ಜಮೀರ್​​ಗೆ ಶಾಕ್.. ಮುಂದಿನ ಚುನಾವಣೆಗೆ ಸಿದ್ದರಾಮಯ್ಯರ ಕ್ಷೇತ್ರ ಬಹುತೇಕ ಫಿಕ್ಸ್​..!


ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸ್ತಾರೆ ಅನ್ನೋ ಚರ್ಚೆ ನಡೀತಿದೆ. ಹಾವೇರಿ, ಕೊಪ್ಪಳ, ಕೋಲಾರ, ಮೈಸೂರು, ಚಾಮರಾಜಪೇಟೆ ಹೀಗೆ ಕ್ಷೇತ್ರಗಳ ಪಟ್ಟಿ ಮಾಡಲಾಗಿತ್ತು. ಆದ್ರೆ ಅಚ್ಚರಿಯ ಬೆಳವಣಿಗೆ ಒಂದರಲ್ಲಿ ಮಾಜಿ ಸಿಎಂ ಸ್ಪರ್ಧಿಸೋ ಕ್ಷೇತ್ರ ಬಹುತೇಕ ಫಿಕ್ಸ್ ಆಗಿದೆ.

2023ಕ್ಕೆ ಬದಾಮಿ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ?
ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಕಣಕ್ಕಿಳೀತಾರೆ ಅನ್ನೋದು ಇಷ್ಟು ದಿನ ಪ್ರಶ್ನೆಯಾಗಿಯೇ ಉಳಿದಿತ್ತು. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಬಹುತೇಕ ಬದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸ್ತಾರೆ ಎಂದು ತಿಳಿದುಬಂದಿದೆ. ಈ ಮೊದಲು ಜಮೀರ್ ಅಹಮದ್ ಕ್ಷೇತ್ರ ಚಾಮರಾಜಪೇಟೆಯಿಂದ ಸ್ಪರ್ಧಿಸ್ತಾರೆ ಎಂಬ ಮಾತುಗಳು ಕೇಳಿಬಂದಿದ್ವು. ಆದ್ರೀಗ ಈ ಕ್ಷೇತ್ರ ಬೇಡ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ. ಒಂದ್ವೇಳೆ ಚಾಮರಾಜಪೇಟೆಯಿಂದ ಸ್ಪರ್ಧಿಸಿದ್ರೆ ಹಿಂದೂ, ಮುಸ್ಲಿಂ ಚರ್ಚೆ ನಡೆಯುವ ಸಾಧ್ಯತೆ ಇದೆ. ಅಲ್ಲದೇ ಧರ್ಮದ ಹೆಸರಲ್ಲಿ ಅಪಪ್ರಚಾರ ಕೂಡಾ ಮಾಡುವ ಸಾಧ್ಯತೆ ಇದೆ. ಹೀಗಾಗಿ ಚಾಮರಾಜಪೇಟೆಯಿಂದ ಸ್ಪರ್ಧೆಗಿಳಿಯಲು ಸಿದ್ದರಾಮಯ್ಯ ನಿರಾಕರಿಸಿದ್ದು, ಬದಾಮಿ ಕಡೆ ಒಲವು ತೋರಿಸಿದ್ದಾರೆ ಎನ್ನಲಾಗಿದೆ.

‘ಸಿದ್ದರಾಮಯ್ಯ’ ಸ್ಪರ್ಧೆ ಎಲ್ಲಿಂದ?
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹಿನ್ನೆಲೆ, ಈಗಿನಿಂದಲೇ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸ್ತಾರೆ ಎಂಬ ಲೆಕ್ಕಚಾರ ಶುರುವಾಗಿದೆ. ಹಾಗಾದ್ರೆ ಯಾವ ಕ್ಷೇತ್ರದಿಂದ ಸ್ಪರ್ಧೆಗಿಳಿತಾರೆ ಸಿದ್ದರಾಮಯ್ಯ ಎಂಬ ಚರ್ಚೆ ಕೂಡಾ ಶುರುವಾಗಿತ್ತು. ಅಲ್ಲದೇ ಸಿದ್ದುಗೆ ಬಾಗಲಕೋಟೆ, ಹಾವೇರಿ, ಕೊಪ್ಪಳ, ಕೋಲಾರ ಜಿಲ್ಲೆ, ಮೈಸೂರು ಜಿಲ್ಲೆಗಳಿಂದ ಸಹ ಸ್ಪರ್ಧೆಗೆ ಆಹ್ವಾನ ಬಂದಿತ್ತು. ಅಲ್ಲದೇ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಜಮೀರ್ ಆಹ್ವಾನವನ್ನು ಕೊಟ್ಟಿದ್ರು. ಆದ್ರೆ, ಸಿದ್ದರಾಮಯ್ಯ ಹಾಕಿರುವ ರಾಜಕೀಯ ಲೆಕ್ಕಾಚಾರವೇ ಬೇರೆ. ಹೀಗಾಗಿ 2023ರ ಚುನಾವಣೆಯಲ್ಲಿ ಬದಾಮಿಯಿಂದ ಸ್ಪರ್ಧಿಸಲು ಸಿದ್ದರಾಯಮಯ್ಯ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಬದಾಮಿಯನ್ನೇ ಆಯ್ಕೆ ಮಾಡಿಕೊಳ್ಳೋಕೆ ನಿಖರ ಕಾರಣಗಳೂ ಇವೆ.

