ಜಯಲಲಿತಾ ಮಾಡಿದ್ದ ಶಪಥ ನೆನಪಿಸಿತು ನಾಯ್ಡು ಕಣ್ಣೀರು; ಜಗನ್ ವಿರುದ್ಧ ತೊಡೆ ತಟ್ಟಲು ಕಾರಣ ಏನು ಗೊತ್ತಾ..?


ರಾಜಕಾರಣ ಅಂದ್ರೆ ಸ್ಪರ್ಧೆ ಲಾಭ-ನಷ್ಟ.. ಜಯ-ಅಪಜಯ, ದಾಳಿ-ಪ್ರತಿದಾಳಿಗಳ ಅಖಾಡ.. ಆ ಅಖಾಡದಲ್ಲಿ ಗೆದ್ದವನನ್ನ ಅಭಿನಂದಿಸಬೇಕು.. ಸೋತವನನ್ನೂ ಉತ್ತಮ ಸ್ಫರ್ಧಾಳು ಆಗಿದ್ದಕ್ಕೆ ವಂದಿಸಬೇಕು.. ಆದ್ರೆ, ಇತ್ತೀಚೆಗೆ ಪಾಲಿಟಿಕ್ಸ್​ ಅನ್ನೋದು ದ್ವೇಷ, ಮದ, ಮತ್ಸರಗಳ ಸ್ವರ್ಗವಾಗಿ ಹೋಗಿದೆ.. ಅದ್ರಲ್ಲೂ ರಕ್ತಸಿಕ್ತ ರಾಜಕಾರಣಕ್ಕೇ ಕುಖ್ಯಾತಿ ಪಡೆದಿರುವ ಆಂಧ್ರದಲ್ಲಿ ಆರೋಗ್ಯಕರ ಪಾಲಿಟಿಕ್ಸ್ ಇಲ್ಲ.. ಇದಕ್ಕೊಂದು ತಾಜಾ ಉದಾಹರಣೆ ನಿನ್ನೆ ನಡೆದಿರುವ ಘಟನೆ.. ಜಗನ್ ಹಾಗೂ ಚಂದ್ರಬಾಬು ನಾಯ್ಡು ನಡುವಿನ ಕಾಳಗ ಮತ್ತೊಂದು ಹಂತಕ್ಕೆ ಮೇಲೇರಿದ್ದು, ಮಾಜಿ ಮುಖ್ಯಮಂತ್ರಿಗಳಿಂದ ಹಾಲಿ ಸಿಎಂಗೆ ಸವಾಲಿನ ಪಂಥಾಹ್ವಾನಕ್ಕೆ  ಹೋಗಿದೆ.

1989, ಮಾರ್ಚ್​ 25.. ಇದು ತಮಿಳುನಾಡು ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ದಿನ.. ತನಗಾದ ಅವಮಾನಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಪ್ರತೀಕಾರ ತೀರಿಸಿಕೊಳ್ಳಲು ಹೆಣ್ಣೊಬ್ಬಳು ಪಣತೊಟ್ಟ ದಿನ.. ತಾನು ಮಾಡಿದ್ದ ಪ್ರತಿಜ್ಞೆಯನ್ನು ಕೆಲವೇ ವರ್ಷಗಳಲ್ಲಿ ಸತ್ಯ ಮಾಡಿದ್ದರು ಜಯಲಲಿತಾ.. ಅವತ್ತು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿಯವರು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಭಾಷಣ ಮಾಡ್ತಿದ್ರು..

ಆ ವೇಳೆ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಜಯಲಲಿತಾ ಅವರ ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದರು. ಇದರಿಂದ ಕುಪಿತಗೊಂಡಿದ್ದ ಕರುಣಾನಿಧಿ, ಜಯಾ ಮೇಲೆ ನಿಂದನೆಗಳ ಸುರಿಮಳೆಗೈತಾರೆ.. ಇದರಿಂದ ಸಿಟ್ಟಾದ ಜಯಲಲಿತಾ ತಮ್ಮ ಪಕ್ಷದ ಸದಸ್ಯರ ಜೊತೆಗೆ ಸಭಾತ್ಯಾಗಕ್ಕೆ ಮುಂದಾಗ್ತಾರೆ.. ಆ ವೇಳೆ ಡಿಎಂಕೆ ಸಚಿವನೊಬ್ಬ ದುಶ್ಯಾಸನನಂತೆ ಜಯಲಲಿತಾ ಸೀರೆ ಎಳೆದುಬಿಡ್ತಾರೆ..

ಅಲ್ಲಿಗೆ ಮುಗಿಯಿತು, ಹೆಣ್ಣು ಹುಲಿಯನ್ನ ಕೆಣಕಿದ್ದಾಂಗಿತ್ತು ಡಿಎಂಕೆ ಸದಸ್ಯರ ಪರಿಸ್ಥಿತಿ.. ತನಗಾದ ಅವಮಾನದಿಂದ ತೀವ್ರ ಬೇಸರಕ್ಕೀಡಾದ ಜಯಲಲಿತಾ, ಅಂದೇ ಅಸ್ಸೆಂಬ್ಲಿಯಲ್ಲಿ ಒಂದು ಶಪಥ ಮಾಡಿದ್ದರು. ತಾನು ಮುಖ್ಯಮಂತ್ರಿಯಾದ ಬಳಿಕವೇ ಮತ್ತೆ ಸದನಕ್ಕೆ ಮರಳೋದಾಗಿ ಪ್ರತಿಜ್ಞೆ ಮಾಡಿದ್ರು.. ಇದಾದ ಎರಡೇ ವರ್ಷಕ್ಕೆ ಅಂದ್ರೆ 1991ರಲ್ಲಿ ಎಐಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ತಮಿಳುನಾಡಿನಲ್ಲಿ ಪ್ರಚಂಡ ದಿಗ್ವಿಜಯ ಮೊಳಗಿಸುತ್ತದೆ. ಮೊದಲ ಬಾರಿಗೆ ಸಿಎಂ ಆಗುವ ಅಮ್ಮ,ತಾನು ಮಾಡಿದ ಶಪಥವನ್ನು ಸತ್ಯ ಮಾಡಿ ಮುಖ್ಯಮಂತ್ರಿಯಾಗಿಯೇ ಮತ್ತೆ ವಿಧಾನಸಭೆಗೆ ಮರಳಿದ್ದರು.

ಇದು ತಮಿಳುನಾಡಿನ ದಂತಕತೆ ಜಯಲಲಿತಾರವರು ಪ್ರಜಾಪ್ರಭುತ್ವ ದೇಗುಲದಲ್ಲಿ ಅಪಮಾನಕ್ಕೀಡಾಗಿ, ಅದೇ ದೇಗುಲಕ್ಕೆ ಪ್ರಭಾವಶಾಲಿ ನಾಯಕಿಯಾಗಿ ಎಂಟ್ರಿ ನೀಡುವ ಕಥೆ.. ಈ ಕಥೆ ಕೇಳಿದ್ರೆ, ಎಂಥವರ ಮೈ ಕೂಡ ಜುಮ್​ ಎನಿಸುತ್ತೆ.

ಜಯಾರಂತೆಯೇ ಶಪಥ ಮಾಡಿದ ಚಂದ್ರಬಾಬು ನಾಯ್ಡು
ಸಿಎಂ ಆದ ಮೇಲೆಯೇ ವಿಧಾನಸಭೆಗೆ ಮರಳುವ ಪ್ರತಿಜ್ಞೆ..!

