ಚೀನಾ ವಿಶ್ವಕ್ಕೆ ಕೊರೊನಾ ಹರಡಿದ ದೇಶ ಎಂಬ ಕಳಂಕ ಹೊತ್ತಿರುವ ದೇಶ. ಅದರ ಮುಖವಾಡ ಒಂದೊಂದಾಗಿ ಈಗ ಬಯಲಾಗುತ್ತಿರುವಂತೆ ಕಾಣ್ತಿದೆ. ಕೊರೊನಾವೈರಸ್​​ನ ರೂಪಾಂತರ ಮಾಡಿ ಮಾರಣಾಂತಿಕವಾಗಿಸಿದ್ದು ಚೀನಾದ ಲ್ಯಾಬ್​ನಲ್ಲಿ ಅನ್ನೋ ವಾದ ದಿನೇ ದಿನೇ ಗಟ್ಟಿಯಾಗ್ತಿದೆ. ಈಗ ಚೀನಾದ ಮತ್ತೊಂದು ರಹಸ್ಯ ಬಯಲಾಗಿದೆ.

ಕೊರೊನಾ ಸಾಂಕ್ರಾಮಿಕ ಗ್ಲೋಬಲ್ ಪ್ಯಾಂಡಮಿಕ್(ಜಾಗತಿಕ ಸಾಂಕ್ರಾಮಿಕ) ಅಂತ ಘೋಷಿಸುವ ಮುನ್ನವೇ ಚೀನಾದ ಮಿಲಿಟರಿ ವಿಜ್ಞಾನಿಗಳು ಕೊರೊನಾ ಲಸಿಕೆಗೆ ಪೇಟೆಂಟ್​ ಪಡೆಯಲು ಮುಂದಾಗಿದ್ದರು ಅನ್ನೋ ಮಾಹಿತಿ ಹೊರಬಿದ್ದಿದೆ. ಅಮೆರಿಕಾದೊಂದಿಗೆ ಸಂಪರ್ಕ ಹೊಂದಿದ್ದ, ಪೀಪಲ್ಸ್​ ಲಿಬರೇಷನ್ ಆರ್ಮಿ (PLA)ಗಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿ ಯೂಸೆನ್ ಝೌ 2020ರ ಫೆಬ್ರವರಿ 24ರಂದೇ ಕೋವಿಡ್​ ಲಸಿಕೆಗೆ ಪೇಟೆಂಟ್​​​ಗಾಗಿ ಪೇಪರ್​ವರ್ಕ್​​ ಫೈಲ್ ಮಾಡಿದ್ದರು ಅಂತ ದಿ ಆಸ್ಟ್ರೇಲಿಯನ್ ನ್ಯೂಸ್​​ಪೇಪರ್ ವರದಿ ಮಾಡಿದೆ.

ಪೇಟೆಂಟ್​ ಅಂದ್ರೇನು?
ಸರಳವಾಗಿ ಹೇಳೊದಾದ್ರೆ.. ಯಾವುದೇ ಒಂದು ಆವಿಷ್ಕಾರ ಮಾಡಿದಾಗ, ಅದನ್ನ ಕಂಡುಹಿಡಿದವರಿಗೆ ಸಾರ್ವಭೌಮ ಪ್ರಾಧಿಕಾರದಿಂದ ನೀಡುವ ಆಸ್ತು ಹಕ್ಕನ್ನು​​(ಪ್ರಾಪರ್ಟಿ ರೈಟ್ಸ್) ಪೇಟೆಂಟ್ ಅಂತಾರೆ. ಪೇಟೆಂಟ್​ ಸಿಕ್ಕ ಬಳಿಕ ಆ ಆವಿಷ್ಕಾರವನ್ನ ಬೇರೆ ಯಾರೂ ಕೂಡ ಉತ್ಪಾದನೆ, ಬಳಕೆ ಮತ್ತು ಮಾರಾಟ ಮಾಡುವಂತಿಲ್ಲ. ನಿರ್ದಿಷ್ಟ ಅವಧಿಗೆ(ಭಾರತದಲ್ಲಿ 20 ವರ್ಷ) ಪೇಟೆಂಟ್​​ ಅಸ್ತಿತ್ವದಲ್ಲಿರುತ್ತದೆ.

2019ರ ಡಿಸೆಂಬರ್​ನಲ್ಲೇ ಚೀನಾದಲ್ಲಿ ಕೊರೊನಾ ಹರಡಲು ಶುರುವಾಗಿತ್ತು ಅಂತ ನಂಬಲಾಗಿದೆ. ಆದ್ರೆ ಆರಂಭದಲ್ಲಿ ಚೀನಾ ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗೋದಿಲ್ಲ ಅಂತ ಕೊರೊನಾ ಬಗ್ಗೆ ತುಟಿಕ್ ಪಿಟಿಕ್ ಅನ್ನದೇ ಸುಮ್ಮನಿತ್ತು. ಆದ್ರೆ ಜಗತ್ತಿಗೇ ಈ ಮಹಾಮಾರಿ ಹರಡಿದ ನಂತರವಷ್ಟೇ ಅದರ ಕರಾಳ ಮುಖ ಬಯಲಾಗಿದ್ದು. ವೈದ್ಯಲೋಕದ ಸತತ ಒಂದು ವರ್ಷದ ಪ್ರಯತ್ನದ ಫಲವಾಗಿ ಈಗ ಕೆಲವು ಲಸಿಕೆಗಳನ್ನ ಅಭಿವೃದ್ಧಿಪಡಿಸಲಾಗಿದ್ದು, ಹಲವು ರಾಷ್ಟ್ರಗಳಲ್ಲಿ ವ್ಯಾಕ್ಸಿನೇಷನ್  ನಡೀತಿದೆ. ಆದ್ರೆ ಅತ್ತ ಡ್ರ್ಯಾಗನ್ ರಾಷ್ಟ್ರ ಚೀನಾ, ಕೊರೊನಾ ಸಾಂಕ್ರಾಮಿಕ ಹರಡುತ್ತಿರುವುದನ್ನ ದೃಢಪಡಿಸಿದ 5 ವಾರಗಳಲ್ಲೇ ಸದ್ದಿಲ್ಲದಂತೆ ವ್ಯಾಕ್ಸಿನ್​ಗೆ ಪೇಟೆಂಟ್​ ಪಡೆಯೋದಕ್ಕೂ ಮುಂದಾಗಿತ್ತು ಅಂದ್ರೆ ಊಹಿಸಿಕೊಳ್ಳಿ.

ಈಗ ವಿಶ್ವದಾದ್ಯಂತ ಲಸಿಕೆ ಲಭ್ಯವಾಗಬೇಕು ಅನ್ನೋ ದೃಷ್ಟಿಯಿಂದ ಕೊರೊನಾ ಲಸಿಕೆ ಮೇಲಿನ ಪೇಟೆಂಟ್​ ರದ್ದತಿಗೆ ವರ್ಲ್ಡ್​​ ಟ್ರೇಡ್​​ ಆರ್ಗನೈಸೇಷನ್​​​ ಸದಸ್ಯರ ಮಾತುಕತೆ ನಡೀತಿದೆ. ಆದ್ರೆ ಒಂದು ವರ್ಷದ ಹಿಂದೆಯೇ ಇಡೀ ಜಗತ್ತಿಗೆ ಕೊರೊನಾ ಹರಡುತ್ತಿದ್ರು, ಮುಂದೆ ದೊಡ್ಡ ಅಪಾಯವೇ ಎದುರಾಗಲಿದೆ ಅನ್ನೋದು ಗೊತ್ತಿದ್ರೂ ಕಳ್ಳಾಟ ಆಡಿದ ಚೀನಾ, ಅದ್ರಿಂದ ರಕ್ಷಿಸಿಕೊಳ್ಳೋಕೆ ಇರೋ ಲಸಿಕೆಯನ್ನ ಬೇರೆ ಯಾರೂ ಬಳಸಬಾರದು ಅನ್ನೋ ಸ್ವಾರ್ಥಕ್ಕೂ ಮುಂದಾಯ್ತಾ? ಇದು ನಿಜವೇ ಆಗಿದ್ದರೆ ಚೀನಾಗೆ ವಿಶ್ವದ ಜನರ ಶಾಪ ತಟ್ಟದೇ ಇರುತ್ತಾ?

