ಜಾಹಿರಾತು ಚಿತ್ರೀಕರಣದ ವೇಳೆ ತಾಳ್ಮೆ ಕಳೆದುಕೊಂಡು ರೇಗಿದ ಅಜಯ್ ದೇವಗನ್; ಕಾರಣ ತಿಳಿಸಿದ ಆನಂದ್ ಮಹೀಂದ್ರಾ | Ajay Devgan losts his cool Anand Mahindra shares the video and explains it


ಜಾಹಿರಾತು ಚಿತ್ರೀಕರಣದ ವೇಳೆ ತಾಳ್ಮೆ ಕಳೆದುಕೊಂಡು ರೇಗಿದ ಅಜಯ್ ದೇವಗನ್; ಕಾರಣ ತಿಳಿಸಿದ ಆನಂದ್ ಮಹೀಂದ್ರಾ

ಅಜಯ್ ದೇವಗನ್, ಆನಂದ್ ಮಹೀಂದ್ರಾ

ಮಹೀಂದ್ರಾ ಗ್ರೂಪ್​ನ ಚೇರ್​ಮನ್ ಆನಂದ್ ಮಹೀಂದ್ರಾ (Anand Mahindra) ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಬಹಳಷ್ಟು ಕುತೂಹಲಕರ ವಿಚಾರಗಳನ್ನು ಹಂಚಿಕೊಳ್ಳುವ, ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆದರೆ ಇತ್ತೀಚೆಗೆ ಅವರು ಹಂಚಿಕೊಂಡಿದ್ದ ಪೋಸ್ಟ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು. ವಿಡಿಯೋ ಒಂದರ ತುಣುಕಿರುವ ಟ್ವೀಟ್ ಒಂದನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಬಾಲಿವುಡ್​ನ ಖ್ಯಾತ ನಟ ಅಜಯ್ ದೇವಗನ್ ಮಹೀಂದ್ರಾ ಸಂಸ್ಥೆಯ ಜಾಹಿರಾತು ಚಿತ್ರೀಕರಣಕ್ಕೆ ಬಂದ ಸಂದರ್ಭದ ದೃಶ್ಯವಿತ್ತು. ಶೂಟಿಂಗ್ ಸಂದರ್ಭದಲ್ಲಿ ಪದೇ ಪದೇ ಸ್ಕ್ರಿಪ್ಟ್​​ನ ಬದಲಾವಣೆಯಿಂದ ಬೇಸತ್ತ ಅಜಯ್, ನಿರ್ದೇಶನ ತಂಡದವರ ಮೇಲೆ ರೇಗುವ ಒಂದು ದೃಶ್ಯವನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳಿಗೆ ಗೊಂದಲವಾಗಿತ್ತು. ಆದರೆ ಅಜಯ್ ದೇವಗನ್ (Ajay Devgan) ಮಹೀಂದ್ರಾ ಸಂಸ್ಥೆಯ ಜಾಹಿರಾತಿನಲ್ಲಿ ರೇಗಿದ್ದು, ಅದನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದು.. ಎಲ್ಲವನ್ನೂ ನೋಡಿದ ನೆಟ್ಟಿಗರಿಗೆ ಇದರ ಅಸಲಿಯತ್ತು ತಿಳಿದ ಮೇಲೆ ಮುಖದಲ್ಲಿ ಮಂದಹಾಸ ಮೂಡಿದೆ. ಏನಿದು ಅಸಲಿಯತ್ತು? ಇಲ್ಲಿದೆ ಕುತೂಹಲಕರ ವಿಚಾರ.

ಅಷ್ಟಕ್ಕೂ ಆನಂದ್ ಮಹೀಂದ್ರಾ ಹಂಚಿಕೊಂಡ ಟ್ವೀಟ್​ನಲ್ಲಿ ಏನಿತ್ತು?

ಆನಂದ್ ಮಹೀಂದ್ರಾ ಟ್ವೀಟ್​ನಲ್ಲಿ ಅಜಯ್ ದೇವಗನ್ ಶೂಟಿಂಗ್ ಸೆಟ್​​ನಲ್ಲಿ ಬೈಯುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದು ಹೌದು. ಆದರೆ ಅಲ್ಲೊಂದು ಟ್ವಿಸ್ಟ್ ಇದೆ. ಆದರೆ ಇದು ಎಲ್ಲರಿಗೂ ಅರ್ಥವಾಗಿಲ್ಲ. ಇದೇ ಸಣ್ಣ ಗೊಂದಲಕ್ಕೆ ಕಾರಣವಾಗಿದ್ದಷ್ಟೇ! ‘‘ಮಹೀಂದ್ರಾ ಟ್ರಕ್ ಬಸ್ ಜಾಹಿರಾತು ಚಿತ್ರೀಕರಣದ ವೇಳೆ ಅಜಯ್ ದೇವಗನ್ ತಾಳ್ಮೆ ಕಳೆದುಕೊಂಡಿದ್ದಾರೆ ಎಂಬುದನ್ನು ಕೇಳಲ್ಪಟ್ಟೆ’’ ಎಂದು ಬರೆದಿರುವ ಆನಂದ್ ಮಹೇಂದ್ರ ಅದಕ್ಕೆ ಮತ್ತೊಂದು ಸಾಲನ್ನೂ ಸೇರಿಸಿದ್ದಾರೆ.

‘‘ಅಜಯ್ ತಾಳ್ಮೆ ಕಳೆದುಕೊಂಡಿದ್ದಾರೆ. ಅವರು ನಮ್ಮ ಕಂಪನಿಯ ಟ್ರಕ್ ಹಿಡಿದುಕೊಂಡು ನನ್ನನ್ನು ಬೆನ್ನಟ್ಟಿ ಬರುವ ಮೊದಲೇ ನಾನು ಊರು ಬಿಡುವುದು ಒಳ್ಳೆಯದು’’ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ ಆನಂದ್ ಮಹೀಂದ್ರಾ. ಬರಹವನ್ನು ಪೂರ್ತಿ ಓದಿದ ನೆಟ್ಟಿಗರಿಗೆ ಸಂಪೂರ್ಣ ಸುದ್ದಿ ತಿಳಿದ ನಂತರ, ಮನದುಂಬಿ ನಕ್ಕಿದ್ದಾರೆ. ಕಾರಣ, ಆನಂದ್ ಮಹೀಂದ್ರಾ ಜಾಹಿರಾತನ್ನೂ ಸೃಜನಾತ್ಮಕವಾಗಿ ಹಂಚಿಕೊಂಡಿದ್ದು, ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ.

ಅಜಯ್ ದೇವಗನ್ ಮಾಸ್ ದೃಶ್ಯವನ್ನು ನೆನಪಿಸಿಕೊಂಡು ತಮಾಷೆ ಮಾಡಿದ ನೆಟ್ಟಿಗರು:

ಆನಂದ್ ಮಹೀಂದ್ರಾ ಹಂಚಿಕೊಂಡಿರುವ ಸೃಜನಾತ್ಮಕ ಟ್ವೀಟ್​ಗೆ ಅಷ್ಟೇ ಮಜವಾಗಿ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಆನಂದ್ ಮಹೀಂದ್ರಾ ತಮ್ಮ ಕಂಪನಿಯ ಉತ್ಪನ್ನಗಳನ್ನು ಎಷ್ಟು ಭಿನ್ನವಾಗಿ ಪ್ರಚಾರ ಮಾಡುತ್ತಾರೆ ಎಂದು ಕೆಲವರು ಹೊಗಳಿದ್ದರೆ, ಇದು ಜಾಹಿರಾತು ನೀಡುವ ಅತ್ಯುತ್ತಮ ವಿಧಾನ ಎಂದು ಮತ್ತಷ್ಟು ಜನ ಹೊಗಳಿದ್ದಾರೆ.

ಹಲವರು ಅಜಯ್ ದೇವಗನ್ ಆಕ್ಷನ್ ಚಿತ್ರಗಳ ದೃಶ್ಯಗಳನ್ನು ನೆನಪಿಸಿಕೊಂಡು ಕಾಮೆಂಟ್ ಮಾಡಿದ್ದಾರೆ. ಅವರ ಚಿತ್ರವೊಂದರಲ್ಲಿ ಎರಡು ಟ್ರಕ್​ಗಳ ಮೇಲೆ ಹತ್ತಿ ಬರುವ ಅಜಯ್, ಫೈಟಿಂಗ್ ಮಾಡುವ ದೃಶ್ಯಗಳನ್ನು ನೆನಪಿಸಿಕೊಂಡಿರುವ ಚಿತ್ರ ಪ್ರೇಮಿಗಳು, ‘ಅಜಯ್ ದೇವಗನ್ ಕೇವಲ ಒಂದು ಟ್ರಕ್​ನಲ್ಲಿ ಬರುವುದಿಲ್ಲ. ನಿಮ್ಮ ಕಂಪನಿಯ ಎರಡು ಟ್ರಕ್​ಗಳು ಅವರಿಗೆ ಬೇಕು’’ ಎಂದು ತಮಾಷೆ ಮಾಡಿದ್ದಾರೆ. ‘‘ಪ್ರಸ್ತುತ ಜಾಹಿರಾತುಗಳನ್ನು ವಿವಾದಕ್ಕೆ ಒಳಗಾಗುವಂತೆ ರೂಪಿಸಲಾಗುತ್ತದೆ. ಅದರ ಆಧಾರದಲ್ಲಿ ಮಾರ್ಕೆಟಿಂಗ್ ಮಾಡಲಾಗುತ್ತದೆ’’ ಎಂದು ಓರ್ವ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ತುಣುಕು ನೆಟ್ಟಿಗರನ್ನು ಸೆಳೆಯಲು ಯಶಸ್ವಿಯಾಗಿದ್ದು, ಮಜವಾದ ಚರ್ಚೆಗೂ ಕಾರಣವಾಗಿದೆ.

ಆನಂದ್ ಮಹೀಂದ್ರಾ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

ಚಿತ್ರಗಳ ವಿಷಯಕ್ಕೆ ಬಂದರೆ ಅಜಯ್ ದೇವಗನ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಹಾಗೂ ‘ಆರ್​ಆರ್​​ಆರ್​​’ ಚಿತ್ರಗಳು ಸದ್ಯದಲ್ಲೇ ತೆರೆಕಾಣಲಿವೆ. ಇವುಗಳಲ್ಲದೇ ‘ಮೈದಾನ್’, ‘ಸರ್ಕಸ್’, ‘ಥ್ಯಾಂಕ್ ಗಾಡ್’ ಮೊದಲಾದ ಚಿತ್ರಗಳಲ್ಲಿ ಅಜಯ್ ದೇವಗನ್ ಬಣ್ಣಹಚ್ಚುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *