್ಕೆ ಚೆಲ್ಲುತ್ತಿವೆ. ಬೃಹತ್ ಯಂತ್ರಗಳು ಇಲ್ಲಿ ಘರ್ಜಸುತ್ತಿವೆ. ದೊಡ್ಡ ದೊಡ್ಡ ಕಂಟೈನರ್ಗಳು ಸರಿದಾಡುತ್ತಿವೆ. ಹಗಲು ರಾತ್ರಿ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಸಾಗರ ತೀರದಲ್ಲಿ ವಿಶಾಲವಾಗಿದ್ದೊಂದು ಬಂದರು ಇಲ್ಲಿ ನಿರ್ಮಾಣವಾಗ್ತಾ ಇದೆ. ಇದು ಆಗ್ತಿರೋದು ಶ್ರೀಲಂಕಾದಲ್ಲಿ. ದ್ವೀಪ ರಾಷ್ಟ್ರ ಶ್ರೀಲಂಕಾದ ಈ ಆಯಕಟ್ಟಿನ ಜಾಗದಲ್ಲಿ ಹೀಗೆ ಬಂದರು ನಿರ್ಮಾಣ ಮಾಡ್ತಾ ಇರೋದು ಚೀನಾ. ಚೀನಾ ಈ ಬಂದರು ನಿರ್ಮಾಣ ಮಾಡಿ ಶ್ರೀಲಂಕಾಕ್ಕೆ ಗಿಫ್ಟ್ ಕೊಡ್ತಾ ಇಲ್ಲ. ಅಥವಾ ಶ್ರೀಲಂಕಾವೇ ಖುದ್ದು ಚೀನಾಕ್ಕೆ ಬಂದರು ಕಟ್ಟಿಕೊಡಿ ಅಂತ ಗುತ್ತಿಗೆ ಕೊಟ್ಟಿಲ್ಲ. ಆದರೂ ಚೀನಾ ಇಲ್ಲಿ ಬಂದರು ಕಟ್ತಾ ಇದೆ. ಇದು ಸಾಮಾನ್ಯ ಬಂದರು ಅಲ್ಲ. ಇಲ್ಲಿ ನಿರ್ಮಾಣ ಆಗ್ತಾ ಇರೋದು ಸಾಮಾನ್ಯ ಹಡಗುಕಟ್ಟೆ ಅಲ್ಲ. ಇದು ಮುಂದಿನ ದಿನಗಳಲ್ಲಿ ಚೀನಾದ ಮಿಲಿಟರಿ ನೆಲೆಯಾದರೂ ಅಚ್ಚರಿ ಇಲ್ಲ. ಶ್ರೀಲಂಕಾದಲ್ಲಿ ಚೀನಾದ ನೆಲೆನಾ. ಯಸ್. ಈ ಬಂದರಿನ ಹಿಂದಿರುವ ಚೀನಾದ ಕುತಂತ್ರ, ಆದರ ಆಕ್ರಮಣಕಾರಿ ನಿಲುವು ಎಲ್ಲವನ್ನೂ ನಿಮಗೆ ಹೇಳ್ತಾ ಹೋಗ್ತೀವಿ ಓದಿ.

ಚೀನಾ ಯಾವತ್ತೂ ಹಾಗೆ. ಮೊದಲು ಸ್ನೇಹಪೂರ್ವಕ ನಡೆ. ಕೇಳದಿದ್ದರೆ ನಾ ಬಿಡೆ ಅಂತಾ ಹೇಳುತ್ತೆ. ಶಕ್ತಿ ಹೀನರು ಅಂತ ಗೊತ್ತಾಗಿಬಿಟ್ಟರಂತೂ ಕಣ್ಣ ಸನ್ನೆಯ ಮೂಲಕವೇ ಬೆದರಿಸುತ್ತಿರುತ್ತದೆ, ಇಲ್ಲವೇ ಕೈಗೊಂಬೆಯನ್ನಾಗಿ ಮಾಡಿಕೊಂಡು ಬಿಡುತ್ತದೆ. ಚೀನಾವನ್ನು ಆಳುತ್ತಿರೋರು ಜಿನ್ ಪಿಂಗ್. ಇಲ್ಲಿ ಸರ್ವಾಧಿಕಾರತ್ವವೇ ಪ್ರಭುತ್ವ. ಆಕ್ರಮಣಶೀಲತೆಯೇ ಮನಸ್ಥಿತಿ. ವಿಸ್ತರಣಾವಾದವೇ ಮೂಲ ಸಿದ್ಧಾಂತ. ಚೀನಾದ ಪ್ರತಿ ಹೆಜ್ಜೆಯಲ್ಲೂ ಇದು ಸ್ಪಷ್ಟವಾಗಿಯೇ ಕಾಣಿಸುತ್ತದೆ. ಅವತ್ತು ಭಾರತದೊಂದಿಗೆ ಸ್ನೇಹಪೂರ್ವಕವಾಗಿದ್ದ ಚೀನಾ ಕೊನೆಗೆ ಮಾಡಿದ್ದೇನು? ಟಿಬೆಟ್ ನಲ್ಲಿ ಬಂದು ಕುಳಿತ ಚೀನಾ ಇವತ್ತಿನವರೆಗೂ ಜಾಗ ಬಿಟ್ಟು ಕದಲದೇ ಇರೋದ್ಯಾಕೆ? ಪಾಕಿಸ್ತಾನದ ಮೂಲಕ ಸಾಗರ ತೀರಕ್ಕೆ ತಲುಪುವಂತೆ ಎಕನಾಮಿಕ್ ಕಾರಿಡಾರ್ ಹೆಸರಿನಲ್ಲಿ ಮಾಸ್ಟರ್ ಪ್ಲಾನ್ ರೂಪಿಸಿದ್ಯಾಕೆ? ನೇಪಾಳ ದಿಢೀರ್ ಅಂತ ಗಡಿ ನಕ್ಷೆಯನ್ನೇ ಬದಲಿಸಿ ಭಾರತದ ವಿರುದ್ಧವೇ ದನಿಯೆತ್ತುವಂತಾಗಿದ್ದು ಯಾಕೆ? ಇದನ್ನೆಲ್ಲ ಗಮನಿಸಿದರೆ ಭಾರತದ ನೆರೆಯ ರಾಷ್ಟ್ರಗಳನ್ನೇ ಬಳಸಿಕೊಂಡು ಕಟ್ಟಿ ಹಾಕಲು ಪ್ರಯತ್ನಿಸುತ್ತಿರೋದು ಸ್ಪಷ್ಟ. ಜಿನ್ ಪಿಂಗ್ ಸುಲಭವಾಗಿ ಅರ್ಥವಾಗುವವರಲ್ಲ. ಭಾರತದ ವಿರುದ್ಧ ನೇರವಾಗಿ ಗಡಿಯಂಚಿಗೆ ಬಂದು ನಿಂತು ಬಿಡೋದು, ಇಲ್ಲವಾದರೆ ನೆರೆಯ ರಾಷ್ಟ್ರಗಳಲ್ಲಿ ಬಂದು ಕುಳಿತು ಬೇಲಿ ಕಟ್ಟೋದು ಇದೇ ಕೆಲಸ ಚೀನಾಕ್ಕೆ.

ಸಹಾಯ ಹಸ್ತ ಚಾಚಿದಂತೆ ಮಾಡೋದು ಒಂದು ತಂತ್ರ
ನಿಧಾನವಾಗಿ ಒಳಹೋಗಿ ಕುಳಿತು ನೆೆಲೆ ಸ್ಥಾಪಿಸುವ ಕುತಂತ್ರ

