ಸಂಗಾತಿಯ ಹುಡುಕಾಟಕ್ಕೆ ಯುವಕ ಯುವತಿಯರು ಡೇಟಿಂಗ್‌ ಆ್ಯಪ್‌ ಮೊರೆ ಹೋಗುವುದು ಕಾಮನ್‌. ಆದ್ರೆ, ಸರ್ಕಾರವೇ ಡೇಟಿಂಗ್‌ ಆ್ಯಪ್‌ ಸಿದ್ಧಪಡಿಸಿರುವುದನ್ನು ನೋಡಿದ್ದೀರಾ? ಹೌದು, ಇರಾನ್‌ ಸರ್ಕಾರ ರೂಪಿಸಿದೆ. ಅದರ ಹಿಂದಿನ ಉದ್ದೇಶ ಏನು? ಅದರ ವಿಶೇಷ ಏನು?

ಜಗತ್ತಿನಾದ್ಯಂತ ವಿಭಿನ್ನ ಸಂಸ್ಕೃತಿ ಹೊಂದಿರೋ ರಾಷ್ಟ್ರಗಳಲ್ಲಿ ಯುವಕರು ಡೇಟಿಂಗ್‌ ಮೊರೆ ಹೊಗುವುದು ಕಾಮನ್‌. ಆದ್ರೆ, ಕಟ್ಟಾ ಇಸ್ಲಾಮಿಕ್‌ ಸಾಂಪ್ರದಾಯಿಕ ರಾಷ್ಟ್ರದಲ್ಲಿ ಡೇಟಿಂಗ್‌ ಆ್ಯಪ್‌ಗಳ ಬಗ್ಗೆ ಕಲ್ಪನೆ ಮಾಡಿಕೊಳ್ಳುವುದು ಕಷ್ಟ. ಅಂತಹುದ್ದೇ ಒಂದು ರಾಷ್ಟ್ರ ಇರಾನ್​. ಇರಾನ್‌ನಲ್ಲಿ ಇರೋ ಜನಸಂಖ್ಯೆ ಸುಮಾರು 8 ಕೋಟಿ 40 ಲಕ್ಷ. ಅದರಲ್ಲಿ ಶೇಕಡಾ 99.5 ರಷ್ಟು ಜನ ಮುಸ್ಲಿಮರೇ ಆಗಿದ್ದಾರೆ. ಅಂತಹ ರಾಷ್ಟ್ರದಲ್ಲಿ ಇದೀಗ ಸರ್ಕಾರವೇ ಡೇಟಿಂಗ್‌ ಆ್ಯಪ್‌ ರೂಪಿಸಿದೆ. ಜೊತೆಗಾತಿಯನ್ನು ಸರ್ಕಾರವೇ ಗುರಿತಿಸಿಕೊಡುತ್ತೆ. ಇದಕ್ಕೆಲ್ಲ ಬಲವಾದ ಕಾರಣ ಇದೆ. ಹಾಗಾದ್ರೆ ಇರಾನ್‌ ನಲ್ಲಿ ಜೊತೆಗಾತಿ ವಿಚಾರಕ್ಕೆ ಸಂಬಂಧಪಟ್ಟಂತ ಎದುರಾದ ಸವಾಲು ಏನು?

ಜನ ಡೇಟಿಂಗ್‌ ಆ್ಯಪ್‌ ಮೊರೆ ಹೋಗುವುದು ಯಾಕೆ?
ಜೀವನದಲ್ಲಿ ಒಂಟಿತನ ಕಾಡಲು ಆರಂಭಿಸಿದಾಗ, ತನಗೊಬ್ಬ ಸಂಗಾತಿ ಬೇಕು ಎನಿಸಿದಾಗ ಡೇಟಿಂಗ್‌ ಆ್ಯಪ್‌ ಮೊರೆ ಹೋಗೋರನ್ನು ನೋಡಿದ್ದೇವೆ. ಇದರಲ್ಲಿ ಯುವಕ ಯುವತಿಯರಿಂದ ಹಿಡಿದು, ವಿಚ್ಛೇದಿತರವರೆಗೂ ಇರುತ್ತಾರೆ. ತಮ್ಮ ಐಡಿಯನ್ನು ಕ್ರಿಯೆಟ್‌ ಮಾಡಿಕೊಂಡು ತಮಗೆ ಹೊಂದಾಣಿಕೆಯಾಗುವ ಜೋಡಿಯನ್ನು ಜಾಲಾಡುತ್ತಾರೆ. ಪರಸ್ಪರ ಸಂದೇಶ ವಿನಿಮಯ ಮಾಡಿಕೊಳ್ಳುತ್ತಾರೆ. ಇಬ್ಬರಿಗೂ ಒಪ್ಪಿಗೆಯಾದ್ರೆ ಡೇಟಿಂಗ್‌ ಸ್ಟಾರ್ಟ್‌ ಮಾಡ್ತಾರೆ. ಡೇಟಿಂಗ್‌ನಲ್ಲಿ ಜೊತೆ ಜೊತೆಯಾಗಿ ಸುತ್ತಾಡುವುದು, ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು ಇರುತ್ತೆ. ತಮ್ಮಿಬ್ಬರಿಗೂ ಹೊಂದಾಣಿಕೆ ಆಯ್ತು ಅಂತ ಆದ್ರೆ ಹಸೆಮಣೆ ಏರುತ್ತಾರೆ. ಒಮ್ಮೆ ತಮ್ಮಿಬ್ಬರಿಗೂ ಹೊಂದಾಣಿಕೆ ಆಗಲ್ಲ ಅಂತ ಗೊತ್ತಾದ್ರೆ ಬ್ರೇಕ್‌ ಅಪ್‌ ಮಾಡಿಕೊಳ್ಳುತ್ತಾರೆ. ಬ್ರೇಕ್‌ ಅಪ್‌ ನಂತರ ಮೋಸ ಆಯ್ತು ಅಂತ ಪೊಲೀಸ್‌ ಠಾಣೆ ಮೆಟ್ಟಿಲೇರುವ ಪ್ರಕರಣಗಳು ನಡೆಯುತ್ತವೆ. ವಿಶೇಷ ಅಂದ್ರೆ ಕೆಲವರು ಮೋಸ ವಂಚನೆ ಮಾಡವುದಕ್ಕಾಗಿಯೇ ಡೇಟಿಂಗ್‌ ಆ್ಯಪ್‌ ಮೊರೆ ಹೋಗಿರುತ್ತಾರೆ. ಹೀಗಿರುವಾಗ ಇರಾನ್‌ನಲ್ಲಿ ಖುದ್ದು ಸರ್ಕಾರವೇ ಡೇಟಿಂಗ್‌ ಆ್ಯಪ್‌ ರೂಪಿಸಿದ್ದು, ಏಕೆ ಅಂತ ನಿಮ್ಮಲ್ಲಿಯೂ ಪ್ರಶ್ನೆ ಬಂದಿರುತ್ತೆ.

ಇರಾನ್‌ ಸರ್ಕಾರದಿಂದಲೇ ಡೇಟಿಂಗ್‌ ಆ್ಯಪ್‌
ನಿಮ್ಮ ಗೆಳತಿ, ಗೆಳೆಯನ ಆಯ್ಕೆಗೆ ಸರ್ಕಾರವೇ ಮಧ್ಯಸ್ಥಿಕೆ

ಇರಾನ್‌ನಲ್ಲಿ ಈಗಾಗಲೇ ಕೆಲವು ಡೇಟಿಂಗ್‌ ಆ್ಯಪ್‌ಗಳು ಕದ್ದು ಮುಚ್ಚಿ ಕೆಲಸ ಮಾಡ್ತಾ ಇವೆ. ಆದ್ರೆ, ಅವುಗಳಿಗೆ ಸರ್ಕಾರ ಅನುಮತಿ ಕೊಟ್ಟಿಲ್ಲ. ಹೀಗಾಗಿ ಅವು ಕಾನೂನು ಬಾಹಿರವಾಗಿವೆ. ಇದೇ ಕಾರಣಕ್ಕೆ ಅಮೆರಿಕ, ಇಂಗ್ಲೆಂಡ್‌, ಭಾರತ, ಚೀನಾದಲ್ಲಿ ಡೇಟಿಂಗ್‌ ಆ್ಯಪ್‌ಗೆ ಸಿಕ್ಕಷ್ಟು ಪ್ರಾಮುಖ್ಯತೆ ಇರಾನ್‌ನಲ್ಲಿ ಸಿಕ್ಕಿಲ್ಲ. ಆದ್ರೆ, ಇದೀಗ ಖುದ್ದು ಅಲ್ಲಿಯ ಸರ್ಕಾರವೇ ಡೇಟಿಂಗ್‌ ಆ್ಯಪ್‌ ರೂಪಿಸಿದೆ. ಅದರ ಹೆಸರು ಹಮ್‌ದಮ್‌. ಇನ್ಮೇಲೆ ಹುಡುಗನಿಗೆ ಬೇಕಾದ ಹುಡುಗಿಯನ್ನು, ಹುಡುಗಿಗೆ ಬೇಕಾದ ಹುಡುಗನನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರವೇ ಮಧ್ಯಸ್ಥಿಕೆ ವಹಿಸುತ್ತಿದೆ.

