ಜಾಹೀರಾತಿನಲ್ಲಿ ಬಿಂದಿ ಇಡದೆ ಕಾಣಿಸಿಕೊಂಡ ಕರೀನಾ; ಮಲಬಾರ್ ಗೋಲ್ಡ್​ ಬಹಿಷ್ಕರಿಸಿ ಎಂದ ನೆಟ್ಟಿಗರು | Boycott Malabar Gold trend in social media after Kareena Kapoor Without A Bindi


ಜಾಹೀರಾತಿನಲ್ಲಿ ಬಿಂದಿ ಇಡದೆ ಕಾಣಿಸಿಕೊಂಡ ಕರೀನಾ; ಮಲಬಾರ್ ಗೋಲ್ಡ್​ ಬಹಿಷ್ಕರಿಸಿ ಎಂದ ನೆಟ್ಟಿಗರು

ಇತ್ತೀಚೆಗೆ ಜಾಹೀರಾತು ಮೇಕಿಂಗ್​ನಲ್ಲೂ ಸಖತ್ ಸ್ಪರ್ಧೆ ಇದೆ. ಗ್ರಾಹಕರನ್ನು ಸೆಳೆಯಲು ಒಂದಕ್ಕಿಂತ ಒಂದು ಭಿನ್ನ ಅಡ್ವಟೈಸ್​ಮೆಂಟ್ ಮಾಡಲಾಗುತ್ತದೆ. ಆದರೆ, ಕೆಲವೊಮ್ಮೆ ಜಾಹೀರಾತಿನಲ್ಲಿ ಇರುವ ಸಣ್ಣ ಎಡವಟ್ಟಿನಿಂದ ಕಂಪನಿ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ. ಮಲಬಾರ್ ಗೋಲ್ಡ್ (Malabar Gold)​ ಸಂಸ್ಥೆ ಇದೇ ರೀತಿಯ ಸಂಕಷ್ಟದಲ್ಲಿ ಸಿಲುಕಿದೆ. ಈ ಸಂಸ್ಥೆಯ ಜಾಹೀರಾತಿನಲ್ಲಿ ನಟಿ ಕರೀನಾ ಕಪೂರ್ (Kareena Kapoor) ಕಾಣಿಸಿಕೊಂಡಿದ್ದಾರೆ. ಆದರೆ, ಅವರು ಹಣೆಗೆ ಬಿಂದಿ ಇಟ್ಟಿಲ್ಲ ಎನ್ನುವ ಕಾರಣಕ್ಕೆ ‘#BoycottMalabarGold’ ಹ್ಯಾಶ್​ಟ್ಯಾಗ್ ಟ್ರೆಂಡ್ ಆಗಿದೆ.

ಕರೀನಾ ಕಪೂರ್ ಅವರು ಸೈಫ್ ಅಲಿ ಖಾನ್​ರನ್ನು ಮದುವೆ ಆಗಿದ್ದಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ವಿವಾಹದ ಬಳಿಕ ಇಲ್ಲಿಯವರೆಗೆ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿದೆ. ‘ರಾಮಾಯಣ’ ಆಧರಿಸಿ ಬರುತ್ತಿರುವ ಸಿನಿಮಾದಲ್ಲಿ ಕರೀನಾಗೆ ಸೀತೆಯ ಪಾತ್ರ ಆಫರ್ ಮಾಡಲಾಗಿತ್ತು ಎನ್ನಲಾಗಿತ್ತು. ಇದಕ್ಕೆ ಅವರು ಹೆಚ್ಚು ಸಂಭಾವನೆ ಕೇಳಿದ್ದಕ್ಕೆ ಟ್ರೋಲ್ ಆಗಿದ್ದರು. ಈಗ ಕರೀನಾ ಮತ್ತೆ ಸುದ್ದಿಯಲ್ಲಿದ್ದಾರೆ.

ಮಲಬಾರ್ ​ ಗೋಲ್ಡ್​ನ ಜ್ಯುವೆಲರಿಗಳನ್ನು ಧರಿಸಿ ಕರೀನಾ ಫೋಟೋಶೂಟ್ ಮಾಡಿಸಿದ್ದಾರೆ. ಈ ಜಾಹೀರಾತನ್ನು ಮಲಬಾರ್ ಗೋಲ್ಡ್ ಪ್ರಕಟಿಸಿದೆ. ಹಿಂದುಗಳು ಹಣೆಗೆ ಕುಂಕುಮ ಅಥವಾ ಬಿಂದಿ ಇಡುತ್ತಾರೆ. ಕರೀನಾ ಹಣೆಯಲ್ಲಿ ಬಿಂದಿ ಇರಲಿಲ್ಲ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ‘ಹಿಂದೂ ಸಂಪ್ರದಾಯವನ್ನೇ ಮರೆತಿರುವ ಮಲಬಾರ್ ಸಂಸ್ಥೆಯ ಚಿನ್ನವನ್ನು ನಾವೇಕೆ ಖರೀದಿಸಬೇಕು? ಅವರು ಇಸ್ಲಾಮಿಕ್ ಕುಟುಂಬಕ್ಕೆ ಸೇರಿದವರು. ಮಲಬಾರ್ ಗೋಲ್ಡ್​ ಅವರೇ ನಿಮ್ಮ ಆಯ್ಕೆಯೇ ತಪ್ಪು’ ಎಂದು ಕೆಲವರು ಬರೆದುಕೊಂಡಿದ್ದಾರೆ. ಹಣೆಗೆ ಬಿಂದಿಯನ್ನು ಏಕೆ ಇಡಬೇಕು ಎಂಬ ಬಗ್ಗೆ ಕೆಲವರು ವೈಜ್ಞಾನಿಕ ಕಾರಣ ನೀಡಿದ್ದಾರೆ.

ತಮನ್ನಾ ಭಾಟಿಯಾ ಕೂಡ ಈ ಮೊದಲು ಮಲಬಾರ್ ಗೋಲ್ಡ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅವರು ಹಣೆಗೆ ಬಿಂದಿ ಇಟ್ಟುಕೊಂಡಿದ್ದರು. ಆದರೆ, ಕರೀನಾ ಹಣೆಗೆ ಬಿಂದಿ ಇಡದೇ ಇರುವುದು ಉದ್ದೇಶ ಪೂರ್ವಕ ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರ-ವಿರೋಧ ಚರ್ಚೆ ಜೋರಾಗಿದೆ. ಆದರೆ, ಸಂಸ್ಥೆಯವರು ಈ ಬಗ್ಗೆ ಯಾವುದೇ ಪ್ರಕಟಣೆ ಹೊರಡಿಸಿಲ್ಲ.

TV9 Kannada


Leave a Reply

Your email address will not be published. Required fields are marked *