ಜಗಳದ ನಂತರ ನಿದ್ರಿಸುತ್ತಿದ್ದ ವ್ಯಕ್ತಿಯನ್ನು ಸಾಯಿಸಿದ್ದು ಕೊಲೆ, ಇದು ಉದ್ದೇಶಿತ ಹತ್ಯೆ: ಬಾಂಬೆ ಹೈಕೋರ್ಟ್ – Bombay High Court says Killing a sleeping person hours after fight is murder not culpable homicide not amounting to murder


ಪೀಠವು ದಾಖಲೆಯಲ್ಲಿರುವ ಸಂಪೂರ್ಣ ವಸ್ತುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಮೇಲ್ಮನವಿದಾರರ ವಿರುದ್ಧದ ಪ್ರಕರಣವನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ ಎಂದು ಗಮನಿಸಿತು

ಒಬ್ಬ ವ್ಯಕ್ತಿ ಜತೆ ಜಗಳವಾಡಿದ ನಂತರ ಆತ ನಿದ್ರಿಸುತ್ತಿರುವಾಗ ಆ ವ್ಯಕ್ತಿಯನ್ನು ಕೊಲ್ಲುವುದು ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಕೊಲೆಯ ಗಂಭೀರ ಅಪರಾಧದ ವ್ಯಾಪ್ತಿಯಲ್ಲಿ ಬರುತ್ತದೆ, ಇದು ಉದ್ದೇಶಿತ ಕೃತ್ಯ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮಿಟ್ಟು @ ಮಿಟ್ಟು ಭೋಲಿ ಪರೇದಾ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ರೀತಿ ಹೇಳಿದೆ. ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಶರ್ಮಿಳಾ ದೇಶಮುಖ್ ಅವರ ವಿಭಾಗೀಯ ಪೀಠವು, ಟ್ರಕ್ ಕ್ಲೀನರ್‌ನ ಶಿಕ್ಷೆಯನ್ನು ಕೊಲೆಯಿಂದ (ಉದ್ದೇಶಿತ ಹತ್ಯೆ) ದಂಡನಾರ್ಹ ನರಹತ್ಯೆಗೆ ಪರಿವರ್ತಿಸಲು ನಿರಾಕರಿಸಿತು. ಆತನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನೂ ಪೀಠ ಎತ್ತಿ ಹಿಡಿದಿದೆ. ಆ  ವ್ಯಕ್ತಿ (ಮೃತರ) ಮೇಲೆ ಈತ ಭಾವೋದ್ರೇಕದಲ್ಲಿ ಹಲ್ಲೆ ಮಾಡಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಮೇಲ್ಮನವಿದಾರ ಮತ್ತು ಮೃತರ ನಡುವಿನ ಜಗಳದ ನಂತರ ಹಲ್ಲೆ ನಡೆದಿದೆ. ಅವರು ಮಲಗಿದ್ದಾಗ ಮೇಲ್ಮನವಿದಾರ ಆತನ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಮೃತನ ತಲೆ, ಎದೆ ಮತ್ತು ಕತ್ತಿನ ಮೇಲೆ ತೀವ್ರ ಹಲ್ಲೆ ನಡೆದಿದ್ದು ಅದು ಸಾವಿಗೆ ಕಾರಣವಾಗಿದೆ. ನಮ್ಮ ಅಭಿಪ್ರಾಯದಲ್ಲಿ, ಪ್ರಕರಣದ ಸತ್ಯಗಳು ಅಪರಾಧವನ್ನು ಸೆಕ್ಷನ್ 302 ರಿಂದ 304 ಭಾಗ-II ಗೆ ಇಳಿಸುವುದನ್ನು ಸಮರ್ಥಿಸುವುದಿಲ್ಲ ಎಂದು ಪೀಠವು ಸೆಪ್ಟೆಂಬರ್ 27 ರಂದು ತನ್ನ ಆದೇಶದಲ್ಲಿ ಅಂಗೀಕರಿಸಿತು. ಪ್ರಕರಣದ ಸತ್ಯಾಸತ್ಯತೆಗಳ ಪ್ರಕಾರ, 2011 ರ ಸ್ವಾತಂತ್ರ್ಯ ದಿನದಂದು ಪರಸ್ಪರ ಪರಿಚಯವಿರುವ ಮೇಲ್ಮನವಿದಾರ ಮತ್ತು ಮೃತರು ಬೆಳಿಗ್ಗೆಯಿಂದ ಮದ್ಯ ಸೇವಿಸುತ್ತಿದ್ದರು.

