ಟಿ-20 ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ.. ಸ್ವಾರಸ್ಯಕರ ಬೆಳವಣಿಗೆಗಳಿಗೆ ಸಾಕ್ಷಿಯಾದ ಅಹೋರಾತ್ರಿ​ ಧರಣಿ..!


ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರ ಆಹೋರಾತ್ರಿ ಧರಣಿ ಎರಡನೇ ದಿನ ಪೂರೈಸಿದೆ. ಕಳೆದ ರಾತ್ರಿ ಕೈ ನಾಯಕರು ಲೋಕಾಭಿರಾಮ ಮಾತುಕತೆಯಲ್ಲಿ ನಿರತರಾಗಿದ್ರು. ಒಂದೊಂದು ಶಾಸಕರು ಒಂದೊಂದು ಕಥೆ ಹೇಳ್ತಿದ್ರು. ಶಾಸಕರ ಕಥೆ ಕೇಳ್ಕೊಂಡು ವಿಪಕ್ಷ ನಾಯಕ ಸಿದ್ದು ಕ್ರಿಕೆಟ್ ನೋಡೋದ್ರಲ್ಲಿ ಫುಲ್ ಬ್ಯುಸಿ ಆಗಿದ್ರು.

2ನೇ ದಿನ ಪೂರೈಸಿದ ಕೈ ನಾಯಕರ ಅಹೋರಾತ್ರಿ ಧರಣಿ
ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕೈ ನಾಯಕರು ವಿಧಾನಸೌಧದಲ್ಲಿ ನಡೆಸ್ತಿರುವ ಆಹೋರಾತ್ರಿ ಧರಣಿ 2ನೇ ದಿನ ಪೂರೈಸಿದೆ. 2ನೇ ರಾತ್ರಿಯ ಧರಣಿ ಹಲವು ಸ್ವಾರಸ್ಯಕರ ಪ್ರಸಂಗಗಳಿಗೆ ಸಾಕ್ಷಿಯಾಯ್ತು. ಧರಣಿ ನಿರತರಿಗೆ ವಿಧಾನಸಭೆಯೊಳಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.. ಪಾಯಸ, ಸ್ವೀಟ್, ಚಪಾತಿ, ರಾಗಿ ಮುದ್ದೆ, ರೈಸ್‌ಬಾತ್, ಪಲ್ಯ, ವೆಜ್ ಕರಿ, ರಸಂ, ಮೊಸರು, ಗ್ರೀನ್ ಸಾಲಡ್, ಕಟ್ ಫ್ರೂಟ್ಸ್ ಸವಿದು ಕೈ ಪಡೆ ಧರಣಿ ನಡೆಸಿತು.

ಧರಣಿ ಸ್ಥಳಕ್ಕೆ ಬಂದ ಬೆಕ್ಕು ಹಿಡಿದು ಮುದ್ದಾಡಿದ ಕೈ ಶಾಸಕಿಯರು
ವಿಧಾನಸಭೆಯಲ್ಲಿ ಧರಣಿ ನಿರತ ಕಾಂಗ್ರೆಸ್ ಶಾಸಕರಿಗೆ ಟಿವಿ ವ್ಯವಸ್ಥೆಯನ್ನ ಮಾಡಲಾಗಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಭಾರೀ ಆಸಕ್ತಿಯಿಂದ ಕ್ರಿಕೆಟ್ ವೀಕ್ಷಣೆ ಮಾಡಿದ್ರು. ರಮೇಶ್ ಕುಮಾರ್, ಲೇಔಟ್ ಕೃಷ್ಣಪ್ಪ, ಭೀಮಾನಾಯ್ಕ್, ಡಾ. ರಂಗನಾಥ್, ಆನಂದ ನ್ಯಾಮಗೌಡ ಹಾಗೂ ವಿನಿಶಾ ನೀರೋ ಕೂಡ ಕ್ರಿಕೆಟ್ ವೀಕ್ಷಿಸಿ ಕಾಲ ಕಳೆದ್ರು.

ಇದರ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಶಾಸಕರು ಲೋಕಾಭಿರಾಮ ಮಾತುಕತೆಯಲ್ಲಿ ನಿರತರಾಗಿದ್ರು. ಕೆಲವು ಶಾಸಕರಿಂದ ಸಿದ್ದರಾಮಯ್ಯ ಜೊತೆ ಹೈದ್ರಾಬಾದ್ ಕರ್ನಾಟಕ ಸ್ವಾತಂತ್ರ್ಯಗೊಂಡಿದ್ದರ ಇತಿಹಾಸದ ಚರ್ಚೆ ಕೂಡ ನಡೀತು. ಇನ್ನು ಕೆಲ ಶಾಸಕರು ಪುಷ್ಪ ಸಿನಿಮಾದ ರಕ್ತಚಂದನದ ಕಳ್ಳತನದ ಕತೆ ಹೇಳ್ತಿದ್ರೆ, ಮತ್ತೆ ಕೆಲವರು ಟೈಂ ಪಾಸ್ ಮಾಡಲು ಒಂದೊಂದು ಕಥೆ ಹೇಳ್ಕೊಂಡು ಕಾಲ ಕಳೆದ್ರು.

ಇಂಟರೆಸ್ಟಿಂಗ್ ಎಂಬಂತೆ ಧರಣಿ ನಡೆಸ್ತಿದ್ದ ಸ್ಥಳಕ್ಕೆ ಬಿಳಿ ಬಣ್ಣದ ಬೆಕ್ಕೊಂದು ಬಂದಿತ್ತು. ಕೆಂಗಲ್ ಗೇಟ್ ಬಳಿ ಸಿಕ್ಕ ಬೆಕ್ಕನ್ನ ಶಾಸಕರು ಹಿಡಿದು ತಂದು ಅದರೊಂದಿಗೆ ಕೆಲಕಾಲ ಆಟ ಆಡಿದ್ರು. ಅದ್ರಲ್ಲೂ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಸೌಮ್ಯ ರೆಡ್ಡಿ ಬೆಕ್ಕನ್ನ ಹಿಡಿದು ಮುದ್ದಾಡಿದ್ರು. ಇದರ ಜೊತೆ ಜೊತೆಗೆ ಆಗೊಮ್ಮೆ ಈಗೊಮ್ಮೆ ಅಂತ ಕೈ ನಾಯಕರು ಸಚಿವ ಈಶ್ವರಪ್ಪ ವಿರುದ್ಧ ದಿಕ್ಕಾರ ಕೂಡ ಕೂಗಿದ್ರು. ಹೀಗೆ ಕಾಂಗ್ರೆಸ್ ನಾಯಕರ 2ನೇ ದಿನದ ಆಹೋರಾತ್ರಿ ಧರಣಿ ಪೂರ್ಣಗೊಳ್ತು. ಬೆಳಗ್ಗೆ 6 ಗಂಟೆಗೆ ಎದ್ದ ನಾಯಕರು ವಿಧಾಸೌಧದ ಬಳಿ ವಾಕಿಂಗ್ ಕೂಡ ಮಾಡಿದ್ರು.

News First Live Kannada


Leave a Reply

Your email address will not be published. Required fields are marked *