ಚೀನಾ ಮಾಡೋದೇ ಹೀಗೆ. ಸಣ್ಣ ಪುಟ್ಟ ರಾಷ್ಟ್ರಗಳು ಸಿಕ್ಕಿದರೆ ಸಾಕು ತನ್ನ ಸಾಮ್ರಾಜ್ಯ ವಿಸ್ತರಣೆಗೆ ಆ ರಾಷ್ಟ್ರದ ನೆಲದಿಂದ ಅನುಕೂಲವಾಗುತ್ತೆ ಅಂತ ಗೊತ್ತಾಗಿ ಬಿಟ್ಟರೆ ಸಾಕು. ಚೀನಾ ತನ್ನ ತಂತ್ರ ಶುರು ಮಾಡಿ ಬಿಡುತ್ತದೆ. ಮೊದಲು ಸಹಾಯ ಹಸ್ತ ಚಾಚಿದಂತೆ ಮಾಡುತ್ತದೆ. ಬಳಿಕ ನಿಧಾನವಾಗಿ ಕೈ ಕುಲುಕುತ್ತದೆ. ಬಳಿಕ ಅಲ್ಲೊಂದು ಉದ್ಯಮದ ಮಾತನಾಡುತ್ತದೆ. ತಾನೇ ಎಲ್ಲವನ್ನೂ ಕಟ್ಟಿ ಕೊಡೋದಾಗಿ ಹೇಳುತ್ತೆ. ನುಡಿದಂತೆಯೇ ನಡೆದುಕೊಳ್ಳುತ್ತೆ. ಕೊನೆಗೊಂದು ದಿನ ತಾನೇ ಬಂದು ಕುಳಿತುಬಿಡುತ್ತೆ. ಇದೇ ಚೀನಾದ ಕುತಂತ್ರ. ಈಗ ಶ್ರೀಲಂಕಾದಲ್ಲಿ ಮಾಡ್ತಾ ಇರೋದು ಇದೇ ಕೆಲಸ. ಚೀನಾದ ವಿಸ್ತರಣಾ ವಾದವನ್ನು ಯಾರೂ ಒಪ್ಪಲು ಸಾಧ್ಯವೇ ಇಲ್ಲ. ಆದ್ರೆ ಚೀನಾ ಇದನ್ನು ಬಿಡೋದೇ ಇಲ್ಲ. ಚೀನಾಕ್ಕೆ ಏಷ್ಯಾದಲ್ಲಿ, ಜಗತ್ತಿನಲ್ಲಿ ತಾನೇ ದೊಡ್ಡಣ್ಣನಾಗಬೇಕೆಂಬ ಮಹಾತ್ವಾಕಾಂಕ್ಷೆ. ಅದರಲ್ಲೂ ಏಷ್ಯಾ ಖಂಡದಲ್ಲಿ ತನಗಾರೂ ಸಮವಿಲ್ಲ ಅನ್ನೋ ಭಾವನೆ. ಆದರೆ ಪ್ರತಿಸ್ಪರ್ಧಿಯಾಗಿರೋದು ಭಾರತ. ಇತ್ತೀಚಿನ ದಶಕಗಳಲ್ಲಂತೂ ವಿಶ್ವದಲ್ಲೇ ಭಾರತದ ಪ್ರತಿಷ್ಠೆ ಹೆಚ್ಚಾಗ್ತಾ ಇರೋದು ಚೀನಾಕ್ಕೆ ಸಹಿಸಲು ಆಗ್ತಾ ಇಲ್ಲ. ಹೀಗಾಗಿ ಹೇಗಾದರೂ ಮಾಡಿ ಭಾರತದ ಸುತ್ತ ಮುತ್ತಲಿನ ದೇಶಗಳನ್ನೆಲ್ಲ ಕಂಟ್ರೋಲ್ಗೆ ತೆಗೆದುಕೊಂಡು ನಿಯಂತ್ರಿಸಲು ಸದಾ ಹುನ್ನಾರ ನಡೆಸೋದೇ ಚೀನಾ. ಇದರ ಮತ್ತೊಂದು ಅಧ್ಯಾಯವೇ ಈ ಶ್ರೀಲಂಕಾ ಬಂದರು ನಿರ್ಮಾಣ.

