ಕೊರೊನಾ ಯಾವ ದೇಶವನ್ನೂ ಬಿಡ್ತಾ ಇಲ್ಲ. ಒಂದೊಂದೇ ದೇಶಗಳಲ್ಲಿ ಸೋಂಕು ಹೆಚ್ಚಾಗ್ತಾನೇ ಇದೆ. ಫ್ರಾನ್ಸ್ ಬಳಿಕ ಇದೀಗ ಜಪಾನ್ ಸರದಿ. ಇಂಡಿಯಾದಲ್ಲಿ ಕೇಸ್ ಹೆಚ್ಚಾಗ್ತಾ ಇರೋದನ್ನ ನೋಡಿದ್ರೆ ಜಪಾನ್ನಲ್ಲಿ ಏನೇನೂ ಅಲ್ಲ. ಆದ್ರೂ ಜಪಾನ್ ಮೂರನೇ ಬಾರಿಗೆ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಿದೆ.

ಮೊದಲೇ ಎಚ್ಚೆತ್ತುಕೊಂಡ ಜಪಾನ್
ಜಪಾನ್ ಕೊರೊನಾದಿಂದ ತತ್ತರಿಸುತ್ತಿದೆ. ಆದ್ರೆ ಭಾರತ, ಅಮೆರಿಕ, ಬ್ರೆಜಿಲ್ಗೆ ಹೋಲಿಸಿದ್ರೆ ಕೊರೊನಾ ಕಂಟ್ರೋಲ್ ಮಾಡುವಲ್ಲಿ ಜಪಾನ್ ಎಷ್ಟೋ ಪಾಲು ಮೇಲು. ಆದ್ರೂ ಜಪಾನ್  ಇದೀಗ ಮೂರನೇ ಬಾರಿಗೆ ಮತ್ತೆ ಹೆಲ್ತ್ ಎಮರ್ಜೆನ್ಸಿ ಘೋಷಿಸಿದೆ. ವಿಕೋಪಕ್ಕೆ ಹೋಗುವ ಮುನ್ನವೇ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳಾ ಇದೆ.

ಜಪಾನ್ ಅಂದ ತಕ್ಷಣ ನೆನಪಾಗೋದು ಹಿರೋಷಿಮಾ, ನಾಗಸಾಕಿ.. ಅಲ್ಲಿ ಹಾಕಲಾಗಿದ್ದ ಅಣುಬಾಂಬ್. ಜಪಾನ್ ನಾಶವಾಗಿಯೇ ಹೋಯ್ತು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಜಪಾನ್ ಕೆಲವೇ ಕೆಲವು ವರ್ಷಗಳಲ್ಲಿ ಮತ್ತೆ ಎದ್ದು ನಿಂತಿತ್ತು. ತಂತ್ರಜ್ಞಾನದಲ್ಲಿ ಅತ್ಯಂತ ಮುಂದುವರೆದ ರಾಷ್ಟ್ರ ಜಪಾನ್. ದ್ವೀಪ ರಾಷ್ಟ್ರವಾಗಿರುವ ಜಪಾನ್ ಪ್ರತಿವರ್ಷವೂ ಒಂದಲ್ಲಾ ಒಂದು ಆಪತ್ತನ್ನು ಎದುರಿಸತ್ತಲೇ ಇರುತ್ತದೆ. ಪದೇ ಪದೇ ಭೂಕಂಪನ ಇಲ್ಲಿ ಆಗುತ್ತಲೇ ಇರುತ್ತೆ. ಸುನಾಮಿಯಿಂದ ತತ್ತರಿಸಿದ್ದ ಜಪಾನ್ ಇದೀಗ ಕೊರೊನಾ ಅಲೆಯಿಂದ ತತ್ತರಿಸಿದೆ.

