-ಕೋವಿಡ್ ಸಂತ್ರಸ್ತ ಮಕ್ಕಳಿಗೆ ಸುತ್ತೂರು ಮಠದಲ್ಲಿ ಉಚಿತ ಶಿಕ್ಷಣ, ಆಶ್ರಯ

ಮೈಸೂರು: ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ಮಾಡುವುದರಿಂದ ಅಲ್ಲಿನ ಸಮಸ್ಯೆ ತಿಳಿಯುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಪೋಸ್ಟ್ ಕೋವಿಡ್ ಸೆಂಟರ್ ಸ್ಥಾಪಿಸುವ ಬಗ್ಗೆ ಸುತ್ತೂರು ಮಠದಲ್ಲಿ ಶ್ರೀಗಳ ಜೊತೆ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿಗಳು, ಡಿ.ಎಚ್.ಒ. ಮುಂತಾದ ಅಧಿಕಾರಿಗಳು ಕೇವಲ ವೀಡಿಯೋ ಕಾನ್ಫರೆನ್ಸ್, ಸಭೆಗಳನ್ನು ಮಾಡಿದರೆ ಸಾಲದು, ಹಳ್ಳಿಗಳಿಗೆ ಹೋಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಅವರು ಹೇಳಿಕೆ ನೀಡಿರುವ ಬಗ್ಗೆ ಪ್ರತ್ರಕರ್ತರು ಕೇಳಿದಾಗ, ಸಂಸದರು ಹೇಳಿರುವುದು ಶೇ. 100 ರಷ್ಟು ಸರಿ ಇದೆ ಜಿಲ್ಲಾಧಿಕಾರಿಯಾಗಲಿ, ಬೇರೆ ಯಾವ ಅಧಿಕಾರಿಗಳಾಗಲಿ ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ, ಅಲ್ಲಿನ ಶಾಸಕರ ಜೊತೆ ಮಾತನಾಡಿದಾಗ ಅಲ್ಲಿನ ಸಮಸ್ಯೆ ತಿಳಿಯುತ್ತದೆ ಎಂದರು.

ಕೋವಿಡ್ ಚಿಕಿತ್ಸೆ ಪಡೆದು ಹೊರಬಂದವರ ಮೇಲೆ ನಿಗಾ ವಹಿಸಲು ಪೋಸ್ಟ್ ಕೋವಿಡ್ ಸೆಂಟರ್ (ಸ್ಟೆಪ್ ಡೌನ್ ಸೆಂಟರ್) ಆರಂಭಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಸುತ್ತೂರು ಮಠದ ಶಾಲೆಗಳು, ಹಾಸ್ಟೆಲ್, ಸಮುದಾಯ ಭವನಗಳನ್ನು ಬಳಸಿಕೊಳ್ಳಲು ಸುತ್ತೂರು ಶ್ರೀಗಳು ಸಹಕಾರ ನೀಡಿದ್ದಾರೆ ಎಂದರು. ಕೋವಿಡ್ ಚಿಕಿತ್ಸೆ ಪಡೆದು ಹೊರಬಂದವರ ಮೇಲೆ ಇನ್ನೂ ಸ್ವಲ್ಪ ದಿನ ನಿಗಾವಹಿಸಬೇಕಾಗುತ್ತದೆ ಹಾಗೂ ಕೆಲವರ ಮನೆಯಲ್ಲಿ ಮಕ್ಕಳಿರುವುದರಿಂದ ಅವರನ್ನು ಪ್ರತ್ಯೇಕವಾಗಿ ಇರಿಸುವ ಸಲುವಾಗಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ತೆರೆಯಬೇಕಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಕೋವಿಡ್ ನಿಂದ ಮೃತಪಟ್ಟ ಪೋಷಕರ ಮಕ್ಕಳು ಶಿಕ್ಷಣದಿಂದ ವಚಿಂತವಾಗಬಾರದು ಹಾಗೂ ಅವರಿಗೆ ಅನಾಥಭಾವ ಮೂಡಬಾರದೆಂಬ ದೃಷ್ಟಿಯಿಂದ ಸುತ್ತೂರು ಸ್ವಾಮೀಜಿಯವರು ಅಂತಹ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸವನ್ನು ಉಚಿತವಾಗಿ ಒದಗಿಸುವುದಾಗಿ ಹೇಳಿದ್ದು, ಇದಕ್ಕಾಗಿ ಶ್ರೀಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮೈಸೂರು, ಚಾಮರಾಜನಗರ, ಕೊಳ್ಳೇಗಾಲ ಸೇರಿದಂತೆ ಇತರೆ ಕಡೆ ಇರುವ ಸುತ್ತೂರು ಮಠದ ಶಾಲೆಗಳನ್ನು ಹಾಗೂ ಹಾಸ್ಟೆಲ್ ಗಳನ್ನು ಬಳಸಿಕೊಳ್ಳಲು ಸೂಚಿಸಿದ್ದು, ಮಠದ ವತಿಯಿಂದ ಊಟದ ವ್ಯವಸ್ಥೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸಲಿದ್ದಾರೆ ಎಂದರು.

ಕೋವಿಡ್ ಪಾಸಿಟಿವ್ ಬಂದು ಗುಣವಾದ ನಂತರ ವಿಶ್ರಾಂತಿ ವ್ಯವಸ್ಥೆಗೆ ಜೆ.ಎಸ್.ಎಸ್ ಸಂಸ್ಥೆಯ ಎಲ್ಲಾ ವಿದ್ಯಾರ್ಥಿ ನಿಲಯಗಳು, ಸಮುದಾಯ ಭವನಗಳನ್ನು ಬಳಸಿಕೊಳ್ಳಲು ಸೂಚಿಸಿದ್ದಾರೆ. ಒಟ್ಟು ಆರು ಸಾವಿರ ಜನರಿಗೆ ವ್ಯವಸ್ಥೆ ಮಾಡ ಬಹುದು. ಇದಕ್ಕೆ ಊಟ ವಸತಿ ಎಲ್ಲಾ ವ್ಯವಸ್ಥೆ ಮಠದಿಂದಲೆ ಮಾಡಿಕೊಡುತ್ತಾರೆ. ಕೋವಿಡ್ ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿಯೂ 6 ಲೋಡ್ ಸೌದೆಗಳನ್ನು ನೀಡಿದ್ದಾರೆ. ಹೀಗೆ ಸ್ವಾಮೀಜಿಯವರು ಸಣ್ಣಪುಟ್ಟ ವಿಷಯಗಳಿಗೂ ಸ್ಪಂದಿಸುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಜಂಗಲ್ ಲಾಡ್ಜಸ್ ಅಧ್ಯಕ್ಷ ಅಪ್ಪಣ್ಣ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಿ.ಬಿ.ನಟೇಶ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ಇತರರು ಹಾಜರಿದ್ದರು.

The post ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಹೋಗಬೇಕು- ಸಂಸದರ ಹೇಳಿಕೆ ಶೇ 100ರಷ್ಟು ಸರಿ ಇದೆ ಎಸ್.ಟಿ.ಸೋಮಶೇಖರ್ appeared first on Public TV.

Source: publictv.in

Source link