ಕೊರೊನಾವೈರಸ್​ ಲ್ಯಾಬ್​ ಲೀಕ್ ಎಂಬ ವಾದಕ್ಕೆ ಮತ್ತಷ್ಟು ಪುಷ್ಠಿ
ಅಂದ್ಹಾಗೆ ವಿಜ್ಞಾನಿ ಝೌ, ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ವಿಜ್ಞಾನಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಅದ್ರಲ್ಲೂ ಲ್ಯಾಬ್‌ನ ಉಪನಿರ್ದೇಶಕ ಶಿ ಝೆಂಗ್ಲಿ ಜೊತೆಗೆ ಇವರು ಕಾರ್ಯನಿರ್ವಹಿಸಿದ್ದಾರಂತೆ. ಇದೇ ಶೀ ಝೆಂಗ್ಲಿ ಬಾವಲಿಗಳಲ್ಲಿನ ಕರೋನವೈರಸ್ ಕುರಿತ ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. ಇವರನ್ನ ಬ್ಯಾಟ್​ ವುಮನ್ ಎಂದೇ ಕರೆಯಲಾಗುತ್ತಿದೆ.

ಇವರಿಬ್ಬರೂ ಒಟ್ಟಿಗೆ ಕಾರ್ಯನಿರ್ವಹಿಸಿದ್ದ ವಿಚಾರ ಈಗ ಅನುಮಾನಗಳನ್ನ ಹೆಚ್ಚು ಮಾಡಿದೆ. ವುಹಾನ್​​ ಲ್ಯಾಬ್​ನಿಂದಲೇ ಕೊರೊನಾವೈರಸ್​ ಲೀಕ್ ಆಗಿದ್ದು, ಅಂತರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಕೆ ನೀಡುವ ಬಹಳ ಸಮಯದ ಹಿಂದೆಯೇ ಸಾಂಕ್ರಾಮಿಕ ಮನುಷ್ಯನಿಗೆ ಹರಡುತ್ತಿದೆ ಅನ್ನೋದು ಚೀನಾಗೆ ಗೊತ್ತಿತ್ತು ಅನ್ನೋ ಶಂಕೆ ಬಲಗೊಳ್ಳುತ್ತಿದೆ.

ಪೇಟೆಂಟ್​ಗೆ ಅರ್ಜಿ ಹಾಕಿದ ಮೂರು ತಿಂಗಳಲ್ಲೇ ಝೌ ಸಾವು
ಅಂದ್ಹಾಗೆ ಝೌ ಈಗ ಬದುಕಿಲ್ಲ. ಪೇಟೆಂಟ್​​ಗೆ ಅರ್ಜಿ ಹಾಕಿದ ಮೂರು ತಿಂಗಳ ಬಳಿಕ ಅವರು ಸಾವನ್ನಪ್ಪಿದ್ದಾರೆ. ಝೌ ಅವರು ದೇಶದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದರೂ ಕೂಡ ಅವರ ಮರಣದ ಸುದ್ದಿ ಒಂದು ಚೀನಾದ ಮಾಧ್ಯಮದಲ್ಲಿ ಮಾತ್ರ ವರದಿಯಾಗಿತ್ತು ಎಂದು ದಿ ನ್ಯೂಯಾರ್ಕ್ ಪೋಸ್ಟ್ ಹೇಳಿದೆ. ಝೌ ಈ ಹಿಂದೆ ಮಿನ್ನೇಸೋಟ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ಬ್ಲಡ್ ಸೆಂಟರ್ ಸೇರಿದಂತೆ ಅಮೆರಿಕಾ ಸಂಸ್ಥೆಗಳಿಗೆ ಸಂಬಂಧಿಸಿದ ಸಂಶೋಧನೆಯಲ್ಲಿ ಕೆಲಸ ಮಾಡಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.

ಆರಂಭದಲ್ಲಿ ವುಹಾನ್ ಲ್ಯಾಬ್​ನಿಂದ ವೈರಸ್​ ಲೀಕ್ ಆಗಿದೆ ಅನ್ನೋ ಥಿಯರಿಯನ್ನ ಅನೇಕರು ತಳ್ಳಿಹಾಕಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಕೊರೊನಾವೈರಸ್​ ಉಗಮದ ಕುರಿತ ಸಂಶೋಧನೆ ತೀವ್ರಗೊಂಡಿದ್ದು, ವುಹಾನ್ ಲ್ಯಾಬ್​ನಿಂದಲೇ ಅದು ಲೀಕ್ ಆಗಿದೆ ಅನ್ನೋ ವಾದಕ್ಕೆ ಇಂಥ ಹಲವು ಅಂಶಗಳಿಂದ ಪುಷ್ಠಿ ಸಿಗುತ್ತಿದೆ.

