ಬೆಂಗಳೂರು: ನಗರದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದ ನಕಲಿ ರೆಮ್ಡಿಸಿವರ್ ಜಾಲವನ್ನು ಭೇದಿಸಲು ಪೊಲೀಸರು ಯಶಸ್ವಿಯಾಗಿದ್ದು, ನಕಲಿ ರೆಮ್ಡಿಸಿವರ್ ಮಾರಾಟ ಮಾಡುತ್ತಿದ್ದ ಡಾಕ್ಟರ್ ಸೇರಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಡಾ.ಸಾಗರ್, ವಾರ್ಡ್ ಬಾಯ್ ಕೃಷ್ಣ ಎಂಬ ಆರೋಪಿಗಳನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಎರಡು ರೀತಿ ರೆಮ್ಡಿಸಿವರ್ ಮಾರಾಟ ದಂಧೆಯನ್ನು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ವೈದ್ಯ ಸಾಗರ್, ಹೊಸೂರು ರಸ್ತೆಯ ಮಾತೃ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಈತನೊಂದಿಗೆ ಆಸ್ಪತ್ರೆಯ ವಾರ್ಡ್ ಬಾಯ್ ಕೃಷ್ಣ ಕೂಡ ವೈದ್ಯರಿಗೆ ನೆರವು ನೀಡುತ್ತಿದ್ದ ಎನ್ನಲಾಗಿದೆ. ಬಂಧಿತ ಆರೋಪಿಗಳಿಬ್ಬರು ಎರಡು ರೀತಿಯಲ್ಲಿ ಜನರಿಗೆ ಮೋಸ ಮಾಡುತ್ತಿದ್ದರು.

ಮೊದಲು ಸರ್ಕಾರದಿಂದ ರೋಗಿಯ ಹೆಸರಲ್ಲಿ ರೆಮ್ಡಿಸಿವರ್ ತರುತ್ತಿದ್ದ ಆರೋಪಿಗಳು, ಅವುಗಳಲ್ಲಿ ಅರ್ಧದಷ್ಟು ರೋಗಿಗಳಿಗೆ ನೀಡಿ ಉಳಿದ ಔಷಧಿಯನ್ನು ಬ್ಲಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಅಲ್ಲದೇ ರೆಮ್ಡಿಸಿವರ್ ಖಾಲಿ ಔಷಧಿ ಬಾಟಲಿಗಳನ್ನು ಸಂಗ್ರಹಿಸಿ ಅವುಗಳಲ್ಲಿ ಗ್ಲೂಕೋಸ್ ತುಂಬಿ ನಕಲು ರೆಮ್ಡಿಸಿವರ್ ತಯಾರಿಸಿ ಮಾರಾಟ ಮಾಡುತ್ತಿದ್ದರು ಅನ್ನೋ ಆರೋಪ ಕೇಳಿಬಂದಿದೆ.

ಎರಡು ಸಂದರ್ಭಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು. ಇದುವರೆಗೂ ಹಲವರಿಗೆ ನಕಲಿ ರೆಮ್ಡಿಸಿವರ್ ಮಾರಾಟ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ.

ಮೊದಲಿಗೆ ಬ್ಲಾಕ್ ಮಾರ್ಕೆಟ್‍ನಲ್ಲಿ ರೆಮ್ಡಿಸಿವರ್ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಜಯ್ ನಗರ ಪೊಲೀಸರಿಗೆ ತಿಳಿದು ಬಂದಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮುನಿರಾಜು ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಆತ ಕೃಷ್ಣ ಎಂಬಾತನಿಂದ ರೆಮ್ಡಿಸಿವರ್ ಪಡೆಯುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದ. ಆ ಬಳಿಕ ಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆತ ಮಾತೃ ಅಸ್ಪತ್ರೆಯ ಐಸಿಯೂ ವಾರ್ಡ್‍ನಲ್ಲಿ ವಾರ್ಡ್ ಬಾಯ್ ಎಂಬುದು ತಿಳಿದುಬಂದಿತ್ತು.

ಅಲ್ಲದೇ ವೈದ್ಯ ಡಾ.ಸಾಗರ್ ದಂಧೆಯ ಕಿಂಗ್‍ಪಿನ್ ಎಂದು ತಿಳಿದು ಆರೋಪಿಗಳನ್ನು ಬಂಧಿಸಿದ್ದರು. ಅಂದಹಾಗೆ, ಮೂವರು ಈ ಹಿಂದೆ ಒಂದೇ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ನಡುವೆ ಕೊರೊನಾ ಸಂಕಷ್ಟವನ್ನೇ ಉಪಯೋಗಿಸಿಕೊಂಡು ಹಣ ಮಾಡಲು ಮುಂದಾಗಿದ್ದರು. ಸದ್ಯ ಪ್ರಕರಣದ ಹೆಚ್ಚಿನ ವಿಚಾರಣೆ ಮುಂದುವರಿಸಿರುವ ಪೊಲೀಸರು ಆರೋಪಿಗಳು ಯಾರು ಯಾರಿಗೆ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಂಜಯ್ ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಜೆ.ಸಿ ನಗರ ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ಸಂಜಯ್ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

The post ಜೀವ ಉಳಿಸಬೇಕಾಗಿದ್ದ ವೈದ್ಯನಿಂದಲೇ ನಕಲಿ ರೆಮ್ಡಿಸಿವರ್ ದಂಧೆ; ಮೂವರು ಅರೆಸ್ಟ್ appeared first on News First Kannada.

Source: newsfirstlive.com

Source link