ಕರ್ನಾಟಕದಲ್ಲಿ ಕೊರೊನಾ ಕಂಟ್ರೋಲ್ ಮಾಡಲು ಲಾಕ್​​ಡೌನ್ ವಿಸ್ತರಣೆ ಮಾಡಲಾಗಿದೆ. ಜೂನ್ 7ರವರೆಗೆ ಇದ್ದ ಲಾಕ್​​ಡೌನ್ ನಿಯಮಗಳನ್ನ ಜೂನ್ 14ರವರೆಗೆ ವಿಸ್ತರಿಸಲಾಗಿದೆ. ತಜ್ಞರ ಸಲಹೆಯಂತೆ ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಕೆಲವೊಂದು ವಿನಾಯ್ತಿ ಬಿಟ್ಟರೆ ಉಳಿದಂತೆ ಈಗಿರುವ ನಿಯಮಗಳೇ ಜಾರಿಯಲ್ಲಿರಲಿವೆ. ಆದರೆ, ಜೂನ್ 14ಕ್ಕೆ ಲಾಕ್​​ಡೌನ್​ಗೆ ತೆರೆ ಬೀಳುತ್ತಾ, ಎಲ್ಲಾ ನಿರ್ಬಂಧಗಳೂ ತೆರವಾಗುತ್ತಾ? ಹೀಗಂತ ಕೇಳಿದ್ರೆ ಇನ್ನೂ ಸ್ಪಷ್ಟ ಉತ್ತರ ಕೊಡೋಕೆ ಯಾರಿಂದಲೂ ಸಾಧ್ಯ ಆಗ್ತಾ ಇಲ್ಲ. ಕಾರಣ ಕೊರೊನಾ ಏರಿಳಿತ. ರಾಜ್ಯದಲ್ಲಿನ ಕೊರೊನಾ ಸ್ಥಿತಿ ಗತಿ.

ಜೂನ್ 14ರ ಹೊತ್ತಿಗೆ ಕೊರೊನಾ ಕಂಟ್ರೋಲ್ ಆಗುತ್ತಾ?
10 ದಿನಗಳ ಅವಧಿಯಲ್ಲಿ ರಾಜ್ಯದ ಪರಿಸ್ಥಿತಿ ಸುಧಾರಿಸುತ್ತಾ?

ಈಗ ಕಾಡ್ತಾ ಇರುವ ಪ್ರಶ್ನೆ ಅಂದ್ರೆ ಮುಂದಿನ 10 ದಿನಗಳಲ್ಲಿ ಕೊರೊನಾ ಕಂಟ್ರೋಲ್ ಆಗುತ್ತಾ? ಕಳೆದ ಹಲವು ದಿನಗಳಿಂದ ಜಾರಿಯಲ್ಲಿರುವ ಲಾಕ್​​ಡೌನ್​ನಿಂದಾಗಿ ಕೊರೊನಾ ಗಮನಾರ್ಹ ಪ್ರಮಾಣದಲ್ಲಿ ಕಂಟ್ರೋಲ್ ಆಗಿದೆ. ಆದ್ರೆ, ಇನ್ನು ಹತ್ತೇ ದಿನಗಳಲ್ಲಿ ಕೊರೊನಾ ಫುಲ್ ಕಂಟ್ರೋಲ್ ಆಗಿ ಬಿಡುತ್ತೆ ಅಂತ ಹೇಳೋಕೆ ಸಾಧ್ಯಾನೇ ಇಲ್ಲ. ಕಾರಣ ಈಗ ಬರ್ತಾ ಇರುವ ಹೊಸ ಕೇಸ್​ಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಇದು ಅಸಾಧ್ಯ ಎನಿಸುತ್ತಿದೆ. ರಾಜ್ಯದಲ್ಲಿ ಪ್ರತಿನಿತ್ಯ 15 ಸಾವಿರದ ಆಸು ಪಾಸು ಹೊಸ ಕೇಸ್​ಗಳು ದಾಖಲಾಗ್ತಾ ಇದ್ದಾವೆ. ಇದು ಸಾವಿರಕ್ಕೋ ಎರಡು ಸಾವಿರಕ್ಕೋ ಇಳಿಯೋದು ಯಾವಾಗ ಅಂತ ಹೇಳೋದು ತುಂಬಾ ಕಷ್ಟ.

