ಚೀನಾ ಸಾಲದ ಬಲೆಗೆ ಸಿಲುಕಿದ ಲಾವೋಸ್: ಶ್ರೀಲಂಕಾ ನಂತರ ದಿವಾಳಿಯಾಗುವತ್ತ ಮತ್ತೊಂದು ದೇಶ | Asian Country Laos hit by fuel shortages and growing default risk


ಚೀನಾ ಸಾಲದ ಬಲೆಗೆ ಸಿಲುಕಿದ ಲಾವೋಸ್: ಶ್ರೀಲಂಕಾ ನಂತರ ದಿವಾಳಿಯಾಗುವತ್ತ ಮತ್ತೊಂದು ದೇಶ

ಲಾವೋಸ್​ನಲ್ಲಿ ಇಂಧನಕ್ಕಾಗಿ ಪಾಳಿಯಲ್ಲಿ ನಿಂತಿರುವ ಜನ.

ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಚೀನಾದಿಂದ ಪಡೆದುಕೊಂಡಿರುವ ಸಾಲವನ್ನು ತೀರಿಸಲು ಸಾಧ್ಯವಿಲ್ಲ ಎಂದು ಲಾವೋಸ್ ಸರ್ಕಾರ ಘೋಷಿಸಿಕೊಳ್ಳುವ ಸಾಧ್ಯತೆ ಇದೆ

ತೀವ್ರ ಇಂಧನ ಕೊರತೆ, ಆಹಾರ ಬೆಲೆಗಳ ಹೆಚ್ಚಳ, ಸಾಲದ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಏಷ್ಯಾದ ಮತ್ತೊಂದು ದೇಶ ದಿವಾಳಿ ಅಂಚಿಗೆ ( Laos Default Risk) ಬಂದು ನಿಂತಿದೆ. ಲಾವೋಸ್ ಶೀಘ್ರದಲ್ಲಿಯೇ ದಿವಾಳಿ ಘೋಷಿಸಿಕೊಳ್ಳಲಿದ್ದು, ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ವಿವಿಧ ದೇಶಗಳಿಂದ ಪಡೆದುಕೊಂಡಿರುವ ಸಾಲವನ್ನು ತೀರಿಸಲು ಸಾಧ್ಯವಿಲ್ಲ ಎಂದು ಲಾವೋಸ್ ಸರ್ಕಾರ ಘೋಷಿಸಿಕೊಳ್ಳುವ ಸಾಧ್ಯತೆ ಇದೆ. ವಿದೇಶಿ ಮೀಸಲು ನಿಧಿಯ (Foreign Currency Reserve) ತೀವ್ರ ಕೊರತೆ ಎದುರಿಸುತ್ತಿರುವ ಶ್ರೀಲಂಕಾ ಈಗಾಗಲೇ ಸುಸ್ತಿದಾರ ಎಂದು ಘೋಷಿಸಿಕೊಂಡಿದೆ. ನೇಪಾಳ ಮತ್ತು ಪಾಕಿಸ್ತಾನಗಳು ಇದೇ ಹಾದಿಯಲ್ಲಿವೆ. ಈ ನಡುವೆ ಮತ್ತೊಂದು ದೇಶವೂ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವುದು ಕೆಟ್ಟ ಸುದ್ದಿ ಎನಿಸಿದೆ.

ಕಮ್ಯುನಿಸ್ಟ್ ಆಡಳಿತವಿರುವ ಲಾವೋಸ್​ಗೆ ಸಮುದ್ರದ ಸಂಪರ್ಕವೇ ಇಲ್ಲ. ಮೂಡೀಸ್ ಸಂಸ್ಥೆಯು ಲಾವೋಸ್​ನ ಕ್ರೆಡಿಟ್ ರೇಟಿಂಗ್​ ಅನ್ನು ನಾನ್-ಇನ್​ವೆಸ್ಟ್​ಮೆಂಟ್​ ಗ್ರೇಡ್​ನಿಂದ ಜಂಕ್ ಕ್ಯಾಟಗರಿಗೆ ಇಳಿಸಿದೆ. ಲಾವೋಸ್​ ದೇಶವು ಶೀಘ್ರದಲ್ಲಿಯೇ ಸುಸ್ತಿದಾರ ಎಂದು ಘೋಷಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲಿನ ಆಡಳಿತ ಸಡಿಲವಾಗಿದ್ದು, ಸಾಲದ ಹೊರೆ ಹೆಚ್ಚಾಗುತ್ತಿದೆ. ವಿದೇಶಗಳಿಂದ ಸಾಲದ ನೆರವು ಸಿಗುವ ಸಾಧ್ಯತೆಯೂ ಕಡಿಮೆ ಎಂದು ಮೂಡಿಸ್ ಹೇಳಿದೆ.

