ಟರ್ಮಿನಲ್​​ಗೆ ಕರೆದೊಯ್ಯಲು ಬರಲಿಲ್ಲ ಬಸ್​​​; ದೆಹಲಿ ವಿಮಾನ ನಿಲ್ದಾಣದಲ್ಲಿಳಿದು ನಡೆದ ಸ್ಪೈಸ್​​ಜೆಟ್​​​ ಪ್ರಯಾಣಿಕರು | SpiceJet’s several passengers Walk On Delhi airport’s tarmac After Waiting For Bus


186 ಪ್ರಯಾಣಿಕರಿದ್ದ ಸ್ಪೈಸ್‌ಜೆಟ್‌ನ ಹೈದರಾಬಾದ್-ದೆಹಲಿ ವಿಮಾನವು ಶನಿವಾರ ರಾತ್ರಿ 11.24 ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿದೆ. ಒಂದು ಬಸ್ ತಕ್ಷಣವೇ ಬಂದು ಪ್ರಯಾಣಿಕರನ್ನು ಟರ್ಮಿನಲ್ 3 ಗೆ ಕರೆದೊಯ್ಯಿತು…

ಟರ್ಮಿನಲ್​​ಗೆ ಕರೆದೊಯ್ಯಲು ಬರಲಿಲ್ಲ ಬಸ್​​​; ದೆಹಲಿ ವಿಮಾನ ನಿಲ್ದಾಣದಲ್ಲಿಳಿದು ನಡೆದ ಸ್ಪೈಸ್​​ಜೆಟ್​​​ ಪ್ರಯಾಣಿಕರು

ಸ್ಪೈಸ್ ಜೆಟ್

ದೆಹಲಿ: ಶನಿವಾರ ರಾತ್ರಿ ಹೈದರಾಬಾದ್‌-ದೆಹಲಿ ಸ್ಪೈಸ್‌ಜೆಟ್‌ (SpiceJet) ವಿಮಾನದಿಂದ ಹಲವಾರು ಪ್ರಯಾಣಿಕರು ವಿಮಾನ ನಿಲ್ದಾಣದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ವಿಮಾನಯಾನ ಸಂಸ್ಥೆಯು ಪ್ರಯಾಣಿಕರನ್ನು ಟರ್ಮಿನಲ್‌ಗೆ ಕರೆದೊಯ್ಯಲು ಸುಮಾರು 45 ನಿಮಿಷಗಳ ಕಾಲ ಬಸ್ ಅನ್ನು ಒದಗಿಸಲಿಲ್ಲ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (Directorate General of Civil Aviation) ಮೂಲಗಳು ತಿಳಿಸಿವೆ. ಪ್ರಯಾಣಿಕರು ಎಷ್ಟು ಸಮಯದವರೆಗೆ ಟಾರ್ಮ್ಯಾಕ್ (ವಿಮಾನ ನಿಲ್ದಾಣದ ರಸ್ತೆ) ಮೇಲೆ ನಡೆಯುತ್ತಿದ್ದರು ಎಂಬುದು ಈ ಹಂತದಲ್ಲಿ ಅಸ್ಪಷ್ಟವಾಗಿದೆ ಎಂದು  ಅದು ಹೇಳಿದೆ. ಕೋಚ್‌ ಬರುವುದಕ್ಕೆ ಸ್ವಲ್ಪ ವಿಳಂಬವಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೊಂಡಿದ್ದು ಬಸ್‌ಗಳು ಬಂದ ನಂತರ, ನಡೆಯಲು ಪ್ರಾರಂಭಿಸಿದ ಪ್ರಯಾಣಿಕರು ಸೇರಿದಂತೆ ಎಲ್ಲಾ ಪ್ರಯಾಣಿಕರು ಟಾರ್ಮ್ಯಾಕ್‌ನಿಂದ ಟರ್ಮಿನಲ್ ಕಟ್ಟಡದವರೆಗೆ ಬಸ್ ನಲ್ಲೇ ಪ್ರಯಾಣಿಸಿದ್ದಾರೆ. ನಮ್ಮ ಸಿಬ್ಬಂದಿಗಳು ಮತ್ತೆ ಮತ್ತೆ ವಿನಂತಿಸಿದರೂ ಕೆಲವು ಪ್ರಯಾಣಿಕರು ಟರ್ಮಿನಲ್ ಕಡೆಗೆ ನಡೆಯಲು ಪ್ರಾರಂಭಿಸಿದರು. ಕೋಚ್ ಬಂದಾಗ ಅವರು ಕೆಲವೇ ಮೀಟರ್‌ಗಳಷ್ಟು ನಡೆದಿದ್ದರು. ನಡೆಯಲು ಪ್ರಾರಂಭಿಸಿದ ಪ್ರಯಾಣಿಕರು ಸೇರಿದಂತೆ ಎಲ್ಲಾ ಪ್ರಯಾಣಿಕರು ಕೋಚ್‌ಗಳಲ್ಲಿ ಟರ್ಮಿನಲ್ ಕಟ್ಟಡಕ್ಕೆ ಕರೆದೊಯ್ಯಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ದೆಹಲಿ ವಿಮಾನ ನಿಲ್ದಾಣದ ಟಾರ್ಮ್ಯಾಕ್ ಪ್ರದೇಶದಲ್ಲಿ ಭದ್ರತೆಗೆ ಅಪಾಯವಿರುವ ಕಾರಣ ಪ್ರಯಾಣಿಕರಿಗೆ ನಡೆಯಲು ಅವಕಾಶವಿಲ್ಲ. ವಾಹನಗಳಿಗೆ ಮಾತ್ರ ಡಾಂಬರು ಹಾಕಿದ ಮಾರ್ಗವಿದೆ.

