ಜ್ಯೋತಿ ಬೆಳಗುವ ಮೂಲಕ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ | CM Basavaraja Bommai inaugurate BJP state executive meeting by lighting Jyoti


ಜ್ಯೋತಿ ಬೆಳಗುವ ಮೂಲಕ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಜ್ಯೋತಿ ಬೆಳಗುವ ಮೂಲಕ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಬಳ್ಳಾರಿ: ಹಿಂದೂ ಸಮಾಜವನ್ನು ರಕ್ಷಣೆ ಮಾಡಿದಂತಹ ಪರಾಕ್ರಮ ಭೂಮಿ ವಿಜಯನಗರ ಸಾಮ್ರಾಜ್ಯ. ಗಟ್ಟಿಯಾದ ಭೂಮಿಯಲ್ಲಿ ಕಾರ್ಯಕಾರಿಣಿ ಮಾಡುತ್ತಿರುವುದು ನಮ್ಮ ಯೋಗಾ ಯೋಗ. ಈ ಕಾರ್ಯಕಾರಿಣಿಯಲ್ಲಿ ಕೈಗೊಳ್ಳುವ ನಿರ್ಣಯ ಕರ್ನಾಟಕದ ಭವಿಷ್ಯ ನಿರ್ಧರಿಸುವ ನಿರ್ಣಯಗಳಾಗಲಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಇಂದು ಹೊಸಪೇಟೆಯ ಭಟ್ರಹಳ್ಳಿ ಆಂಜನೇಯ ದೇವಾಲಯದ ಬಯಲು ಪ್ರದೇಶದಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ಭಾಗದ ಪ್ರಮುಖ ಆಶೋತ್ತರವಾಗಿದ್ದ ಹೊಸ ಜಿಲ್ಲೆಯ ನಿರ್ಣಯ ಮಾಡಿ ನಮ್ಮ ನಾಯಕರಾದ ಯಡಿಯೂರಪ್ಪನವರ ಹೆಸರು, ಆನಂದ್ ಸಿಂಗ್ ದೂರದೃಷ್ಟಿಯ ನಿಲುವು ಇತಿಹಾಸದಲ್ಲಿ ಉಳಿಯಲಿದೆ. ಸಮಾಜ ಒಡೆಯುವ, ದೇಶ ಶಿಥಿಲಗೊಳಿಸುವ ರಾಜಕಾರಣ ದೇಶಕ್ಕೆ ಗೊತ್ತಾಗಿ ಈ ದೇಶ ರಕ್ಷಣೆ ಮಾಡಲು ತತ್ವ ಸಿದ್ದಾಂತದ ಮೇಲೆ ರಾಜಕಾರಣ ಮಾಡಲು ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮನದಟ್ಟಾಗಿದೆ ಎಂದರು.

ಪ್ರಧಾನಿಯವರಿಂದ ಪ್ರೇರಣೆ ಪಡೆದು ರಾಜ್ಯದ ಜನರ ಹಿತಾಸಕ್ತಿ ಕಾಪಾಡಿ ಸಾಮಾಜಿಕ, ಆರ್ಥಿಕ ಅವಕಾಶ ಕೊಡಲು ಸರ್ಕಾರ ಕೆಲಸ ಮಾಡುತ್ತಿದೆ. ಕೋವಿಡ್​ನಿಂದ ತತ್ತರಿಸಿದ ಪರಿಸ್ಥಿತಿಯಿಂದ ಕೂಡಲೇ ಹೊರಬಂದಿದ್ದೇವೆ. ಪ್ರಧಾನಿ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪನವರ ನಿರಂತರ ಕೋವಿಡ್ ವಿರುದ್ದದ ಸಮರದಿಂದ ಇದು ಸಾಧ್ಯವಾಗಿದೆ. ದುಡಿಯುವ ವರ್ಗಕ್ಕೆ ಆದಾಯವನ್ನು ಹೆಚ್ಚಿಸುವ ಕೆಲಸ ಆಗಿದೆ. ಕರ್ನಾಟಕದ ಇತಿಹಾಸದಲ್ಲೇ ಅದಾಯ ಹೆಚ್ಚಳವಾಗಿದೆ. ಎಲ್ಲಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಕ್ರಿಯಾಶೀಲವಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಎಲ್ಲಾ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಮಾಡಬೇಕು. ಯೋಜನೆ ಜನರಿಗೆ ತಲುಪಿಸಲು ಪಕ್ಷ ಮತ್ತು ಕಾರ್ಯಕರ್ತರು ಸನ್ನದ್ದರಾಗಬೇಕು ಎಂದು ಕರೆ ನೀಡಿದರು.

ಯಾವ ನೈತಿಕತೆ ಇಟ್ಟು ನೀವು ಜನರ ಮುಂದೆ ಹೋಗುತ್ತೀರಿ? ಮತ್ತೆ ಬಿಜೆಪಿ ಸರ್ಕಾರವನ್ನು ವಿಧಾನಸೌಧದಲ್ಲಿ ಸ್ಥಾಪನೆ ಮಾಡುತ್ತೇವೆ. ಇದರ ಸಂಕಲ್ಪ ವಿಜಯನಗರದಿಂದ ಆರಂಭವಾಗುತ್ತಿದೆ. ನಮ್ಮ ದಾರಿ, ಸಂಕಲ್ಪ ಸ್ಪಷ್ಟವಾಗಿದೆ. ಬಲಿಷ್ಠ ಸಂಘಟನೆ ಮೇಲೆ ನಂಬಿಕೆ ಇಟ್ಟು ಮುನ್ನಡೆಯುತ್ತೇವೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಇಂದು ವೀರಾಂಜನೇಯನ ಜನ್ಮದಿನ. ಮುಂದಿನ ಚುನಾವಣೆಗೆ ಆಂಜನೇಯನ ಆಶೀರ್ವಾದ ಬೇಡುವ ಕೆಲಸಕ್ಕೆ ವಿಜಯನಗರದಲ್ಲಿ ಕಾರ್ಯಕಾರಣಿ ಆರಂಭ ಮಾಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಲಂಕೇಶರ ಅಹಂಕಾರಕ್ಕೆ ಬೆಂಕಿ ಇಡುವ ವಿಜಯ ಯಾತ್ರೆಗೆ ವಿಜಯನಗರದಲ್ಲಿ ಕಾರ್ಯಕಾರಿಣಿ ಮಾಡುತ್ತಿದ್ದೇವೆ ಎಂದರು. ನಳೀನಕುಮಾರ್ ಕಟೀಲರಿಂದ ಬಿಜೆಪಿ ಧ್ವಜಾರೋಹಣದ ಮೂಲಕ ಕಾರ್ಯಕಾರಿಣಿ ಆರಂಭ ಮಾಡಲಾಯಿತು. ಬಿಎಸ್ ಯಡಿಯೂರಪ್ಪ. ಬಿ ಎಲ್ ಸಂತೋಷ. ಸಿಟಿ ರವಿ. ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಜಗದೀಶ ಶೆಟ್ಟರ್. ಸಚಿವರಾದ ಗೋವಿಂದ ಕಾರಜೋಳ. ಶ್ರೀರಾಮುಲು. ಬಿಸಿ ನಾಗೇಶ. ಬಸವನಗೌಡ ಪಾಟೀಲ ಯತ್ನಾಳ , ಬಿ ವೈ ರಾಘವೇಂದ್ರ ಸೇರಿದಂತೆ ಹಲವು ನಾಯಕರು ಧ್ವಜಾರೋಹಣ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

TV9 Kannada


Leave a Reply

Your email address will not be published. Required fields are marked *