ರಾಜಕೀಯದಲ್ಲಿ ಕೆಲ ನೀತಿಗಳಿರಬೇಕು ಅಂತಾ 40 ವರ್ಷಗಳಿಂದ ಅವರು ಏನೇ ಮಾತನಾಡಿದ್ರೂ, ಎಲ್ಲಿಯೂ ಕೂಡ ಚಿಕ್ಕ ತೊಡಕಾಗದಂತೆ, ನೈತಿಕವಾಗಿ ಆಡಳಿತ ಮಾಡಿಕೊಂಡು, ಎಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ. ನನ್ನ ತತ್ವ ಸಿದ್ಧಾಂತವನ್ನೇ ನಮ್ಮ ಕಾರ್ಯಕರ್ತರಿಗೆ ಹಾಗೂ ನಾಯಕರಿಗೆ ತಿಳಿಸಿ, ಅದ್ರಂತೆ ಕಾರ್ಯನಿರ್ವಹಿಸಲು ಹೇಳಿದ್ದೇನೆ. ಇತರರು ಅವಾಚ್ಯ ಶಬ್ದ ಬಳಸಿದ್ರೂ ಕೂಡ ನಾವು ಅವರನ್ನು ನಿಂದಿಸುತ್ತಿಲ್ಲ ಅಂದ್ರೆ ಅಸಹಾಯಕರು ಅಂತಾ ಅಲ್ಲ. ನಾವು ಇದುವರೆಗೂ ಅನುಸರಿಸಿರುವ ಮೌಲ್ಯಗಳಿಗೋಸ್ಕರ ಹೋರಾಡಿದ ಕಾರಣದಿಂದ. ನಾನು ಜನರಲ್ಲಿ ಮನವಿ ಮಾಡೋದು ಒಂದೇ..ಈ ಧರ್ಮ ಹೋರಾಟದಲ್ಲಿ ನೀವು ಸಹಕರಿಸಿ. ಸಹಕರಿಸಿದ್ರೆ ರಾಜ್ಯವನ್ನು ಕಾಪಾಡಲು ನಾನು ಮಾಡಬೇಕಾದ ಕರ್ತವ್ಯವನ್ನ ಮಾಡುತ್ತೇನೆ. ಚುನಾವಣೆಯಲ್ಲಿ ನಿರ್ಧಾರ ಆದ್ಮೇಲೇ ಅಸೆಂಬ್ಲಿಗೆ ಕಾಲಿಡ್ತೀನಿ.

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಪಕ್ಷದ ಧುರೀಣ ನೆನ್ನೆಯೊಂದು ಶಪಥ ಮಾಡಿದ್ದಾರೆ. ಅದೇನಂದ್ರೆ, ತಾವು ಮತ್ತೊಮ್ಮೆ ಗೆದ್ದು ಮುಖ್ಯಮಂತ್ರಿಯಾದ ಬಳಿಕವಷ್ಟೇ ವಿಧಾನಸಭೆಗೆ ಕಾಲಿಡೋದಾಗಿ ಸವಾಲು ಹಾಕಿದ್ದಾರೆ.. ಅವರು ಹಾಕಿರೋ ಈ ಸವಾಲು ಬೇಱರಿಗೂ ಅಲ್ಲ.. ವೈಎಸ್​ಆರ್​ ಕಾಂಗ್ರೆಸ್ ಪಕ್ಷದ ನಾಯಕ, ಆಂಧ್ರ ಪ್ರದೇಶದ ಸಿಎಂ ಜಗನ್​ ಮೋಹನ್​ ರೆಡ್ಡಿಯ ವಿರುದ್ಧ ಚಂದ್ರಬಾಬು ನಾಯ್ಡು ತೊಡೆ ತಟ್ಟಿದ್ದಾರೆ.

ಸದನದಲ್ಲಿ ಹದ್ದು ಮೀರಿತಾ ಜಗನ್ ಮೋಹನ್​​ ಸೈನ್ಯ?
ಪತ್ನಿಯನ್ನು ನಿಂದಿಸಿದ ಆರೋಪ ಮಾಡಿದ ಮಾಜಿ ಸಿಎಂ!

