ಜಿನ್ನಾವಾದಿ ಪಕ್ಷ, ಅಖಿಲೇಶ್​ ಅಲಿ ಜಿನ್ನಾ ಸೂಕ್ತವಾದ ಹೆಸರು: ಅಖಿಲೇಶ್​ ಯಾದವ್​ರನ್ನು ವ್ಯಂಗ್ಯ ಮಾಡಿದ ಯುಪಿ ಉಪಮುಖ್ಯಮಂತ್ರಿ | SP chief should change his name to Akhilesh Ali Jinnah says UP DCM Keshav Prasad Maurya


ಜಿನ್ನಾವಾದಿ ಪಕ್ಷ, ಅಖಿಲೇಶ್​ ಅಲಿ ಜಿನ್ನಾ ಸೂಕ್ತವಾದ ಹೆಸರು: ಅಖಿಲೇಶ್​ ಯಾದವ್​ರನ್ನು ವ್ಯಂಗ್ಯ ಮಾಡಿದ ಯುಪಿ ಉಪಮುಖ್ಯಮಂತ್ರಿ

ಕೇಶವ್​ ಪ್ರಸಾದ್ ಮೌರ್ಯ ಮತ್ತು ಅಖಿಲೇಶ್ ಯಾದವ್​

ಲಖನೌ: ಸಮಾಜವಾದಿ ಪಕ್ಷನ ನಾಯಕ ಅಖಿಲೇಶ್​ ಯಾದವ್​​ ತಮ್ಮ ಹೆಸರು ಮತ್ತು ತಮ್ಮ ಪಕ್ಷದ ಹೆಸರನ್ನು ಬದಲಿಸಿಕೊಳ್ಳಬೇಕು ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೇಶವ ಪ್ರಸಾದ್​ ಮೌರ್ಯ ಹೇಳಿದ್ದಾರೆ. ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜವಾದಿ ಪಕ್ಷ ತನ್ನ ಓಲೈಕೆ ರಾಜಕಾರಣಕ್ಕಾಗಿ ಮೊಹಮ್ಮದ್​ ಅಲಿ ಜಿನ್ನಾರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಖಿಲೇಶ್​ ಯಾದವ್​ ತಮ್ಮ ಹೆಸರನ್ನು ಅಖಿಲೇಶ್​ ಅಲಿ ಜಿನ್ನಾ  ಎಂದು ಬದಲಿಸಿಕೊಳ್ಳಲಿ ಮತ್ತು ಪಕ್ಷಕ್ಕೆ ಜಿನ್ನಾವಾದಿ ಪಕ್ಷ ಎಂದು ಮರುನಾಮಕರಣ ಮಾಡಲಿ ಎಂದು ಕೇಶವ್​ ಪ್ರಸಾದ್​ ಮೌರ್ಯ ತಿಳಿಸಿದ್ದಾರೆ. 

ಕೆಲವೇ ದಿನಗಳ ಹಿಂದೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಖಿಲೇಶ್​ ಯಾದವ್​, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೊಹಮ್ಮದ್​ ಅಲಿ ಜಿನ್ನಾ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದರು. ಮಹಾತ್ಮ ಗಾಂಧಿ, ಜವಾಹರ್​ ಲಾಲ್​ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್​​ರೊಂದಿಗೆ ಪಾಕಿಸ್ತಾನ ಸಂಸ್ಥಾಪಕ ಜಿನ್ನಾರ ಹೆಸರನ್ನೂ ಸೇರಿಸಿ ಹೇಳಿದ್ದರು. ಈ ನಾಯಕರು ತಮ್ಮ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲಿಲ್ಲ ಎಂದಿದ್ದರು. ಆದರೆ ಜಿನ್ನಾ ಹೆಸರನ್ನು ತೆಗೆದುಕೊಂಡಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕೂಡ ವ್ಯಂಗ್ಯವಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಅಖಿಲೇಶ್​ ಯಾದವ್​ ಪಕ್ಷ 2022ರ ಚುನಾವಣೆಯಲ್ಲಿ ಸೋಲಲು ಏನೇನು ಬೇಕೋ ಅದನ್ನು ಮಾಡುತ್ತಲೇ ಇದೆ. ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿಕೊಂಡಿದೆ. ಇಲ್ಲಿನ ಜನರಿಗೆ ಮಾಫಿಯಾ ಮತ್ತು ಗೂಂಡಾ ರಾಜ್ಯ ಮತ್ತೆ ಬೇಕಾಗಿಲ್ಲ. ಹಾಗಾಗಿ ಮತ್ತೆ ಬಿಜೆಪಿಯನ್ನೇ ಗೆಲ್ಲಿಸುತ್ತಾರೆ.  ಸಮಾಜವಾದಿ ಪಕ್ಷದ ನಾಯಕನಿಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಜಿನ್ನಾ ಆಗಲಿ,  ಅಟಿಕ್ ಅಹ್ಮದ್​ ಆಗಲಿ ಅಥವಾ ಮುಕ್ತಾರ್​ ಅನ್ಸಾರಿಯಾಗಲೀ ಸಹಾಯ ಮಾಡುವುದಿಲ್ಲ. ನಮ್ಮ ಬಿಜೆಪಿ ಜನರೆದುರು ಯಾವಾಗಲೂ ಪ್ರಾಮಾಣಿಕವಾಗಿ ನಿಂತಿದೆ. ಹಾಗಾಗಿ ನಾವೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ಮೂರು ದುರ್ಗುಣಗಳಿಂದ ದೂರವಿರಬೇಕು, ಚಾಣಕ್ಯ ಹೇಳುವಂತೆ ಅವು ಯಾವುವು?

TV9 Kannada


Leave a Reply

Your email address will not be published. Required fields are marked *