ಮಡಿಕೇರಿ: ಜೂನ್ ಮೊದಲ ವಾರದಲ್ಲಿ ಕೊಡಗು ಜಿಲ್ಲೆಯಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಬಳಿಕ ಮಾತನಾಡಿದ ಅವರು, ಮುಂಗಾರು ಸಂದರ್ಭದಲ್ಲಿ ಸಂಭವಿಸಬಹುದಾದ ಹಾನಿ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ತಾಲೂಕುವಾರು ಪ್ರತ್ಯೇಕವಾಗಿ ಸಭೆ ನಡೆಸಿರು.

ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಮಳೆ ಹಾನಿ ತಡೆಯುವ ನಿಟ್ಟಿನಲ್ಲಿ ಮುಂಚಿತವಾಗಿ, ಲಿಖಿತವಾಗಿ ಕುಟುಂಬಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಕಂದಾಯ, ಪೊಲೀಸ್, ಪಂಚಾಯತ್ ರಾಜ್, ಅರಣ್ಯ, ಸೆಸ್ಕ್, ಲೋಕೋಪಯೋಗಿ ಹೀಗೆ ಹಲವು ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮಳೆ ಹಾನಿ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಸೂಚಿಸಿದರು.

ಸೂಕ್ಷ್ಮ ಪ್ರದೇಶಗಳಲ್ಲಿನ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವುದು. ಸ್ಥಳೀಯ ಮಟ್ಟದಲ್ಲಿ ಟಾಸ್ಕ್‍ಪೊರ್ಸ್ ಸಮಿತಿ ಸಭೆ ನಡೆಸಿ, ಸೂಕ್ಷ್ಮ ಪ್ರದೇಶಗಳಿಗೆ ಎನ್‍ಡಿಆರೆಫ್ ತಂಡ ಭೇಟಿ ನೀಡುವುದು, ಪರಿಹಾರ ಕೇಂದ್ರ ಅಗತ್ಯವಿದ್ದಲ್ಲಿ ತೆರೆಯುವುದು. ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ರಸ್ತೆ, ಸೇತುವೆ, ಮನೆ ಹಾನಿ ಬಗ್ಗೆ ಫೋಟೋ ಸಹಿತ ತಕ್ಷಣವೇ ಮಾಹಿತಿ ನೀಡುವುದು. ಭೂ ಕುಸಿತ ಉಂಟಾದಲ್ಲಿ ಹಾಗೂ ರಸ್ತೆ ಅಥವಾ ವಿದ್ಯತ್ ತಂತಿ ಮೇಲೆ ಮರ ಬಿದ್ದಲ್ಲಿ ತಕ್ಷಣವೇ ತೆರವುಗೊಳಿಸುವ ಕಾರ್ಯ ಮಾಡಬೇಕು ಎಂದರು.

ತಹಶೀಲ್ದಾರ್ ಗೋವಿಂದರಾಜು ಮಾಹಿತಿ ನೀಡಿ, ಮುಂಗಾರು ಸಂಬಂಧ ಸೋಮವಾರಪೇಟೆ ತಾಲೂಕಿನಲ್ಲಿ ಅಗತ್ಯ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೂಕ್ಷ್ಮ ಪ್ರದೇಶಗಳ 775 ಕುಟುಂಬಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಕುಶಾಲನಗರ ನೆಲ್ಯಹುದಿಕೇರಿ, ಮಾದಾಪುರ, ಗರ್ವಾಲೆ, ಸೂರ್ಲಬಿ ಮತ್ತಿತ್ತರ ಕಡೆಯಲ್ಲಿ ಪ್ರವಾಹ ಉಂಟಾಗಲಿದ್ದು, ಈ ಪ್ರದೇಶದಲ್ಲಿನ ಜನರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಪರಿಹಾರ ಕೇಂದ್ರ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭಾರೀ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ ಸೀಮೆಎಣ್ಣೆ ಪೂರೈಸಬೇಕಿದೆ ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದರು.

The post ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭ, ಮುನ್ನೆಚ್ಚರಿಕೆ ವಹಿಸಿ- ಅಧಿಕಾರಿಗಳಿಗೆ ಕೊಡಗು ಡಿಸಿ ಸೂಚನೆ appeared first on Public TV.

Source: publictv.in

Source link