ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾವಣೆ ವಿಚಾರ: ಪ್ರತಾಪ್ ಸಿಂಹಗೆ ಹೆಚ್​ಸಿ ಮಹದೇವಪ್ಪ ತಿರುಗೇಟು | HC Mahadevappa reacts to Pratap Simha comments on changing Tippu Express Train Name Indian Railway


ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾವಣೆ ವಿಚಾರ: ಪ್ರತಾಪ್ ಸಿಂಹಗೆ ಹೆಚ್​ಸಿ ಮಹದೇವಪ್ಪ ತಿರುಗೇಟು

ಪ್ರತಾಪ್ ಸಿಂಹ, ಹೆಚ್​ಸಿ ಮಹದೇವಪ್ಪ

ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾವಣೆ ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ. ಟಿಪ್ಪುಸುಲ್ತಾನ್ ಓರ್ವ ಸ್ವಾತಂತ್ರ್ಯ ಹೋರಾಟಗಾರ. ಅಂತಹವರ ಹೆಸರು ಬದಲಾವಣೆ ಮಾಡುವುದು ಸರಿಯಲ್ಲ. ಸಂಸದ ಪ್ರತಾಪ್ ಸಿಂಹ ಓರ್ವ ಅಂಕಣಕಾರನಾಗಿದ್ದವನು. ರೈಲ್ವೆ ಸಚಿವರ ಬಳಿ ಈ ರೀತಿ ಚರ್ಚಿಸಿರೋದು ಎಷ್ಟು ಸರಿ. ಒಡೆಯರ್ ಕೂಡಾ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಆದರೆ, ಇಂತಹ ವಿಚಾರದಲ್ಲಿ ಘರ್ಷಣೆ ಮಾಡುವುದು ಸರಿಯಲ್ಲ ಎಂದು ಸಂಸದ ಪ್ರತಾಪ್ ಸಿಂಹಗೆ ಹೆಚ್.ಸಿ. ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಹೆಸರಿಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ವಿಚಾರವಾಗಿ ಮೈಸೂರಿನಲ್ಲಿ ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿದ್ದಾರೆ. ಇದು ದುರದೃಷ್ಟಕರ ಹೇಳಿಕೆ. ಒಬ್ಬ ಸಂಸದನಿಗೆ ಈ ರೀತಿಯ ಕೋಮುವಾದಿ ಚಿಂತನೆ ಇರುವುದು ದುರದೃಷ್ಟಕರ. ಇದು ಅವರ ಫ್ಯಾಸಿಸ್ಟ್ ಮನೋಭಾವವನ್ನು ತೋರಿಸುತ್ತಿದೆ. ಕೆಆರ್​ಎಸ್ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದೇ ಟಿಪ್ಪುಸುಲ್ತಾನ್. ಟಿಪ್ಪು ದೂರದೃಷ್ಟಿಯ ರಾಜನಾಗಿದ್ದ. ಅದರ ಫಲವಾಗಿ ಅಂದಿನ ಕಾಲದಲ್ಲೇ 35 ಸಾವಿರ ಕೆರೆ ಕಟ್ಟೆ ಕಾಲುವೆಗಳು ನಿರ್ಮಾಣವಾಗಿವೆ ಎಂದು ಹೇಳಿದ್ದಾರೆ.

ಹೊಸದೊಂದು ರೈಲು ತಂದು ಅದಕ್ಕೆ ಒಡೆಯರ್ ಹೆಸರು ಇಡಿ. ಈಗ ಇರುವ ಟಿಪ್ಪು ಹೆಸರನ್ನು ಬದಲಿಸುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದಿದ್ದಾಗ ಬುಲೆಟ್ ರೈಲು ತರುತ್ತೇನೆ ಎಂದಿದ್ದರು. ಮೈಸೂರನ್ನು ಪ್ಯಾರಿಸ್ ಮಾಡುವುದಾಗಿ ಭರವಸೆ ನೀಡಿದ್ದರು‌. ಪ್ರತಾಪ್ ಸಿಂಹ ಇದನ್ನು ಮೋದಿಯವರ ಬಳಿ ಕೇಳಬೇಕು ಎಂದು ಅಬ್ದುಲ್ ಮಜೀದ್ ಮೈಸೂರಿನಲ್ಲಿ ಒತ್ತಾಯ ಮಾಡಿದ್ದಾರೆ.

ಪ್ರತಾಪ್ ಸಿಂಹ ಏನು ಹೇಳಿದ್ದರು?

ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಿಸುವಂತೆ ಪ್ರತಾಪ್ ಸಿಂಹ ಒತ್ತಾಯ ಮಾಡಿದ್ದರು. ಟಿಪ್ಪು ಎಕ್ಸ್​ಪ್ರೆಸ್ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್‌ ರೈಲು ಎಂದು ಹೆಸರಿಡುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ‌ ವೈಷ್ಣವ್‌ಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದು, ದೆಹಲಿಯಲ್ಲಿ ಭೇಟಿಯಾಗಿ ಸಂಸದರಿಂದ ಲಿಖಿತ ಮನವಿ ಸಲ್ಲಿಕೆ ಮಾಡಲಾಗಿದೆ. ಮೈಸೂರಿಗೆ ರೈಲು ಸೇವೆ ಕಲ್ಪಿಸುವಲ್ಲಿ ಮಹಾರಾಜರ ಕೊಡುಗೆ ಬಹಳಷ್ಟು ಇದೆ. ಹೀಗಾಗಿ ಒಡೆಯರ್ ಎಕ್ಸ್‌ಪ್ರೆಸ್‌ ಎಂದು ಹೆಸರಿಡಲು ಒತ್ತಾಯ ಮಾಡಲಾಗಿತ್ತು.

TV9 Kannada


Leave a Reply

Your email address will not be published.