ಮೇಲ್ಮನವಿದಾರನು ಮೃತನ ಮೊಬೈಲ್ ಫೋನ್ ತೆಗೆದುಕೊಂಡು ತನ್ನ ಟ್ರಕ್‌ನಲ್ಲಿ ಪೆಟ್ಟಿಗೆಯೊಳಗೆ ಇಟ್ಟನು. ಮೃತನು ತನ್ನ ಇತರ ಸ್ನೇಹಿತರಿಗೆ ಈ ವಿಷಯ ತಿಳಿಸಿದಾಗ ಸ್ನೇಹಿತರೊಬ್ಬರು ಅವರ ಸಂಖ್ಯೆಗೆ ಕರೆ ಮಾಡಿದಾಗ, ಟ್ರಕ್‌ನಲ್ಲಿ ಫೋನ್ ರಿಂಗಾಯಿತು. ಆಗ ಜಗಳ ಶುರುವಾಗಿದೆ. ಫೋನ್ ಇಟ್ಟಿದ್ದ ಬಾಕ್ಸ್‌ನ ಕೀಗಳು ಟ್ರಕ್ ಚಾಲಕನ ಬಳಿ ಇದೆ ಎಂದು ಅರ್ಜಿದಾರರು ಹೇಳಿದ್ದಾರೆ. ಅವರೆಲ್ಲರೂ ಚಾಲಕನ ಮನೆಗೆ ಹೋದರು ದಾರಿಯಲ್ಲಿ ಜಗಳ ಮುಂದವರಿದಿದ್ದು ಮೃತರು ಮತ್ತು ಅವರ ಸ್ನೇಹಿತ ಟ್ರಕ್‌ಗೆ  ಮರಳಿದ್ದರು. ಆಗ ಮೇಲ್ಮನವಿದಾರ ಬರಲಿಲ್ಲ.

ಮೃತನು ಟ್ರಕ್‌ನ ಹಿಂಭಾಗದಲ್ಲಿ ಮಲಗಿದ್ದಾಗ, ಮೇಲ್ಮನವಿದಾರನು ಮರದ ದಿಮ್ಮಿಯಿಂದ ಮೃತನ ಮೇಲೆ ಹಲ್ಲೆ ನಡೆಸಿದ್ದಾನೆ. ಗದ್ದಲ ಕೇಳಿ ಸ್ನೇಹಿತರು ಓಡಿ ಬಂದಾಗ ಮೇಲ್ಮನವಿದಾರನು ವ್ಯಕ್ತಿಯ ಮೇಲೆ ಹಲ್ಲೆ ಮಾಡುವುದನ್ನು ಮತ್ತು ಅವನ ಬಾಯಿ, ಕಣ್ಣು ಮತ್ತು ಮೂಗಿನಿಂದ ರಕ್ತ ಸೋರುತ್ತಿರುವುದನ್ನು ನೋಡಿದ್ದಾರೆ. ಹಲ್ಲೆ ನಡೆಸಿದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.

ಪೀಠವು ದಾಖಲೆಯಲ್ಲಿರುವ ಸಂಪೂರ್ಣ ವಸ್ತುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಮೇಲ್ಮನವಿದಾರರ ವಿರುದ್ಧದ ಪ್ರಕರಣವನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ ಎಂದು ಗಮನಿಸಿತು. ದಾಖಲೆಯಲ್ಲಿರುವ ವಿಷಯವು ಮೇಲ್ಮನವಿದಾರರನ್ನು ಅಪರಾಧಕ್ಕೆ ನೇರವಾಗಿ ಲಿಂಕ್ ಮಾಡಿದೆ ಎಂದು ಅದು ಗಮನಿಸಿದೆ.

ಮೇಲ್ಮನವಿದಾರರು ಮೊಬೈಲ್ ಫೋನ್ ತೆಗೆದುಕೊಂಡು ಅದನ್ನು ಟ್ರಕ್‌ನ ಕ್ಯಾಬಿನ್‌ನಲ್ಲಿ ಇಡುವುದು ದಾಖಲೆಯಲ್ಲಿರುವ ಸಾಕ್ಷ್ಯಗಳ ಮೂಲಕ ಸ್ಪಷ್ಟವಾಗಿ ಸಾಬೀತಾಗಿದೆ. ವಶಪಡಿಸಿಕೊಂಡ ದಾಖಲೆಗಳ ಪ್ರಕಾರ ಟ್ರಕ್‌ನ ಕ್ಯಾಬಿನ್‌ನಿಂದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳುವುದನ್ನು ತೋರಿಸುತ್ತದೆ ಎಂದು ಪೀಠ ಗಮನಿಸಿದೆ.

ಆದ್ದರಿಂದ, ಜುಲೈ 31, 2013 ರಂದು ಸೆಷನ್ಸ್ ನ್ಯಾಯಾಲಯದ ಆದೇಶದ ಮೂಲಕ ಮೇಲ್ಮನವಿದಾರರಿಗೆ ವಿಧಿಸಲಾದ ಅಪರಾಧ ಮತ್ತು ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ. ಅರ್ಜಿದಾರರ ಪರ ವಕೀಲ ಗೌರವ್ ಭಾವನಾನಿ ವಾದ ಮಂಡಿಸಿದ್ದರು. ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಆರ್ ಕಪಾಡ್ನಿಸ್ ರಾಜ್ಯವನ್ನು ಪ್ರತಿನಿಧಿಸಿದ್ದರು ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.