2019ರಲ್ಲಿ ಚೀನಾದ ವುಹಾನ್ನಲ್ಲಿ ಕೊರೊನಾ ವೈರಸ್ ಹರಡಿ ಸಾವಿರಾರು ಜನರು ಪ್ರಾಣ ಕಳ್ಕೊಂಡ್ರು. ಚೀನಾದ ಬಳಿಕ ಈ ಡೆಡ್ಲಿ ವೈರಸ್ ಕಂಡುಬಂದಿದ್ದು ಜಪಾನ್ನಲ್ಲಿ. 2020ರ ಜನವರಿಯಲ್ಲಿ ಕೊರೊನಾ ತವರು ವುಹಾನ್ನಿಂದ ಟೋಕಿಯೋಗೆ ಮರಳಿದ ಜಪಾನಿ ಪ್ರಜೆಯಲ್ಲಿ ಕರೊನಾ ವೈರಸ್ ಪತ್ತೆಯಾಗಿತ್ತು. ಇದುವರೆಗೆ ಜಪಾನ್ನಲ್ಲಿ 5 ಲಕ್ಷಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ತಗುಲಿದೆ.

 55 ಸಾವಿರ ಸಕ್ರಿಯ ಕೊರೊನಾ ಪ್ರಕರಣ
ಒಟ್ಟು ಹನ್ನೆರಡುವರೆ ಕೋಟಿ ಜನ ಸಂಖ್ಯೆ ಹೊಂದಿರುವ ಈ ಜಪಾನ್ನಲ್ಲಿ ಈಗಾಗಲೇ 5 ಲಕ್ಷದ 69 ಸಾವಿರ ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ 5 ಲಕ್ಷದ 4 ಸಾವಿರ ಮಂದಿ ಈಗಾಗಲೇ ಸೋಂಕಿನಿಂದ ಗುಣಮುಖರಾಗಿದ್ರೆ, 10 ಸಾವಿರ ಜನರು ಈ ಮಾರಕ ಸೋಂಕಿನಿಂದ ಪ್ರಾಣ ಕಳ್ಕೊಂಡಿದ್ದಾರೆ. ಸದ್ಯ ಅಲ್ಲಿ 55 ಸಾವಿರದಷ್ಟು ಸಕ್ರಿಯ ಪ್ರಕರಣಗಳಿವೆ.

ಒಲಿಂಪಿಕ್​​ಗೆ ಮುನ್ನ ಕೊರೊನಾ ಮಣಿಸುವ ಉದ್ದೇಶ
ಭಾರತಕ್ಕೆ ಹೋಲಿಸಿದ್ರೆ ಅಲ್ಲಿ ಕಡ್ಮೇನೆ ಇರಬಹುದು. ಆದ್ರೆ ಜಪಾನ್ ಸರ್ಕಾರ ಸೋಂಕು ಪಸರಿಸದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಮೂರನೇ ಬಾರಿಗೆ ಕೆಲ ನಗರಗಳಲ್ಲಿ ತುರ್ತು ಪರಿಸ್ಥಿತಿ ಹೇರಿದೆ. ಜುಲೈನಲ್ಲಿ ನಡೆಯಲಿರುವ ಟೊಕಿಯೋ ಒಲಿಂಪಿಕ್​​ಗೆ ಮುಂಚಿತವಾಗಿ ಕೊರೊನಾವನ್ನು ಮಣಿಸುವ ಉದ್ದೇಶದಿಂದ ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ, ಒಲಿಪಿಂಕ್ ನಡೆಯುವ ಜಪಾನ್ ರಾಜಧಾನಿ ಟೊಕಿಯೋ ಮತ್ತು ಅದರ ಸುತ್ತಮುತ್ತವಿರುವ ಮೂರು ಪ್ರಮುಖ ನಗರಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಇದರಿಂದ ಟೊಕಿಯೋ , ಒಸಾಕ, ಕ್ಯೂಟೋ, ಹ್ಯೋಗೋ ಪ್ರಾಂತ್ಯ ನಿನ್ನೆಯಿಂದ ಮೇ 11ರ ತನಕ ಸ್ತಬ್ಧವಾಗಿರಲಿದೆ.