ರಾಜ್ಯದಲ್ಲಿ ಹಾಲಿ 2,86,798ರ ಆಸು ಪಾಸಿನಲ್ಲಿ ಸಕ್ರಿಯ ಕೇಸ್
ಈಗ ಬರ್ತಾ ಇರುವ ಹೊಸ ಕೇಸ್​ಗಳನ್ನು ಗಮನಿಸಿದರೆ ಇನ್ನು ಹತ್ತು ದಿನಗಳಲ್ಲಿ ಕೊರೊನಾ ಕಂಟ್ರೋಲ್ ಆಗೋದು ಕಷ್ಟ ಅಂತಾನೇ ಹೇಳಬಹುದು. ಕಾರಣ ಸದ್ಯಕ್ಕೆ 15 ಸಾವಿರದ ಆಸು ಪಾಸಿನ ಸಂಖ್ಯೆಯಲ್ಲಿ ನಿತ್ಯ ಹೊಸ ಕೇಸ್​ಗಳು ದಾಖಲಾಗ್ತಾ ಇದ್ದಾವೆ. ನಿತ್ಯ ಒಂದು ಸಾವಿರದಷ್ಟು ಕೇಸ್ ಇಳಿಕೆ ಕಂಡರೂ ಹತ್ತು ದಿನಗಳಲ್ಲಿ ರಾಜ್ಯದಲ್ಲಿನ ನಿತ್ಯದ ಕೇಸ್​ಗಳು 5 ಸಾವಿರಕ್ಕೆ ಬಂದು ಇಳಿಯಬಹುದು. ಹಾಲಿ ಡಿಸ್ಚಾರ್ಜ್ ಆಗುತ್ತಿರುವ ಗುಣಮುಖರ ಸಂಖ್ಯೆ ಹೆಚ್ಚಾಗಿರೋದ್ರಿಂದ ಸಕ್ರಿಯ ಪ್ರಕರಣಗಳು ಕಡಿಮೆ ಆಗಬಹುದು. ಈಗ ಹತ್ತಿರ ಹತ್ತಿರ 2 ಲಕ್ಷದ 86 ಸಾವಿರದ ಆಸು ಪಾಸಿನಲ್ಲಿದೆ ಸಕ್ರಿಯ ಪ್ರಕರಣಗಳ ಸಂಖ್ಯೆ. ಇದು ಹತ್ತು ಇಪ್ಪತ್ತೋ ಸಾವಿರಕ್ಕಾದರೂ ಬರಬೇಕಾದರೆ ನಿತ್ಯ 20 ರಿಂದ 30 ಸಾವಿರದಷ್ಟು ಸೋಂಕಿತರು ಗುಣಮುಖರಾಗಬೇಕು. ಇದು ಸಾಧ್ಯಾನಾ ಅಂತ ಕೇಳಿದ್ರೆ ನಿಖರವಾಗಿ ಹೇಳೋದಕ್ಕೆ ಕಷ್ಟ. ಪರಿಸ್ಥಿತಿ ಹೀಗಿದ್ದಾಗ ಹತ್ತೇ ದಿನಗಳಲ್ಲಿ ಕೊರೊನಾ ರಾಜ್ಯದಲ್ಲಿ ಕಂಟ್ರೋಲ್ ಆಗಿ ಪರಿಸ್ಥಿತಿ ಸುಧಾರಿಸುತ್ತೆ ಅಂತ ನಿರೀಕ್ಷೆ ಇಟ್ಟುಕೊಳ್ಳುವುದು ಹೇಗೆ?

