ಉಡುಪಿ: ಅಪ್ಪು ಅಜರಾಮರ ಅಂತ ನಾಡಿಗೆ ನಾಡೇ ಹೇಳ್ತಾ ಇದೆ. ಪುನೀತ್ ರಾಜಕುಮಾರ್ ದಿಢೀರ್ ಸಾವು ಯಾರೊಬ್ಬರಿಗೂ ಅರಗಿಸಿಕೊಳ್ಳಲು ಸಾಧ್ಯವಾಗ್ತಾನೇ ಇಲ್ಲ. ಪ್ರತಿಯೊಬ್ಬರೂ ಅವರವರ ಭಾವಕ್ಕೆ ನಿಲುಕಿದ ರೀತಿಯಲ್ಲಿ ನೀನೇ ರಾಜಕುಮಾರ ಎಂದು ಹಾಡಿ ಹೊಗಳುತ್ತಿದ್ದಾರೆ. ಉಡುಪಿಯ ಕಲಾವಿದನೊಬ್ಬ ಅಪರೂಪದ ಚಿತ್ರ ಬರೆದು ಅಪ್ಪು ನೀನು ನನ್ನ ಹೃದಯಕ್ಕೆ ತುಂಬಾ ಹತ್ತಿರ ಅಂತ ಹೇಳುತ್ತಿದ್ದಾರೆ.
ಅಪ್ಪು ಅಭಿಮಾನಿಗಳು ನಾನಾ ರೀತಿಯಲ್ಲಿ ಅಭಿಮಾನ ಪ್ರಕಟಿಸುತ್ತಿದ್ದಾರೆ. ನಮ್ಮ ಎದೆ ಬಗೆದರೆ ಅಪ್ಪುನೇ ಇರೋದು ಅಂತ ಸಾರಿ ಸಾರಿ ಹೇಳುತ್ತಿದ್ದಾರೆ. ಇಲ್ಲೊಬ್ಬ ಕಲಾವಿದ ತಾನು ಬಿಡಿಸಿದ ಅಪರೂಪದ ಚಿತ್ರವನ್ನು ಹೃದಯಕ್ಕೆ ಹತ್ತಿರ ಇರಿಸಿಕೊಂಡು ಅಪ್ಪು ಐ ಲವ್ ಯೂ ಅಂತಿದ್ದಾರೆ.
ಹೌದು.. ಉಡುಪಿ ಜಿಲ್ಲೆಯ ಮರ್ಣೆ ಎಂಬ ಪುಟ್ಟ ಗ್ರಾಮದ ಈ ಕಲಾವಿದನ ಹೆಸರು ಮಹೇಶ್. ಈವರೆಗೆ ಜನಪ್ರಿಯ ರಾಜಕಾರಣಿಗಳು, ಸ್ವಾಮೀಜಿಗಳು, ಕ್ರೀಡಾಪಟುಗಳ ಚಿತ್ರವನ್ನು ಅಶ್ವತ್ಥ ಎಲೆಯಲ್ಲಿ ಬರೆದು ಎಲ್ಲರ ಮೆಚ್ಚುಗೆ ಪಡೆದಿದ್ದರು. ಇದೀಗ ಇವರು ಇಷ್ಟಪಟ್ಟು ಬಿಡಿಸಿದ ಪುನೀತ್ರ ಭಾವಚಿತ್ರ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಹಸಿರಾದ ಅಶ್ವತ್ಥದ ಎಲೆಯನ್ನೇ ಫ್ರೇಮ್ ಮಾಡಿಕೊಂಡು, ಪುನೀತ್ ನಗುಮುಖದ ಪಡಿಯಚ್ಚು ಮೂಡಿಸಿದ್ದಾರೆ. ಈ ಚಿತ್ರವನ್ನು ಆಗಸದ ಬೆಳಕಿಗೆ ಹಿಡಿದರೆ, ಅಪ್ಪು ಸ್ವರ್ಗದಿಂದ ಧರೆಗಿಳಿದಂತೆ ಭಾಸವಾಗುತ್ತೆ.
ಅಶ್ವತ್ಥದ ಎಲೆಯಲ್ಲಿ ಭಾವಚಿತ್ರಗಳ ಪಡಿಯಚ್ಚು ಮೂಡಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಎರಡರಿಂದ ಮೂರು ಗಂಟೆಗಳ ಕಾಲ ತಾಳ್ಮೆಯಿಂದ ಕುಳಿತು ಇಷ್ಟಪಟ್ಟು ರಚಿಸಿದರೆ ಮಾತ್ರ ಇಷ್ಟೊಂದು ಅದ್ಭುತವಾದ ಭಾವಚಿತ್ರ ಮೂಡಿಬರಲು ಸಾಧ್ಯ. ಈ ಅಪ್ಪು ಚಿತ್ರವಂತೂ ಅತ್ಯಂತ ಸಹಜವಾಗಿದೆ. ಸತ್ತ ನಂತರವೂ ಎಲ್ಲರನ್ನೂ ಕಾಡುತ್ತಿರುವುದು, ಪುನೀತ್ ರಾಜಕುಮಾರ್ರ ಆ ಮುಗ್ಧ ನಗು. ನಗುವಿನ ಅದೇ ಸಹಜತೆಯನ್ನು ಮಹೇಶ್ ಬಿಡಿಸಿದ ಚಿತ್ರದಲ್ಲಿ ಕಾಣಬಹುದು. ನಿರ್ಜೀವ ಎಲೆಗೂ ಜೀವ ಬಂದಂತೆ ಭಾಸವಾಗುವ ಈ ಅಪರೂಪದ ಚಿತ್ರ, ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ.
ಪ್ರತಿಯೊಬ್ಬರೂ ಅವರವರಿಗೆ ಇಷ್ಟವಾಗುವ ರೀತಿಯಲ್ಲಿ ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಕಲಾವಿದನೊಬ್ಬ ತನ್ನ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ರಚಿಸಿರುವ ಈ ಕಲಾಕೃತಿ ಅತ್ಯಂತ ಭಾವಪೂರ್ಣವಾಗಿದೆ.
ವಿಶೇಷ ವರದಿ: ದಿನೇಶ್ ಕಾಶಿಪಟ್ಣ
The post ಜನಮನದಲ್ಲಿ ಅಪ್ಪು; ಅಶ್ವಥ ಎಲೆಯಲ್ಲಿ ಅರಳಿದ ಕರುನಾಡಿನ ‘ರಾಜಕುಮಾರ’ #Video appeared first on News First Kannada.