ಕನ್ಯಾಕುಮಾರಿಯಿಂದ ತೀರಾ ಹತ್ತಿರದಲ್ಲೇ ಚೀನಾ ಬಂದರು
ಶ್ರೀಲಂಕಾಕ್ಕೆ ಲಸಿಕೆ ಉಡುಗೊರೆ, ಮುಂದೆ ಆಗಲಿದ್ಯಾ ಹೊರೆ?

ಚೀನಾ ನಿರ್ಮಿಸುತ್ತಿರುವ ಈ ಬಂದರು ಭಾರತದ ದಕ್ಷಿಣದ ತುದಿ ಕನ್ಯಾಕುಮಾರಿಯಿಂದ ಕೇವಲ ಮೂನ್ನೂರು ಕಿಲೋ ಮೀಟರ್ ದೂರದಲ್ಲೇ ಇದೆ. ಭಾರತದ ಗಡಿಗೆ ಅಲ್ಲಿಂದ ನಿಮಿಷಗಳ ಲೆಕ್ಕದಲ್ಲಿ ಬಂದು ತಲುಪಿಬಿಡಬಹುದು. ಇಲ್ಲೇ ಚೀನಾದ ಬಂದರು ನಗರ ನಿರ್ಮಾಣವಾಗ್ತಾ ಇದೆ. ಪೋರ್ಟ್ ಸಿಟಿಯಲ್ಲಿ ಈಗ ಭರದಿಂದ ಕೆಲಸ ನಡೀತಾ ಇದೆ. ಯಾವಾಗ ಶ್ರೀಲಂಕಾ ಈ ಬಂದರು ನಿರ್ಮಾಣಕ್ಕಾಗಿ ಚೀನಾವನ್ನು ಒಳಗೆ ಬಿಟ್ಟುಕೊಂಡಿತೋ ತಕ್ಷಣ 5 ಲಕ್ಷ ಕೊರೊನಾ ಲಸಿಕೆಗಳನ್ನೂ ಕೂಡ ಶ್ರೀಲಂಕಾಕ್ಕೆ ಚೀನಾ ಉಡುಗೊರೆಯಾಗಿ ನೀಡಿಬಿಟ್ಟಿದೆಯಂತೆ. ಆಹಾ ಎಷ್ಟೊಂದು ಉದಾರತೆ. ಇದು ಈಗ ಉಡುಗೊರೆ, ಮುಂದೆ ಏನಾಗುತ್ತೆ ಗೊತ್ತಿಲ್ಲ. ಪಾಕಿಸ್ತಾನದ ಕಥೆ ಇವತ್ತು ಏನಾಗಿದೆ.. ಚೀನಾದ ಅಣತಿಯಂತೆ ನಡೆಯುವ ಪರಿಸ್ಥಿತಿ. ಶ್ರೀಲಂಕಾಗೆ ಈಗ ಅರ್ಥವಾಗುತ್ತಿಲ್ಲ. ಮುಂದೆ ಶ್ರೀಲಂಕಾ ಕೂಡ ಇದೇ ಅನಿವಾರ್ಯತೆ ಎದುರಿಸಬೇಕಾಗಬಹುದು.

ಸಾಲ ಬೇಕು ಅಂದ್ರೆ ಸಾಕು ತಕ್ಷಣ ಕೊಟ್ಟುಬಿಡ್ತು ಚೀನಾ
ಸಾಲ ತಗೋಂಡಿದ್ದೇ ತಗೋಂಡಿದ್ದು ಶ್ರೀಲಂಕಾಕ್ಕೆ ಬಂದಿಳಿತು ಚೀನಾ ಟೀಂ

