ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಚೋಳನಗರದ ರಾಜೀವ್‍ಗಾಂಧಿ ದಂತ ವೈದ್ಯಕೀಯ ಆಸ್ಪತ್ರೆಯನ್ನು ಖಾಸಗಿ ಸಹಭಾಗಿತ್ವದೊಂದಿಗೆ ಪರಿವರ್ತಿಸಲಾಗಿರುವ 100 ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವಸತಿ ಸಚಿವ ವಿ.ಸೋಮಣ್ಣನವರು ಇಂದು ಉದ್ಘಾಟಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಣ್ಣ, ಖಾಸಗಿ ಸಹಭಾಗಿತ್ವದೊಂದಿಗೆ ರಾಜೀವ್‍ಗಾಂಧಿ ದಂತ ವೈದ್ಯಕೀಯ ಆಸ್ಪತ್ರೆಯನ್ನು ನುರಿತ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಮತ್ತು ಆಧುನಿಕ ಸೌಲಭ್ಯದೊಂದಿಗೆ ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ದಿನದ ಇಪ್ಪತ್ತುನಾಲ್ಕು ಗಂಟೆಯೂ ಮೂರು ಪಾಳಿಯಲ್ಲಿ ಈ ಆಸ್ಪತ್ರೆ ಕೋವಿಡ್ ಸೋಂಕಿತರ ನೆರವಿಗೆ ಬರಲಿದೆ ಎಂದರು.

ದಂತ ವೈದ್ಯಕೀಯ ಆಸ್ಪತ್ರೆಯನ್ನು 100 ಹಾಸಿಗೆಗಳ ಕೋವಿಡ್ ಆಸ್ಪತ್ರೆಯಾಗಿ ರೂಪಿಸಿರುವುದರಿಂದ ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ವರದಾನವಾಗಿ ಪರಿಣಮಿಸಲಿದೆ. ಆಸ್ಪತ್ರೆಯಲ್ಲಿ 15 ಹೆಚ್’ಬಿಯು/ಐಸಿಯು ಹಾಸಿಗೆಗಳು ತಕ್ಷಣಕ್ಕೆ ಲಭ್ಯವಿದೆಯಲ್ಲದೆ, 40 ಆಮ್ಲಜನಕ ಸೌಲಭ್ಯವನ್ನು ಒಳಗೊಂಡ ಹಾಸಿಗೆಗಳು ಸೋಂಕಿತರ ಸೇವೆಗೆ ಸಜ್ಜಾಗಿವೆ. ರಕ್ತ ಪರೀಕ್ಷೆ, ಕ್ಷಕಿರಣ ಸೌಲಭ್ಯದಂತಹ ವ್ಯವಸ್ಥೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಒಂದೆರಡು ದಿನಗಳಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಹಂತ ಹಂತವಾಗಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು. ಈ ಸಂದರ್ಭ ಸ್ಥಳೀಯ ಶಾಸಕರಾದ ಶ್ರೀ ಭೈರತಿ ಸುರೇಶ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ.ವೇದಾ ಮೂರ್ತಿ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

The post ಚೋಳನಗರದಲ್ಲಿ 100 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ appeared first on Public TV.

Source: publictv.in

Source link