– ದೀಪಾವಳಿವರೆಗೂ ಉಚಿತ ಪಡಿತರ

ನವದೆಹಲಿ: ಜೂನ್ 21ರಿಂದ ಕೇಂದ್ರದಿಂದಲೇ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಇದೇ ವೇಳೆ ದೀಪಾವಳಿವರೆಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಉಚಿತ ಪಡಿತರ ವಿತರಿಸಲಾಗುವುದು ಎಂದು ತಿಳಿಸಿದರು.

ಮೋದಿ ಭಾಷಣದಲ್ಲಿ ಹೇಳಿದ್ದೇನು?: ಕೊರೊನಾ ಎರಡನೇ ಅಲೆಯ ವಿರುದ್ಧ ಭಾರತ ಹೋರಾಡುತ್ತಿದೆ. ಅನೇಕ ಕುಟುಂಬಗಳು ತಮ್ಮವರನ್ನು ಕಳೆದುಕೊಂಡಿದ್ದಾರೆ. ಇದು 100 ವರ್ಷಗಳಲ್ಲಿಯೇ ಅತಿ ದೊಡ್ಡ ಮಹಾಮಾರಿ. ಕೋವಿಡ್ ವಿರುದ್ಧ ಹೋರಾಟದ ವೇಳೆ ದೇಶದಲ್ಲಿಯೇ ಹೊಸ ಆರೋಗ್ಯ ವ್ಯವಸ್ಥೆ ನಿರ್ಮಾಣವಾಗಿದೆ. ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಉತ್ಪನ್ನಗಳಿಗಾಗಿ ಯುದ್ಧನೋಪಾದಿಯಲ್ಲಿ ಕೆಲಸ ಮಾಡಲಾಯ್ತು. ವಿಶ್ವದ ಯಾವುದೇ ಭಾಗದಲ್ಲಿ ಲಭ್ಯವಿರುವ ಔಷಧಗಳನ್ನು ತರಲಾಯ್ತು. ಈ ಹೋರಾಟದಲ್ಲಿ ಯಾವುದೇ ನಿರ್ಲಕ್ಷ್ಯ ಮಾಡಿಲ್ಲ.

ಕೊರೊನಾ ವಿರುದ್ಧ ಹೋರಾಟದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಲಸಿಕೆ ಈ ಮಹಾಮಾರಿಗೆ ಸಂಜೀವಿನಿ. ವಿಶ್ವದಲ್ಲಿ ಲಸಿಕೆ ಉತ್ಪಾದಿಸುವ ಕಂಪನಿಗಳು ಕಡಿಮೆ ಸಂಖ್ಯೆಯಲ್ಲಿವೆ. ಲಸಿಕೆಗೆ ಇಡೀ ವಿಶ್ವದಲ್ಲಿ ಬೇಡಿಕೆ ಹೆಚ್ಚಿವೆ. ಈ ಹಿಂದೆ ವ್ಯಾಕ್ಸಿನ್ ಗಾಗಿ ದಶಕಗಳವರೆಗೂ ಕಾಯಬೇಕಿತ್ತು. ವಿದೇಶದಲ್ಲಿ ಲಸಿಕೆ ಸಿಕ್ಕರೂ ನಮಗೆ ಸಿಗುತ್ತಿರಲಿಲ್ಲ. ಆದ್ರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಲಸಿಕೆ ಹಂಚಿಕೆಯಲ್ಲಿ ಭಾರತ ಮುಂದಿದೆ.

ಮಿಷನ್ ಇಂದ್ರ ಧನುಷ್ ಯೋಜನೆ ಮೂಲಕ ಲಸಿಕೆ ನೀಡಲಾಗುತ್ತಿದೆ. ನಮಗೆ ಬಡ ಮಕ್ಕಳ ಬಗ್ಗೆ ಚಿಂತೆ ಇತ್ತು. ದೇಶದ ವಿಜ್ಞಾನಿಗಳು ಒಂದೇ ವರ್ಷದಲ್ಲಿ ಎರಡು ಲಸಿಕೆ ತಯಾರಿಸುವ ಮೂಲಕ ವಿದೇಶಗಳಿಗಿಂತ ಹಿಂದೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ರು. ಲಸಿಕೆಯ ನೀತಿ ಸ್ಪಷ್ಟವಾಗಿದ್ದು, ಇದುವರೆಗೂ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕೊರೊನಾ ಎರಡನೇ ಅಲೆಗೂ ಮುನ್ನವೇ ಭಾರತದಲ್ಲಿ ಲಸಿಕಾಕರಣ ಆರಂಭವಾಗಿತ್ತು.

ಲಸಿಕೆ ಸಂಶೋಧನೆಯ ಎಲ್ಲ ಹೆಜ್ಜೆಯಲ್ಲೂ ಸರ್ಕಾರ ಜೊತೆಯಾಗಿತ್ತು. ದೇಶದಲ್ಲಿ ಏಳು ಕಂಪನಿಗಳು ವಿಭಿನ್ನ ಲಸಿಕೆ ತಯಾರಿಕೆಗೆ ಮುಂದಾಗಿದೆ. ಮೂರು ಲಸಿಕೆಗಳ ಟ್ರಯಲ್ ಸಹ ನಡೆಸಲಾಗುತ್ತಿದೆ. ಮಕ್ಕಳಿಗೆ ಕೊರೊನಾಂತಕ ಹಿನ್ನೆಲೆ ಎರಡು ವ್ಯಾಕ್ಸಿನ್ ಗಳ ಟ್ರಯಲ್ ನಡೆಯುತ್ತಿದೆ.

ಲಸಿಕೆ ತಯಾರಿಸಿದ ಬಳಿಕವೂ ಕಡಿಮೆ ದೇಶಗಳಲ್ಲಿ ಲಸಿಕಾಕರಣ ಆರಂಭವಾಯ್ತು. ಮೊದಲಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಯ್ತು. ಎರಡನೇ ಅಲೆ ಆರಂಭಕ್ಕೂ ಮುನ್ನ ನಮ್ಮ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಹಾಗಾಗಿ ಆರೋಗ್ಯ ಸಿಬ್ಬಂದಿ ಸೋಂಕಿತರ ಆರೈಕೆಯಲ್ಲಿ ತೊಡಗಿಕೊಂಡರು.

ಜನವರಿ 16ರಿಂದ ಏಪ್ರಿಲ್ ಅಂತ್ಯದವರೆಗೆ ಲಸಿಕಾಕರಣ ಕೇಂದ್ರದ ಕಣ್ಗಾವಲಿನಲ್ಲಿಯೇ ನಡೆಯಿತು. ಆದ್ರೆ ಲಸಿಕೆ ಸಂಬಂಧ ಟೀಕೆಗಳು ಕೇಳಿ ಬಂದಿದ್ದವು. ದೇಶದ ಒಂದು ವರ್ಗದ ಬಗ್ಗೆ ಲಸಿಕೆ ಬಗ್ಗೆ ಕ್ಯಾಂಪೇನ್ ಸಹ ನಡೆಸಿದವು. ಕೇಂದ್ರ ಲಸಿಕೆ ನೀಡುವ ಕಾರ್ಯಕ್ರಮವನ್ನ ಕೇಂದ್ರಿಕರಣ ಮಾಡಿಕೊಳ್ಳುತ್ತಿದೆ ಎಂದು ಹಲವು ರಾಜ್ಯ ಸರ್ಕಾರಗಳು ಆರೋಪಿಸಿದವು. ಹಾಗಾಗಿ ಅವರಿಗೂ ಶೇ.50ರಷ್ಟು ಜವಾಬ್ದಾರಿಯನ್ನ ನೀಡಲಾಯ್ತು. ಮೇನಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕೆಲ ರಾಜ್ಯಗಳು ಮೊದಲಿನ ವ್ಯವಸ್ಥೆಯೇ ಚೆನ್ನಾಗಿತ್ತು ಎಂದು ಹೇಳಲಾರಂಭಿಸಿದವು. ಹಾಗಾಗಿ ಲಸಿಕೆಯ ಪೂರ್ಣ ಹಂಚಿಕೆಯನ್ನ ಕೇಂದ್ರವೇ ತೆಗೆದುಕೊಳ್ಳಲಿದೆ. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಭಾರತ ಸರ್ಕಾರ ಕೊರೊನಾ ಲಸಿಕೆ ನೀಡಲಿದೆ.

ಭಾರತ ಸರ್ಕಾರವೇ ಕೊರೊನಾ ಲಸಿಕೆ ಖರೀದಿಸಿ, ರಾಜ್ಯಗಳಿಗೆ ನೀಡಲಾಗುತ್ತದೆ. ಲಸಿಕೆಗಾಗಿ ರಾಜ್ಯಗಳು ಹಣ ನೀಡುವಂತಿಲ್ಲ. ಈ ಸಂಬಂಧ ಶೀಘ್ರವೇ ಮಾರ್ಗಸೂಚಿ ಪ್ರಕಟಿಸಲಾಗುವುದು.

ಖಾಸಗಿ ಆಸ್ಪತ್ರೆಗಳಿಗೆ ಶೇ.25ರಷ್ಟು ಖರೀದಿ ನಿಯಮದಲ್ಲಿ ಬದಲಾವಣೆ ಇಲ್ಲ. ಖಾಸಗಿ ಆಸ್ಪತ್ರೆಗಳು 125 ರೂ.ಗಿಂತ ಹೆಚ್ಚಿನ ಸರ್ವಿಸ್ ಚಾರ್ಜ್ ಪಡೆಯುವಂತಿಲ್ಲ. ಕೋವಿನ್ ಆ್ಯಪ್ ಬಗ್ಗೆ ವಿಶ್ವದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಅವರೂ ಸಹ ನಮ್ಮ ಮಾದರಿಯಲ್ಲಿಯೇ ಲಸಿಕೆ ವಿತರಣೆ ಮಾಡಲು ಮುಂದಾಗಿವೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಎಂಟು ತಿಂಗಳು ಉಚಿತವಾಗಿ ನೀಡಲಾಗಿತ್ತು. ಕೊರೊನಾ ಎರಡನೇ ಅಲೆ ಆರಂಭದಲ್ಲಿ ಏಪ್ರಿಲ್ ಮತ್ತು ಮೇನಲ್ಲಿ ಉಚಿತ ಪಡಿತರ ನೀಡಲಾಗಿತ್ತು. ಈಗ ಈ ಯೋಜನೆಯಲ್ಲಿ ದೀಪಾವಳಿವರೆಗೂ ಅಂದ್ರೆ ನವೆಂಬರ್ ವರೆಗೂ ಉಚಿತ ಪಡಿತರ ಲಭ್ಯವಾಗಲಿದೆ.

ಕೊರೊನಾಗೆ ಸಂಬಂಧಿಸಿದಂತೆ ಕೆಲವು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಹಾಗಾಗಿ ಜನತೆ ಎಚ್ಚರದಿಂದ ಇರಬೇಕು. ಕೊರೊನಾ ಸಂಖ್ಯೆ ಇಳಿಕೆಯಾದ್ರೂ ಎಚ್ಚರಿಕೆಯಿಂದ ಇರಬೇಕು ಎಂದು ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡರು.

The post ಜೂನ್ 21ರಿಂದ ಕೇಂದ್ರದಿಂದ ಎಲ್ಲರಿಗೂ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ appeared first on Public TV.

Source: publictv.in

Source link