ಶೀಘ್ರದಲ್ಲೇ ಜಾರಿಯಾಗುತ್ತೆ ಹಮ್‌ದಮ್‌?
ಹೆಸರು ನೋಂದಾಯಿಸಿಕೊಳ್ಳಲು ಪ್ರೋತ್ಸಾಹ

ಮೂಲಗಳ ಪ್ರಕಾರ ಶೀಘ್ರದಲ್ಲಿಯೇ ಹಮ್‌ದಮ್‌ ಆ್ಯಪ್‌ನಲ್ಲಿ ನೋಂದಣಿ ಆರಂಭವಾಗುತ್ತೆ. ಗೆಳತಿ, ಗೆಳೆಯನನ್ನು ಬಯಸುವವರು ತಮ್ಮ ಪೂರ್ತಿ ವಿಳಾಸ, ಕುಟುಂಬದ ಹಿನ್ನೆಲೆ, ಆಸ್ತಿ, ಉದ್ಯೋಗ, ಕುಟುಂಬ ಸದಸ್ಯರ ಪರಿಚಯ ಎಲ್ಲವನ್ನು ಆ್ಯಪ್‌ನಲ್ಲಿ ಅಪ್ಲೋಡ್‌ ಮಾಡಬೇಕಾಗುತ್ತೆ. ನೋಂದಾಯಿತರಾದವರು ತಮಗೆ ಯಾರು ಇಷ್ಟ ಆಗುತ್ತಾರೋ ಅವರಿಗೆ ಡೇಟಿಂಗ್‌ ಪ್ರಸ್ತಾವನೆ ಕಳುಹಿಸಬಹುದು. ಇಲ್ಲವೇ ಸರ್ಕಾರವೇ ನಿಮಗೆ ಇವರು ಹೊಂದಾಣಿಕೆ ಆಗುತ್ತಾರೆ ನೋಡಿ ಅಂತ ಸಂದೇಶ ಕಳುಹಿಸುತ್ತದೆ. ಇಷ್ಟವಾದ್ರೆ ಪ್ರಸ್ತಾವನೆ ಒಪ್ಪಿಕೊಳ್ಳಬಹುದು, ಬೇಡ ಅಂತಾದ್ರೆ ರಿಜೆಕ್ಟ್‌ ಮಾಡಬಹುದು. ಒಮ್ಮೆ ಒಪ್ಪಿಗೆ ಆದ್ರೆ ಸರ್ಕಾರವೇ ಮಧ್ಯಸ್ಥಿಕೆ ವಹಿಸಲಿದೆ.

ಡೇಟಿಂಗ್‌ ಆ್ಯಪ್‌ನಲ್ಲಿ ಅವಿವಾಹಿತರಿಗೆ ಮಾತ್ರ ಅವಕಾಶ
ಡೇಟಿಂಗ್‌ ಒಪ್ಪಿದ್ರೆ ಮದುವೆ ಆಗುವುದು ಕಡ್ಡಾಯ