ಬೆಂಗಳೂರಿನಲ್ಲಿ ಇಳಿಮುಖವಾದ ಕೊರೊನಾ
ರಾಜಧಾನಿ ಬೆಂಗಳೂರು ಮೊದಲು ಕ್ಲೋಸ್​​ಡೌನ್ ಆಗಿತ್ತು. ಇದೀಗ ಲಾಕ್​ಡೌನ್ ಆಗಿ ಇಲ್ಲೂ ಬಹಳ ದಿನ ಆಗಿ ಹೋಯ್ತು. ಜೂನ್ 14ರವರೆಗೆ ಬೆಂಗಳೂರಿನಲ್ಲೂ ಕೆಲವು ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಸಮೂಹ ಸಾರಿಗೆಯೂ ಕೂಡ ಇರಲ್ಲ. ಹಾಲಿ ಲಾಕ್​ಡೌನ್​ನಿಂದ ರಾಜಧಾನಿ ಬೆಂಗಳೂರು ಸಾಕಷ್ಟು ಚೇತರಿಸಿಕೊಂಡಿದೆ. ಬೆಂಗಳೂರು ನಗರವನ್ನು ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದ್ರೆ ಕಡಿಮೆ ಕೇಸ್​​ಗಳೇ ಬರ್ತಾ ಇವೆ. ನಿತ್ಯ 3 ಸಾವಿರದ ಆಸುಪಾಸಿನಲ್ಲಿರುತ್ತವೆ ಹೊಸ ಕೇಸ್​ಗಳ ಸಂಖ್ಯೆ. ಆದರೆ, ರಾಜಧಾನಿಯಲ್ಲಿ ಇನ್ನೂ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಇವರೆಲ್ಲ ಗುಣಮುಖರಾಗದ ಹೊರತು ಬೆಂಗಳೂರಿನಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸುವುದಿಲ್ಲ. ಆದ್ರೆ ನಿತ್ಯ 7ರಿಂದ 8 ಸಾವಿರ ಜನ ಗುಣಮುಖರಾಗಿ ಡಿಸ್ಟಾರ್ಜ್ ಆದರೂ ಹತ್ತು ದಿನಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 25 ರಿಂದ 50 ಸಾವಿರಕ್ಕೆ ಇಳಿಯೋದು ಕಷ್ಟ. ಹೀಗಿದ್ದಾಗ ಜೂನ್ 14ರವರೆಗೆ ಮಾತ್ರ ಲಾಕ್​​ಡೌನ್ ಮಾಡಿ ಬಳಿಕ ಓಪನ್ ಮಾಡಿದ್ರೆ ಮತ್ತೆ ಕೇಸ್ ಹೆಚ್ಚಾಗುವ ಸಾಧ್ಯತೆ ಇದ್ಯಾ? ಅನ್ನೋ ಕಳವಳ ಮೂಡಿದೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಡಿಮೆ ಆಗ್ತಿಲ್ಲ ಹೊಸ ಕೇಸ್
ಬೆಂಗಳೂರು ಬಿಟ್ಟರೆ ರಾಜ್ಯದ ನಾಲ್ಕೈದು ಜಿಲ್ಲೆಗಳಲ್ಲಿ ಈಗಲೂ ನಿತ್ಯ ಗರಿಷ್ಠ ಸಂಖ್ಯೆಯ ಕೇಸ್​ಗಳು ದಾಖಲಾಗ್ತಾನೇ ಇದ್ದಾವೆ. ಅದರಲ್ಲೂ ಮೈಸೂರು, ಹಾಸನ, ಬೆಳಗಾವಿ, ಬಳ್ಳಾರಿ, ತುಮಕೂರು, ಬೆಂಗಳೂರು ಗ್ರಾಮಾಂತರ ಹೀಗೆ ನಾಲ್ಕೈದು ಜಿಲ್ಲೆಗಳಲ್ಲಿ ಸಾವಿರದ ಆಸು ಪಾಸಿನಲ್ಲಿ ಹೊಸ ಕೇಸ್ ಗಳು ದಾಖಲಾಗ್ತಾ ಇದ್ದಾವೆ. ಇನ್ನು ಜಿಲ್ಲೆಗಳಲ್ಲೂ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ರಾಜ್ಯದಲ್ಲಿ ಹಾಲಿ ಇರುವ ಸಕ್ರಿಯ ಪ್ರಕರಣಗಳಲ್ಲಿ ಅರ್ಧ ಬೆಂಗಳೂರಿನಲ್ಲಿದ್ದರೆ ಇನ್ನರ್ಧ ಜಿಲ್ಲೆಗಳಲ್ಲಿವೆ. ಹೀಗಾಗಿ ಜಿಲ್ಲೆಗಳ ಪರಿಸ್ಥಿತಿಯೂ ಸುಧಾರಿಸಬೇಕಾಗಿದೆ. ಆದ್ರೆ 10 ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವುದು ತೀರಾ ಕಷ್ಟ. ಕಾರಣ ಈಗ ದಾಖಲಾಗ್ತಾ ಇರುವ ಸಾವಿರ ಸಾವಿರ ಸೋಂಕಿತರು ಗುಣಮುಖರಾಗಲು ಕನಿಷ್ಠ 14 ದಿನಗಳು ಬೇಕು. ಹೀಗಾಗಿ ಇವರೆಲ್ಲ ಗುಣಮುಖರಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆ ಆಗುವುದು ಒಂದು ಕಡೆ ಆದ್ರೆ, ಇನ್ನೊಂದು ಕಡೆಗೆ ನಿತ್ಯ ಬರ್ತಾ ಇರುವ ಹೊಸ ಕೇಸ್ ಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ತಗ್ಗಬೇಕಾಗಿದೆ.

ಜೂನ್ 14ರಂದೇ ಲಾಕ್ ಡೌನ್ ಎಂಡ್ ಆದ್ರೆ ಏನಾಗುತ್ತೆ?
ಹಾಲಿ ಸರ್ಕಾರ ಕೈಗೊಂಡಿರುವ ನಿರ್ಧಾರದಂತೆ ಜೂನ್ 14ರವರೆಗೆ ಲಾಕ್​ಡೌನ್ ವಿಸ್ತರಣೆ ಆಗಿದೆ. ಆದ್ರೆ ಸದ್ಯದ ಪರಿಸ್ಥಿತಿಯನ್ನ ಅವಲೋಕಿಸಿದರೆ ಇನ್ನುಳಿದ 10 ದಿನಗಳಲ್ಲಿ ಕೊರೊನಾ ಕಂಟ್ರೋಲ್ ಆಗೋದು ತೀರಾ ಕಷ್ಟ. ಸರ್ಕಾರ ಮುಂದೇನು ಮಾಡಬಹುದು ಅಂತ ಕೇಳಿದ್ರೆ ಈಗಂತೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬಹುಶಃ ಈಗ ಲಾಕ್ಡೌನ್ ಅವಧಿ ವಿಸ್ತರಿಸಿದಂತೆಯೇ ಮುಂದೆಯೂ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಪ್ರಕಟಿಸಬಹುದು. ಆದ್ರೆ ತಜ್ಞರು ಹೇಳುವ ಪ್ರಕಾರ ಪರಿಸ್ಥಿತಿ ಸುಧಾರಿಸೋದಕ್ಕೆ ಜೂನ್ ತಿಂಗಳ ಕೊನೆಯವರೆಗೂ ಬೇಕಾಗುತ್ತದೆ. ಅಂದರೆ ಇನ್ನು ಕನಿಷ್ಠ 24 ದಿನಗಳು ಎಲ್ಲರೂ ತಾಳ್ಮೆಯಿಂದ ಕಾಯಬೇಕಾಗಿದೆ. ಒಮ್ಮೆಲೆ ಜೂನ್ 14 ರಂದು ಲಾಕ್ ಡೌನ್ ಓಪನ್ ಮಾಡಿದರೆ, ಸಕ್ರಿಯ ಪ್ರಕರಣಗಳು ಹೆಚ್ಚಿರುವಾಗ ಮತ್ತೆ ಹೊಸ ಕೇಸ್ ಗಳು ಏರುಗತಿ ಕಂಡರೂ ಆಶ್ಚರ್ಯವಿಲ್ಲ. ಇನ್ನು ಜನ ಒಮ್ಮೆಲೆ ಹೊರಗೆ ಬಂದು ಮತ್ತೆ ಜನಸಂದಣಿ ಶುರುವಾದರೆ ಹರಡುವಿಕೆಯ ಪ್ರಮಾಣವೂ ಹೆಚ್ಚಬಹುದು. ಹೀಗಾಗಿ ಒಮ್ಮೆಲೆ ದಿಢೀರ್ ಲಾಕ್ ಡೌನ್ ತೆರವು ಮಾಡುವ ತೀರ್ಮಾನ ಕೈಗೊಳ್ಳುವುದು ಸುಲಭವಲ್ಲ.

