ಮಡಿಕೇರಿ: ಕೊಡಗು ಜಿಲ್ಲೆಯ ಇಂದಿನ ಸ್ಥಿತಿ ನೋಡಿದರೆ ಇನ್ನೊಂದು ವಾರ ಲಾಕ್‍ಡೌನ್ ಯಥಾಸ್ಥಿತಿ ಮುಂದುವರಿಸಿದರೆ ಒಳ್ಳೆಯದು. ಜೀವನಕ್ಕಿಂತ ಜೀವ ಮುಖ್ಯ, ಮೊದಲು ಜೀವ ಉಳಿಸಿಕೊಳ್ಳೋಣ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಈಗಿನ ಪರಿಸ್ಥಿತಿ ನೋಡಿದರೆ ಮತ್ತೊಂದು ವಾರ ಲಾಕ್‍ಡೌನ್ ಅಗತ್ಯ ಇದೆ. ನಾಳೆ ಉಸ್ತುವಾರಿ ಸಚಿವರೊಂದಿಗೆ ಸಭೆ ಇದೆ, ಲಾಕ್ ಮುಂದುವರಿಸುವ ಬಗ್ಗೆ ಪ್ರಸ್ತಾಪ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಇನ್ನೊಂದು ವಾರ ಲಾಕ್‍ಡೌನ್ ಮುಂದುವರಿಸಿದರೆ ಒಳ್ಳೆಯದು ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿದೆ ಎಂಬ ನಿರೀಕ್ಷೆ ಇತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಸೋಂಕಿನ ಪ್ರಮಾಣದಲ್ಲಿ ಮತ್ತೆ ತೀವ್ರವಾಗಿ ಹೆಚ್ಚಳವಾಗುತ್ತಿದೆ. ಹೀಗಾಗಿ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಡಳಿತ ಕೂಡ ಇನ್ನಷ್ಟು ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸುವ ಆಶಯ ವ್ಯಕ್ತಪಡಿಸುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಾರ್ಥಮಿಕ ಸಂಪರ್ಕದಿಂದಲೇ ಅತಿ ಹೆಚ್ಚು ಹರಡುತ್ತಿದೆಯಂತೆ. ರಾಜ್ಯದ ಸ್ಥಿತಿಗಿಂತ ಕೊಡಗಿನ ಸ್ಥಿತಿ ಬದಲಾಗಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಇನ್ನೂ ಒಂದುವಾರ ಜಿಲ್ಲೆಯನ್ನು ಲಾಕ್ ಮಾಡುವುದೇ ಉತ್ತಮ ಎಂದು ಬಹುತೇಕರು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕೆಲವು ದಿನಗಳ ಕಾಲ ಸ್ವಲ್ಪ ಪ್ರಮಾಣದಲ್ಲಿ ಆರ್ಭಟ ಕಡಿಮೆ ಮಾಡಿಕೊಂಡಿದ್ದ ಮಹಾಮಾರಿ, ಮತ್ತೆ ರೌದ್ರಾವತಾರ ತಾಳುತ್ತಿದೆ. ಇದನ್ನು ನಿಯಂತ್ರಿಸಲು ಲಾಕ್‍ಡೌನ್ ಮುಂದುವರೆಸುವುದು ಒಳಿತು ಎನ್ನಲಾಗುತ್ತಿದ್ದು, ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಲಾಕ್‍ಡೌನ್ ಬಹುತೇಕ ಮುಂದುವರಿಸುವ ತೀರ್ಮಾನ ಆಗಲಿದೆ.

The post ಜೀವನಕ್ಕಿಂತ ಜೀವ ಮುಖ್ಯ, ಮತ್ತೊಂದು ವಾರ ಕೊಡಗು ಲಾಕ್ ಮಾಡುವುದು ಸೂಕ್ತ: ಕೆ.ಜಿ.ಬೋಪಯ್ಯ appeared first on Public TV.

Source: publictv.in

Source link