ಉಕ್ರೇನ್ ಮೇಲೆ ರಷ್ಯಾ ದಾಳಿಯ ನಂತರ ಜಾಗತಿಕ ಮಟ್ಟದಲ್ಲಿ ಏರಿಕೆಯಾದ ಇಂಧನ ಮತ್ತು ಆಹಾರ ಬೆಲೆಗಳು ಅದಾಗಲೇ ಕುಸಿತದ ಹಾದಿಯಲ್ಲಿದ್ದ ಲಾವೋಸ್​ನ ಆರ್ಥಿಕತೆಗೆ ಮಾರಣಾಂತಿಕ ಹೊಡೆತ ಕೊಟ್ಟವು. ವಿದೇಶಿ ಮೀಸಲು ಬಿಕ್ಕಟ್ಟು ಲಾವೋಸ್​ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಸಾಲ ನೀಡಿರುವ ದೇಶಗಳು ಶೀಘ್ರ ಸಾಲ ತೀರಿಸುವಂತೆ ಒತ್ತಡ ಹಾಕುತ್ತಿವೆ. ಇಂಧನದ ಮೇಲೆ ಸಬ್ಸಿಡಿ ಮುಂದುವರಿಸಲು ಅಲ್ಲಿನ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ವಿದೇಶಗಳಿಂದ ಸಾಕಷ್ಟು ಪ್ರಮಾಣದಲ್ಲಿ ಇಂಧನ ಆಮದು ಮಾಡಿಕೊಳ್ಳಲೂ ಬೇಕಿರುವಷ್ಟು ಮೀಸಲು ನಿಧಿಯೂ ಇಲ್ಲದ ಕಾರಣ ಆಮದು ವ್ಯವಹಾರ ಬಹುತೇಕ ನಿಂತು ಹೋಗಿದೆ.

ಮತ್ತೊಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಫಿಚ್ ಲಾವೋಸ್​ಗೆ CCC ರೇಟಿಂಗ್ ಕೊಟ್ಟಿದೆ. ಟ್ರಿಪಲ್ ಸಿ ರೇಟಿಂಗ್ ಎಂದರೆ ದಿವಾಳಿ ಸಾಧ್ಯತೆ ಎಂದು ಅರ್ಥ. ವಿದೇಶಿ ಸಾಲ ತೀರಿಸಲು ಸಾಧ್ಯವಿಲ್ಲ ಎಂದು ಕಳೆದ ತಿಂಗಳಷ್ಟೇ ಶ್ರೀಲಂಕಾ ಘೋಷಿಸಿಕೊಂಡಿತ್ತು. ಲಾವೋಸ್​​ನ ಕರೆನ್ಸಿ ಕಿಪ್ ಅಮೆರಿಕದ ಡಾಲರ್ ಎದುರು ಶೇ 23.5ರಷ್ಟು ಮೌಲ್ಯ ಕಳೆದುಕೊಂಡಿದೆ. ಕಳೆದ ಡಿಸೆಂಬರ್​ನಲ್ಲಿ ಲಾವೋಸ್​ನ ವಿದೇಶಿ ಮೀಸಲು ನಿಧಿಯು 1.3 ಶತಕೋಟಿ ಡಾಲರ್​ನಷ್ಟಿತ್ತು. ಇದು ಕೇವಲ 2 ತಿಂಗಳ ಆಮದು ವಹಿವಾಟು ನಿರ್ವಹಿಸಲು ಸಾಧ್ಯವಾಗುವ ಪ್ರಮಾಣ.