ಕೊರೊನಾ ಸಾಂಕ್ರಾಮಿಕ ಯಾವ ದೇಶವನ್ನೂ ಬಿಟ್ಟಿಲ್ಲ. ಎಲ್ಲಾ ದೇಶಗಳಲ್ಲೂ ಆರ್ಥಿಕ ಸಂಕಷ್ಟ ತಂದಿಟ್ಟಿದೆ. ಕೆಲವು ದೇಶಗಳಂತೂ ಇದರಿಂದ ತತ್ತರಿಸಿ ಹೋಗಿವೆ. ಅಂಥಾ ದೇಶಗಳಲ್ಲಿ ಶ್ರೀಲಂಕಾವೂ ಒಂದು. ಈ ಆರ್ಥಿಕ ಹಿಂಜರಿತ ಸರಿಪಡಿಸಿಕೊಳ್ಳಲು ಶ್ರೀಲಂಕಾ ಸಾಲ ಕೇಳಿದ್ದೇ ಕೇಳಿದ್ದು ಚೀನಾ ಹಿಂದೆ ಮುಂದೆ ನೋಡದೇ ಯಸ್ ಅಂದುಬಿಟ್ಟಿತ್ತು. 500 ಮಿಲಿಯನ್ ಡಾಲರ್ ಸಾಲದ ಮಾತುಕತೆ ನಡೆದಿದ್ದೇ ನಡೆದಿದ್ದು. ಶ್ರೀಲಂಕಾಕ್ಕೆ ಬಂದಿಳಿತೇ ಬಿಟ್ಟಿತ್ತು ಚೀನಾದ ಟೀಂ. ಭಾರತಕ್ಕೆ ಟಾಂಗ್ ಕೊಡಲೆಂದೇ ಸದಾ ಕಾಯುವ ಚೀನಾ ಇಂಥಾ ಅವಕಾಶ ಬಿಡುತ್ತಾ. ಖಂಡಿತ ಇಲ್ಲ.. ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರದಲ್ಲಿ ತನ್ನ ಪ್ರಭಾವ ಬಳಸಿಕೊಂಡು ಬಂದು ಕುಳಿತು ಬಿಟ್ಟಿದೆ. ಇದೀಗಾ ಚೀನಾ ಹಾರ್ಬರ್‌ ಎಂಜಿನಿಯರಿಂಗ್‌ ಕಂಪನಿಯದ್ದೇ ಇಲ್ಲಿ ಕಾರುಬಾರು. ‘ಕೊಲಂಬೊ ಪೋರ್ಟ್‌ ಸಿಟಿ’ ನಿರ್ಮಾಣವಾಗ್ತಾ ಇದೆ. ನೋಡೋದಕ್ಕೆ ಇದೊಂದು ಸಾಮಾನ್ಯ ಬಂದರು. ಆದ್ರೆ ಮುಂದೆ ಭಾರತದ ದಕ್ಷಿಣದಲ್ಲಿ ಚೀನಾದ ಕಂಟ್ರೋಲ್ ರೂಂ ಆಗಿ ಬಿಟ್ಟರೆ ಅದು ಮತ್ತೊಂದು ಸವಾಲಾಗಿ ಬಿಡುತ್ತದೆ.

ಸಾಲದ ಸುಳಿಗೆ ಸಿಲುಕಿಸುವ ಚೀನಾದ ರಾಜತಾಂತ್ರಿಕತೆ
99 ವರ್ಷಗಳ ಕಾಲ ಬಂದರು ಗುತ್ತಿಗೆಗೆ ಕೊಟ್ಟ ಶ್ರೀಲಂಕಾ