ಕಳೆದ ವರ್ಷ ನಡೆಯಬೇಕಿದ್ದ ಪ್ರತಿಷ್ಠಿತ ಕ್ರೀಡಾಕೂಟ ಟೊಕಿಯೋ ಒಲಿಪಿಂಕ್ಸ್ ಕೊರೊನಾ ಕಾರಣದಿಂದ 2021ಕ್ಕೆ ಮುಂದೂಡಲ್ಪಟ್ಟಿತ್ತು. ಇದರಿಂದ ಜಪಾನ್ಗೆ ಕೋಟಿಗಟ್ಟಲೇ ನಷ್ಟ ಉಂಟಾಗಿತ್ತು. 2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಜುಲೈ 23 ರಿಂದ ಆಗಸ್ಟ್ 8ರ ತನಕ ನಡೆಯಲಿದೆ. ಈ ವೇಳೆ ನೂರಾರು ದೇಶಗಳ ಸಾವಿರಾರು ಕ್ರೀಡಾಪಟುಗಳು ಆಗಮಿಸಲಿದ್ದಾರೆ.

ಈ ಐತಿಹಾಸಿಕ ಕ್ರೀಡಾಕೂಟ, ಮುಂದೆ ಹಲವು ಉದ್ಯಮಗಳು ಜಪಾನ್ನಲ್ಲಿ ಜನ್ಮ ಪಡೆಯಲು ಕಾರಣವಾಗುತ್ತದೆ. ಒಂದು ವೇಳೆ ಈ ಬಾರಿ ಕೂಡ ಕೊರೊನಾ ಕಾರಣದಿಂದ ಒಲಿಂಪಿಕ್ಸ್ ಮುಂದೂಡಲ್ಪಟ್ಟರೆ ಅಥವಾ ರದ್ದಾದರೆ ಜಪಾನ್ ಸರ್ಕಾರಕ್ಕೆ ದೀರ್ಘಕಾಲೀನ ನಷ್ಟವಾಗಲಿದೆ. ಈ ಎಲ್ಲಾ ಅಂಶಗಳನ್ನು ಮನಗಂಡ ಅಲ್ಲಿನ ಸರ್ಕಾರ ಈ ಬಾರಿ ಒಲಿಂಪಿಕ್ಸ್ ನಡೆಸೇತೀರ್ತೇವೆಂದು ಪಣ ತೊಟ್ಟಿದ್ದು, ಅದಕ್ಕಾಗಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಒಲಿಂಪಿಕ್ಸ್ ಮೇಲೆ ಕೊರೊನಾ ಕರಿನೆರಳು ಬೀಳದಂತೆ ನೋಡಿಕೊಳ್ಳಲು ಒಲಿಂಪಿಕ್ಗಿಂತ ಮೊದಲು ಕೊರನಾವನ್ನು ಸಂಪೂರ್ಣವಾಗಿ ಮಣಿಸಬೇಕೆಂದು ಟೊಂಕ ಕಟ್ಟಿ ನಿಂತಿದೆ.

ಜಪಾನ್ ಸರ್ಕಾರ ತುರ್ತು ಪರಿಸ್ಥಿತಿ ಹೇರಿರುವ ಟೊಕಿಯೋ , ಒಸಾಕ, ಕ್ಯೂಟೋ, ಹ್ಯೋಗೋ ಪ್ರಾಂತ್ಯಗಳ ಕೊರೊನಾ ಅಂಕಿ ಅಂಶ ನೋಡೋದಾದ್ರೆ..

ಜಪಾನ್​ನ ಕೊರೊನಾ ಪ್ರಕರಣಗಳ ಅಂಕಿಅಂಶ

ನಗರ: ಕೊರೊನಾ ಕೇಸ್- ಗುಣಮುಖ- ಸಾವು- ಸಕ್ರಿಯ ಪ್ರಕರಣ
ಟೊಕಿಯೋ: 1,35,635- 1,27,626- 1864- 6445
ಒಸಾಕ: 76584- 57201- 1378- 18005
ಹ್ಯೋಗೋ: 29795- 23,349- 659- 5787
ಕ್ಯೂಟೋ: 12,035- 10,142- 180- 1713

ಟೋಕಿಯೋದಲ್ಲಿ ನಿನ್ನೆ 635 ಹೊಸ ಕೇಸ್ ಕಂಡುಬಂದಿದ್ರೆ, ಒಸಾಕದಲ್ಲಿ 1050 ಹೊಸ ಪ್ರಕರಣ ದಾಖಲಾಗಿದೆ. ಇನ್ನೂ ಕ್ಯೂಟೋದಲ್ಲಿ ಕಳೆದ 24 ಗಂಟೆಯಲ್ಲಿ 150 ಜನರಿಗೆ ಸೊಂಕು ತಗುಲಿದ್ರೆ, ಹ್ಯೋಗೋದಲ್ಲಿ ಕಳೆದ 24 ತಾಸಿನಲ್ಲಿ 473 ಜನರು ಕೊರೊನಾ ಸೊಂಕಿನ ಸುಳಿಗೆ ಸಿಲುಕಿದ್ದಾರೆ.