186 ಪ್ರಯಾಣಿಕರಿದ್ದ ಸ್ಪೈಸ್‌ಜೆಟ್‌ನ ಹೈದರಾಬಾದ್-ದೆಹಲಿ ವಿಮಾನವು ಶನಿವಾರ ರಾತ್ರಿ 11.24 ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿದೆ. ಒಂದು ಬಸ್ ತಕ್ಷಣವೇ ಬಂದು ಪ್ರಯಾಣಿಕರನ್ನು ಟರ್ಮಿನಲ್ 3 ಗೆ ಕರೆದೊಯ್ಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಉಳಿದ ಪ್ರಯಾಣಿಕರು ಸುಮಾರು 45 ನಿಮಿಷಗಳ ಕಾಲ ಕಾಯುತ್ತಿದ್ದರು. ಅವರನ್ನು ಕರೆದೊಯ್ಯಲು ಯಾವುದೇ ಬಸ್ ಬರದ ಕಾರಣ, ಸುಮಾರು 1.5 ಕಿಮೀ ದೂರದಲ್ಲಿರುವ ಟರ್ಮಿನಲ್ ಕಡೆಗೆ ನಡೆಯಲು ಪ್ರಾರಂಭಿಸಿದರು ಎಂದು ಪಿಟಿಐ ವರದಿಯಲ್ಲಿ ಹೇಳಿದೆ.

ಹಲವಾರು ಸುರಕ್ಷತೆ-ಸಂಬಂಧಿತ ಘಟನೆಗಳಿಗಾಗಿ ಸ್ಪೈಸ್‌ಜೆಟ್ ಇತ್ತೀಚೆಗೆ ವಾಯುಯಾನ ನಿಯಂತ್ರಕದೊಂದಿಗೆ ಜಟಾಪಟಿಯಲ್ಲಿದೆ. ಜುಲೈ 27 ರಂದು ಡಿಜಿಸಿಎ ಎಂಟು ವಾರಗಳವರೆಗೆ ಸ್ಪೈಸ್ ಜೆಟ್ ಶೇಕಡಾ 50 ರಷ್ಟು ವಿಮಾನಗಳನ್ನು ಮಾತ್ರ ಕಾರ್ಯನಿರ್ವಹಿಸುವಂತೆ ಆದೇಶಿಸಿತ್ತು. ಆದಾಗ್ಯೂ ಈ ಆದೇಶದಿಂದ ನಮಗೇನೂ ಪರಿಣಾಮವುಂಟಾಗುವುದಿಲ್ಲ. ಇದು ಪ್ರಯಾಣ ಜಾಸ್ತಿ ಇಲ್ಲದ ಹೊತ್ತು, ಯಾವುದೇ ವಿಮಾನಗಳನ್ನು ರದ್ದು ಮಾಡುವುದಿಲ್ಲ ಎಂದು ಸ್ಪೈಸ್ ಜೆಟ್ ಉತ್ತರಿಸಿದೆ.  ಹಲವಾರು ಬಾರಿ ಸ್ಪಾಟ್ ಚೆಕ್, ತಪಾಸಣೆ ನಡೆಸಿ ಮತ್ತು ಶೋಕಾಸ್ ನೋಟಿಸ್​​ಗೆ ಸ್ಪೈಸ್ ಜೆಟ್ ಸಲ್ಲಿಸಿದ ಉತ್ತರಗಳನ್ನು ನೋಡಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಿಮಾನಯಾನ ಸೇವೆಗಾಗಿ ಸ್ಪೈಸ್ ಜೆಟ್ 8 ವಾರಗಳ ವರೆಗೆ ಶೇ 50 ವಿಮಾನಗಳನ್ನು ಮಾತ್ರ ಕಾರ್ಯ ನಿರ್ವಹಿಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಆದೇಶದಲ್ಲಿ ಹೇಳಿದೆ. ಈ ಎಂಟು ವಾರಗಳಲ್ಲಿ ಡಿಜಿಸಿಎ ಸ್ಪೈಸ್ ಜೆಟ್ ವಿಮಾನದ ಮೇಲೆ ತೀವ್ರ ಕಣ್ಗಾವಲಿರಿಸಲಿದೆ. ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಸಂಸ್ಥೆಯೊಂದು ಎದುರಿಸಿದ ಅತಿ ಕಠಿಣ ಕ್ರಮ ಇದಾಗಿದೆ.

ಶೇ 50ಕ್ಕಿಂತ ಹೆಚ್ಚು ವಿಮಾನಗಳನ್ನು ಕಾರ್ಯನಿರ್ವಹಿಸುವಂತಿಲ್ಲ. ಹಾಗೆ ಮಾಡುವುದಾದರೆ ಅದನ್ನು ಸುರಕ್ಷಿತ ಮತ್ತು ಸಮರ್ಥವಾಗಿ ನಿರ್ವಹಿಸಲು ಸೂಕ್ತ ತಾಂತ್ರಿಕ ಬೆಂಬಲ ಮತ್ತು ಆರ್ಥಿಕ ಸಂಪನ್ಮೂಲ ಇದೆ ಎಂಬುದನ್ನು ಡಿಜಿಸಿಎಗೆ ಮನವರಿಕೆ ಮಾಡಬೇಕು ಎಂದು ಡಿಜಿಸಿಎ ಹೇಳಿದೆ.

ಸ್ಪೈಸ್ ಜೆಟ್ ಸುರಕ್ಷಿತ, ಸಮರ್ಥ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ವಿಮಾನ ಸೇವೆ ನೀಡಲು ವಿಫಲವಾಗಿದೆ ಎಂದು ಡಿಜಿಸಿಎ ಹೇಳಿತ್ತು.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *