ಬೆಂಗಳೂರು: ರಾಜ್ಯದ ಜನರ ಜೀವದ ಜೊತೆ ಆಟ ಆಡಬೇಡಿ. ಲಾಕ್​ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯ. ಇನ್ನೂ ಒಂದು ತಿಂಗಳು‌ ಲಾಕ್​​ಡೌನ್ ವಿಸ್ತರಣೆ ಮಾಡಬೇಕು ಅಂತ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕೋವಿಡ್ 19 ಪರಿಸ್ಥಿತಿಯ ಕುರಿತು ಕುಮಾರಸ್ವಾಮಿ ಇಂದು ತುಮಕೂರು ಜಿಲ್ಲೆಯ ಜೆಡಿಎಸ್​ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಪ್ರಮುಖ ನಾಯಕರೊಂದಿಗೆ  ವಿಡಿಯೋ ಸಂವಾದ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಕ್​ಡೌನ್​ ವಿಸ್ತರಣೆ ಮಾಡದೆ ಇದ್ದರೆ ಮುಂದೆ ದೊಡ್ಡ ಅನಾಹುತ ಆಗುತ್ತದೆ. ಕೇವಲ ಲಾಕ್ ಲೌನ್ ಮಾಡಿದರೆ ಸಾಕಾಗುವುದಿಲ್ಲ. ಕೂಲಿ ಕಾರ್ಮಿಕರಿಕೆ, ಶ್ರಮಿಕರು, ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಎಂದು ಒತ್ತಾಯಿಸಿದರು.

ಸರ್ಕಾರ ಹಲವು ಕಡೆ ಕೋವಿಡ್ ಟೆಸ್ಟ್ ಸ್ಥಗಿತಗೊಳಿಸಿದೆ. ಇದರಿಂದ ರಾಜ್ಯದಲ್ಲಿ ಮತ್ತಷ್ಟು ಸಾವು ನೋವು ಆಗುತ್ತದೆ. ಕೋವಿಡ್ ಟೆಸ್ಟ್ ಮಾಡದೆ ಸರ್ಕಾರ ಹೊರನೋಟಕ್ಕೆ ವೈಫಲ್ಯ ಮುಚ್ಚಿಕೊಳ್ಳಲು ಹೊರಟಿದೆ. ತಾತ್ಕಾಲಿಕವಾಗಿ ಜನರ ದಿಕ್ಕು ತಪ್ಪಿಸಲು ಹೋಗಿ ಮುಂದೆ ದೊಡ್ಡ ಎಡವಟ್ಟು ಮಾಡುತ್ತಿರಾ. ಇದರಿಂದ ರಾಜ್ಯದಲ್ಲಿ ಕೋವಿಡ್ ಕೇಸ್​ಗಳು ಹೆಚ್ಚಾಗುತ್ತವೆ ಎಂದರು.

ಸರ್ಕಾರದ ಮಂತ್ರಿಗಳು ವಾಸ್ತವಿಕ ಹೇಳಿಕೆ ಕೊಡುತ್ತಿಲ್ಲ. ಕೇವಲ ಲಘುವಾಗಿ ಹೇಳಿಕೆಯನ್ನು ಕೊಡುತ್ತಿದ್ದಾರೆ. ಇಲ್ಲಿಯವರೆಗೆ ನೀವು ತಪ್ಪು ಮಾಡಿದ್ದೀರಿ, ಜನಗಳ ನೋವು ನೋಡಿದ್ದೀರಿ. ಮತ್ತೆ ಆ ತಪ್ಪು ಮಾಡಬೇಡಿ. ಕೇವಲ ಸಭೆ ಮಾಡಿದರೆ ಯಾವುದೇ ಪ್ರಯೋಜನ ಇಲ್ಲ. ಮೀಟಿಂಗ್ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಇದೇ ವೇಳೆ ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಹೆಚ್​ಡಿಕೆ, ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಮೊದಲು ವ್ಯಾಕ್ಸಿನ್ ಬಂದಾಗ ತೆಗೆದುಕೊಳ್ಳಬೇಡಿ ಎಂದು ಕಾಂಗ್ರೆಸ್ ಅಪಾಪ್ರಚಾರ ಮಾಡಿದೆ. ಈಗ ಲಸಿಕೆ ವಿಚಾರದಲ್ಲಿ ಸಣ್ಣತನದ ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದರು.

 

The post ಜನರ ಜೀವದ ಜೊತೆ ಆಟ ಆಡ್ಬೇಡಿ, 1 ತಿಂಗಳು‌ ಲಾಕ್​​ಡೌನ್ ವಿಸ್ತರಿಸಿ -ಸರ್ಕಾರಕ್ಕೆ HDK ಸಲಹೆ appeared first on News First Kannada.

Source: newsfirstlive.com

Source link