ದಿಢೀರ್ ಲಾಕ್ ಓಪನ್ ಮಾಡಿ ಬಿಟ್ರೆ ಮತ್ತೆ ಸಮಸ್ಯೆನಾ?
ಕಳೆದ ವರ್ಷವು ಕೊರೊನಾ ಪಾಠ ಕಲಿಸಿದೆ. ಲಾಕ್​​ಡೌನ್ ಓಪನ್ ಆದ ಮೇಲೂ ಹರಡುವಿಕೆ ಹೆಚ್ಚಾಗಿತ್ತು. ಆದ್ರೆ ಎರಡನೇ ಅಲೆಯಂತೆ ಆಘಾತ ತಂದಿರಲಿಲ್ಲ. ಸಾವನ್ನಪ್ಪುವವರ ಪ್ರಮಾಣ ಕಡಿಮೆ ಇತ್ತು. ಹೀಗಾಗಿ ಈ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷ ಕೊರೊನಾ ಅಷ್ಟೇನೂ ಬಾಧಿಸಲಿಲ್ಲ ಅಂತಾನೇ ಹೇಳಬಹುದು. ಆದ್ರೆ ಈ ವರ್ಷ ಡೆಲ್ಲಿಯಿಂದ ಹಿಡಿದು ಹಳ್ಳಿಯವರೆಗೆ ಎಲ್ಲಿ ನೋಡಿದರೂ ಕೊರೊನಾ ಹೆಚ್ಚಾಗಿಯೇ ಹರಡಿದೆ. ಹೀಗಾಗಿ ಕಳೆದ ವರ್ಷದಂತೆ ಕಂಟ್ರೋಲ್ ಮಾಡೋದು ಕೂಡ ಸುಲಭ ಅಲ್ಲ. ಈಗ ಮಾಡಿರುವ ಲಾಕ್ಡೌನ್ ಒಮ್ಮೆಲೆ ತೆರವು ಮಾಡಿ ಬಿಟ್ಟರೆ ಮತ್ತೆ ಜನರ ಓಡಾಟ ಶುರುವಾಗುತ್ತೆ. ಹಳ್ಳಿಗಳಿಂದ ಸಹಜವಾಗಿ ಲಕ್ಷಾಂತರ ಜನ ನಗರಗಳಿಗೆ ಹೊರಟುಬರುತ್ತಾರೆ. ನಗರಗಳಿಂದ ಹಳ್ಳಿಗಳಿಗೆ, ಹಳ್ಳಿಗಳಿಂದ ನಗರಗಳಿಗೆ ಓಡಾಟ ಹೆಚ್ಚಾಗಿ ಮತ್ತೆ ಕೊರೊನಾ ಹೆಚ್ಚಾಗಿ ಹರಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ಒಮ್ಮೆ ಜನರ ಓಡಾಟ ಶುರುವಾದ್ರೆ ಮತ್ತೆ ಕಂಟ್ರೋಲ್ ಮಾಡಬೇಕು ಅಂದ್ರೆ ಲಾಕ್ಡೌನ್ ವಿಧಿಸೋದೇ ದಾರಿ. ಹೀಗಾಗಿ ದಿಢೀರ್ ಅಂತ ಸರ್ಕಾರ ಲಾಕ್ಡೌನ್ ತೆರವು ಮಾಡಲ್ಲ ಅನಿಸ್ತಾ ಇದೆ. ಒಂದೊಂದಾಗಿ ನಿರ್ಬಂಧಗಳನ್ನು ಸಡಿಲಿಕೆ ಮಾಡ್ತಾ ಹೋಗಬಹುದು. ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಏನೇ ನಿರ್ಧಾರ ಕೈಗೊಳ್ಳಬೇಕಾದರೂ ಬಹಳ ಸೂಕ್ಷ್ಮವಾಗಿ ಅವಲೋಕಿಸಲೇಬೇಕು.

ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗುತ್ತಾ, ಪರಿಹಾರವೇನು?
ಕ್ಲೋಸ್​​ಡೌನ್, ಲಾಕ್​​ಡೌನ್ ನಿಂದ ಈಗಾಗಲೇ ಆರ್ಥಿಕ ಸಂಕಷ್ಟ ಎದುರಾಗಿದೆ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕ ಕಾರ್ಖಾನೆಗಳು ಉತ್ಪಾದನೆ ಸ್ಥಗಿತ ಮಾಡಿದ್ದರಿಂದ ಚೇತರಿಸಿಕೊಳ್ಳೋದು ಬಹಳ ಕಷ್ಟ. ಮಹಾನಗರಗಳಿಂದ ವಲಸೆ ಹೋಗಿರುವ ಲಕ್ಷಾಂತರ ಮಂದಿಗೆ ಇನ್ನೂ ಯಾವುದೇ ಉದ್ಯೋಗ ಇಲ್ಲ. ಅವರೆಲ್ಲರೂ ಇನ್ನೊಂದು ತಿಂಗಳು ಕಾಯಲೇಬೇಕು ಅಂದ್ರೆ ತುಂಬಾ ಕಷ್ಟ. ಸರ್ಕಾರ ಒಂದಿಷ್ಟು ಪರಿಹಾರ ಪ್ಯಾಕೇಜ್ ಪ್ರಕಟಿಸಿದೆಯಾದರೂ ಇದೆಲ್ಲ ಒಂದೆರಡು ದಿನಗಳ ಲೆಕ್ಕ. ಆದರೆ, ಬದುಕು ಕಟ್ಟಿಕೊಳ್ಳುವುದು ದೊಡ್ಡ ಸವಾಲೇ ಆಗಲಿದೆ. ದೆಹಲಿ, ಮುಂಬೈ, ಬೆಂಗಳೂರು ಬಂದ್ ಆಗಿ ಹೆಚ್ಚು ಕಡಿಮೆ ತಿಂಗಳಾಗುತ್ತ ಬಂದಿದೆ. ಇನ್ನೂ ಒಂದು ತಿಂಗಳು ಮಹಾನಗರಗಳೆಲ್ಲ ಸ್ತಬ್ಧವಾಗಿ ಬಿಟ್ರೆ ಇನ್ನಷ್ಟು ಜನರು ಸಂಕಷ್ಟಕ್ಕೊಳಗಾಗಲಿದ್ದಾರೆ. ಈಗಾಗಲೇ ಜನ ಸಾಮಾನ್ಯರ ಬದುಕು ದುಸ್ತರವಾಗಿ ಬಿಟ್ಟಿದೆ. ಕೈಗಾರಿಕಾ ವಲಯದ ಅಪಾರವಾದ ನಷ್ಟ ಅನುಭವಿಸ್ತಾ ಇದೆ. ವಿವಿಧ ಕ್ಷೇತ್ರಗಳಲ್ಲಿ ಆಗ್ತಾ ಇರುವ ನಷ್ಟ ಭರಿಸೋಕೇ ಬೇರೆ ಯಾವುದೇ ದಾರಿಯೂ ಕಾಣ್ತಾ ಇಲ್ಲ. ರೈತರು ಬೆಳೆಯುವ ಬೆಳೆಗಳೂ ಹಾಳಾಗ್ತಾ ಇವೆ. ಸರ್ಕಾರಕ್ಕೂ ಆದಾಯದ ಕೊರತೆ ಆಗೋದು ಸಹಜ. ಇನ್ನೊಂದು ತಿಂಗಳು ಲಾಕ್ ಡೌನ್ ಕಂಟಿನ್ಯೂ ಆಗಿ ಬಿಟ್ಟರೆ ಅದೆಷ್ಟು ನಷ್ಟವಾಗುತ್ತೆ ಅಂತ ಈಗಲೇ ಅಂದಾಜು ಮಾಡೋದು ಕಷ್ಟ.

