ಐಪಿಎಲ್ ಮೆಗಾ ಆಕ್ಷನ್ಗೆ 2 ತಿಂಗಳು ಬಾಕಿಯಿದೆ. ಆದ್ರೆ ಈ ಮೆಗಾ ಆಕ್ಷನ್ಗೂ ಮುನ್ನ ಐಪಿಎಲ್ ಫ್ರಾಂಚೈಸಿಗಳು ಮಾತ್ರ, ಭಾರೀ ಲೆಕ್ಕಚಾರಲ್ಲಿ ತೊಡಗಿವೆ. ಆದ್ರೆ ಎರಡು ತಂಡಗಳು ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಆ್ಯಂಡ್ ವಾರ್ನರ್ರನ್ನ ಟಾರ್ಗೆಟ್ ಮಾಡ್ತಿವೆ. ಅದ್ಯಾಕೆ ತಂಡಗಳು ಇವರ ಹಿಂದೆ ಬಿದ್ದಿವೆ ಅಂತೀರಾ..? ಇಲ್ಲಿದೆ ಡೀಟೆಲ್ಸ್.
15ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜಿಗೆ 2 ತಿಂಗಳಷ್ಟೇ ಬಾಕಿಯಿದೆ. ಈ ನಡುವೆ ಯಾರನ್ನ ಕೈಬಿಡಬೇಕು..? ಯಾರನ್ನ ಸೆಳೆದು ತಂಡದ ಬ್ರಾಂಡ್ನ ವ್ಯಾಲ್ಯೂ ಹೆಚ್ಚಿಸಿಕೊಳ್ಳಬೇಕು? ಯಾರು ಸೇರ್ಪಡೆಯಾದ್ರೆ ಬಲಿಷ್ಠ ತಂಡ ಕಟ್ಟಬಹುದು..? ಯಾವ ಸ್ಲಾಟ್ಗೆ ಯಾರು ಬೆಸ್ಟ್..? ಹೀಗೆ ಹೆಜ್ಜೆ ಹೆಜ್ಜೆಗೂ ಫ್ರಾಂಚೈಸಿಗಳು, ಲೆಕ್ಕಚಾರ ಹಾಕ್ತಿವೆ. ಹಳೆಯ ಫ್ರಾಂಚೈಸಿಗಳಂತೂ ರಿಟೈನ್ ವಿಚಾರದಲ್ಲಿ ಎಚ್ಚರಿಕೆಯ ನಡೆ ಅನುಸರಿಸುತ್ತಿವೆ. ಇತ್ತೀಚಿಗೆ ಐಪಿಎಲ್ಗೆ ಎಂಟ್ರಿ ಕೊಟ್ಟಿರುವ ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳಂತೂ, ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ಆಟಗಾರರನ್ನೇ ಟಾರ್ಗೆಟ್ ಮಾಡ್ತಿವೆ.
ಮೆಗಾ ಹರಾಜಿಗೂ ಮುನ್ನ ಡ್ರಾಫ್ಟ್ ಸಿಸ್ಟಮ್ನಡಿ ಹೊಸ ತಂಡಗಳು ಇಬ್ಬರು ಭಾರತೀಯ, ಓರ್ವ ವಿದೇಶಿ ಆಟಗಾರರನ್ನ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಅವಕಾಶವನ್ನೇ ಎನ್ಕ್ಯಾಶ್ ಮಾಡಿಕೊಳ್ಳಲು ಮುಂದಾಗಿರುವ ಲಕ್ನೋ ಮತ್ತು ಅಹ್ಮದಾಬಾದ್, ತನ್ನ ಬ್ರ್ಯಾಂಡ್ ವಾಲ್ಯೂ ಜೊತೆಗೆ ಬಲಿಷ್ಠ ತಂಡವನ್ನ ಕಟ್ಟುವ ಲೆಕ್ಕಚಾರದಲ್ಲಿವೆ. ಹೀಗಾಗಿಯೇ ಕೆಲ ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿವೆ.
ಡೇಂಜರಸ್ ವಾರ್ನರ್ ಮೇಲೆ ಲಕ್ನೋ ಕಣ್ಣು..!
ಕಳೆದ ಆವೃತ್ತಿಯಲ್ಲಿ ಡೇವಿಡ್ ವಾರ್ನರ್ ಹೈದ್ರಾಬಾದ್ ಪರ ಕಳಪೆ ಪದರ್ಶನ ನೀಡಿದರೂ, ಲಕ್ನೋ ತಂಡದ ಕಣ್ಣು ಮಾತ್ರ ಡೇವಿಡ್ ವಾರ್ನರ್ ಮೇಲೆ ನೆಟ್ಟಿದೆ. ಇದಕ್ಕೆ ಕಾರಣ ಲಕ್ನೋನ ಹೋಮ್ ಗ್ರೌಂಡ್, ಶಾರ್ಟ್ ಬೌಂಡರಿಗಳನ್ನ ಹೊಂದಿರೋದು. ಹೀಗಾಗಿ ಡೇವಿಡ್ ವಾರ್ನರ್ ಪರಿಣಾಮಕಾರಿಯಾಗಬಲ್ಲರು. ಅಷ್ಟೇ ಅಲ್ಲ.. ಆತನ ನಾಯಕತ್ವದ ಗುಣಗಳು ತಂಡಕ್ಕೆ ಲಾಭದಾಯಕವೇ ಆಗಿರಲಿದೆ. ಭಾರತದಲ್ಲಿ ವಿಶೇಷ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಹೀಗಾಗಿ ಇವರನ್ನ ತಂಡಕ್ಕೆ ಕರೆತರಲು, ಫ್ರಾಂಚೈಸಿ ಮುಂದಾಗಿದೆ.