ಕೆಲವೊಂದಷ್ಟು ಕಂಡೀಷನ್‌ಗಳು ಇವೆ. ಅದೇನಂದ್ರೆ ಹುಡುಗ ಆಗಿರಬಹುದು ಅಥವಾ ಹುಡುಗಿ ಆಗಿರಬಹುದು ಅವರು ಅವಿವಾಹಿತರಾದ್ರೆ ಮಾತ್ರ ಆ್ಯಪ್‌ನಲ್ಲಿ ನೋಂದಣಿಗೆ ಅವಕಾಶ ಇರುತ್ತೆ. ಮದುವೆಯಾಗಿ ವಿಚ್ಛೇದನ ಪಡೆದವರಿಗೆ ಅವಕಾಶ ಇರಲ್ಲ. ಈಗಾಗಲೇ ಮದುವೆಯಾಗಿ ಪತ್ನಿ, ಅಥವಾ ಪತಿ ತೀರಿಕೊಂಡವರಿಗೂ ಈ ಆ್ಯಪ್‌ನಲ್ಲಿ ನೋ ಎಂಟ್ರಿ. ಮತ್ತೊಂದು ಕಂಡೀಷನ್‌ ಅಂದ್ರೆ, ಡೇಟಿಂಗ್‌ಗೆ ಒಪ್ಪಿಕೊಂಡ ಮೇಲೆ ಮದುವೆ ಆಗುವುದು ಕಡ್ಡಾಯ. ಒಮ್ಮೆ ಕೈಕೊಟ್ಟರೆ ಕಾನೂನು ಪ್ರಕಾರ ಶಿಕ್ಷೆ ಅನುಭವಿಸಬೇಕಾಗುತ್ತೆ. ಮೋಸ, ವಂಚನೆಗೆ ಇಲ್ಲಿ ಅವಕಾಶವೇ ಇರಲ್ಲ. ಮಾನಸಿಕವಾಗಿ ಸರಿ ಇದ್ರೆ ಮಾತ್ರ ಅವಕಾಶ

ಹೌದು, ಡೇಟಿಂಗ್‌ ಆ್ಯಪ್‌ಗೆ ನೋಂದಣಿ ಮಾಡಿಕೊಳ್ಳುವವರು ಮದುವೆ ಆಗುವುದು ಹೇಗೆ ಕಡ್ಡಾಯವೂ ಹಾಗೇ ಆತ ಮಾನಸಿಕವಾಗಿ ಸರಿಯಾಗಿರುವುದು ಕೂಡ ಕಡ್ಡಾಯ. ಡೇಟಿಂಗ್‌ ಆ್ಯಪ್‌ ನೋಂದಣಿಗೂ ಮುನ್ನ ಆ ವ್ಯಕ್ತಿ ಮಾನಸಿಕವಾಗಿ ಸರಿ ಇದ್ದಾನೋ ಇಲ್ಲವೋ ಅನ್ನೋದನ್ನು ಸರ್ಕಾರವೇ ಖಚಿತಪಡಿಸಿಕೊಳ್ಳುತ್ತೆ. ಅದಕ್ಕೆ ತಜ್ಞರಿಂದಲೇ ಪರೀಕ್ಷೆ ಮಾಡಿಸುತ್ತೆ. ಹೌದು, ಆತ ಮಾನಸಿಕವಾಗಿ ಸರಿಯಾಗಿ ಇದ್ದಾನೆ ಅಂತ ಕನ್ಫರ್ಮ್‌ ಆದ ನಂತರವೇ ನೋಂದಣಿಗೆ ಅವಕಾಶ ನೀಡುತ್ತೆ.

  • 2012ರಲ್ಲಿ ಇದ್ದ ಜನಸಂಖ್ಯೆ 7.5 ಕೋಟಿ
  • 2021ರಲ್ಲಿ ಇರೋ ಜನಸಂಖ್ಯೆ 8.4 ಕೋಟಿ
  • ಒಂದು ದಶಕದಲ್ಲಿ 1 ಕೋಟಿಯೂ ಏರಿಕೆಯಾಗಿಲ್ಲ ಯಾಕೆ?
  • ಸತತ ನಾಲ್ಕು ವರ್ಷದಿಂದ ಕುಸಿಯುತ್ತಿದೆ ಜನನ ಪ್ರಮಾಣ

