ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಇಂದು ಮಹತ್ವದ ಸಭೆಯೊಂದು ನಡೆಯಿತು. ಈ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಕಾಶ್ಮೀರೀ ನಾಯಕರು ಪಾಲ್ಗೊಂಡಿದ್ದರು. ಕಾಶ್ಮೀರದ 14 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರೇ ಪಾಲ್ಗೊಂಡಿದ್ದ ಸರ್ವಪಕ್ಷ ಸಭೆಯಲ್ಲಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಗಳು ನಡೆದಿವೆ.

ಕಾಶ್ಮೀರಿ ನಾಯಕರು, ಕೇಂದ್ರ ನಾಯಕರ ಸಭೆಯ ಮುಖ್ಯಾಂಶಗಳು..

ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲ ನಾಯಕರಿಂದಲೂ ಸಲಹೆಗಳನ್ನು ಹಾಗೂ ಸೂಚನೆಗಳನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದ್ದು ನಾಯಕರು ಪ್ರಾಮಾಣಿಕವಾಗಿ ಪಾಲ್ಗೊಂಡು ಮಾತನಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದ ಭವಿಷ್ಯ ಕುರಿತ ತೆರೆದ ಚರ್ಚೆ ಇದಾಗಿತ್ತು ಎಂದೇ ಹೇಳಲಾಗಿದೆ. ಇನ್ನು ಸಭೆಯ ಮುಖ್ಯವಸ್ತು ಪ್ರಜಾಪ್ರಭುತ್ವದ ಕ್ರಿಯೆಗಳನ್ನ ಮತ್ತಷ್ಟು ಬಲಪಡಿಸುವುದಾಗಿತ್ತು.

ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನ ಸ್ಥಾಪಿಸುವುದಕ್ಕೆ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದಾಗಿ ಪ್ರಧಾನಿ ಹೇಳಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಡಿಡಿಸಿ ಚುನಾವಣೆಯಂತೆಯೇ ವಿಧಾನಸಭಾ ಚುನಾವಣೆಯನ್ನೂ ನಡೆಸುವ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು ಎನ್ನಲಾಗಿದೆ.

ಡೀಲಿಮಿಟೇಷನ್ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಜಮ್ಮು ಕಾಶ್ಮೀರದಲ್ಲಿ ಚುನಾವಣೆಗಳನ್ನು ನಡೆಸುವುದಕ್ಕೆ ಬಹುತೇಕ ನಾಯಕರು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಜಮ್ಮು ಕಾಶ್ಮೀರದ ಜನರ ಏಳಿಗೆಗಾಗಿ ಪ್ರಜಾಪ್ರಭುತ್ವವನ್ನ ಬಲಪಡಿಸುವುದು, ಜನರ ಜೊತೆಯಾಗಿ ಕಾರ್ಯನಿರ್ವಹಿಸುವುದು ಮುಖ್ಯ ಎಂದು ಮೋದಿ ಒತ್ತಿಹೇಳಿದ್ದಾರೆ ಎನ್ನಲಾಗಿದೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಸಾವಾದರೂ ಸಹ ಅದು ನೋವುಂಟು ಮಾಡುತ್ತದೆ.. ಅಲ್ಲಿನ ಯುವಕರನ್ನ ರಕ್ಷಿಸುವುದು ನಮ್ಮೆಲ್ಲರ ಒಗ್ಗಟ್ಟಿನ ಕೆಲಸ. ಜಮ್ಮು ಕಾಶ್ಮೀರದ ಯುವಕರಿಗೆ ಅವಕಾಶಗಳನ್ನ ನೀಡುವುದರಿಂದ ನಾವು ಅವರಿಂದ ದೇಶಕ್ಕೆ ಸಾಕಷ್ಟನ್ನು ಪಡೆಯಬಹುದು ಎಂದು ಹೇಳಿದ್ದಾರೆ.

ಜನರಿಗೆ ಭ್ರಷ್ಟಾಚಾರ ಮುಕ್ತ ಆಡಳಿತದ ಅನುಭವವಾದಲ್ಲಿ ಅದರಿಂದ ಜನರ ವಿಶ್ವಾಸವನ್ನ ಗಳಿಸಬಹುದು. ಅಲ್ಲದೇ ಜನರೂ ಸಹ ಆಡಳಿತದ ಜೊತೆಗೆ ಸಹಕರಿಸುತ್ತಾರೆ.. ಇದು ಸದ್ಯ ಜಮ್ಮು ಕಾಶ್ಮೀರದಲ್ಲಿ ಕಂಡುಬರುತ್ತಿದೆ.

ನಮ್ಮ ಮಧ್ಯೆ ರಾಜಕೀಯ ವ್ಯತ್ಯಾಸಗಳು ಇರಬಹುದು.. ಆದರೆ ದೇಶದ ಹಿತಾಸಕ್ತಿಯಿಂದಾಗಿ ಮತ್ತು ಜಮ್ಮು ಕಾಶ್ಮೀರಕ್ಕಾಗಿ ಎಲ್ಲರೂ ಜೊತೆಯಾಗಿ ಕೆಲಸ ಮಾಡಬೇಕಿದೆ.ಜಮ್ಮು ಕಾಶ್ಮೀರದಲ್ಲಿ ಎಲ್ಲರಿಗೂ ಸುರಕ್ಷೆ ಮತ್ತು ಭದ್ರತೆಯ ವಾತಾವರಣ ನಿರ್ಮಾಣ ಮಾಡುವ ಅಗತ್ಯವಿದೆ. ದಿಲ್ಲಿಯಿಂದ ದೂರ ಇರುವುದನ್ನ ಹಾಗೂ ಹೃದಯದಿಂದ ದೂರ ಇರುವುದನ್ನ ತೆಗೆದುಹಾಕಬೇಕಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಹೇಳಿದ್ದಾರೆ ಎನ್ನಲಾಗಿದೆ.

The post ಜಮ್ಮು&ಕಾಶ್ಮೀರ ನಾಯಕರೊಂದಿಗೆ ಸುದೀರ್ಘ ಮೂರೂವರೆ ಗಂಟೆ ಸಭೆ ನಡೆಸಿದ ಮೋದಿ: ಏನೆಲ್ಲಾ ಚರ್ಚೆಯಾಯ್ತು..? appeared first on News First Kannada.

Source: newsfirstlive.com

Source link