ಜಸ್ಟ್ ವಾರ್ನರ್ ಮೇಲೆ ಮಾತ್ರವಲ್ಲ. ಮುಂಬೈ ಇಂಡಿಯನ್ಸ್ನ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ರನ್ನೂ, ಈ ಫ್ರಾಂಚೈಸಿ ಟಾರ್ಗೆಟ್ ಮಾಡ್ತಿದೆ. ಯಾಕಂದ್ರೆ, ಮುಂಬೈ ಇಂಡಿಯನ್ಸ್ನ ಮೊದಲ ರಿಟೈನ್ ಆಯ್ಕೆ, ರೋಹಿತ್ ಶರ್ಮಾ, ಕಿರನ್ ಪೋಲಾರ್ಡ್, ಜಸ್ಪ್ರೀತ್ ಬೂಮ್ರಾ ಆಗುವ ಸಾಧ್ಯತೆ ಇದೆ. ಇನ್ನೊಂದು ಆಯ್ಕೆಯಲ್ಲಿ ಸೂರ್ಯ ಕುಮಾರ್ ಅಥವಾ ಇಶಾನ್ ಕಿಶಾನ್.. ಇಬ್ಬರಲ್ಲಿ ಒಬ್ಬರು ಮಾತ್ರ ತಂಡದಲ್ಲಿ ಉಳಿಯಬಹುದಾಗಿದೆ. ಹೀಗಾಗಿ ಈ ಇಬ್ಬರಲ್ಲಿ ಒಬ್ಬರು ಹೊರಬೀಳೋದು ಗ್ಯಾರಂಟಿ. ಇದನ್ನೇ ಈಗ ಬಂಡವಾಳ ಮಾಡಿಕೊಳ್ಳಲು, ಲಕ್ನೋ ಮುಂದಾಗೋ ಸಾಧ್ಯತೆ ಇದೆ. ಅಷ್ಟೇ ಅಲ್ಲ..! ಲೋಕಲ್ ಹೀರೋಸ್ ಸುರೇಶ್ ರೈನಾ ಮತ್ತು ಭುವನೇಶ್ವರ್ರನ್ನ ತಂಡದ ಭಾಗವಾಗಿಸಿಕೊಳ್ಳಲು ಮುಂದಾಗಿದೆ ಅಂತಾನೇ ಮೂಲಗಳು ಹೇಳ್ತಿವೆ.
ಅಹ್ಮದಬಾದ್ಗೆ ಭಾರತದ ಸ್ಟಾರ್ ಆಟಗಾರರೇ ಟಾರ್ಗೆಟ್..!
ಹೌದು.. ಈಗಾಗಲೇ ಕೆ.ಎಲ್.ರಾಹುಲ್ ಮತ್ತು ಯಸ್ ಅಯ್ಯರ್, ಫ್ರಾಂಚೈಸಿ ತೊರೆಯುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದಾರೆ. ಅದ್ರಲ್ಲೂ ಬ್ಯಾಟಿಂಗ್ನಲ್ಲಿ ಕಮಾಲ್ ಮಾಡಬಲ್ಲ ಈ ಇಬ್ಬರು, ತಂಡವನ್ನ ಸಮರ್ಥವಾಗಿ ಮುನ್ನಡೆಸಬಲ್ಲರು. ಓರ್ವ ಟಾಪ್ ಆರ್ಡರ್ಗೆ ಬಲ ತುಂಬಿದರೆ, ಮತ್ತೊಬ್ಬ ಮಿಡಲ್ ಆರ್ಡರ್ಗೆ ಶಕ್ತಿಯಾಗಬಲ್ಲ.. ಹೀಗಾಗಿ ಇವರನ್ನ ತನ್ನತ್ತ ಸೆಳೆಯಲು ಎಲ್ಲಾ ಪ್ರಯತ್ನಗಳು ತೆರೆ ಹಿಂದೆ ನಡೆಯುತ್ತಿದೆ. ಇದರ ಜೊತೆಗೆ ತಂಡಕ್ಕೆ ಲೋಕಲ್ ಫೇವರ್ ನೀಡುವ ಸಲುವಾಗಿ ಆಲ್ರೌಂಡರ್ ಹಾರ್ದಿಕ್ಗೆ ಮಣೆಹಾಕಲು ಸ್ಕೆಚ್ ಹಾಕಿದೆಯಂತೆ.. ಆದ್ರೆ, ಇವರಲ್ಲಿ ಯಾರು ರಿಟೈನ್ ಆಗದೇ ಉಳಿಯುತ್ತಾರೆ ಎಂಬ ಅಂಶದ ಮೇಲೆಯೇ ಎಲ್ಲವೂ ನಿರ್ಧಾರವಾಗಲಿದೆ.