ಜೋಕ್​ ಮಾಡುತ್ತಲೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದ ಪ್ರಿಯಾಂಕಾ ಚೋಪ್ರಾ; ಈಗ ಅರ್ಥವಾಯ್ತು ಎಂದ ಫ್ಯಾನ್ಸ್​ | Once Priyanka Chopra joked about Exprecting baby From Jonas


ಜೋಕ್​ ಮಾಡುತ್ತಲೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದ ಪ್ರಿಯಾಂಕಾ ಚೋಪ್ರಾ; ಈಗ ಅರ್ಥವಾಯ್ತು ಎಂದ ಫ್ಯಾನ್ಸ್​

ಪ್ರಿಯಾಂಕಾ-ನಿಕ್

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹಾಗೂ ಪಾಪ್​ ಸಿಂಗರ್​ ನಿಕ್​ ಜೋನಸ್​ (Nick Jonas) ಇಬ್ಬರೂ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ವದಂತಿ ಕಳೆದ ವರ್ಷ ಕೇಳಿ ಬಂದಿತ್ತು. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಈ ಸುದ್ದಿ ಸುಳ್ಳು ಎಂದು ಅವರು ಸ್ಪಷ್ಟನೆ ನೀಡಿದ ಮೇಲೆ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು. ಈಗ 2022ರ ಆರಂಭದಲ್ಲೇ ಪ್ರಿಯಾಂಕಾ ಚೋಪ್ರಾ-ನಿಕ್ ಖುಷಿ ಸುದ್ದಿ ನೀಡಿದ್ದಾರೆ. ಬಾಡಿಗೆ ತಾಯ್ತನದ (Surrogacy) ಮೂಲಕ ಇಬ್ಬರೂ ಮಗುವನ್ನು ಪಡೆದಿದ್ದಾರೆ. ಈ ವಿಚಾರ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈಗ ಪ್ರಿಯಾಂಕಾ ಚೋಪ್ರಾ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅವರು ಮಗುವಿನ ನಿರೀಕ್ಷೆಯಲ್ಲಿ ಇರುವ ಬಗ್ಗೆ ಜೋಕ್​ ಮಾಡಿದ್ದರು. ಆ ಸಂದರ್ಭದಲ್ಲಿ ಎಲ್ಲರೂ ಆ ಮಾತನ್ನು ತಮಾಷೆಯಾಗಿ ಸ್ವೀಕರಿಸಿದ್ದರು. ಆದರೆ, ಅದು ನಿಜವಾಗಿದೆ.

‘ಜೋನಸ್​ ಬ್ರದರ್ಸ್​ ಫ್ಯಾಮಿಲಿ ರೋಸ್ಟ್​’ ಕಾರ್ಯಕ್ರಮ ನೆಟ್​ಫ್ಲಿಕ್ಸ್​​ನಲ್ಲಿ ನವೆಂಬರ್​ ತಿಂಗಳಲ್ಲಿ ಪ್ರಸಾರವಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಚೋಪ್ರಾ ಅವರು ನಿಕ್​ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ್ದರು. ನಿಕ್​ ಇನ್ನೂ ಚಿಕ್ಕ ಹುಡುಗ ಎಂಬರ್ಥದಲ್ಲಿ ಮಾತನಾಡಿದ್ದರು. ಈ ವೇಳೆ ಅವರು ಮಗುವಿನ ನಿರೀಕ್ಷೆಯಲ್ಲಿರುವ ವಿಚಾರ ಮಾತನಾಡಿದ್ದರು.

‘ಜೋನಸ್​ ಕುಟುಂಬದಲ್ಲಿ ನಾನು ಮತ್ತು ನಿಕ್ ಇಬ್ಬರೇ ಮಗು ಇಲ್ಲದೆ ಇರುವವರು. ಈಗ ನಾನು ಮತ್ತು ನಿಕ್​..’ ಎಂದು ಹೇಳಿದ್ದ ಪ್ರಿಯಾಂಕಾ ಬೇರೆ ವಿಚಾರ ಮಾತನಾಡಿದ್ದರು. ‘ನಾನು ಮತ್ತು ನಿಕ್​ ಮಗುವಿನ ನಿರೀಕ್ಷೆಯಲ್ಲಿದ್ದೇವೆ’ ಎಂದು ಪ್ರಿಯಾಂಕಾ ಹೇಳುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಈ ವಿಚಾರದಲ್ಲಿ ಅವರು ಜೋಕ್​ ಮಾಡಿದ್ದರು. ಆಗ ಅವರು ಹೇಳಲು ಹೊರಟಿದ್ದ ವಿಚಾರ ಏನು ಎಂಬುದು ಈಗ ಗೊತ್ತಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ.

ಶುಕ್ರವಾರ (ಜ.21) ತಡರಾತ್ರಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ಅವರು ಈ ವಿಷಯ ಹಂಚಿಕೊಂಡರು. ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ನೀಡಿರುವ ಅವರು ಮಗುವಿನ ಫೋಟೋ ತೋರಿಸಿಲ್ಲ. ‘ಬಾಡಿಗೆ ತಾಯಿ ಮೂಲಕ ನಾವು ಮಗು ಪಡೆದಿದ್ದೇವೆ ಎಂಬುದನ್ನು ತಿಳಿಸಲು ತುಂಬ ಖುಷಿ ಆಗುತ್ತಿದೆ. ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿರುವ ಈ ವಿಶೇಷ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಅಂತ ಕೇಳಿಕೊಳ್ಳುತ್ತೇನೆ’ ಎಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್ ಪೋಸ್ಟ್​ ಮಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *