ಜಿನ್ನಾ ಮನಸ್ಥಿತಿಯವರಿಂದ ಉಂಟಾಗುತ್ತಿರುವ ಗಲಭೆಗಳನ್ನು ಸಾವರ್ಕರ್ ಮನಸ್ಥಿತಿಯಿಂದಲೇ ಎದುರಿಸಬೇಕು: ಸಿ.ಟಿ.ರವಿ | BJP Leader C T Ravi Reacted to Hubballi violence


ಜಿನ್ನಾ ಮನಸ್ಥಿತಿಯವರಿಂದ ಉಂಟಾಗುತ್ತಿರುವ ಗಲಭೆಗಳನ್ನು ಸಾವರ್ಕರ್ ಮನಸ್ಥಿತಿಯಿಂದಲೇ ಎದುರಿಸಬೇಕು: ಸಿ.ಟಿ.ರವಿ

ಸಿ.ಟಿ.ರವಿ

ಚಿಕ್ಕಮಗಳೂರು: ಪ್ರಚೋದನಕಾರಿ ವಾಟ್ಸ್​ಆ್ಯಪ್​ ಸ್ಟೇಟಸ್​​ನಿಂದ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಸದ್ಯ ತಕ್ಕಮಟ್ಟಿಗೆ ಶಮನಗೊಂಡಿದೆ. ಈ ಮಧ್ಯೆ ಸ್ಟೇಟಸ್​ ಹಾಕಿದ ಯುವಕ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಇದೇ ಹೊತ್ತಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ಹುಬ್ಬಳ್ಳಿ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿ, ಹುಬ್ಬಳ್ಳಿಯಲ್ಲಾದ ಗಲಾಟೆ ಅಚಾನಕ್​ ಆಗಿ ನಡೆದಿದ್ದಲ್ಲ, ಈ ಘಟನೆಗೂ ಡಿಜೆಹಳ್ಳಿ-ಕೆಜಿಹಳ್ಳಿ ಗಲಾಟೆಗೂ ತುಂಬ ಸಾಮ್ಯತೆ ಇದು ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲೆಡೆ ಗಲಭೆ ಎಬ್ಬಿಸುವ ಷಡ್ಯಂತ ನಡೆಯುತ್ತಿದೆ. ಇದನ್ನು ಇಲ್ಲಿಗೇ ಹತ್ತಿಕ್ಕಬೇಕು ಎಂದೂ ಹೇಳಿದ್ದಾರೆ.  

ನಡೆಯುತ್ತಿರುವ ಗಲಭೆ, ಗಲಾಟೆಗಳಿಗೆ ಕಾರಣವಾಗುತ್ತಿರುವವರು, ಮನಸಿನಲ್ಲಿ ಜಿನ್ನಾರನ್ನು (ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ) ಇಟ್ಟುಕೊಂಡವರು. ಈ ಜಿನ್ನಾ ಮನಸ್ಥಿತಿಗೆ ಹೊಂದಿರುವವರನ್ನು ಗಾಂಧಿ ಮನಸಿನಿಂದ ಎದುರಿಸಲು ಸಾಧ್ಯವೇ ಇಲ್ಲ. ಗಾಂಧಿಮನಸ್ಥಿತಿಯಿಂದ  ಹಿಂದೆ ಇದನ್ನೆಲ್ಲ ಎದುರಿಸಲು ಹೋದಾಗ ಆಗಿದ್ದೇನು? ದೇಶವೇ ವಿಭಜನೆ ಆಯಿತು. 46 ಲಕ್ಷ ಜನರ ಮಾರಣಹೋಮವಾಯಿತು. ಹೀಗಾಗಿ ಜಿನ್ನಾ ಮಾನಸಿಕತೆಯನ್ನು ನಾವು ಸಾವರ್ಕರ್​ ಮನಸಿನಿಂದ ಎದುರಿಸಬೇಕು. ಗಲಭೆ ಹುಟ್ಟುಹಾಕುವುದೇ ಅವರ ದುರುದ್ದೇಶವಾಗಿದ್ದರೆ, ಅದನ್ನು ನಿಯಂತ್ರಿಸಲು ಕಠಿಣ ನಿಯಮಗಳನ್ನು ನಾವು ಕೈಗೊಳ್ಳಬೇಕಾಗುತ್ತದೆ.  ರಾಜ್ಯದಲ್ಲಿ ಮತ್ತೊಮ್ಮೆ ಡಿಜೆ ಹಳ್ಳಿ, ಕೆ.ಜಿಹಳ್ಳಿ ಮಾದರಿಯ ಗಲಭೆ ನಡೆಯಲು ಬಿಡಬಾರದು ಎಂದು ಸಿಟಿ ರವಿ ಹೇಳಿದ್ದಾರೆ.

ಇದೇ ವೇಳೆ ಪಿಎಸ್​ಐ ನೇಮಕಾತಿ ಅಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುವಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಆಗ್ರಹ ಮಾಡಿದ್ದೇನೆ.  ಇದರಲ್ಲಿ ಯಾರೇ ಪಾಲುದಾರರು ಆಗಿರಲಿ, ಕಾಂಗ್ರೆಸ್​-ಬಿಜೆಪಿ ಅಥವಾ ಇನ್ಯಾರೇ ಇದ್ದರೂ ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅಕ್ರಮ ನಡೆಸುವವರು ಕಾಂಗ್ರೆಸ್ ಮುಖವಾಡವನ್ನೂ ಹಾಕ್ತಾರೆ, ಬಿಜೆಪಿ ಮುಖವಾಡವನ್ನೂ ಹಾಕ್ತಾರೆ. ನಮ್ಮ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ. ಯಾರೇ ಪ್ರಭಾವಿಗಳು ಇದ್ದರೂ ಕೂಡ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

TV9 Kannada


Leave a Reply

Your email address will not be published.