ಯಾವುದೇ ರಾಜ್ಯದಲ್ಲೂ ಸದನ ಅಂದ್ರೆ ಕೆಲವೊಂದು ಸಲ ನಡೆಯಬಾರದ ಘಟನೆಗಳು ನಡೆದು ಹೋಗ್ತವೆ. ಅಂತಹುದ್ದೇ ಘಟನೆ ಇವತ್ತು ಆಂಧ್ರ ಪ್ರದೇಶದ ವಿಧಾನಸಭೆಯಲ್ಲೂ ನಡೆದು ಹೋಗಿದೆ.. ಜಗನ್​ ಪಕ್ಷದ ಸಚಿವರು ಕೃಷಿ ವಿಚಾರವಾಗಿ ಇಂದು ಸದನದಲ್ಲಿ ಮಾತನಾಡ್ತಿದ್ರು. ಇದೇ ವೇಳೆ, ಚಂದ್ರಬಾಬು ನಾಯ್ಡುರವರ ವಿರುದ್ಧ ವಾಗ್ದಾಳಿ ನಡೆಸಿದ್ರು.. ಮಧ್ಯ ಪ್ರವೇಶಿಸಿ ಚಂದ್ರಬಾಬು ನಾಯ್ಡು ಮಾತನಾಡಲು ಯತ್ನಿಸಿದ್ರೂ ಅವರಿಗೆ ಅವಕಾಶ ಸಿಗಲಿಲ್ಲ. ಆಡಳಿತ ಪಕ್ಷದ ದಾಳಿ ಮುಂದುವರಿದಿತ್ತು. ಆದ್ರೆ, ಇದೇ ವೇಳೆ ಆಂಧ್ರದ ಸಚಿವರಾದ ಕಣ್ಣಬಾಬು, ಅಂಬಾಟಿ ರಾಮಬಾಬು ತಮ್ಮ ಸಭ್ಯತೆಯ ಸೀಮೆ ರೇಖೆಯನ್ನ ಮೀರಿದ್ದರು ಎನ್ನಲಾಗ್ತಿದೆ. ಚಂದ್ರಬಾಬು ನಾಯ್ಡುರವರನ್ನ ಅವಮಾನಿಸಿದ್ದಲ್ಲದೇ, ಅವರ ಪತ್ನಿ ಮಾಜಿ ಸಿಎಂ ಎನ್​ಟಿಆರ್​​ರವರ ಪುತ್ರಿಯಾಗಿರುವ ಭುವನೇಶ್ವರಿಯ ನಡತೆಯ ಬಗ್ಗೆ ಮಾತನಾಡಿದ್ದು, ವೈಯಕ್ತಿಕ ತೇಜೋವಧೆಗೆ ಯತ್ನಿಸಿದ್ದಾರೆ.

ಅಸೆಂಬ್ಲಿಯಲ್ಲಾದ ಈ ಘಟನೆಯಿಂದ ಚಂದ್ರಬಾಬು ನಾಯ್ಡುರವರು ತೀವ್ರ ಜರ್ಜರಿತರಾಗಿ ಹೋಗಿದ್ದಾರೆ. ವಿಧಾನಸಭೆಯಿಂದ ಆಚೆ ಬಂದ ಮಾಜಿ ಮುಖ್ಯಮಂತ್ರಿಗಳು ತಮಗಾದ ಅವಮಾನ ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಹೀಗೆ, ದೇಶದ ಜನರ ಮುಂದೆ ಗಳಗಳನೆ ಕಣ್ಣೀರಿಟ್ಟ ಚಂದ್ರಬಾಬು ನಾಯ್ಡು, ತಮಗೇ ತಾವೇ ಸಮಾಧಾನಮಾಡಿಕೊಂಡು ಅವರ ಪತ್ನಿಯ ಬಗ್ಗೆ ಹೇಳುತ್ತಾ ಹೋದರು..

