ಚೆನ್ನೈ: “ಕೇಂದ್ರ ಸರ್ಕಾರವಲ್ಲ, ಭಾರತ ಒಕ್ಕೂಟ ಸರ್ಕಾರ” ಎಂಬ ಅಭಿಯಾನದ ಮೂಲಕ ಇಡೀ ದೇಶಾದ್ಯಂತ ದೊಡ್ಡ ಚರ್ಚೆಯೊಂದು ಹುಟ್ಟುಹಾಕಿದ್ದ ಸಿಎಂ ಎಂ.ಕೆ ಸ್ಟಾಲಿನ್​ ನೇತೃತ್ವದ ತಮಿಳುನಾಡು ಸರ್ಕಾರವೀಗ ತನ್ನ ಮೈಮೇಲೆ ಮತ್ತೊಂದು ವಿವಾದ ಎಳೆದುಕೊಂಡಿದೆ.

ಒಂದು ತಿಂಗಳ ಹಿಂದೆ ಮೇ 7ನೇ ತಾರೀಕಿನಂದು ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ರಾಜ್ಯಪಾಲರ ಭಾಷಣದಲ್ಲಿ ಜೈ ಹಿಂದ್​​ ಎಂಬ ಪದವನ್ನು ತೆಗೆದು ಹಾಕಿತ್ತು. ಈ ಬಗ್ಗೆ ಸಣ್ಣಮಟ್ಟದ ಚರ್ಚೆಯೊಂದು ಶುರುವಾಗಿತ್ತಾದರೂ ತೀರಾ ವಿವಾದಕ್ಕೀಡಾಗಿರಲಿಲ್ಲ.

ಆದರೀಗ ಡಿಎಂಕೆ ಮಿತ್ರ ಪಕ್ಷ ಕೆಡಿಎಂಕೆ ಮುಖ್ಯಸ್ಥ ಇ.ಆರ್.​​ ಈಶ್ವರನ್ ಇಂದು ವಿಧಾನಸಭಾ ಅಧಿವೇಶನದಲ್ಲಿ​, ಜೈ ಹಿಂದ್​​ ಎಂಬ ಪದ ತೆಗೆದು ಹಾಕಿದ ಕಾರಣ ತಮಿಳುನಾಡು ಈಗ ತಲೆ ಎತ್ತಿ ನಿಂತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹೌದು, ತಮಿಳುನಾಡು ವಿಧಾನಸಭಾ ಅಧಿವೇಶನದಲ್ಲಿ ಮಾತಾಡಿದ ಶಾಸಕ ಈಶ್ವರನ್​​, ಜೈ ಹಿಂದ್​ ಎಂಬ ಪದವನ್ನು ಸರ್ಕಾರ ತೆಗೆದು ಹಾಕಿದ ಬಗ್ಗೆ ನನಗೆ ಹೆಮ್ಮೆ ಇದೆ. ಇದರಿಂದ ತಮಿಳುನಾಡು ದೇಶದಲ್ಲಿ ತಲೆ ಎತ್ತಿ ನಿಂತಿದೆ ಎಂದಿದ್ದಾರೆ. ಶಾಸಕ ಈಶ್ವರನ್ ಹೇಳಿಕೆಯೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಇಡೀ ದೇಶಾದ್ಯಂತ ಜೈ ಹಿಂದ್​ ಎಂಬ ಪದವನ್ನು ತೆಗೆದು ಹಾಕಿದ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನು, ಶಾಸಕ ಈಶ್ವರನ್​​ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸ್ಟಾಲಿನ್​ ಸರ್ಕಾರ ಎರಡು ಭಾಷಾ ನೀತಿಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದೇವೆ. ಹೀಗಾಗಿ, ಇದರ ಪ್ರತಿರೋಧವಾಗಿ ಜೈ ಹಿಂದ್​ ಎಂಬ ಹಿಂದಿ ಪದವನ್ನು ತೆಗೆದಿದ್ದೇವೆ. ಇದು ವಿವಾದಾತ್ಮಕ ವಿಚಾರವೇನಲ್ಲ ಎಂದು ಸಮಜಾಯಿಸಿ ನೀಡಿದೆ. ಸಿಎಂ ಸ್ಟಾಲಿನ್​​ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ತಮಿಳುನಾಡು ಬಿಜೆಪಿ ನಾಯಕರು, ಇದೊಂದು ಪ್ರತ್ಯೇಕವಾದಿಗಳ ಸರ್ಕಾರ. ಕೇಂದ್ರ ಸರ್ಕಾರಕ್ಕೆ ಒಕ್ಕೂಟ ಸರ್ಕಾರ ಎಂದು ದೇಶದ್ರೋಹಿ ಕೆಲಸದಲ್ಲಿ ತೊಡಗಿದೆ ಡಿಎಂಕೆ ಸರ್ಕಾರ ಎಂದು ಆರೋಪಿಸಿದ್ದಾರೆ.

The post ‘ಜೈ ಹಿಂದ್’​​​ ಪದ ತೆಗೆದಿದ್ದರಿಂದ ತಮಿಳುನಾಡು ತಲೆ ಎತ್ತಿ ನಿಂತಿದೆ- ವಿವಾದ ಹುಟ್ಟುಹಾಕಿದ ತ. ನಾಡು MLA appeared first on News First Kannada.

Source: newsfirstlive.com

Source link