ಹೇಳಿ ಕೇಳಿ ಇಸ್ಲಾಮಿಕ್‌ ರಾಷ್ಟ್ರವಾಗಿರೋ ಇರಾನ್‌ ಡೇಟಿಂಗ್‌ ಆ್ಯಪ್‌ ಮೊರೆ ಹೋಗುತ್ತಿರುವುದು ಯಾಕೆ ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ. ಇರಾನ್‌ನಲ್ಲಿ ಇಂದು ಇರೋ ಜನಸಂಖ್ಯೆ 8 ಕೋಟಿ 40 ಲಕ್ಷ. ಅದರಲ್ಲಿ ಶೇ.99.5 ರಷ್ಟು ಮುಸ್ಲಿಮರಾಗಿದ್ದಾರೆ. ಆದ್ರೆ, ಸಮಸ್ಯೆ ಅಂದ್ರೆ, ಕಳೆದ 10 ವರ್ಷದಿಂದ ಜನನ ಪ್ರಮಾಣ ಏರುತ್ತಲೇ ಇಲ್ಲ. 2012ರಲ್ಲಿ 7 ಕೋಟಿ 5 ಲಕ್ಷ ಜನಸಂಖ್ಯೆ ಇತ್ತು. ಅದನ್ನು ಇಂದಿನ ಜನಸಂಖ್ಯೆಗೆ ಹೋಲಿಸಿದರೆ ಕೇವಲ1 ಕೋಟಿ ಜನಸಂಖ್ಯೆ ಏರಿಕೆಯೂ ಆಗಿಲ್ಲ. ಅದರಲ್ಲಿಯೂ ಕಳೆದ ನಾಲ್ಕು ವರ್ಷದಿಂದ ಜನನ ಪ್ರಮಾಣ ಕುಸಿಯುತ್ತಲೇ ಸಾಗುತ್ತಿದೆ. ಇದೇ ಕಾರಣಕ್ಕೆ ಇರಾನ್‌ ಸರ್ಕಾರ ಡೇಟಿಂಗ್‌ ಆ್ಯಪ್‌ ಮೊರೆ ಹೋಗಿದೆ.

ವರ್ಲ್ಡ್​​ ಬ್ಯಾಂಕ್ ಬಿಡುಗಡೆ ಮಾಡಿರುವ ದಾಖಲೆ

ಜನನ ಪ್ರಮಾಣ ಕುಸಿಯಲು ಕಾರಣ ಏನು?
ಅಪಾರ ತೈಲ ಸಂಪತನ್ನು ಹೊಂದಿರೋ ಇರಾನ್‌ಗೆ ದೊಡ್ಡ ಸಮಸ್ಯೆ ಅಂದ್ರೆ ಅಲ್ಲಿಯ ಜನಸಂಖ್ಯೆ. ಚೀನಾ, ಭಾರತಕ್ಕೆ ಜನಸಂಖ್ಯೆ ಹೆಚ್ಚಳದ್ದೇ ಸಮಸ್ಯೆ ಆಗಿದ್ರೆ, ಇರಾನ್‌ಗೆ ಜನಸಂಖ್ಯೆ ಇಳಿಕೆಯ ಸಮಸ್ಯೆ ಎದುರಾಗಿ ಬಿಟ್ಟಿದೆ. ದಶಕದಿಂದ ಜನಸಂಖ್ಯೆ ಏರಿಕೆಯಾಗ್ತಾನೆ ಇಲ್ಲ. ಅದರಲ್ಲಿಯೂ ಕಳೆದ ನಾಲ್ಕು ವರ್ಷದಲ್ಲಿ ಜನನ ಪ್ರಮಾಣ ತೀವ್ರವಾಗಿ ಕುಸಿಯುತ್ತಲೇ ಸಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ, ಜನ ತಡವಾಗಿ ಮದುವೆ ಆಗುತ್ತಿರುವುದು, ಒಂದೇ ಮಗುವಿಗೆ ಸೀಮಿತವಾಗಿರುವುದು. ಇದರಿಂದ ರಾಷ್ಟ್ರದಲ್ಲಿ ವೃದ್ಧರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದ್ರೆ, ಯುವಜನರ ಸಂಖ್ಯೆ ಮಾತ್ರ ಕುಸಿಯುತ್ತಲೇ ಸಾಗುತ್ತಿದೆ.

ಜನಸಂಖ್ಯಾ ಏರಿಕೆಗೆ ಸರ್ಕಾರ ಮಾಡ್ತಾ ಇದೆ ನಾನಾ ಕಸರತ್ತು
ಮದುವೆಗೆ ಸರ್ಕಾರದಿಂದಲೇ ಸಿಗುತ್ತೆ ಹಣಕಾಸಿನ ನೆರವು

