ಚೆಂಡು ಎಂದು ಭಾವಿಸಿ ಕಚ್ಚಾ ಬಾಂಬ್​ ಹಾರಿಸಿ ಆಟವಾಡಿದ ಮಕ್ಕಳು; ಸ್ಫೋಟಗೊಂಡು ಮೂರು ಮಕ್ಕಳಿಗೆ ಗಂಭೀರ ಗಾಯ | Crude bomb explosion and 3 children died in West Bengal


ಚೆಂಡು ಎಂದು ಭಾವಿಸಿ ಕಚ್ಚಾ ಬಾಂಬ್​ ಹಾರಿಸಿ ಆಟವಾಡಿದ ಮಕ್ಕಳು; ಸ್ಫೋಟಗೊಂಡು ಮೂರು ಮಕ್ಕಳಿಗೆ ಗಂಭೀರ ಗಾಯ

ಸಾಂಕೇತಿಕ ಚಿತ್ರ

ಕಚ್ಚಾಬಾಂಬ್​​ನ್ನು ಚೆಂಡು ಎಂದು ಭಾವಿಸಿ ಮಕ್ಕಳು ಆಟವಾಡಿ, ಅದು ಸ್ಫೋಟಗೊಂಡು ಮೂವರು ಮಕ್ಕಳು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್​ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡ ಮಕ್ಕಳು 11-14ವರ್ಷದವರೇ ಆಗಿದ್ದಾರೆ.  ಮಮುನ್ ಅಲಿ (11), ಆಶಿಕ್​ ಶೇಖ್​ (14) ಮತ್ತು ಜೆವೆಲ್​ ಶೇಖ್​ (12) ಗಾಯಗೊಂಡವರು. ಇವರನ್ನು ಮುರ್ಶಿದಾಬಾದ್​ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮುಮುನ್​ ಪರಿಸ್ಥಿತಿ ಗಂಭೀರವಾಗಿದ್ದು, ಆತನನ್ನು ಕೋಲ್ಕತ್ತ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. 

ಈ ಮೂವರೂ ಮಕ್ಕಳು ಮುರ್ಶಿದಾಬಾದ್​ ಜಿಲ್ಲೆಯ ಹಳ್ಳಿಯೊಂದರ ಕ್ರಿಕೆಟ್​ ಬಯಲಿನಲ್ಲಿ ಕ್ರಿಕೆಟ್​ ಆಡುತ್ತಿದ್ದರು. ಅದರಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದ ಬಾಲಕ, ಬಾಲ್​​ನ್ನು ಹೊಡೆದ ರಭಸಕ್ಕೆ ಅದು ಹತ್ತಿರದಲ್ಲೇ ಇದ್ದ ಸೂರ್ಯಕಾಂತಿ ಹೂವಿನ ತೋಟಕ್ಕೆ ಹೋಗಿ ಬಿತ್ತು. ನಂತರ ಚೆಂಡನ್ನು ಹುಡುಕಲು ಎಲ್ಲ ಬಾಲಕರೂ ಹೊಲಕ್ಕೆ ಹೋಗಿದ್ದರು. ಆಗ ಈ ಕಚ್ಚಾಬಾಂಬ್​ ಸಿಕ್ಕಿತ್ತು. ನೋಡಲು ಚೆಂಡಿನಂತೇ ಕಾಣುವ ಕಚ್ಚಾಬಾಂಬ್​​ನ್ನು ಎತ್ತುಕೊಂಡು ಅದನ್ನೇ ಹಾರಿಸಲು ಪ್ರಾರಂಭಿಸಿದರು.  ಅದು ಕೆಳಗೆ ಬಿದ್ದು ಸ್ಫೋಟಗೊಂಡ ಪರಿಣಾಮ ಮೂವರು ಗಾಯಗೊಂಡಿದ್ದಾರೆ.

ಈ ಬಗ್ಗೆ ಆಶಿಕ್​ ಅವರ ತಂದೆ ಮಿರ್ಜುವಾನ್ ಮಂಡಲ್​ ಪ್ರತಿಕ್ರಿಯೆ ನೀಡಿ, ನನ್ನ ಮಗ ಆಶಿಕ್​ ಮತ್ತು ಆತನ ಸ್ನೇಹಿತರೆಲ್ಲ ಸೇರಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ದೊಡ್ಡದಾಗಿ ಶಬ್ದಕೇಳಿ ನಾನು ಅಲ್ಲಿಗೆ ಹೋದೆ. ಆದರೆ ಅದು ಬಾಂಬ್ ಸ್ಫೋಟ ಎಂದು ಹೋದ ಬಳಿಕವೇ ಗೊತ್ತಾಯಿತು ಎಂದು ಹೇಳಿದ್ದಾರೆ. ಮುರ್ಶಿದಾಬಾದ್​ನಲ್ಲಿ ಒಟ್ಟು ಏಳು ಸ್ಥಳೀಯ ಸಂಸ್ಥೆಗಳ ಚುನಾವಣೆ ಫೆಬ್ರವರಿಯಲ್ಲಿ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ರಾಜಕೀಯ ಪಕ್ಷಗಳ ಬೆಂಬಲಿತ ಗೂಂಡಾಗಳೇ ಹೀಗೆ ಬಾಂಬ್ ಸ್ಫೋಟಿಸಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.  ಕೆಲವೇ ದಿನಗಳ ಹಿಂದೆ ಇದೇ ಜಿಲ್ಲೆಯ ಬೇಳ್ದಂಗಾ ಎಂಬಲ್ಲಿ ಹೊಲದಲ್ಲಿ ಕೆಲವು ಕಚ್ಚಾ ಬಾಂಬ್​ಗಳು ಸ್ಫೋಟಗೊಂಡು ಒಬ್ಬರು ಮೃತಪಟ್ಟಿದ್ದರು. ಇನ್ನೂ ಕೆಲವು ಗಾಯಗೊಂಡಿದ್ದರು. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *