ಟಿ20 ನಾಯಕತ್ವದಿಂದ ರೋಹಿತ್ ಕೆಳಗಿಳಿಯುವುದು ಖಚಿತ; ಈ ಸರಣಿಯಿಂದ ಹಾರ್ದಿಕ್ ಖಾಯಂ ನಾಯಕ..! – Hardik Pandya to be officially announced as Indias new T20 Captain before series vs SriLanka


Rohit Sharma: ಎಂದಿನಂತೆ ರೋಹಿತ್ ಶರ್ಮಾ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಟಿ20 ವಿಶ್ವಕಪ್‌ನ (T20 World Cup 2022) ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿದ್ದ ಟೀಂ ಇಂಡಿಯಾ ಬರಿಗೈಯಲ್ಲಿ ಟೂರ್ನಿಯಿಂದ ಹೊರಬಿದ್ದಿತ್ತು. ಅಂದಿನಿಂದ ಟೀಂ ಇಂಡಿಯಾ ನಾಯಕನ ಬದಲಾವಣೆಗೆ ನಿರಂತರ ಆಗ್ರಹ ಕೇಳಿ ಬರುತ್ತಿದೆ. ಮುಂದಿನ ಟಿ20 ವಿಶ್ವಕಪ್ ಎರಡು ವರ್ಷಗಳ ನಂತರ ಅಂದರೆ 2024ರಲ್ಲಿ ನಡೆಯಲಿದೆ. ಆ ವೇಳೆಗೆ ರೋಹಿತ್ ಶರ್ಮಾ (Rohit Sharma) ಅವರಿಗೆ 37 ವರ್ಷ ವಯಸ್ಸಾಗಲಿದೆ. ಹಾಗಾಗಿ ಮುಂದಿನ ಆವೃತ್ತಿಯ ಟಿ20 ವಿಶ್ವಕಪ್‌ಗೆ ಈಗಿನಿಂದಲೇ ತಯಾರಿ ನಡೆಸುವ ಸಲುವಾಗಿ ಟೀಂ ಇಂಡಿಯಾದ ಟಿ20 ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ಭಾರತೀಯ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ. ಹೀಗಾಗಿ ಈ ವದಂತಿಗಳ ನಡುವೆ ನಾಯಕತ್ವ ಬದಲಾವಣೆಯ ಬಗ್ಗೆ ಬಿಗ್ ಅಪ್​ಡೇಟ್ ಹೊರಬಿದ್ದಿದೆ.

ಬಿಸಿಸಿಐ ಈಗಾಗಲೇ ನಿರ್ಧರಿಸಿದೆ

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನು ನೇಮಿಸಲಾಗಿದೆ. ಹೀಗಾಗಿ ಅವರನ್ನು ಟಿ20 ತಂಡದ ಖಾಯಂ ನಾಯಕನನ್ನಾಗಿ ಮಾಡಬೇಕೆಂಬ ಬೇಡಿಕೆ ಇದೆ. ಅದಕ್ಕೆ ಪೂರಕವೆಂಬಂತೆ ಪಾಂಡ್ಯರನ್ನು ಟಿ20 ತಂಡದ ನಾಯಕರನ್ನಾಗಿ ಮಾಡಲು ಆಯ್ಕೆ ಸಮಿತಿ ಸದಸ್ಯರಲ್ಲಿ ಒಮ್ಮತ ಮೂಡಿದೆ ಎಂದು ತಿಳಿದುಬಂದಿದೆ. ಹೀಗಾಗಿ ರೋಹಿತ್ ಶರ್ಮಾ ಟಿ20 ನಾಯಕತ್ವ ಕಳೆದುಕೊಳ್ಳಲಿದ್ದಾರೆ. ಜನವರಿಯಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೂ ಮೊದಲು ಹಾರ್ದಿಕ್ ಪಾಂಡ್ಯ ಅವರನ್ನು ಟಿ20 ತಂಡದ ಖಾಯಂ ನಾಯಕನಾಗಿ ಆಯ್ಕೆ ಮಾಡಲಾಗುವುದು ಎಂದು ಇನ್ಸೈಡ್ ಸ್ಪೋರ್ಟ್ ವರದಿ ಮಾಡಿದೆ.