ಇನ್ನು ಕೋವಿಡ್​ ಸಾಂಕ್ರಾಮಿಕ ಮಾನವನಿರ್ಮಿತವಾ ಎಂಬುದನ್ನ ಪತ್ತೆಹಚ್ಚಲು ತನಿಖೆ ನಡೆಸುವಂತೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಕಳೆದ ವಾರ ಗುಪ್ತಚರ ಏಜೆನ್ಸಿಗಳಿಗೆ ಆದೇಶಿಸಿದ್ದಾರೆ. ವೈರಸ್ ಮೂಲವನ್ನು ಪರಿಶೀಲಸಲು 90 ದಿನಗಳ ಗಡುವು ನೀಡಿದ್ದು, ಗುಪ್ತಚರ ಏಜೆನ್ಸಿಗಳಿಗೆ ಸಹಾಯ ಮಾಡಲು ಡಿಪಾರ್ಟ್​​ಮೆಂಟ್​​ ಆಫ್​ ಎನರ್ಜಿಯ ನಿಯಂತ್ರಣದಲ್ಲಿರುವ ಒಂದು ಡಜನ್‌ಗೂ ಹೆಚ್ಚು ರಾಷ್ಟ್ರೀಯ ಲ್ಯಾಬ್‌ಗಳಿಗೆ ಆದೇಶಿಸಲಾಗಿದೆ.

ಈ ಲ್ಯಾಬ್​ಗಳಲ್ಲಿ ಸುಧಾರಿತ ಸೂಪರ್‌ಕಂಪ್ಯೂಟರ್‌ಗಳ ಮೂಲಕ ಬೃಹತ್ ಪ್ರಮಾಣದ ಡೇಟಾವನ್ನು ಹತ್ತಿಕ್ಕುವ ಸಾಮರ್ಥ್ಯದಿಂದಾಗಿ, ಅವುಗಳನ್ನ ಈ ಪರಿಶೀಲನೆಗೆ ಬಳಸಿಕೊಳ್ಳಲಾಗ್ತಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ವರದಿಯಾಗಿದೆ.

ಜೀವಂತ ಪ್ರಾಣಿಗಳನ್ನ ಮಾರಾಟ ಮಾಡಲಾಗ್ತಿದ್ದ ವುಹಾನ್​ನ ವೆಟ್​ ಮಾರ್ಕೆಟ್​​ಗೆ ಲ್ಯಾಬ್​ನಿಂದಲೇ ವೈರಸ್ ಸೋರಿಕೆಯಾಗಿ, ಅಲ್ಲಿಂದ ಎಲ್ಲೆಡೆ ಹಬ್ಬಿದೆ ಎಂಬ ಆರೋಪ ಕಳೆದ ಒಂದು ವರ್ಷದಿಂದಲೂ ಕೇಳಿಬರುತ್ತಲೇ ಇದೆ. ಆದ್ರೆ ಇದನ್ನ ಚೀನಾ ತಳ್ಳಿಹಾಕುತ್ತಲೇ ಬಂದಿದ್ದು, ಏಜೆನ್ಸಿಗಳ ಪರಿಶೀಲನೆಯಿಂದ ಸತ್ಯ ಹೊರಬರುತ್ತಾ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಬರಹ: ಪ್ರಕೃತಿ ಸಿಂಹ, ಡಿಜಿಟಲ್ ಡೆಸ್ಕ್​​

The post ಚೀನಾ ಹುನ್ನಾರ; ಕೊರೊನಾ ಹರಡುವ ಮುನ್ನವೇ ಲಸಿಕೆ ಪೇಟೆಂಟ್​​ಗೆ ಮುಂದಾಗಿತ್ತು ಚೀನಾ..! appeared first on News First Kannada.

Source: newsfirstlive.com

Source link