ಸಿದ್ದರಾಮಯ್ಯಗೆ ‘ಬದಾಮಿ’ ಯಾಕೆ?
ಪಂಜಾಬ್ ರೀತಿಯಲ್ಲೇ ಕರ್ನಾಟಕದಲ್ಲಿ ಸಿಎಂ ಅಭ್ಯರ್ಥಿಯ ಘೋಷಣೆ ಮಾಡುವ ಸಾಧ್ಯತೆ ಇದೆ. ಒಂದ್ವೇಳೆ ಸಿದ್ದರಾಮಯ್ಯರನ್ನ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ್ರೆ ಕುರುಬ ಸಮಾಜಕ್ಕೆ ಸಂದೇಶ ರವಾನೆಯಾಗಲಿದೆ. ಇನ್ನು ಕುರುಬ ಸಮುದಾಯದ ಮತಗಳೇ ಬದಾಮಿ ಕ್ಷೇತ್ರದಲ್ಲಿ ನಿರ್ಣಾಯಕ ಆಗಿದ್ದು, ಕುರುಬ ಮತಗಳನ್ನ ಸುಲಭವಾಗಿ ಪಡೆದು ಗೆಲ್ಲಬಹುದಾಗಿದೆ. ಬದಾಮಿಗೆ ಶಾಸಕರಾಗಿ ಸಿದ್ದರಾಮಯ್ಯ 2,800 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಈ ಪೈಕಿ ಏತ ನೀರಾವರಿ ಹಾಗೂ ಕುಡಿಯುವ ನೀರಿಗೆ 1000 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಬದಾಮಿ ಕ್ಷೇತ್ರದಲ್ಲಿ ರಸ್ತೆ ಹಾಗೂ ಅಭಿವೃದ್ದಿ ಯೋಜನೆಗಳಿಗೆ 1,800 ಕೋಟಿ ಅನುದಾನ ಕೊಡಿಸಿದ್ದಾರೆ. ಇನ್ನು 224 ಕ್ಷೇತ್ರಗಳ ಪೈಕಿ ಹೆಚ್ಚು ಅನುದಾನ ಪಡೆದ ಕ್ಷೇತ್ರಗಳಲ್ಲಿ ಬದಾಮಿ ಸಹ ಒಂದಾಗಿದೆ. ಈ ಒಂದು ಅಭಿವೃದ್ಧಿ ಮಂತ್ರದ ಶ್ರೀರಕ್ಷೆಯಲ್ಲಿ ಸಿದ್ದರಾಮಯ್ಯ ಗೆಲ್ಲಲು ಪ್ಲಾನ್​ ಮಾಡಿದ್ದಾರೆ. ಇನ್ನು 500ರಿಂದ 1000 ಕೋಟಿಯವರೆಗೂ ಅನುದಾನ ತರಲು ಸಿದ್ದರಾಮಯ್ಯ ಪ್ರಯತ್ನ ಮಾಡಿದ್ದು, ಈ ಅಭಿವೃದ್ಧಿ ಪರ್ವ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲುವಿಗೆ ಸಹಾಯವಾಗುವ ಸಾಧ್ಯತೆ ಇದೆ.

ಇನ್ನು ಸಿದ್ದರಾಮಯ್ಯ ಚಾಮರಾಜಪೇಟೆ ಕ್ಷೇತ್ರ ಬೇಡ ಅನ್ನೋಕು ಕೆಲವೊಂದು ಕಾರಣಗಳಿವೆ. ಅದೇನಂದ್ರೆ ಈಗ ಮುನ್ನೆಲೆಗೆ ಬಂದಿರೋ ಹಿಂದೂ ಮುಸ್ಲಿಂ ವಿಚಾರಗಳಾದ ಹಿಜಾಬ್-ಕೇಸರಿ ವಿವಾದ ಸಿದ್ದರಾಮಯ್ಯ ಈ ನಿಲುವು ಕೈಗೊಳ್ಳಲು ಕಾರಣವಾಗಿದೆ. ಇನ್ನು ಸಿದ್ದರಾಮಯ್ಯ ಚಾಮರಾಜಪೇಟೆಯಿಂದ ಸ್ಪರ್ಧಿಸಿದ್ರೆ ಅಪಪ್ರಚಾರ ಮಾಡುವ ಸಾಧ್ಯತೆ ಇದೆ. ಇದನ್ನೆಲ್ಲಾ ಅರಿತಿರೋ ಸಿದ್ದರಾಮಯ್ಯ, ಬದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸೋದು ಬಹುತೇಕ ಫಿಕ್ಸ್ ಆಗಿದೆ.

ವಿಶೇಷ ವರದಿ: ಶಿವಪ್ರಸಾದ್ ಪೊಲಿಟಿಕಲ್ ಬ್ಯೂರೋ

News First Live Kannada


Leave a Reply

Your email address will not be published.