ಕೊಪ್ಪಳ: ಕರಡಿಯೊಂದು ಜನವಸತಿ ಪ್ರದೇಶಕ್ಕೆ ನುಗ್ಗಿ ಹಲವರ ಮೇಲೆ ಭೀಕರವಾಗಿ ದಾಳಿ ಮಾಡಿದೆ. ಕೊಪ್ಪಳದ ಗಂಗಾವತಿಯ ಕೊಟ್ಟೂರೇಶ್ವರ ಕ್ಯಾಂಪಿನ ಬಳಿಗಾರ ಓಣಿಯಲ್ಲಿ ಈ ಘಟನೆ ನಡೆದಿದೆ.

 

ದಾಳಿಯಲ್ಲಿ ಈಶ್ವರಮ್ಮ, ನಂದಾಬಾಯಿ ಹಾಗೂ ನಗರಸಭೆಯ ಪೌರಕಾರ್ಮಿಕ ಕಾಸೀಂಸಾಬ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗ್ತಿದೆ. ಶಾಸಕ ಪರಣ್ಣ ಮುನವಳ್ಳಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮೊದಲ ಬಾರಿಗೆ ನಗರದ ಜನನಿಬಿಡ ಹಾಗೂ ಜನವಸತಿ ಪ್ರದೇಶದಲ್ಲಿ ಕರಡಿ ನುಗ್ಗಿದ್ದು,  ಘಟನೆಯಿಂದ ಜನರು ಆತಂಕಗೊಂಡಿದ್ದಾರೆ. ಬೆಳಗ್ಗೆ 5.30ರ ಸುಮಾರಿಗೆ ಕರಡಿಯನ್ನು ಕಂಡು ಕೋತಿಗಳು ಮರವೆನ್ನೇರಿ ಕೂಗಾಡಿವೆ. ಆಗ ಜನರು ಮನೆಯಿಂದ ಹೊರಗೆ ಬಂದು ನೋಡಿದಾಗ ಕರಡಿ ಓಡುತ್ತಿರುವುದು ಕಂಡಿದೆ. ನಂತರ ಹಳೇ ಪ್ರವಾಸಿ ಮಂದಿರದ ಗೋಡೆ ಜಿಗಿದು ಪಕ್ಕದ ಬೆಟ್ಟದತ್ತ ಕರಡಿ ಓಡಿ ಹೋಗಿದೆ ಎನ್ನಲಾಗಿದೆ. ಗಂಗಾವತಿಯ ಭಾಗದಲ್ಲಿ ಪದೇ ಪದೆ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತಿರೋದ್ರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

The post ಜನವಸತಿ ಪ್ರದೇಶಕ್ಕೆ ನುಗ್ಗಿದ ಕರಡಿ , ಹಲವರ ಮೇಲೆ ಭೀಕರ ದಾಳಿ appeared first on News First Kannada.

Source: newsfirstlive.com

Source link