ಜಪಾನ್ ರಾಜಧಾನಿ ಈ ಟೋಕಿಯೋದಲ್ಲಿ ಒಂದು ಕೋಟಿಯ 27 ಲಕ್ಷ ಜನರು ವಾಸವಾಗಿದ್ದಾರೆ. ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಟೊಕಿಯೋ ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿರುತ್ತೆ. ಆದ್ರೆ ಜಗತ್ತಿನ ಸೂಪರ್ ಪವರ್ ನಗರಕ್ಕೆ ಇದೀಗ ತುರ್ತು ಪರಿಸ್ಥಿತಿಯ ಬಿಸಿ ತಟ್ಟಿದೆ.

ಕೊರೊನಾ ವಿರುದ್ಧ ಸಮರಕ್ಕೆ ಸಜ್ಜಾದ ಟೋಕಿಯೋ
ತುರ್ತು ಪರಿಸ್ಥಿತಿ ಹೇರದಿದ್ರೆ ಟೊಕಿಯೋದಲ್ಲಿ ಕೊರೊನಾವನ್ನು ಕಂಟ್ರೋಲ್ ಮಾಡುವುದು ಒಂದು ದೊಡ್ಡ ಸವಾಲೇ ಸರಿ. ಯಾಕಂದ್ರೆ ಇಲ್ಲಿಗೆ ನಿತ್ಯ ಸಾವಿರಾರು ಮಂದಿ ಬೇಟಿ ಕೊಡ್ತಾರೆ. ದೇಶ-ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲದೇ ಜಪಾನ್ ನಲ್ಲಿ ಅತೀ ಹೆಚ್ಚು ಕೊರೊನಾ ಸೋಂಕು ಕಂಡುಬಂದಿದ್ದು ಇದೇ ನಗರದಲ್ಲಿ. ಒಂದು ಕೋಟಿಯ 27 ಲಕ್ಷ ಜನರು ವಾಸಿಸುತ್ತಿತ್ತು ಇದುವರೆಗೆ ಇಲ್ಲಿ ಸರಿಸುಮಾರು 1,35,635 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೀಗ ಕೆಲವೇ ತಿಂಗಳಲ್ಲಿ ವಿಶ್ವದ ಪ್ರತಿಷ್ಠಿತ ಕ್ರೀಡಾ ಕೂಟವೊಂದಕ್ಕೆ ಸಾಕ್ಷಿಯಾಗಲಿರುವ ಈ ಟೋಕಿಯೋದ ನೆಲ ಇದೀಗ ಕೊರೊನಾ ವಿರುದ್ಧದ ಸಮರಕ್ಕೆ ಸಜ್ಜಾಗಿದೆ.

ಜಪಾನ್.. 2020 ಜನವರಿಯಲ್ಲಿ ಮೊದಲ ಕೇಸ್ ಕಂಡ ಬಂದಾಗಿನಿಂದಲೂ ಎಚ್ಚರದ ಹೆಜ್ಜೆ ಇಟ್ಟಿದೆ. ಸೊಂಕು ಹೆಚ್ಚುತ್ತಿರುವ ಹಿನ್ನೆಲೆ ಏಪ್ರಿಲ್ ವೇಳೆಯಲ್ಲಾಗಲೇ ಜಪಾನ್ ನಲ್ಲಿ ಮೊದಲ ಬಾರಿಗೆ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಜಪಾನ್ ಕೈಗೊಂಡ ಸುರಕ್ಷತಾ ಕ್ರಮಗಳು ಆರಂಭದಲ್ಲಿ ಅಲ್ಲಿಯ ಜನರನ್ನು ಕೊರೊನಾದ ಕಪಿಮುಷ್ಠಿಯಿಂದ ಒಂದು ಹಂತದಲ್ಲಿ ಪಾರು ಮಾಡಿತ್ತು.

