ಜಿಎಸ್‌ಟಿ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ; ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದು ₹1.68 ಲಕ್ಷ ಕೋಟಿ: ಹಣಕಾಸು ಸಚಿವಾಲಯ | GST revenues surpassed the ₹1.5 lakh crore mark record ₹1.68 lakh crore in April says Finance ministry


ಜಿಎಸ್‌ಟಿ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ; ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದು ₹1.68 ಲಕ್ಷ ಕೋಟಿ: ಹಣಕಾಸು ಸಚಿವಾಲಯ

ಸಾಂದರ್ಭಿಕ ಚಿತ್ರ

ದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ವರಮಾನವು ಮೊದಲ ಬಾರಿಗೆ ₹ 1.5 ಲಕ್ಷ ಕೋಟಿಯ ಗಡಿ ಮೀರಿದೆ. ಏಪ್ರಿಲ್‌ನಲ್ಲಿ ₹ 1,67,540 ಕೋಟಿ ಸಂಗ್ರಹ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ವೇಗವಾಗಿ ಆರ್ಥಿಕ ಚೇತರಿಕೆ, ಉತ್ತಮ ತೆರಿಗೆ ಆಡಳಿತ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಹಿಂದಿನ ದಾಖಲೆಯ ₹ 1,42,095 ಕೋಟಿಗಿಂತ ಅಂದರೆ ಸುಮಾರು ಶೇ 18ರಷ್ಟು ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಏಪ್ರಿಲ್ 20, 2022 ರಂದು ಒಂದೇ ದಿನದಲ್ಲಿ 9.58 ಲಕ್ಷ ವಹಿವಾಟುಗಳ ಮೂಲಕ ₹57,847 ಕೋಟಿ ಪಾವತಿಸಿದಾಗ ಈ ತಿಂಗಳು ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕಳೆದ ವರ್ಷ ಇದೇ ದಿನಾಂಕದಂದು 7.22 ಲಕ್ಷ ವಹಿವಾಟಿನ ಮೂಲಕ ₹48,000 ಕೋಟಿಯಷ್ಟು ಗರಿಷ್ಠ ಏಕದಿನ ಪಾವತಿಯಾಗಿದೆ.ಇದು ಅನುವರ್ತನೆ ನಡವಳಿಕೆಯಲ್ಲಿ ಸ್ಪಷ್ಟ ಸುಧಾರಣೆಯನ್ನು ತೋರಿಸುತ್ತದೆ. ಅದೇ ವೇಳೆ ತೆರಿಗೆ ಆಡಳಿತವು ತೆರಿಗೆದಾರರನ್ನು ಸಕಾಲಿಕವಾಗಿ ರಿಟರ್ನ್‌ಗಳನ್ನು ಸಲ್ಲಿಸುವಂತೆ ಒತ್ತಾಯಿಸಲು ತೆಗೆದುಕೊಂಡ ಹಲವಾರು ಕ್ರಮಗಳ ಫಲಿತಾಂಶ ಇದಾಗಿದೆ. ರಿಟರ್ನ್ಸ್‌ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸಲಾಗಿದ್ದು, ತೆರಿಗೆ ವಂಚಿಸುವವರ ವಿರುದ್ಧ ಕಠಿಣ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಸಚಿವಾಲಯ ಹೇಳಿದೆ.

ಇದೀಗ ಸತತ 10ನೇ ತಿಂಗಳು ಜಿಎಸ್‌ಟಿ ಆದಾಯ ₹ 1 ಲಕ್ಷ ಕೋಟಿ ದಾಟಿದೆ ಮತ್ತು ಏಪ್ರಿಲ್‌ನಲ್ಲಿ ₹ 1,67,540 ಕೋಟಿಗಳ ದಾಖಲೆ ಸಂಗ್ರಹವು ವರ್ಷದ ಹಿಂದೆ ಇದೇ ತಿಂಗಳಿನಲ್ಲಿ ಸಾಧಿಸಿದ ₹ 1,39,708 ಕೋಟಿಗಿಂತ ಶೇ 19.92 ಹೆಚ್ಚಾಗಿದೆ ಎಂದು ಅಧಿಕೃತ ಡೇಟಾ ತೋರಿಸಿದೆ.

ಏಪ್ರಿಲ್  2022 ರಲ್ಲಿ ಸಂಗ್ರಹಿಸಲಾದ ಒಟ್ಟು ಆದಾಯವು ₹33,159 ಕೋಟಿ ಕೇಂದ್ರೀಯ ಜಿಎಸ್‌ಟಿ (ಸಿಜಿಎಸ್‌ಟಿ), ₹41,793 ಕೋಟಿ ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) ಮತ್ತು ₹81,939 ಕೋಟಿ ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) ಒಳಗೊಂಡಿದ್ದು ₹36,705 ಕೋಟಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾಗಿದೆ. ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ₹ 857 ಕೋಟಿ ಸೇರಿದಂತೆ ತಿಂಗಳ ಸೆಸ್ ಸಂಗ್ರಹಗಳು ₹ 10,649 ಕೋಟಿ ಆಗಿದೆ.
ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ ₹33,423 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ ₹26,962 ಕೋಟಿ ಇತ್ಯರ್ಥಪಡಿಸಿದೆ. ನಿಯಮಿತ ಇತ್ಯರ್ಥದ ನಂತರ ಏಪ್ರಿಲ್ 2022 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್‌ಟಿಗೆ ₹ 66,582 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ ₹ 68,755 ಕೋಟಿಯಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಮಾರ್ಚ್ 2022 ರಲ್ಲಿ ಒಟ್ಟು ಇ-ವೇ ಬಿಲ್‌ಗಳ ಸಂಖ್ಯೆ 7.7 ಕೋಟಿಯಾಗಿದೆ, ಫೆಬ್ರವರಿ 2022 ರಲ್ಲಿ ಉತ್ಪತ್ತಿಯಾದ 6.8 ಕೋಟಿ ಇ-ವೇ ಬಿಲ್‌ಗಳಿಗಿಂತ ಇದು ಶೇ13 ಹೆಚ್ಚಾಗಿದೆ, ಇದು ವ್ಯಾಪಾರ ಚಟುವಟಿಕೆಯ ವೇಗದ ಚೇತರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅದು ಹೇಳಿದೆ.

ವಾಣಿಜ್ಯ  ವಿಭಾಗದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *