ಜ್ವಾಲಾಮುಖಿಯಿಂದ ಪೆಟ್ರೋಲ್-ಡೀಸೆಲ್? ಬ್ರೇಕಿಂಗ್ ನ್ಯೂಸ್ ಕೊಟ್ಟ ಸ್ವೀಡನ್‌ ಕಂಪನಿ

ಜ್ವಾಲಾಮುಖಿಯಿಂದ ಪೆಟ್ರೋಲ್-ಡೀಸೆಲ್? ಬ್ರೇಕಿಂಗ್ ನ್ಯೂಸ್ ಕೊಟ್ಟ ಸ್ವೀಡನ್‌ ಕಂಪನಿ

ದೇಶದಲ್ಲಿ ಈಗ ಚರ್ಚೆಯಾಗ್ತಾ ಇರೋ ವಿಚಾರ ಅಂದ್ರೆ ಅದು ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ. ಯಾವಾಗ ತೈಲ ಬೆಲೆ ಶತಕ ಬಾರಿಸಿ ಬಿಟ್ಟಿತೋ ಆಗ ದೇಶವಾಸಿಗಳಿಗೆ ಆತಂಕವೂ ಶುರುವಾಗಿತ್ತು. ಕಾರಣ ಈ ಕೊರೊನಾ ಸಂಕಷ್ಟದ ನಡುವೆ ಮತ್ತೆ ಬೆಲೆ ಏರಿಕೆಯ ಭಾರವನ್ನು ಹೊರಬೇಕಲ್ಲಾ ಅಂತಾ. ಈ ಪೆಟ್ರೋಲ್ ವಿಚಾರದಲ್ಲಿ ಈಗೊಂದು ಇಂಟರೆಸ್ಟಿಂಗ್ ಮಾಹಿತಿ ಹೊರಗೆ ಬಂದಿದೆ.

ಪೆಟ್ರೋಲ್, ಡಿಸೇಲ್ ಇಲ್ಲದ ಜಗತ್ತನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಬಹುಶಃ ಕೊರೊನಾ ಲಾಕ್​ಡೌನ್​ನಲ್ಲಿ ರಸ್ತೆಗಳೆಲ್ಲ ಬಿಕೋ ಎನ್ನುತ್ತಿರುವ ದೃಶ್ಯಗಳು ನಿಮ್ಮ ಕಣ್ಮುಂದೆ ಹಾದು ಹೋಗಬಹುದು. ಕಾರಣ ಪೆಟ್ರೋಲ್-ಡಿಸೇಲ್ ಇಲ್ಲದೆ ಬದುಕೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗುತ್ತೆ. ಇವತ್ತಿನ ವಾಹನ ಯುಗದಲ್ಲಿ ಪೆಟ್ರೋಲ್, ಡಿಸೇಲ್ ಒಂದು ದಿನ ಇಲ್ಲ ಅಂದ್ರೆ ಅದರ ಪರಿಣಾಮ ಎಷ್ಟು ಅನ್ನೋದನ್ನು ಊಹಿಸಲೂ ಆಗೋದಿಲ್ಲ. ಎಲ್ಲವೂ ಪೆಟ್ರೋಲ್, ಡಿಸೇಲ್ ಮೇಲೆಯೇ ಆಧರಿಸಿದೆ. ಪೆಟ್ರೋಲ್ ಡಿಸೇಲ್ ಇಲ್ಲ ಅಂದ್ರೆ ವಿಶ್ವದ ಚಲನೆಯೇ ನಿಂತು ಹೋದ ಅನುಭವವಾಗೋದು ಗ್ಯಾರಂಟಿ.

ಕೆಲವು ಬೃಹತ್ ತೈಲ ಪರಿಷ್ಕರಣಾ ಸ್ಥಾವರಗಳು.. ನಿತ್ಯವೂ ಲಕ್ಷ ಲಕ್ಷ ಲೀಟರ್ ಪೆಟ್ರೋಲ್, ಡಿಸೇಲ್ ರೆಡಿ ಮಾಡಿ ಮಾರುಕಟ್ಟೆಗೆ ಬಿಡುತ್ತವೆ. ಇದೇನು ಸಾಮಾನ್ಯ ವ್ಯವಹಾರವೇ. ಕೋಟಿ ಕೋಟಿ ಹಣ ತಂದು ಕೊಡುವ ವ್ಯವಹಾರ. ಸರ್ಕಾರದ ಬೊಕ್ಕಸಕ್ಕೆ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಹಣವೇ ಪ್ರಮುಖ ಆದಾಯ. ಈ ಪೆಟ್ರೋಲ್-ಡಿಸೇಲ್ ಗಾಗಿ ಅದೆಷ್ಟು ಒಪ್ಪಂದ, ಅದೆಷ್ಟು ಮಾತುಕತೆ, ಅದೆಷ್ಟು ಬೇಡಿಕೆ. ಇದು ನಿಲ್ಲದ ಹೋರಾಟ.. ಇಂತಹ ಪೆಟ್ರೋಲ್ ಅನ್ನು ತಯಾರಿಸೋದಕ್ಕೆ, ಉತ್ಪಾದನೆ ಮಾಡೋದಕ್ಕೆ ಹೊಸ ದಾರಿಯೊಂದನ್ನು ಕಂಡುಕೊಳ್ಳಲಾಗ್ತಾ ಇದೆ. ಇದು ನಿಜಕ್ಕೂ ಅಚ್ಚರಿ ತರುವ ವಿಚಾರ.

ಜ್ವಾಲಾಮುಖಿಯ ಲಾವಾರಸದಿಂದ್ಲೇ ಇಂಧನ ತಯಾರಿಕೆ?!
ಜ್ವಾಲಾಮುಖಿ ಇಂಧನದಿಂದ ಕಾರು ಓಡುತ್ತಾ?
ಅಂತಹ ಅಚ್ಚರಿ ಮಾಹಿತಿ ಹೊರಹಾಕಿದ್ದು ಯಾರು?

ಮೈ ಜುಮ್‌ ಎನಿಸುವ ಜ್ವಾಲಾಮುಖಿ ಇಂದ ಏನಾದ್ರೂ ಪ್ರಯೋಜನಕ್ಕೆ ಬರುವಂತಹದ್ದು ಇದೆಯಾ ಅಂತ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಆದ್ರೆ, ನಾವು ಈಗ ಹೇಳ್ತಾ ಇರೋದು ಜ್ವಾಲಾಮುಖಿ ಇಂದ ಇಂಧನವನ್ನು ಹೇಗೆ ತಯಾರಿಸಲಾಗುತ್ತೆ. ಹಾಗೇ ಅದೇ ಇಂಧನ ಬಳಸಿಕೊಂಡು ಓಡುವಂತಹ ಕಾರನ್ನು ಹೇಗೆ ತಯಾರಿಸಲಾಗುತ್ತೆ ಅನ್ನುವ ಬಗ್ಗೆ, ನಿಮಗಿದೂ ಅಚ್ಚರಿಯಾದರೂ ಸತ್ಯ. ಅಂತಹವೊಂದು ಮಹತ್ವದ ಕಾರ್ಯಕ್ಕೆ ಸ್ವೀಡನ್‌ ಕಾರು ತಯಾರಕ ಕಂಪನಿ ಮುಂದಾಗಿದೆ.

ವರ್ಕೌಟ್ ಆಗುತ್ತಾ ಜ್ವಾಲಾಮುಖಿಯ ಇಂಧನ?

ಇಂತಹ ಒಂದು ಅದ್ಭುತ, ಅಚ್ಚರಿ ಮೂಡಿಸುವಂತಹ ಸಂಶೋಧನೆ ಕೈಹಾಕಿರುವುದು ಸ್ವಿಡನ್‌ನ ಕೊಯೆನಿಗ್ಸೆಗ್‌ ಕಂಪನಿ. ಅತ್ಯಂತ ದುಬಾರಿ, ಅತ್ಯಾಧುನಿಕ ಕಾರು ತಯಾರಕ ಕಂಪನಿ ಇದು. ಈ ಕಂಪನಿಯ ಕಾರುಗಳ ಬೆಲೆ ಬರೋಬ್ಬರಿ 22 ಕೋಟಿ ರೂಪಾಯಿ. ಇದನ್ನು ಕೇಳಿದ್ರೆ ತಲೆ ಗಿರಗಿರ ತಿರುಗುತ್ತೆ. ಇಷ್ಟೊಂದು ದುಬಾರಿ ಕಾರನ್ನು ಕೊಳ್ಳಲು ಸಾಧ್ಯವಿಲ್ಲ ಬಿಡಿ, ನಮಗೇಕೆ ಅದರ ಉಸಾಬರಿ ಅನಿಸಿಬಿಡುತ್ತೆ. ಜನಸಾಮಾನ್ಯರ ಈ ಭಾವನೆಯೇ ಕಂಪನಿ ಹೊಸ ರೀತಿ ಯೋಚಿಸುವಂತೆ ಮಾಡಿ ಬಿಟ್ಟಿದೆ ಅನ್ನೋದು ಸತ್ಯ. ಕಂಪನಿಯ ಮಾಲೀಕರಾದ ವೊನ್‌ ಕೊಯೆನಿಗ್ಸೆಗ್‌ ಹೇಳುವುದು ಏನು ಗೊತ್ತಾ? ಅವರದೇ ಮಾತಲ್ಲಿ ಹೇಳ್ತೀವಿ ಕೇಳಿ “ತಮ್ಮ ಕಂಪನಿಯ ಕಾರುಗಳನ್ನು ಅತಿ ಶ್ರೀಮಂತರು ಮಾತ್ರ ಬಳಸುತ್ತಾರೆ. ಅದನ್ನು ಸಾಮಾನ್ಯ ಶ್ರೀಮಂತರು ಬಳಸುವಂತಾಗಬೇಕು. ಹೀಗಾಗಿ ಜ್ವಾಲಾಮುಖಿ ಇಂಧನದಿಂದ ಓಡುವ ಕಾರನ್ನು ತರುತ್ತಿದ್ದೇವೆ” ಎಂದು ಘೋಷಿಸಿ ಬಿಟ್ಟಿದ್ದಾರೆ.

ಜ್ವಾಲಾಮುಖಿಯಿಂದ ಇಂಧನ ತಯಾರಿಕೆ ಹೇಗೆ ಆಗುತ್ತೆ?
ಐಸ್‌ಲ್ಯಾಂಡ್‌ನ ತಂತ್ರಜ್ಞಾನ ಬಳಸಿ ಇಂಧನ ತಯಾರಿಕೆ

ಅಮೆರಿಕಾ, ರಷ್ಯಾ, ಇಂಡೋನೇಷ್ಯಾ, ಜಪಾನ್‌, ಚಿಲಿ, ಇಥಿಯೋಪಿಯಾ, ಪಪ್ಯೂ ನ್ಯೂ ಗುನಿಯಾ, ಪಿಲಿಫೈನ್ಸ್‌, ಮೆಕ್ಸಿಕೋ, ಅರ್ಜೆಂಟೀನಾ.. ಇವು ಅತಿ ಹೆಚ್ಚು ಜ್ವಾಲಾಮುಖಿ ಕಾಣಿಸಿಕೊಳ್ಳುವ ರಾಷ್ಟ್ರಗಳು. ಈ ರಾಷ್ಟಗಳಲ್ಲೆಲ್ಲ ಜ್ವಾಲಾಮುಖಿಯಿಂದ ಏನಾದ್ರೂ ಪರ್ಯಾಯ ಇಂಧನ ತಯಾರಿಸಬಹುದಾ ಅನ್ನುವಂತಹ ಸಂಶೋಧನೆಗಳು ನಡೆದಿವೆ. ಅದರಲ್ಲಿ ಕೆಲವು ರಾಷ್ಟ್ರಗಳು ತಕ್ಕ ಮಟ್ಟಿಗೆ ಯಶಸ್ವಿಯೂ ಆಗಿವೆ. ನಮಗೆ ಅದರಲ್ಲಿ ವಿಶೇಷವಾಗಿ ಕಂಡು ಬರ್ತಾ ಇರುವುದು ಐಸ್‌ಲ್ಯಾಂಡ್‌. ಹೌದು, ಈ ಪುಟ್ಟ ದ್ವೀಪ ರಾಷ್ಟ್ರ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಇಂಧನ ತಯಾರಿಸುತ್ತಿದೆ. ಜ್ವಾಲಾಮುಖಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೊರಹೊಮ್ಮುವ ಇಂಗಾಲದ ಡೈ ಆಕ್ಸೈಡ್‌ ಅನ್ನೇ ಮಿಥನಾಲ್‌ ಅಲ್ಕೋಹಾಲ್‌ ಆಗಿ ಪರಿವರ್ತಿಸುತ್ತಿದೆ. ಸ್ವೀಡನ್‌ ಕಂಪನಿಯ ಉದ್ದೇಶ ಈ ಮಿಥನಾಲ್‌ ಅಲ್ಕೋಹಾಲ್‌ ಬಳಸಿಕೊಂಡು ಇಂಧನ ತಯಾರಿಸಿ ಅದರಿಂದ ಕಾರು ಓಡಿಸುವಂಥದ್ದು.

ಎಲ್ಲಾ ವಾಹನಗಳಿಗೂ ಈ ಇಂಧನ ಬಳಸಬಹುದಾ?

ಪರಿಸರ ಸ್ನೇಹಿ ಎಂದು ಹೇಳಲಾಗುವ ಈ ಇಂಧನವನ್ನು ಎಲ್ಲಾ ವಾಹನಗಳಿಗೂ ಬಳಸಬಹುದಾ ಅನ್ನುವಂತಹ ಬಗೆಬಗೆಯ ಪ್ರಶ್ನೆ ಉದ್ಭವವಾಗುವುದು ಸಹಜ. ಅಗ್ಗದ ದರಕ್ಕೆ ಪರಿಸರಸ್ನೇಹಿ ಇಂಧನ ಸಿಗುತ್ತೆ ಅಂತಾದರೆ ನನ್ಗೂ ಬೇಕು ನಮ್ಮ ಸ್ನೇಹಿತನಿಗೂ ಬೇಕು ಅನ್ನುತ್ತೇವೆ. ಆದ್ರೆ ಪರಿಸ್ಥಿತಿ ಹಾಗಿಲ್ಲ. ಪೆಟ್ರೋಲ್‌ನಿಂದ ಓಡುವ ವಾಹನಕ್ಕೆ ಹೇಗೆ ಪೆಟ್ರೋಲ್‌ ಬೇಕೋ, ಡಿಸೆೇಲ್‌ನಿಂದ ಓಡುವ ವಾಹನಕ್ಕೆ ಹೇಗೆ ಡೀಸೆಲ್‌ ಬೇಕೋ, ಹಾಗೇ ಜ್ವಾಲಾಮುಖಿ ಇಂಧನದಿಂದ ಓಡುವ ವಾಹನಕ್ಕೆ ಜ್ವಾಲಾಮುಖಿ ಇಂಧನವೇ ಬೇಕು.
ಇಂದು, ಸೌರ ಶಕ್ತಿ ಇಂದ, ವಿದ್ಯುತ್‌ ಶಕ್ತಿ ಇಂದ, ಗ್ಯಾಸ್‌ನಿಂದ, ಜೈವಿಕ ಇಂಧನದಿಂದ ಓಡುವ ವಾಹನವನ್ನು ಮನೆ ಮುಂದೆ ನೋಡ್ತಾ ಇದ್ದೀರಿ. ಆದ್ರೆ, ಇನ್ನು ಮುಂದೆ ಜ್ವಾಲಾಮುಖಿ ಇಂಧನದಿಂದ ಓಡುವ ಕಾರೊಂದು ನಿಮ್ಮ ಮನೆಯ ಮುಂದೆ ಬಂದು ನಿಂತರೂ ಅಚ್ಚರಿ ಇಲ್ಲ.

The post ಜ್ವಾಲಾಮುಖಿಯಿಂದ ಪೆಟ್ರೋಲ್-ಡೀಸೆಲ್? ಬ್ರೇಕಿಂಗ್ ನ್ಯೂಸ್ ಕೊಟ್ಟ ಸ್ವೀಡನ್‌ ಕಂಪನಿ appeared first on News First Kannada.

Source: newsfirstlive.com

Source link