ಆದ್ರೆ ಇನ್ನೂ 2021ರ ವರ್ಷದ ಆರಂಭದಲ್ಲಿ ಬ್ರಿಟನ್ ,ಆಫ್ರಿಕಾ ದೇಶದಲ್ಲಿ ಪತ್ತೆಯಾದ ಅದೇ ರೀತಿಯ ಸೋಂಕು ಜಪಾನ್ನಲ್ಲಿ ಪತ್ತೆಯಾಗಿತ್ತು. ಜಪಾನ್ ಪೂರ್ವ ಭಾಗದ ಕಾಂಟೋದಲ್ಲಿ 91 ಜನರಲ್ಲಿ ಮತ್ತು ವಿಮಾನ ನಿಲ್ದಾಣದಲ್ಲಿ ಇಬ್ಬರಿಗೆ ರೂಪಾಂತರ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಡಪಟ್ಟಿತ್ತು. ನಂತರ ಅದು ವ್ಯಾಪಕವಾಗಿ ಪಸರಿಸಿ ಸಾವಿರಾರು ಜನರಲ್ಲಿ ಕಾಣಿಸಿಕೊಂಡಿತ್ತು. ದಿನನಿತ್ಯ ಅಲ್ಲಿ 3 ಸಾವಿರಕ್ಕಿಂತ ಅಧಿಕ ಕೇಸ್ಗಳು ದಾಖಲಾಗ್ತಿತ್ತು.

ಕಠಿಣ ಕ್ರಮಗಳೊಂದಿಗೆ ಮೂರನೇ ಹೆಲ್ತ್​​ ಎಮರ್ಜೆನ್ಸಿ
ಇದರಿಂದ ಜಪಾನ್ ಸರ್ಕಾರ ಎರಡನೇ ಬಾರಿಗೆ ತುರ್ತು ಪರಿಸ್ಥಿತಿ ಹೇರಿತ್ತು. ಎರಡನೇ ಬಾರಿ ತುರ್ತು ಪರಿಸ್ಥಿತಿ ಹೇರಿದಾಗ ಬಾರ್, ಮಾಲ್ ರೆಸ್ಟೋರೆಂಟ್, ಥಿಯೇಟರ್ಗಳಿಗೆ ವಿನಾಯಿತಿ ನೀಡಿದ ಪರಿಣಾಮ 2ನೇ ಬಾರಿಗೆ ಹೇರಿದ ತುರ್ತು ಪರಿಸ್ಥಿತಿ ಅಷ್ಟರ ಮಟ್ಟಿಗೆ ಸಕ್ಸಸ್ ಆಗ್ಲಿಲ್ಲ. ಇದೀಗ ಕಠಿಣ ನಿಯಮಗಳೊಂದಿಗೆ ಮೂರನೇ ಬಾರಿಗೆ ಜಪಾನ್​​ನ ಕೆಲ ನಗರಗಳಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಈ ಬಾರಿ, ಪಬ್, ಮಾಲ್, ಪಾರ್ಕ್, ಅಂಗಡಿಗಳು ಸಂಪೂರ್ಣವಾಗಿ ಮುಚ್ಚಿ ಹೋಗಲಿದೆ. ಅಲ್ಲದೇ ವಸ್ತು ಸಂಗ್ರಹಾಲಯವನ್ನು ಕೂಡ ಬಂದ್ ಮಾಡಲು ಆದೇಶ ನೀಡಲಾಗಿದೆ. ವಿಶ್ವ ವಿದ್ಯಾಲಯಗಳಿಗೆ ಮಾತ್ರ ಆನ್ ಲೈನ್ ಮೂಲಕ ತರಗತಿ ನಡೆಸಲು ಅವಕಾಶ ಕಲ್ಪಿಸಲಾಗಿದೆ.

The post ಜಪಾನ್​ನಲ್ಲಿ ಮೂರನೇ ಬಾರಿಗೆ ಹೆಲ್ತ್ ಎಮರ್ಜೆನ್ಸಿ ಘೋಷಣೆ appeared first on News First Kannada.

Source: News First Kannada
Read More