ನವದೆಹಲಿ: ದೇಶಕ್ಕೆ ಬೇಕಾಗಿರುವ ಮೋಸ್ಟ್​ ವಾಂಟೆಡ್, ಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನ ಡೊಮಿನಿಕಾದಲ್ಲಿ ಬಂಧಿಸಲಾಗಿದೆ. ಚೋಕ್ಸಿ ಜೈಲಿನಲ್ಲಿರುವ ಫೋಟೊ ಇದೀಗ ಎಲ್ಲೆಡೆ ವೈರಲ್​ ಆಗಿದೆ. ಇತ್ತ, ಚೋಕ್ಸಿಯನ್ನ ಗಡಿಪಾರು ಮಾಡಿಕೊಂಡು ಕರೆತರಲು ಭಾರತದಿಂದ ಈಗಾಗಲೇ ದಾಖಲೆಗಳನ್ನ ಹೊತ್ತು ಖಾಸಗಿ ಜೆಟ್​ ಡೊಮಿನಿಕಾಗೆ ತೆರಳಿದೆ. ಇದರ ಮಧ್ಯೆ ಚೋಕ್ಸಿ ಡೊಮಿನಿಕಾಗೆ ಪಲಾಯನಗೈದಿಲ್ಲ, ಬದಲಾಗಿ ಆತನನ್ನ ಅಪಹರಣ ಮಾಡಲಾಗಿದೆ ಎಂದು ಅವರ ವಕೀಲರು ಆರೋಪಿಸಿದ್ದಾರೆ.

ವಕೀಲರು ಹೇಳಿದ ಕಥೆ ಏನು?
ಆಂಟಿಗುವಾದಲ್ಲಿ ತಲೆಮರೆಸಿಕೊಂಡಿದ್ದ ಚೋಕ್ಸಿಯ ಗಡಿಪಾರಿಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿರುವ ಹೊತ್ತಿಗೆ ಆತ ಡೊಮಿನಿಕಾಗೆ ಪಲಾಯನ ಮಾಡಿ ಕ್ಯೂಬಾಗೆ ಪರಾರಿಯಾಗಲು ಪ್ರಯತ್ನಿಸಿದ್ದ. ಡೊಮಿನಿಕಾಗೆ ಬಂದಿಳಿದ ಮೆಹುಲ್ ಚೋಕ್ಸಿ ಜೊತೆ ಆತನ ಗರ್ಲ್​​ಫ್ರೆಂಡ್ ಕೂಡ ಇದ್ದಳು. ಆಕೆಯನ್ನೂ ಬಂಧಿಸಲಾಗಿತ್ತು ಜೊತೆಗೆ ಆತ ರೋಮ್ಯಾಂಟಿಕ್​ ಟೂರ್​​ಗಾಗಿ ಡೊಮಿನಿಕಾಗೆ ಬಂದಿದ್ದ ಎಂದು ಹೇಳಲಾಗಿತ್ತು. ಆದರೆ ಈ ಆರೋಪವನ್ನ ಚೋಕ್ಸಿ ಆಪ್ತರು ಅಲ್ಲಗಳೆದಿದ್ದಾರೆ.

ಕೆಲವು ಮಾಧ್ಯಮಗಳು ಮಾಡಿರುವ ವರದಿ ಪ್ರಕಾರ.. ಚೋಕ್ಸಿ ಜೊತೆ ಇದ್ದವಳು ಆತನ ಸ್ನೇಹಿತೆ ಅಲ್ಲ. ಚೋಕ್ಸಿಯನ್ನ ಭಾರತದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರೋರು ಅಪಹರಣ ಮಾಡಿದ್ದಾರೆ. ಈ ಅಪಹರಣ ಮಾಡಿದವರಲ್ಲಿ ಈಕೆಯೂ ಹೌದು. ಯಾಕಂದ್ರೆ ಚೋಕ್ಸಿ ಬಳಿ ಡೊಮಿನಿಕಾಗೆ ಪ್ರಯಾಣ ಮಾಡಲು ಪಾಸ್​ಪೋರ್ಟ್​ ಇದೆ. ಆ ಪಾಸ್​​ಪೋರ್ಟ್​ ಅಂಟಿಗುವಾದ ಮನೆಯಲ್ಲೇ ಇದೆ. ಇದರಿಂದ ಗೊತ್ತಾಗುತ್ತೆ ಇದೊಂದು ವ್ಯವಸ್ಥಿತ ಸಂಚು ಎಂದು ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್ ಆರೋಪಿಸಿದ್ದಾರೆ.