ಹಾಗೆಯೇ ಎಂದಿನಂತೆ ರೋಹಿತ್ ಶರ್ಮಾ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ರೋಹಿತ್​ಗೆ ವಯಸ್ಸಾಗುತ್ತಿದೆ

ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿರುವ ಇನ್ಸೈಡ್ ಸ್ಪೋರ್ಟ್ ತನ್ನ ವರದಿಯಲ್ಲಿ, ಈಗಾಗಲೇ ಆಯ್ಕೆ ಮಂಡಳಿಯಲ್ಲಿ ಈ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ. ಹೌದು ರೋಹಿತ್ ಶರ್ಮಾ ತಂಡಕ್ಕೆ ಬಹಳಷ್ಟು ಕೊಡುಗೆ ನೀಡಿರಬಹುದು. ಆದರೆ ದಿನ ಕಳೆದಂತೆ ಅವರ ವಯಸ್ಸು ಕಡಿಮೆಯಾಗುತ್ತ ಹೋಗುವುದಿಲ್ಲ. ಅಲ್ಲದೆ 2024 ರ ಟಿ20 ವಿಶ್ವಕಪ್‌ಗೆ ಈಗಿನಿಂದಲೇ ಸಿದ್ಧತೆಗಳು ಪ್ರಾರಂಭವಾಗಬೇಕು. ಹಾರ್ದಿಕ್ ಪಾಂಡ್ಯ ಈ ಸ್ಥಾನಕ್ಕೆ ಪರಿಪೂರ್ಣರು. ಹಾಗಾಗಿ ಆಯ್ಕೆದಾರರು ಮುಂದಿನ ಟಿ20 ಸರಣಿಗೂ ಮುನ್ನ ಹಾರ್ದಿಕ್ ಅವರ ಹೆಸರನ್ನು ಟಿ20 ತಂಡದ ನಾಯಕನಾಗಿ ಘೋಷಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಹೇಳಿದೆ.

ರವಿಶಾಸ್ತ್ರಿ ಹೇಳೋದೇನು?

ಟಿ20 ಕ್ರಿಕೆಟ್‌ನಲ್ಲಿ ಹೊಸ ನಾಯಕನನ್ನು ಆಯ್ಕೆ ಮಾಡುವಲ್ಲಿ ಯಾವುದೇ ಅಪಾಯವಿಲ್ಲ. ಸದ್ಯದ ಕ್ರಿಕೆಟ್‌ನ ಸ್ಥಿತಿಯನ್ನು ನೋಡಿದರೆ ಒಬ್ಬ ಆಟಗಾರನಿಗೆ ಮೂರೂ ಮಾದರಿಯಲ್ಲಿ ಆಡುವುದು ಸುಲಭವಲ್ಲ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ರೋಹಿತ್ ಮುನ್ನಡೆ ಸಾಧಿಸಿರುವುದರಿಂದ ಟಿ20ಕ್ರಿಕೆಟ್​ಗೆ ಹೊಸ ನಾಯಕನನ್ನು ಆಯ್ಕೆ ಮಾಡುವಲ್ಲಿ ಯಾವುದೇ ಅಪಾಯವಿಲ್ಲ. ಹಾರ್ದಿಕ್ ಪಾಂಡ್ಯರನ್ನು ನಾಯಕರನ್ನಾಗಿ ಆಯ್ಕೆ ಮಾಡಿದರೆ ಅದು ಕೆಲಸ ಮಾಡುತ್ತದೆ ಎಂದು ಭಾವಿಸುತ್ತೇನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.