ನನ್ನ ಪತ್ನಿಗೆ ರಾಜಕೀಯದ ಮೇಲೆ ಆಸಕ್ತಿ ಇಲ್ಲ. ಅವರ ಕುಟುಂಬ ರಾಜಕೀಯಕ್ಕೆ ಕಾಲಿಟ್ಟು 40 ವರ್ಷಗಳೇ ಕಳೆದು ಹೋಗಿವೆ. ಅವರ ತಂದೆ ಸಿಎಂ ಆಗಿದ್ದವರು. ಆದರೂ ತನ್ನ ಪತ್ನಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ನಾನು ಸಿಎಂ ಆಗಿದ್ದಾಗಲೂ ಅನಿವಾರ್ಯತೆ ಇದ್ದಾಗ ಮಾತ್ರ ಅವರು ನನ್ನ ಜೊತೆಗೆ ಹೊರಗೆ ಬರ್ತಿದ್ರು. ಈಗಲೂ ಕೂಡ ನನ್ನ ಪತ್ನಿಗೆ ನಮ್ಮದೇ ಪಕ್ಷದ ನಾಯಕರು ಸರಿಯಾಗಿ ಗೊತ್ತಿಲ್ಲ. ಅವರ ವೈಯಕ್ತಿಕ ಜೀವನ ಹಾಗೂ ನನ್ನನ್ನು ಪ್ರೋತ್ಸಾಹಿಸುವುದು ಬಿಟ್ಟರೆ ಬೇರೆ ವಿಚಾರಗಳ ಬಗ್ಗೆ ಆಕೆ ತಲೆಕೆಡಿಸಿಕೊಂಡಿಲ್ಲ. ಅಂತವರ ನಡತೆಯ ಬಗ್ಗೆ ಮಾತನಾಡಿದ್ದಾರೆ ಅಂದ್ರೆ, ಸಹಿಸಲು ಸಾಧ್ಯವಾಗ್ತಿಲ್ಲ. ನಾನು ಕೇವಲ ಜನರಿಗೋಸ್ಕರ ಹೋರಾಟ ಮಾಡಿಕೊಂಡು ಬಂದೆ. ಆದ್ರೆ, ಎರಡೂವರೆ ವರ್ಷದಿಂದ ನನ್ನ ಕೇವಲವಾಗಿ ನೋಡೋದಲ್ಲದೇ ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ನನ್ನ ಜೀವನದಲ್ಲೇ ಇಂತಹ ಮಾತುಗಳನ್ನ ಕೇಳಿರಲಿಲ್ಲ

ಇಷ್ಟೆಲ್ಲಾ ಹೇಳಿದ ಮೇಲೆ ಚಂದ್ರಬಾಬು ನಾಯ್ಡು ಶಪಥ ಮಾಡಿಯೇಬಿಟ್ಟಿದ್ದಾರೆ. ಸಿಎಂ ಗಾದಿಗೆ ಏರುವವರೆಗೂ ತಾವು ವಿಧಾನಸಭೆಗೆ ಕಾಲಿಡಲ್ಲ ಎಂದಿದ್ದಾರೆ.. ಆದ್ರೆ, ಇಲ್ಲಿ ಮತ್ತೊಂದು ಬೇಸರದ ಸಂಗತಿ ಏನಂದ್ರೆ. ಸದನದಲ್ಲಿ ಚಂದ್ರಬಾಬು ನಾಯ್ಡುರವರ ವಿರುದ್ಧ ಇಷ್ಟೆಲ್ಲ ಖಾರ ವಾಗ್ದಾಳಿ ನಡೀತಿದ್ರೂ, ಸಿಎಂ ಜಗನ್​ ಮಾತ್ರ ನಗುತ್ತಲೇ ಕುಳಿತ್ತಿದ್ದರೋ ಹೊರತು, ತಮ್ಮ ಪಕ್ಷದ ಸದಸ್ಯರಿಗೆ ಸಭ್ಯವಾಗಿ ವರ್ತಿಸುವಂತೆ ಸೂಚಿಸಲಿಲ್ಲ. ಒಟ್ಟಾರೆ, ಆಂಧ್ರ ರಾಜಕಾರಣ ಮತ್ತೊಂದು ಯುದ್ಧಕ್ಕೆ ನಾಂದಿ ಹಾಡಿದೆ. ಸಿಎಂ ಆಗೇ ಆಗ್ತೀನಿ ಎಂಬ ಅಚಲ ಆತ್ಮವಿಶ್ವಾಸದಲ್ಲಿರುವ ಚಂದ್ರಬಾಬುನಾಯ್ಡು, ಕಣ್ಣೀರಿನ ಶಪಥ ಮಾಡಿದ್ದು, ಮತ್ತೊಂದು ಸುತ್ತಿನ ಸಮರಕ್ಕೆ ಜಗನ್​ ಮೋಹನ್​ಗೆ ತಮ್ಮ ಸವಾಲಿನ ಮೂಲಕವೇ ರಣವೀಳ್ಯ ನೀಡಿದ್ದಾರೆ.

News First Live Kannada


Leave a Reply

Your email address will not be published. Required fields are marked *