ಮೇ 23 ರಂದು ಅಪಹರಣ
ಅಲ್ಲದೇ ಚೋಕ್ಸಿ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಲಾಗಿದೆ. ವಿದ್ಯುತ್ ಶಾಕ್ ಕೂಡ ನೀಡಲಾಗಿದೆ. ಹೀಗಾಗಿ ವೈರಲ್​ ಆಗಿರುವ ಫೋಟೋದಲ್ಲಿ ಅವರ ಕಣ್ಣುಗಳು ಊದಿಕೊಂಡಿವೆ ಎಂದು ವಕೀಲರು ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ಚೋಕ್ಸಿ ಆಂಟಿಗುವಾದಿಂದ ಕಾಣೆಯಾಗಿದ್ದರು. ಈ ಬಗ್ಗೆ ಟ್ರೇಸ್​ ಮಾಡುತ್ತಿರುವ ಹೊತ್ತಿನಲ್ಲೇ ಅವರು ಡೊಮಿನಿಕಾದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಮೇ 23 ರಂದು ಅವರನ್ನ  ಅಪಹರಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಅಲ್ಲದೇ ಅವರ ಜೊತೆ ಇದ್ದ ಮಹಿಳೆ ಆ್ಯಂಟಿಗುವದಲ್ಲಿ ವಾಸವಿದ್ದಳು. ಆಕೆ ಕೆಲ ದಿನಗಳ ಹಿಂದಷ್ಟೇ ಚೋಕ್ಸಿಯನ್ನ ಪರಿಚಯ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ನಂತರ ಅವರಿಬ್ಬರ ಮಧ್ಯೆ ಸ್ನೇಹವು ಬೆಳೆಯುತ್ತದೆ. ಅದರಂತೆ ಮೇ 23 ರಂದು ಅಪಾರ್ಟ್ಮೆಂಟ್​ನಲ್ಲಿ ಭೇಟಿಯಾಗಲು ಆಹ್ವಾನಿಸಿದ್ದಳು. ನಂತರ ಚೋಕ್ಸಿ ನಾಪತ್ತೆಯಾಗಿದ್ದಾರೆ ಎಂದು ಅವರ ವಕೀಲರು ಹೇಳಿದ್ದಾರೆ.

ಪಂಜಾಬ್ ನ್ಯಾಷನ್ ಬ್ಯಾಂಕ್​ಗೆ 13,500 ಕೋಟಿ ಕನ್ನ ಹಾಕಿರುವ ಆರೋಪ ಮೆಹುಲ್ ಚೋಕ್ಸಿ ವಿರುದ್ಧ ಇದೆ. ಈ ಆರೋಪ ಕೇಳಿಬರುತ್ತಿದ್ದಂತೆ 2018ರಲ್ಲಿ ಚೋಕ್ಸಿ ಭಾರತದಿಂದ ಪಲಾಯನ ಮಾಡಿ, ಆಂಟಿಗುವಾಗೆ ಹೋಗಿ ಅಲ್ಲೇ ನೆಲೆಸಿದ್ದ.

The post ಚೋಕ್ಸಿಗೆ ಚಿತ್ರಹಿಂಸೆ ನೀಡ್ಲಾಗಿದೆ, ಅವ್ರ ಜೊತೆ ಇದ್ದವಳು ಸ್ನೇಹಿತೆ ಅಲ್ಲ.. ಹೊಸ ಕಥೆ ಹೇಳಿದ ವಕೀಲರು appeared first on News First Kannada.

Source: newsfirstlive.com

Source link