ಸಾಲದ ಸುಳಿಗೆ ಸಿಲುಕಿಸಿ ರಾಜತಾಂತ್ರಿಕತೆ ಮೆರೆಯುವ ಚೀನಾದ ಹುನ್ನಾರ ಶ್ರೀಲಂಕಾದಲ್ಲೂ ಸಕ್ಸಸ್ ಆಗಿದೆ. ಸಾಲ ಕೊಡುವ ಮಾತುಕತೆ ಆಗಿದ್ದೇ ತಡ ಈ ಬಂದರು ಪ್ರದೇಶವನ್ನು ಚೀನಾ ಮುಂದಿನ 99 ವರ್ಷಗಳಿಗೆ ಗುತ್ತಿಗೆಗೆ ಪಡೆದುಕೊಂಡು ಬಿಟ್ಟಿದೆ. ಮುಂದೆ ಅಲ್ಲಿ ಏನು ಮಾಡುತ್ತೋ, ಮಿಲಿಟರಿ ನೆಲೆಯನ್ನೇ ಸ್ಥಾಪನೆ ಮಾಡಿಕೊಂಡು ಬಿಡುತ್ತೋ, ಆ ಮೂಲಕ ಹಿಂದೂ ಮಹಾಸಾಗರದ ಮೇಲೆ ನಿಯಂತ್ರಣ ಸಾಧಿಸಲು ಬೇಲಿ ಹಾಕಿಕೊಂಡು ಕುಳಿತು ಬಿಡುತ್ತೋ ಗೊತ್ತಿಲ್ಲ. ಆದರೆ, ಚೀನಾದ ಮುಂದಾಲೋಚನೆ ಇಲ್ಲದೆ ಯಾವ ಕೆಲಸವನ್ನೂ ಮಾಡೋದಿಲ್ಲ. ಚೀನಾದ ವಿಸ್ತರಣಾವಾದ ಹಿಂದಿನಿಂದಲೂ ಇತ್ತು. ಮುಂದೆಯೂ ಇರಲಿದೆ ಅನ್ನೋದಕ್ಕೆ ಇದೆಲ್ಲ ನಿದರ್ಶನ ಅಷ್ಟೇ.

ಶ್ರೀಲಂಕಾದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವ ಆತಂಕ
ದ್ವೀಪ ರಾಷ್ಟ್ರದಲ್ಲೇ ಈಗಲೇ ಶುರುವಾಯ್ತು ಅಪನಂಬಿಕೆ
ವಿರೋಧ ಇದ್ರೂ ಬರೆದುಕೊಟ್ಟು ಬಿಟ್ರು ರಾಜಪಕ್ಸೆ ಜೋಡಿ

ಯಾವ ದೇಶವೂ ತನ್ನ ದೇಶದೊಳಗೆ ಇನ್ನೊಂದು ದೇಶದವರನ್ನು ಸುಲಭವಾಗಿ ಬಿಟ್ಟುಕೊಳ್ಳುವುದೂ ಇಲ್ಲ. ಇಟ್ಟುಕೊಳ್ಳುವುದೂ ಇಲ್ಲ. ಆದರೆ ಸಣ್ಣ ಪುಟ್ಟ ರಾಷ್ಟ್ರಗಳು ತಮ್ಮ ಅನಿವಾರ್ಯತೆಗಳಿಗಾಗಿ ಚೀನಾದಂತಹ ರಾಷ್ಟ್ರಗಳ ಹುನ್ನಾರಕ್ಕೆ ಸೇತುವೆಯಾಗಿ ಬಿಡುತ್ತವೆ. ಶ್ರೀಲಂಕಾದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಬಹುದು ಅಂತ ಇಲ್ಲಿನ ವಿರೋಧ ಪಕ್ಷಗಳ ನಾಯಕರು ತೀವ್ರ ಆತಂಕ ವ್ಯಕ್ತಪಡಿಸಿದ್ರು. ಆದರೆ ಹಿಂದೆ ಮುಂದೆ ನೋಡದೆ, ಅಧ್ಯಕ್ಷರಾದ ಗೊಟಬಯ ರಾಜಪಕ್ಷೆ ಮತ್ತು ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಷೆ ನೇತೃತ್ವದ ಸರ್ಕಾರ ಇದಕ್ಕೆ ಸಂಬಂಧಪಟ್ಟ ಮಸೂದೆಯನ್ನು ಅಂಗೀಕರಿಸಿ ಬಿಟ್ಟಿದೆ. ಸಾಗರ ತೀರದ 269 ಹೆಕ್ಟೇರ್‌ ಭಾಗದಲ್ಲಿ ಚೀನಾ ಬಂದರು ನಗರ ಅಭಿವೃದ್ಧಿ ಪಡಿಸುತ್ತಿದೆ. ಈಗಾಗಲೇ ಸಿಎಚ್‌ಇಸಿ, ಸಾಗರದ ಭಾಗವನ್ನು ಬಳಕೆ ಯೋಗ್ಯ ಭೂಮಿಯಾಗಿ ಪರಿವರ್ತಿಸಲು ಮತ್ತು ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ 1.4 ಬಿಲಿಯನ್‌ ಡಾಲರ್‌ಗಳಷ್ಟು ಹೂಡಿಕೆ ಮಾಡಿದೆ. ಚೀನಾ ಸುಮ್ಮನೇ ಸುಮ್ಮನೇ ಹೂಡಿಕೆ ಮಾಡಿ ಹೊರೆ ಮಾಡಿಕೊಳ್ಳುತ್ತಾ. ಇದೆಲ್ಲಾ ಚೀನಾದ ಮುಂದಿನ ಕಾರ್ಯ ಯೋಜನೆಗಳ ಭಾಗ ಅಷ್ಟೇ. ಇದರ ಹಿಂದಿನ ಉದ್ದೇಶವೇ ಬೇರೆ ಇರುತ್ತೆ.

ಶ್ರೀಲಂಕಾಗೆ ಮೊದಲಿನಿಂದಲೂ ಸಹಾಯ ಮಾಡಿದ್ದೇ ಭಾರತ
ಚೀನಾಗೆ ಮಣೆ ಹಾಕಿದ ಶ್ರೀಲಂಕಾ ಎಲ್ಲವನ್ನು ಮರೆತು ಬಿಡ್ತಾ?

ಭಾರತ ಯಾವತ್ತಿಗೂ ಸ್ನೇಹ ಪೂರ್ವಕ ರಾಷ್ಟ್ರ. ತನ್ನ ನೆರೆಯವರೊಂದಿಗೆ ಸ್ನೇಹಪೂರ್ವಕವಾಗಿ ಇರಬೇಕೆಂದೇ ಬಯಸುತ್ತ ಬಂದಿದೆ. ಬಾಂಗ್ಲಾ ಇರಲಿ, ನೇಪಾಳ ಇರಲಿ, ಬರ್ಮಾ ಇರಲಿ, ಭೂತಾನ್ ಇರಲಿ, ಶ್ರೀಲಂಕಾ ಇರಲಿ. ಕಷ್ಟ ಅಂತ ಬಂದಾಗ ಭಾರತ ಹೋಗಿ ನಿಲುತ್ತೆ. ಶ್ರೀಲಂಕಾಗೂ ಮೊದಲಿನಿಂದಲೂ ಭಾರತ ಬೆಂಬಲಕ್ಕೆ ನಿಂತೇ ಇದೆ. ಅವತ್ತು ಎಲ್​​ಟಿಟಿಇ ಮಣಿಸಲು ಸೇನೆ ಕಳಿಸಿದ್ದೇ ಭಾರತ. ಅವತ್ತು ಶ್ರೀಲಂಕಾಗೆ ಸೈನ್ಯ ಕಳುಹಿಸಿದ್ದ ಭಾರತ ಕಳೆದುಕೊಂಡಿದ್ದೇನು ಅಂತ ಎಲ್ಲರಿಗೂ ಗೊತ್ತು. ದೇಶದ ನಾಯಕರನ್ನೇ ಕಳೆದುಕೊಳ್ಳುವಂತಾಯ್ತು. ಆದರೆ, ಶ್ರೀಲಂಕಾದ ಬೆನ್ನಿಗೆ ನಿಂತು ಅದರ ಸಾರ್ವಭೌಮತೆ ಕಾಪಾಡೋದರಲ್ಲೂ ಭಾರತದ ಪಾತ್ರ ಮಹತ್ವದ್ದು. ಅಂಥಾದ್ದರಲ್ಲಿ ಈಗ ಇದೇ ಶ್ರೀಲಂಕಾ, ಭಾರತಕ್ಕೆ ಟಾಂಗ್ ಕೊಡಲು ಚೀನಾ ಆಸೀನನಾಗಲು ಬಂದರೆ ಅದಕ್ಕೆ ಯಸ್ ಅಂದು ಬಿಡೋದಾ? ಭಾರತ ಹಿಂದೆ ಮಾಡಿದ ಸಹಾಯ ಮರೆತೇಹೋಯ್ತಾ. ಚೀನಾ ಅದೇನೇ ತಂತ್ರ ಮಾಡಲಿ, ಭಾರತ ಅದಕ್ಕೆ ಪ್ರತಿತಂತ್ರ ರೂಪಿಸುತ್ತಲೇ ಇರುತ್ತೆ. ಅದಕ್ಕೆ ಒಂದು ಬಿಗ್ ಎಗ್ಸಾಂಪಲ್ ಭಾರತ ಸಿದ್ಧಪಡಿಸಿರುವ ಕ್ವಾಡ್. ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ನಂತಹ ಪ್ರಬಲ ರಾಷ್ಟ್ರಗಳ ಒಕ್ಕೂಟವನ್ನೇ ರಚಿಸಿಕೊಂಡು ಭಾರತ ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿದೆ.

