ನವೆಂಬರ್​ 8, 2016ರಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ಒಂದು ದುರಂತ ಇಂದಿಗೂ ಜೀವಂತ ಅಂದ್ರೆ ತಪ್ಪಾಗಲ್ಲ. ಮಾಸ್ತಿಗುಡಿ ಸಿನಿಮಾದ ಶೂಟಿಂಗ್​ ವೇಳೆ ಹೆಲಿಕಾಪ್ಟರ್​ನಿಂದ ನೀರಿಗೆ ಹಾರುವ ಚಿತ್ರೀಕರಣದಲ್ಲಿ ಸ್ಯಾಂಡಲ್​ವುಡ್​ ಇಬ್ಬರು ಪ್ರತಿಭಾವಂತ ನಟರನ್ನ ಕಳೆದುಕೊಂಡಿತ್ತು. ನಿರ್ದೇಶಕ ನಾಗಶೇಖರ್​​ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾದಲ್ಲಿ ದುನಿಯಾ ವಿಜಯ್​ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆ ದಿನದ ಫೈಟ್​ ಸೀಕ್ವೆನ್ಸ್​ಗೆ ಸ್ಟಂಟ್​ ಮಾಸ್ಟರ್​ ರವಿವರ್ಮಾರನ್ನ ಕರೆತರಲಾಗಿತ್ತು. ಆ ಆ್ಯಕ್ಷನ್​ ಸೀಕ್ವೆನ್ಸ್​ ಕಠಿಣವಾಗಿದ್ದ ಕಾರಣಕ್ಕೇ ರವಿವರ್ಮಾರನ್ನ ಅಪ್ರೋಚ್​ ಮಾಡಲಾಗಿತ್ತು.

ದುರಾದೃಷ್ವಶಾತ್​​ ಸ್ಟಂಟ್​ ಮಾಡಲು ಬಂದವರೇ, ನಡೆದ ದುರಂತದಿಂದ ಜೈಲು ಸೇರುವಂತಾಯ್ತು. ಯಾರೊಬ್ಬರೂ ಘಟನೆಯ ಸತ್ಯಾಸತ್ಯತೆಯನ್ನ ತಿಳಿದುಕೊಳ್ಳುವ ಗೋಜಿಗೇ ಹೋಗಲಿಲ್ಲ. ಇದೇ ನೋವನ್ನ ಸ್ಟಂಟ್​ ಮಾಸ್ಟರ್​​ ರವಿವರ್ಮಾ ನ್ಯೂಸ್​ ಫಸ್ಟ್​ ಜೊತೆ ಹಂಚಿಕೊಂಡಿದ್ದಾರೆ. ತಾವು ಜೈಲು ಸೇರಿದ್ದ ಸಂದರ್ಭ ಪ್ರಾಣ ಕಳೆದುಕೊಳ್ಳುವ ಯೋಚನೆ ಮಾಡಿದ್ದರು ಅಂತ ಹೇಳಿಕೊಂಡಿದ್ದಾರೆ. ಹಾಗೇ ತಾವು ಜೈಲಿನಿಂದ ಹೊರಬಂದವರೇ ಮೊದಲು ಮಾಡಿದ ಕೆಲಸವನ್ನ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

ಹೌದು.. ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂದುಕೊಂಡ ರವಿವರ್ಮಾರ ಪ್ರಾಣ ಉಳಿಸಿದ್ದು ಅವರ ಸ್ನೇಹಿತ. ಅಲ್ಲಿಂದ ರವಿವರ್ಮಾ ಅವರ ಸೆಕೆಂಡ್​ ಇನ್ನಿಂಗ್ಸ್​ ಶುರು ಅಂದ್ರು ತಪ್ಪಾಗಲ್ಲ. ಆದ್ರೆ ಇಂಡಸ್ಟ್ರಿಯಲ್ಲಿ ಯಾರೂ ರವಿವರ್ಮಾಗೆ ಕೆಲಸ ಕೊಡಬಾರದು ಅಂತ ಫಿಕ್ಸ್​ ಆಗ್ಬಿಟ್ಟಿದ್ರು. ಇದೆಲ್ಲದರ ಮಧ್ಯೆ ಜೈಲಿನಿಂದ ಬಂದ ರವಿವರ್ಮಾ ಮೊದಲು ಮಾಡಿದ ಕೆಲಸವೇ ಅನಿಲ್​-ಉದಯ್​ ಮನೆಯವರಿಗೆ ನೆರವಾಗಿದ್ದು. ಎರಡೂ ಮನೆಗೂ ತಲಾ 5 ಲಕ್ಷ ದುಡ್ಡು ಕೊಟ್ಟಿದ್ದಲ್ಲದೇ, ತಮ್ಮ ಮಗಳ ಹೆಸರಿನಲ್ಲಿದ್ದ ಬಿಡದಿಯ ಸೈಟ್​ವೊಂದನ್ನ ಅನಿಲ್​ ಮಗಳ ಹೆಸರಿಗೆ ಮಾಡಿಸಿಕೊಟ್ಟರು.

‘ಸಾಯಬೇಕು ಅಂತ ಅಂದುಕೊಂಡವನು ನನ್ನ ಸ್ನೇಹಿತನಿಂದ ಬದುಕ್ಬಿಟ್ಟೆ. ಮನೆಗೆ ಬಂದವನೇ ಯೂಟ್ಯೂಬ್​ನಲ್ಲಿ ಒಬ್ಬೊಬ್ಬರದ್ದು ಇಂಟರ್​ವ್ಯೂ​ ನೋಡ್ದೆ. ಒಬ್ಬೊಬ್ಬರೂ ಒಂದೊಂದು ಥರ ಮಾತಾಡಿದ್ದಾರೆ. ನಮ್ಮ ಇಂಡಸ್ಟ್ರಿಯ ದೊಡ್ಡ್ ಆರ್ಟಿಸ್ಟ್​​​ ಒಬ್ರು ಹೇಳ್ತಾರೆ.. ಎರಡು ಬಡ ಮಕ್ಕಳನ್ನ ಕರೆದುಕೊಂಡು ಹೋಗಿ ಹಳ್ಳಕ್ಕೆ ತಳ್ಬಿಟ್ಟು ಸಾಯಿಸ್ಬಿಟ್ಟ ಅಂದ್ರು. ಅದಕ್ಕೆ ಆಯ್ತು ಸರ್​ ಅಂದೆ. ಇದಾದ ನಂತರ ನನಗೆ ಕನ್ನಡ ಇಂಡಸ್ಟ್ರಿಯಲ್ಲಿ ಯಾರೂ ಕೆಲಸ ಕೊಟ್ಟಿಲ್ಲ. ಕೆಲಸ ಮಾಡ್ಬಾರದು ಅಂದ್ರು. ಅಂಬರೀಶ್​ ಅಣ್ಣ ಅವಾಗಲೂ ನನ್ನ ಪರ ನಿಂತ್ರು. ಕೆಲಸ ಮಾಡಿಲ್ಲ ಅಂದ್ರೆ ಏನು ಮಾಡ್ತಾನೆ ಅಂದ್ರು?

ಇದೊಂದು ವಿಚಾರನಾ ಇವತ್ತಿನವರೆಗೂ ಎಲ್ಲೂ ಹೇಳಿಲ್ಲ. ಅನಿಲ್​ಗೆ ಒಬ್ಳು ಹೆಣ್ಣು ಮಗು ಇದೆ. ಇದೇ ಬಿಡದಿ ಜಾಗದಲ್ಲಿ ನನ್ನ ಮಗಳ ಹೆಸರಲ್ಲಿ ಇದ್ದ 30-40 ಸೈಟ್​ನ ಅನಿಲ್​ ಮಗಳ ಹೆಸರಿಗೆ ಮಾಡ್ಕೊಟ್ಟೆ. ಐದು ಲಕ್ಷ ರೂಪಾಯಿ ಡೆಪಾಸಿಟ್​ ಮಾಡಿ ಅನಿಲ್​ ಹೆಂಡತಿ ಕೈಯಲ್ಲಿ ಕೊಟ್ಟೆ. ಇಲ್ಲಿ ಉದಯ್​ ಅವರ ತಂದೆ-ತಾಯಿ ಇಬ್ಬರಿಗೂ ಐದು ಲಕ್ಷ ರೂಪಾಯಿ ಫಿಕ್ಸಡ್​ ಇಟ್ಟು, ಇಂಟ್ರೆಸ್ಟ್​ ಬರೋ ಥರ ಕೊಟ್ಟು ನನ್ನಿಂದ ತಪ್ಪೇನಾದ್ರೂ ಆಗಿದ್ರೆ ಕ್ಷಮಿಸಿ ಅಂತ ಹೇಳ್ಬಿಟ್ಟು ಬಂದೆ.

ಆದ್ರೆ ಹಾಗಂತ ನಾನೇನೋ ಮಾಡಿದ್ದಕ್ಕೆ ಇದು ಪ್ರತಿಫಲ ಅಲ್ಲ. ನಾನು ಮಾಡಿದ ತಪ್ಪಿಗೆ ಶಿಕ್ಷೆ ಅಂತಾನೇ ತಿಳ್ಕೊಳೋಣ. ನನ್ನ ಕೈಲಾಗಿದ್ದು ನಾನು ಮಾಡಿದ್ದೀನಿ. ಈ ಎರಡು ಕೆಲಸ ನಾನು ಜೈಲಿಂದ ಬಂದಾಕ್ಷಣ ಮಾಡಿದ್ದು. ಇಲ್ಲಿಯವರೆಗೂ ನಾನು ಇದನ್ನ ಎಲ್ಲೂ ಹೇಳಿಲ್ಲ. ಗೊತ್ತಿದ್ದೋ ಗೊತ್ತಿಲ್ದೇನೋ ಆ ಘಟನೆಗೆ ನಾನೂ ಒಬ್ಬ ಕಾರಣಕರ್ತನಾಗಿದ್ದೀನಿ. ಇದು ಖಂಡಿತ ಜೀವನಪರ್ಯಾಂತ ಕಾಡುತ್ತೆ’ ಅನ್ನೋದು ಸ್ಟಂಟ್​ ಮಾಸ್ಟರ್​ ರವಿವರ್ಮಾ ಮಾತು.

The post ಜೈಲಿನಿಂದ ಬಂದಾಕ್ಷಣ ಮಾಡಿದ ಮೊದಲ ಕೆಲಸನೇ ಅದು.. ಅನಿಲ್​-ಉದಯ್​ ಸಾವಿನ ಬಗ್ಗೆ ಸ್ಟಂಟ್​ ಮಾಸ್ಟರ್​ ರವಿವರ್ಮಾ ಮಾತು appeared first on News First Kannada.

Source: newsfirstlive.com

Source link