ಜನಸಂಖ್ಯೆ ಕುಸಿಯುತ್ತಿರುವ ಬಗ್ಗೆ ಇರಾನ್‌ ತುಂಬಾ ಗಂಭೀರವಾಗಿ ಬಿಟ್ಟಿದೆ. ಅದು ಹೇಗಾದ್ರೂ ಮಾಡಿ ಜನಸಂಖ್ಯೆ ಏರಿಕೆ ಮಾಡಲೇಬೇಕು ಅಂತ ಪಣತೊಟ್ಟಿದೆ. ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೆ, ಜನನ ಪ್ರಮಾಣ ಮಾತ್ರ ಏರುತ್ತಿಲ್ಲ. ಕಳೆದ ಮಾರ್ಚ್‌ನಲ್ಲಿ ಸಂಸತ್‌ನಲ್ಲಿ ‘ಪಾಪುಲೇಷನ್‌ ಗ್ರೋತ್‌ ಅಂಡ್‌ ಸಪೋರ್ಟಿಂಗ್‌ ಫ್ಯಾಮಿಲಿ’ ಮಸೂದೆಯನ್ನು ಪಾಸ್‌ ಮಾಡಿದೆ. ಮಸೂದೆಯಲ್ಲಿ ಮದುವೆ ಆಗೋ ಜೋಡಿಗೆ ಸರ್ಕಾರದಿಂದಲೇ ಹಣಕಾಸಿನ ನೆರವು ನೀಡಲಾಗುತ್ತೆ. ಎರಡಕ್ಕಿಂತ ಹೆಚ್ಚು ಮಕ್ಕಳು ಪಡೆಯುವವರಿಗೆ ಪ್ರೋತ್ಸಾನ ನೀಡಲಾಗುತ್ತೆ.

ಭಾರತದಲ್ಲಿ ಯಾವ ಡೇಟಿಂಗ್‌ ಆ್ಯಪ್‌ಗಳು ಫೇಮಸ್‌?
ಅಮೆರಿಕಾದಲ್ಲಿ ಶೇ.30 ರಷ್ಟು ಡೇಟಿಂಗ್‌ ಆ್ಯಪ್‌ ಬಳಕೆ
ಪ್ರತಿ ವರ್ಷ 360 ಮಿಲಿಯನ್‌ ಜನರಿಂದ ಡೌನ್‌ಲೋಡ್‌

ಹೌದು, ಇಂದು ಇಡೀ ವಿಶ್ವಾದ್ಯಂತ ಡೇಟಿಂಗ್‌ ಆ್ಯಪ್‌ ಬಳಸುವವರ ಸಂಖ್ಯೆ ಏರುತ್ತಲೇ ಇದೆ. ಯುವ ಜನತೆಯಲ್ಲಿ ಆ್ಯಪ್‌ ಬಳಸಿ ಡೇಟಿಂಗ್‌ ಮಾಡುವುದು ಕ್ರೇಜ್‌ ಆಗಿ ಬಿಟ್ಟಿದೆ. ಅಮೆರಿಕಾದಲ್ಲಿ ಶೇಕಡಾ 30 ರಷ್ಟು ಜನ ಡೇಟಿಂಗ್‌ ಆ್ಯಪ್‌ ಬಳಸುತ್ತಿದ್ದಾರೆ. ಇನ್ನು ಭಾರತದಲ್ಲಿ ಕೂಡ ಹತ್ತಾರು ಡೇಟಿಂಗ್‌ ಆ್ಯಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಟಿಂಡರ್‌, ಬುಂಬ್ಲೆ, ಒಕುಪಿಡ್‌, ಟ್ರೂಲಿಮ್ಯಾಡ್ಲಿ, ಫ್ಲಿಪ್‌….ಆ್ಯಪ್‌ಗಳು ಫೇಮಸ್‌ ಆಗಿವೆ. ಜಗತ್ತಿನಲ್ಲಿ ಪ್ರತಿ ವರ್ಷ ಡೇಟಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವವರ ಸಂಖ್ಯೆ ಬರೋಬ್ಬರಿ 360 ಮಿಲಿಯನ್‌. ಅಂದ್ರೆ, 36 ಕೋಟಿ ಜನ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುತ್ತಾರೆ.

The post ಜನಸಂಖ್ಯೆ ಏರಿಸಲು ಡೇಟಿಂಗ್ ಆ್ಯಪ್ ಮೊರೆ ಹೋದ ಇರಾನ್.. ಇಸ್ಲಾಮಿಕ್ ರಾಷ್ಟ್ರದಲ್ಲಿ ಏನಾಗ್ತಿದೆ? appeared first on News First Kannada.

Source: newsfirstlive.com

Source link