ಚುನಾವಣೆ ಸ್ಪರ್ಧಿಸಲು ಬಯಸುವುದಿಲ್ಲ: ನಡ್ಡಾಗೆ ಪತ್ರ ಬರೆದ ಉತ್ತರಾಖಂಡ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ | Former Uttarakhand CM Trivendra Singh Rawat Unwilling to Contest Upcoming Elections


ಚುನಾವಣೆ ಸ್ಪರ್ಧಿಸಲು ಬಯಸುವುದಿಲ್ಲ: ನಡ್ಡಾಗೆ ಪತ್ರ ಬರೆದ ಉತ್ತರಾಖಂಡ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್

ತ್ರಿವೇಂದ್ರ ಸಿಂಗ್ ರಾವತ್

ಡೆಹ್ರಾಡೂನ್: ಬಿಜೆಪಿ ನಾಯಕ ಹಾಗೂ ಉತ್ತರಾಖಂಡದ (Uttarakhand) ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ (Trivendra Singh Rawat)ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ. ರಾವತ್ ಅವರು ಬುಧವಾರ ಬಿಜೆಪಿ ರಾಷ್ಟ್ರೀಯ ಮುಖ್ಯಸ್ಥ ಜೆಪಿ ನಡ್ಡಾ ಅವರಿಗೆ ಪತ್ರ ಬರೆದು ಉತ್ತರಾಖಂಡ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. “ದಯವಿಟ್ಟು ಉತ್ತರಾಖಂಡ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ನನ್ನ ಮನವಿಯನ್ನು ಸ್ವೀಕರಿಸಿ.ಈ ಮೂಲಕ ನಾನು ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಬೆಂಬಲಿಸುವತ್ತ  ಗಮನಹರಿಸುತ್ತೇನೆ” ಎಂದು ಅವರು ಬರೆದಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯ ನಡುವೆ ರಾವತ್ ಅವರು ಈ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಿಇಸಿ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸೇರುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ಪಿಎಂ ಮೋದಿ ಈ ಸಭೆಯಲ್ಲಿ ವರ್ಚುವಲ್ ಆಗಿ ಭಾಗಿಯಾಗಲಿದ್ದಾರೆ ಮತ್ತು ಸಿಇಸಿಯ ಸದಸ್ಯರು ಕೊವಿಡ್ ಪಾಸಿಟಿವ್ ಆಗಿದ್ದರೂ ಆನ್ ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸುತ್ತಾರೆ.

ಹಲವಾರು ಸುತ್ತಿನ ಸಭೆಗಳ ನಂತರ, ಬಿಜೆಪಿ ಮೂರು, ನಾಲ್ಕು ಮತ್ತು ಐದನೇ ಹಂತದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ, ಜೊತೆಗೆ ಮೈತ್ರಿಯಲ್ಲಿ ಸೀಟು ಹಂಚಿಕೆ ಸೂತ್ರವನ್ನು ಸಹ ಅಂತಿಮಗೊಳಿಸಲಾಗಿದೆ ಆದರೆ ಅಂತಿಮ ನಿರ್ಧಾರವನ್ನು ಚುನಾವಣಾ ಸಮಿತಿ ಸಭೆಯಲ್ಲಿ ಇಂದು ತೆಗೆದುಕೊಳ್ಳಲಾಗುವುದು.
ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

TV9 Kannada


Leave a Reply

Your email address will not be published. Required fields are marked *