‘ಜೆರ್ಸಿ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ; ಬಾಲಿವುಡ್​ ಅಂಗಳದಲ್ಲಿ ಮುಂದುವರಿಯಲಿದೆ ‘ಕೆಜಿಎಫ್ 2’ ಅಬ್ಬರ | Jersey movie get mixed response in Bollywood KGF Chapter 2 will collect more money


‘ಜೆರ್ಸಿ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ; ಬಾಲಿವುಡ್​ ಅಂಗಳದಲ್ಲಿ ಮುಂದುವರಿಯಲಿದೆ ‘ಕೆಜಿಎಫ್ 2’ ಅಬ್ಬರ

ಎಲ್ಲೆಲ್ಲೂ ‘ಕೆಜಿಎಫ್: ಚಾಪ್ಟರ್ 2​’ (KGF: Chapter 2 Movie) ಅಬ್ಬರ ಜೋರಾಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ವಿಶ್ವಾದ್ಯಂತ ಅಭಿಮಾನಿಗಳು ಈ ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಬಾಲಿವುಡ್​ನಲ್ಲಂತೂ ಚಿತ್ರಕ್ಕೆ ಸಖತ್ ಬೇಡಿಕೆ ಸೃಷ್ಟಿ ಆಗಿದೆ. ಶಾಹಿದ್ ಕಪೂರ್ (Shahid Kapoor) ನಟನೆಯ ‘ಜೆರ್ಸಿ’ ಸಿನಿಮಾದಿಂದ (Jersey Movie) ‘ಕೆಜಿಎಫ್ 2’ ಓಟ ತಗ್ಗಲಿದೆ ಎನ್ನಲಾಗಿತ್ತು. ಆದರೆ, ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಉತ್ತಮವಾಗಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಇದರಿಂದ ಬಾಲಿವುಡ್​ನಲ್ಲಿ ‘ಕೆಜಿಎಫ್ 2’ ನಾಗಾಲೋಟ ಮತ್ತೆ ಮುಂದುವರಿಯಲಿದೆ.

‘ಅರ್ಜುನ್ ರೆಡ್ಡಿ’ ಸಿನಿಮಾದ ಹಿಂದಿ ರಿಮೇಕ್ ‘ಕಬೀರ್​ ಸಿಂಗ್’ ಚಿತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದರು. ಈ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ರಿಮೇಕ್ ಚಿತ್ರವಾದರೂ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಈ ಸಿನಿಮಾದಿಂದ ಶಾಹಿದ್ ಕಪೂರ್ ಅವರ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್ ಸಿಕ್ಕಿತ್ತು. ಇದೇ ಹುಮ್ಮಸಿನಲ್ಲಿ ಶಾಹಿದ್ ಕಪೂರ್ ಅವರು ತೆಲುಗಿನ ‘ಜೆರ್ಸಿ’ ಚಿತ್ರದ ಹಿಂದಿ ರಿಮೇಕ್​ನಲ್ಲಿ ನಟಿಸಿದ್ದರು. ಆದರೆ, ಚಿತ್ರಕ್ಕೆ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತೆಲುಗಿನ ‘ಜೆರ್ಸಿ’ ಸಿನಿಮಾದಲ್ಲಿ ನಾನಿ ಹಾಗೂ ಶ್ರದ್ಧಾ ಶ್ರೀನಾಥ್ ನಟಿಸಿದ್ದರು. ಈ ಸಿನಿಮಾ ಗೆದ್ದು ಬೀಗಿತ್ತು. ಆದರೆ, ಹಿಂದಿಯಲ್ಲಿ ಜನರು ಈ ಚಿತ್ರವನ್ನು ಅಷ್ಟಾಗಿ ಒಪ್ಪಿಕೊಳ್ಳುತ್ತಿಲ್ಲ. ವಿಮರ್ಶಕರು ಸಿನಿಮಾಗೆ ‘ಸಾಧಾರಾಣ ಸಿನಿಮಾ’ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಬಾಲಿವುಡ್​ನ ಗಲ್ಲಾ ಪೆಟ್ಟಿಗೆ ತಜ್ಞ ತರಣ್ ಆದರ್ಶ್ ಅವರು ಚಿತ್ರದ ವಿಮರ್ಶೆ ಮಾಡಿದ್ದಾರೆ. ಶಾಹಿದ್ ಕಪೂರ್ ನಟನೆಯನ್ನು ಹೊಗಳಿದ್ದು, ಚಿತ್ರವನ್ನು ಮೆಚ್ಚಿಕೊಂಡಿಲ್ಲ.

‘ಜೆರ್ಸಿ’ ಚಿತ್ರಕ್ಕೆ ಹಿನ್ನಡೆ ಆಗಿರುವುದು ಸಹಜವಾಗಿಯೇ ‘ಕೆಜಿಎಫ್ 2’ ಚಿತ್ರಕ್ಕೆ ಬಲ ಸಿಕ್ಕಂತೆ ಆಗಿದೆ. ಈ ವಾರಾಂತ್ಯದಲ್ಲಿ ಯಶ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಬೆಳೆ ತೆಗೆಯುವ ಸೂಚನೆ ಸಿಕ್ಕಿದೆ. ಹಿಂದಿ ಮಾರ್ಕೆಟ್​ನಲ್ಲಿ ಶುಕ್ರವಾರ, ಶನಿವಾರ ಹಾಗೂ ಭಾನುವಾರದ ಗಲ್ಲಾ ಪೆಟ್ಟಿಗೆಯ ಲೆಕ್ಕಾಚಾರ ಸೇರಿದರೆ ‘ಕೆಜಿಎಫ್ 2’ ಸಿನಿಮಾ 300 ಕೋಟಿ ಕ್ಲಬ್ ಸೇರಲಿದೆ. ‘ಕೆಜಿಎಫ್ 2’ ಸಿನಿಮಾ ಮೊದಲ ದಿನ 53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅದಾದ ಬಳಿಕ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಲೇ ಬಂದಿದೆ. ಸೋಮವಾರ ಕೂಡ 25 ಕೋಟಿ ರೂಪಾಯಿ ಗಳಿಸಿ ಸಾಧನೆ ಮಾಡಿತ್ತು.

TV9 Kannada


Leave a Reply

Your email address will not be published. Required fields are marked *