ಮೂರನೇ ಅಲೆ ಬರದಂತೆಯೂ ತಡೆಯುವ ಸವಾಲು
ಸದ್ಯಕ್ಕೆ ಇರುವ ಸವಾಲು ಹಾಲಿ ಇರುವ ಎರಡನೇ ಅಲೆಯನ್ನು ಕಂಟ್ರೋಲ್ ಮಾಡೋದು. ಇದು ಕಂಟ್ರೋಲ್ ಆದ ಮೇಲೆ ಮುಂದಿರುವ ಸವಾಲು ಮೂರನೆಯ ಅಲೆ. ಅದನ್ನು ಬರದಂತೆ ತಡೆಯೋಕೆ ಈಗಿನಿಂದಲೇ ಹಲವಾರು ರೀತಿಯ ಪ್ಲಾನ್ ಮಾಡಿಕೊಳ್ಳಲಾಗ್ತಾ ಇದೆ. ಆದರೆ, ಇದೇನಿದ್ದರೂ ಎರಡನೇ ಅಲೆ ಕಂಟ್ರೋಲ್ ಮಾಡಿದ ಮೇಲಿನ ಮಾತು. ಹಾಲಿ ಇರುವ ಪರಿಸ್ಥಿತಿ ನೋಡಿದ್ರೆ ಎರಡನೇ ಅಲೆ ಕಂಪ್ಲೀಟ್ ಆಗಿ ಕಂಟ್ರೋಲ್ ಆಗಿಬಿಟ್ರೆ ಮುಂದೆ ಇನ್ನೊಂದಿಷ್ಟು ಕಾರ್ಯತಂತ್ರಗಳನ್ನು ರೂಪಿಸಬಹುದು. ಈಗಿರುವ ಸದ್ಯದ ಪರಿಸ್ಥಿತಿಯಲ್ಲಿ ಎರಡನೇ ಅಲೆಯಿಂದ ಮೊದಲು ಪಾರಾಗಬೇಕು. ಬಳಿಕ ಮೂರನೇ ಅಲೆ ಅಪ್ಪಳಿಸದಂತೆ ನಿಗಾ ವಹಿಸಬೇಕು. ಎರಡನೇ ಅಲೆ ತಡೆಯೋದು ಒಂದು ಕಡೆ ಸವಾಲಾದರೆ ಮೂರನೇ ಅಲೆ ಬರದಂತೆ ನೋಡಿಕೊಳ್ಳೋದು ಮತ್ತೊಂದು ದೊಡ್ಡ ಸವಾಲು.

ಜೀವ ಇದ್ದರೆ ಮುಂದೆ ಜೀವನ ಅನ್ನೋ ಮಾತು ಇವತ್ತಿನ ಸಂದರ್ಭದಲ್ಲಿ ಪ್ರಸ್ತುತ. ಆದ್ರೆ ಜನ ಸಾಮಾನ್ಯರ ಬದುಕು ಭಾರವಾಗಿದೆ. ಕೊರೊನಾ ಎಷ್ಟು ಬೇಗ ಕಂಟ್ರೋಲ್ ಆಗುತ್ತೊ ಅಷ್ಟು ಬೇಗ ಜನ ಸಾಮಾನ್ಯರ ಜೀವನ ಸುಧಾರಿಸುತ್ತೆ. ಭವಿಷ್ಯದ ದಾರಿ ಕಾಣುತ್ತೆ.

The post ಜೂನ್ 14ರಂದೇ ಲಾಕ್​​ಡೌನ್ ಅಂತ್ಯಗೊಳಿಸಿದ್ರೆ ಏನಾಗುತ್ತೆ? appeared first on News First Kannada.

Source: newsfirstlive.com

Source link