‘ಜೊತೆ ಜೊತೆಯಲಿ’ ನಿರ್ದೇಶಕರ ಹೊಸ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’; ಇದರಲ್ಲಿದೆ ವಿಶೇಷ ಕಥೆ | Umashree starrer Puttakkana Makkalu new serial on Zee Kannada will go on air from 13th December 2021


‘ಜೊತೆ ಜೊತೆಯಲಿ’ ನಿರ್ದೇಶಕರ ಹೊಸ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’; ಇದರಲ್ಲಿದೆ ವಿಶೇಷ ಕಥೆ

ಉಮಾಶ್ರೀ ಅಭಿನಯದ ಹೊಸ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’

ಬಗೆಬಗೆಯ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿರುವ ಜೀ ಕನ್ನಡ ವಾಹಿನಿ ಈಗ ಹೊಸದೊಂದು ಧಾರಾವಾಹಿಯನ್ನು ಪರಿಚಯಿಸುತ್ತಿದೆ. ‘ಪಾರು’, ‘ಜೊತೆ ಜೊತೆಯಲಿ’, ‘ಗಟ್ಟಿ ಮೇಳ’, ‘ನಾಗಿಣಿ’ ಮುಂತಾದ ಸೀರಿಯಲ್​ಗಳ ಮೂಲಕ ಮನೆಮಾತಾಗಿರುವ ಜೀ ವಾಹಿನಿಯಲ್ಲಿ ಈಗ ಹೊಸ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’ ಪ್ರಸಾರಕ್ಕೆ ಅಣಿಯಾಗಿದೆ. ಈ ಧಾರಾವಾಹಿಯಲ್ಲಿ ಹಲವು ವಿಶೇಷತೆಗಳಿವೆ. ‘ಜೊತೆ ಜೊತೆಯಲಿ’ ಸೀರಿಯಲ್​ಗೆ ನಿರ್ದೇಶನ ಮಾಡಿ ಜನಮೆಚ್ಚುಗೆ ಗಳಿಸಿರುವ ಆರೂರು ಜಗದೀಶ್​ ಅವರು ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್​ ಅನ್ನು ನಿರ್ದೇಶಿಸುವ ಹೊಣೆ ಹೊತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅನುಭವಿ ಕಲಾವಿದೆ ಉಮಾಶ್ರೀ ಅವರು ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಡಿ.13ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್​ ಪ್ರಸಾರ ಆಗಲಿದೆ.

ಮಾಜಿ ಸಚಿವೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಉಮಾಶ್ರೀ ಅವರು ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಮರಳಿದ್ದಾರೆ. ಅವರು ನಟಿಸುತ್ತಾರೆ ಎಂದರೆ ಪ್ರೇಕ್ಷಕರ ಮನದಲ್ಲಿ ಹೈಪ್​ ಸೃಷ್ಟಿ ಆಗುವುದು ಸಹಜ. ‘ಪುಟ್ಟಕ್ಕನ ಮಕ್ಕಳು’ ವಿಚಾರದಲ್ಲೂ ಭಾರಿ ನಿರೀಕ್ಷೆ ಮನೆ ಮಾಡಿದೆ. ಯಾವುದೇ ಪಾತ್ರಕ್ಕೂ ಜೀವ ತುಂಬಬಲ್ಲ ಕಲಾವಿದೆ ಅವರು. ಈ ಧಾರಾವಾಹಿಯಲ್ಲಿ ಮೂರು ಹೆಣ್ಣು ಮಕ್ಕಳ ತಾಯಿಯಾಗಿ ಉಮಾಶ್ರೀ ನಟಿಸಿದ್ದಾರೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಮಂಜುಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಹಂಸ, ಸಾರಿಕಾ ರಾಜ್, ರೇಣುಕಾ, ಗುರು ಹೆಗಡೆ, ಸುನಂದಾ ಹೊಸಪೇಟೆ, ಹೊಸ ಕಲಾವಿದರಾದ ಸಂಜನಾ, ಅಕ್ಷರ, ಶಿಲ್ಪಾ, ನಿಶಾ, ಧನುಷ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಮತ್ತು ಗಜೇಂದ್ರ ಅಭಿನಯಿಸಿದ್ದಾರೆ.

ಈ ಧಾರಾವಾಹಿಯ ನಿರ್ಮಾಣದ ಹೊಣೆಯನ್ನು ಜೆಎಸ್ ಪ್ರೊಡಕ್ಷನ್ಸ್ ಸಂಸ್ಥೆ ಹೊತ್ತಿದೆ. ಸಹ ನಿರ್ಮಾಪಕರಾಗಿ ಪ್ರದೀಪ್ ಆಜ್ರಿ ಮತ್ತು ಪರೀಕ್ಷಿತ್ ಎಂ.ಎಸ್. ಕೈ ಜೋಡಿಸಿದ್ದಾರೆ. ಜೀ ಕನ್ನಡ ತಂಡದ ಕಥೆಗೆ ಸತ್ಯಕಿ ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ಇದರ ಶೀರ್ಷಿಕೆ ಗೀತೆ ಈಗಾಗಲೇ ಫೇಮಸ್​ ಆಗಿದೆ. ಹರ್ಷಪ್ರಿಯ ಅವರ ಸಾಹಿತ್ಯಕ್ಕೆ, ಖ್ಯಾತ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ರಾಗ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಪಂಚಮ ಜೀವ ಧ್ವನಿ ನೀಡಿದ್ದಾರೆ.

ಹೊಸ ಕಥಾಹಂದರದ ‘ಪುಟ್ಟಕ್ಕನ ಮಕ್ಕಳು’:

ಇದು ದೇವಿಪುರ ಎನ್ನುವ ಊರಿನಲ್ಲಿ ನಡೆಯುವ ಕಥೆ. ಮೆಸ್ ನಡೆಸುತ್ತ ಜೀವನ ಸಾಗಿಸುತ್ತಾಳೆ ಪುಟ್ಟಕ್ಕ. ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ಆಕೆಯ ಗಂಡ ಪುಟ್ಟಕ್ಕನನ್ನು ನಿರ್ಲಕ್ಷಿಸಿ ಬೇರೆ ಮದುವೆಯಾಗಿರುತ್ತಾನೆ. ಸಹನಾ, ಸ್ನೇಹಾ ಮತ್ತು ಸುಮಾ ಎಂಬ ಮೂವರು ಹೆಣ್ಣುಮಕ್ಕಳೇ ಪುಟ್ಟಕ್ಕನ ಸರ್ವಸ್ವ. ಎರಡನೇ ಮಗಳು ಸ್ನೇಹ ಐ.ಎ.ಎಸ್. ಅಧಿಕಾರಿಯಾಗಿ ಅಮ್ಮನ ಘನತೆ ಹೆಚ್ಚಿಸಬೇಕು ಎಂಬ ಆಸೆ ಇಟ್ಟುಕೊಂಡಿದ್ದಾಳೆ. ಪುಟ್ಟಕ್ಕನ ಗಂಡ ತನ್ನ ಎರಡನೇ ಹೆಂಡತಿ ರಾಜೇಶ್ವರಿ ಕೈಗೊಂಬೆ ಆಗಿದ್ದಾನೆ. ಈ ನಡುವೆ, ನಾಯಕ ಕಂಠಿ ಪಕ್ಕದೂರಿನಲ್ಲಿ ಬಡ್ಡಿ ವಸೂಲಿ ಮಾಡುತ್ತಾನೆ. ಅವನ ತಾಯಿ ಬಡ್ಡಿ ಬಂಗಾರಮ್ಮನ ಹೆಸರು ಕೇಳಿದರೆ ಎಲ್ಲರೂ ಹೆದರುತ್ತಾರೆ. ಪುಟ್ಟಕ್ಕನ ಮಗಳು ಸ್ನೇಹಾಳ ಬದುಕಿನಲ್ಲಿ ಕಂಠಿ ಪ್ರವೇಶಿಸಿದರೆ ಏನಾಗುತ್ತದೆ? ಇದು ಸದ್ಯ ಕಥೆಯ ಸಸ್ಪೆನ್ಸ್​.

TV9 Kannada


Leave a Reply

Your email address will not be published. Required fields are marked *