ಗದಗ: ನಕ್ಸಲ್ ರ ಗುಂಡಿನ ದಾಳಿಗೆ ಜಿಲ್ಲೆಯ ಯೋಧ ವೀರಮರಣವನ್ನಪ್ಪಿರುವ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರ ಗ್ರಾಮದ ಯೋಧ ಲಕ್ಷ್ಮಣ್ ಗೌರಣ್ಣವರ(31) ಹತಾತ್ಮರಾಗಿದ್ದಾರೆ. ಛತ್ತೀಸ್‍ಗಢ ಗಡಿ ಭಾಗದಲ್ಲಿ ನಕ್ಸಲರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ನಕ್ಸಲರ ಗುಂಡು ಕನ್ನಡಿಗನ ಎದೆ ಹೊಕ್ಕಿದ್ದು, ಸ್ಥಳದಲ್ಲೇ ಹತಾತ್ಮರಾಗಿದ್ದಾರೆ.

ಲಕ್ಷ್ಮಣ್ ಕಳೆದ 12 ವರ್ಷಗಳಿಂದ ಬಿಎಸ್‍ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 2 ತಿಂಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದರು. ಇದೀಗ ಮತ್ತೆ ಶವವಾಗಿ ತಾಯಿನಾಡಿಗೆ ಯೋಧನ ಪಾರ್ಥಿವ ಶರೀರ ಬರಲಿದೆ. ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಪಾರ್ಥಿವ ಶರೀರ ಬರುವ ಸಮಯದ ಮಾಹಿತಿ ತಿಳಿದು ಬಂದಿಲ್ಲ. ನಾಳೆ ಸಂಜೆ ವೇಳೆಗೆ ಗೋಜನೂರು ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ವೀರಯೋಧನ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

The post ಛತ್ತೀಸ್‍ಗಢದಲ್ಲಿ ನಕ್ಸಲರ ಗುಂಡಿಗೆ ಗದಗನ ಯೋಧ ಹುತಾತ್ಮ appeared first on Public TV.

Source: publictv.in

Source link