ಚೀನಾ ಅದೆಷ್ಟೇ ತಂತ್ರ ಮಾಡಿದರೂ ಅದೆಲ್ಲವನ್ನೂ ತಡೆದುಕೊಳ್ಳುವ, ಎದುರಿಸುವ ಸಾಮರ್ಥ್ಯ ಭಾರತಕ್ಕೆ ಇದ್ದೇ ಇದೆ. ಅದು ಚೀನಾಕ್ಕೂ ಗೊತ್ತಾಗಿದೆ. ಕಳೆದ ವರ್ಷ ಗಡಿಯಲ್ಲಿ ಆದ ಕೆಲವು ಘಟನೆಗಳು, ವಿದ್ಯಮಾನಗಳಿಂದ ಚೀನಾಕ್ಕೆ ಭಾರತದ ಸಾಮರ್ಥ್ಯದ ಅರಿವು ಆಗಿ ಹೋಗಿದೆ. ಹೀಗಾಗಿಯೇ ಈಗ ಪ್ರತ್ಯಕ್ಷವಾಗಿ ಬರೋದಕ್ಕಿಂತ ಪರೋಕ್ಷವಾಗಿ ಎಲ್ಲೋ ಕುಳಿತು ಅದೇನೋ ಮಾಡಲು ಹೊರಟಂತಿದೆ ಚೀನಾದ ನಡೆ. ಅದರ ಫಲವೇ ಬಹುಶಃ ಈ ಬಂದರಿನ ನಿರ್ಮಾಣ. ಇಲ್ಲೊಂದು ನೆಲೆ ಸ್ಥಾಪಿಸಿ ಬೆದರಿಸುವ ತಂತ್ರ. ಚೀನಾ ಪಾಕಿಸ್ತಾನದಲ್ಲಿ ರಸ್ತೆ ಮಾಡುತ್ತೆ. ಶ್ರೀಲಂಕಾದಲ್ಲಿ ಬಂದರು ನಿರ್ಮಿಸುತ್ತೆ. ನಾಳೆ ಮತ್ತೊಂದು ದೇಶದಲ್ಲಿ ಟ್ರೇನ್ ಬಿಡಬಹುದು. ಆದ್ರೆ ಇದೆಲ್ಲ ಮಾಡ್ತಿರೋದು ಯಾಕೆ ಅಂತ ಭಾರತಕ್ಕೆ ಚೆನ್ನಾಗಿ ಗೊತ್ತು.

The post ಚೀನಾದ ಹೊಸ ಕುತಂತ್ರ; ಕನ್ಯಾಕುಮಾರಿಗೆ ತೀರಾ ಹತ್ತಿರದಲ್ಲೇ ಬಂದರು ನಿರ್ಮಾಣ appeared first on News First Kannada.

Source: newsfirstlive.com

Source link