ಇಂಧನಕ್ಕಾಗಿ ಮೈಲಿಗಟ್ಟಲೆ ಕ್ಯೂ ನಿಲ್ಲುವ ಪರಿಸ್ಥಿತಿಯ ಬಗ್ಗೆ ಲಾವೋಸ್​ನ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದರು. ಲಾವೋಸ್​ನ ಜನರು ಪಕ್ಕದ ಥಾಯ್ಲೆಂಡ್​ಗೆ ಹೋಗಿ ಕಾರುಗಳಿಗೆ ಇಂಧನ ತುಂಬಿಸಿಕೊಂಡು ಬರಬೇಕಾಗಿರುವ ಪರಿಸ್ಥಿತಿಯ ಬಗ್ಗೆಯೂ ಹೇಳಿಕೊಂಡಿದ್ದರು. ಕಮ್ಯುನಿಸ್ಟ್ ಆಡಳಿತದ ಲಾವೋಸ್​ನಲ್ಲಿ ಮಾಧ್ಯಮಗಳು ಮುಕ್ತವಾಗಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಮಾಡಲು ಅವಕಾಶ ನೀಡಲಾಗಿದೆ. ವಿದೇಶಿ ಕರೆನ್ಸಿ ಹೊಂದುವುದನ್ನು ಲಾವೋಸ್ ಪ್ರಜೆಗಳಿಗೆ ನಿಷೇಧಿಸುವ ಬಗ್ಗೆ ಅಲ್ಲಿನ ಕೇಂದ್ರೀಯ ಬ್ಯಾಂಕ್ ಆಲೋಚಿಸುತ್ತಿದೆ. ದುಬಾರಿ ಬಡ್ಡಿ ದರದ ಬಾಂಡ್​ಗಳನ್ನು ಬಿಡುಗಡೆ ಮಾಡುವ ಮೂಲಕ ಹಣದುಬ್ಬರಕ್ಕೆ ಕಡಿವಾಣ ಹಾಕಲು ಲಾವೋಸ್ ಸರ್ಕಾರವು ಚಿಂತನೆ ನಡೆಸಿದೆ.

ಜಲವಿದ್ಯುತ್ ಯೋಜನೆಗಳಿಗಾಗಿ ಚೀನಾದಿಂದ ಲಾವೋಸ್ ದುಬಾರಿ ಬಡ್ಡಿ ದರದಲ್ಲಿ ಸಾಲ ಪಡೆದುಕೊಂಡಿತ್ತು. ಚೀನಾ ಸರ್ಕಾರವು ಲಾವೋಸ್​ನಲ್ಲಿ ರೈಲ್ವೆ ಮಾರ್ಗವೊಂದನ್ನು ನಿರ್ಮಿಸಿದೆ. ವಿದೇಶಿ ಸಾಲದ ಹೊರೆ ಮತ್ತು ಮೀಸಲು ಕೊರತೆಯಿಂದಾಗಿ ಲಾವೋಸ್​ ಸರ್ಕಾರದ ವಿದೇಶಿ ಮತ್ತು ದೇಶೀ ಸಾಲವು ಅಲ್ಲಿನ ಜಿಡಿಪಿಯ ಶೇ 30ಕ್ಕೂ ಹೆಚ್ಚಿನ ಪ್ರಮಾಣದಲ್ಲಿದೆ. ಶ್ರೀಲಂಕಾ ವಿಶ್ವದ ಹಲವು ದೇಶಗಳಿಂದ ಸಾಲ ಪಡೆದುಕೊಂಡಿದ್ದರೆ ಲಾವೋಸ್ ಅರ್ಧದಷ್ಟು ಸಾಲದ ಮೊತ್ತವನ್ನು ಚೀನಾ ಒಂರದಿಂದಲೇ ಪಡೆದುಕೊಂಡಿದೆ. ಚೀನಾದೊಂದಿಗೆ ಲಾವೋಸ್ ಗಡಿ ಹಂಚಿಕೊಳ್ಳುತ್ತದೆ. ಇದೀಗ ಲಾವೋಸ್​ನಲ್ಲಿ ಕಾಣಿಸಿಕೊಂಡಿರುವ ಆರ್ಥಿಕ ಬಿಕ್ಕಟ್ಟು ಚೀನಾದೊಂದಿಗೆ ಗಡಿ ಹಂಚಿಕೊಳ್ಳುವ ಇತರ ದೇಶಗಳಲ್ಲಿಯೂ ಪ್ರತಿಫಲಿಸುವ ಸಾಧ್ಯತೆಯಿದೆ.

ಕಳೆದ ಕೆಲ ವರ್ಷಗಳಲ್ಲಿ ಚೀನಾ ಹಲವು ಬಾರಿ ಲಾವೋಸ್​ಗೆ ಸಾಲ ಮರುಪಾವತಿ ರಿಯಾಯ್ತಿ ನೀಡಿದೆ. ಆದರೆ ಮುಂದಿನ ದಿನಗಳಲ್ಲಿ ಲಾವೋಸ್ ಸ್ಥಿತಿಗತಿ ಏನಾಗಲಿದೆ ಎಂಬುದನ್ನು ಚೀನಾ ಸರ್ಕಾರದ ಮುಂದಿನ ನಡೆ ನಿರ್ಧರಿಸಲಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.