ಚೆನ್ನೈ: ವರುಣನ ಅಬ್ಬರಕ್ಕೆ ತಮಿಳುನಾಡು ಜನ ಅಕ್ಷರಶ ಕಂಗಾಲಾಗಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಇಂದೂ ಮಳೆ ಮುಂದುವರಿದಿದೆ. ಮಳೆಯ ಅವಾಂತರಕ್ಕೆ ಈಗಾಗ್ಲೆ ಸುಮಾರು 14 ಜನ ಉಸಿರು ಚೆಲ್ಲಿದ್ದಾರೆ. ವಿಪತ್ತು ನಿರ್ವಹಣಾ ಪಡೆಯಿಂದ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ವರುಣಾಘಾತಕ್ಕೆ ತಮಿಳುನಾಡಿನಲ್ಲಿ ಜನಜೀವನ ತತ್ತರ
ಚೆನ್ನೈನಲ್ಲಿ ಮಳೆ ಕಡಿಮೆಯಾದ್ರೂ ಹಲವೆಡೆ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಸದ್ಯ ಮಳೆ ಕಡಿಮೆಯಾದ ಕಾರಣ ರೆಡ್ ಅಲರ್ಟ್ ವಾಪಸ್ ಪಡೆಯಲಾಗಿದೆ. ಇಂದು ನೀಲಗಿರಿ, ಕೊಯಮತ್ತೂರು ಮತ್ತು ಕನ್ಯಾಕುಮಾರಿ ಜಿಲ್ಲೆಗಳು ಸೇರಿದಂತೆ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗೋ ಸಾಧ್ಯತೆಯಿದೆ. ಉಳಿದಂತೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶದಲ್ಲಿ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇಂದು ಕೂಡ ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ.
ಚೆನ್ನೈ ನಗರಕ್ಕೆ ಪ್ರವಾಹ ಪರಿಸ್ಥಿತಿ ಇದೆ ಮೊದಲೆನಲ್ಲ. ದೂರದಲ್ಲಿ ಗುಡುಗು ಶಬ್ಧ ಕೇಳಿದ್ರೆ ಸಾಕು ಚೆನ್ನೈಗೆ ಅದಾಗ್ಲೆ ಮುಳುಗೋ ಭೀತಿ ಶುರುವಾಗಿರುತ್ತೆ. ಅದಕ್ಕೆ ಕಾರಣ ಏನೆಂಬುದು ಇದೀಗ ಬಹಿರಂಗವಾಗಿದೆ.
ಚೆನ್ನೈ ಮುಳುಗಡೆಗೆ ಪ್ರಮುಖ ಕಾರಣ ಬಹಿರಂಗ
ಹೌದು, ಚೆನ್ನೈ ಜಲಗಂಡಾಂತರಕ್ಕೆ ಕಾರಣವಾಗಿದ್ದೆ ಪ್ಲಾಸ್ಟಿಕ್ ಅಂದ್ರೆ ನೀವು ನಂಬಲೇಬೇಕು. ಚೆನ್ನೈನಲ್ಲಿ ಚರಂಡಿ ವ್ಯವಸ್ಥೆಯಿದ್ದರೂ ಪ್ಲಾಸ್ಟಿಕ್ ಕವರ್ ಮತ್ತು ಪೇಪರ್‌ಗಳು ಅಡ್ಡವಾಗಿ ಸಿಲುಕಿಕೊಂಡು ಚರಂಡಿಯಲ್ಲಿ ನೀರು ಸರಾಗವಾಗಿ ಸಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣವೇ ಪ್ಲಾಸ್ಟಿಕ್ ಬಳಕೆ ಹೆಚ್ಚಳ ಎಂದು ಹೇಳಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ನಂತರ 300ಕ್ಕೂ ಹೆಚ್ಚು ಸ್ಥಳಗಳಲ್ಲಿ 180 ಟನ್ಗೂ ಹೆಚ್ಚು ಪ್ಲಾಸ್ಟಿಕ್‌ನ್ನು ಪಾಲಿಕೆ ಹೊರತೆಗೆದಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ಸ್ಟಾಲಿನ್ ಸಭೆ
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ರಾಜ್ಯದ ಪರಿಸ್ಥಿತಿ ಬಗ್ಗೆ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಮಳೆ ಪರಿಸ್ಥಿತಿಯನ್ನು ಪರಿಶೀಲಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಪರಿಹಾರ ಚಟುವಟಿಕೆಗಳನ್ನು ಚುರುಕುಗೊಳಿಸಲು ಮತ್ತು ಪರಿಹಾರ ಶಿಬಿರಗಳಲ್ಲಿ ಗುಣಮಟ್ಟದ ಆಹಾರ ಮತ್ತು ವೈದ್ಯಕೀಯ ಸೌಲಭ್ಯ ಖಚಿತಪಡಿಸಿಕೊಳ್ಳಲು ಸಿಎಂ ಸ್ಟಾಲಿನ್ ಸೂಚಿಸಿದ್ದಾರೆ.
ಒಟ್ಟಾರೆ ವರುಣಾಬ್ಬರಕ್ಕೆ ದ್ರಾವಿಡರು ತತ್ತರಿಸಿದ್ದಾರೆ. ವರುಣನ ಹೊಡೆತಕ್ಕೆ ನೆಲೆಕಳೆದುಕೊಂಡು ಕಂಗಾಲಾಗಿದ್ದಾರೆ. ಇನ್ನಾದರೂ ವರುಣದೇವ ಕೊಂಚ ಧಯೆ ತೊರಿದರೆ ತಮಿಳುನಾಡಿನ ಜನತೆ ನಿಟ್ಟುಸಿರು ಬಿಡುವಂತಾಗಲಿದೆ.