ಟಿ20 ವಿಶ್ವಕಪ್​ಗೂ ಮುನ್ನ ಟೀಂ ಇಂಡಿಯಾದಲ್ಲಿ ಬದಲಾವಣೆ; ರಾಹುಲ್ ಬದಲು ಹಾರ್ದಿಕ್​ಗೆ ಉಪನಾಯಕತ್ವ ಪಟ್ಟ! | Hardik Pandya to be appointed vice captain for T20 World Cup 2022 ahead of KL Rahul Report


T20 World Cup: ಹಾರ್ದಿಕ್ ಪಾಂಡ್ಯ ಈಗ ತಂಡದ ಹೊಸ ಉಪನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂಬ ವರದಿ ಹರಿದಾಡಲಾರಂಭಿಸಿದೆ. ಹೀಗಾಗಿ ಕನ್ನಡಿಗ ಕೆಎಲ್ ರಾಹುಲ್​ ತನ್ನ ಉಪನಾಯಕತ್ವವನ್ನು ಹಾರ್ದಿಕ್​ಗೆ ಬಿಟ್ಟುಕೊಡಬೇಕಾಗಬಹುದು.

ಟೀಂ ಇಂಡಿಯಾ ಈ ದಿನಗಳಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಟಿ20 ಸರಣಿಯನ್ನು ಆಡುತ್ತಿದೆ. ಆ ಬಳಿಕ ಏಷ್ಯಾಕಪ್ ಹಾಗೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗಳನ್ನು ಆಡಬೇಕಿದೆ. ತದನಂತರ ಟಿ20 ವಿಶ್ವಕಪ್ (T20 World Cup) ನಡೆಯಲಿದೆ. ಆದರೆ ಮೊದಲನೆಯದಾಗಿ, ಟೀಮ್ ಇಂಡಿಯಾದಲ್ಲಿ ಪುನರ್ರಚನೆಗೆ ಸಂಬಂಧಿಸಿದಂತೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ (Hardik Pandya) ಈಗ ತಂಡದ ಹೊಸ ಉಪನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂಬ ವರದಿ ಹರಿದಾಡಲಾರಂಭಿಸಿದೆ. ಹೀಗಾಗಿ ಕನ್ನಡಿಗ ಕೆಎಲ್ ರಾಹುಲ್​ (KL Rahul) ತನ್ನ ಉಪನಾಯಕತ್ವವನ್ನು ಹಾರ್ದಿಕ್​ಗೆ ಬಿಟ್ಟುಕೊಡಬಹುದು. ಖಾಯಂ ಆಗಿ ಈ ಜವಾಬ್ದಾರಿಯನ್ನು ಹಾರ್ದಿಕ್​ಗೆ ವಹಿಸಲಾಗುತ್ತದೆ ಎಂಬ ಸುದ್ದಿಯೂ ಇದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮುದ್ರೆ ಬಿದ್ದಿಲ್ಲ.

ವರದಿಗಳನ್ನು ನಂಬುವುದಾದರೆ, ಸದ್ಯಕ್ಕೆ ಟೀಮ್ ಇಂಡಿಯಾದ ಟಿ20 ತಂಡದ ಉಪನಾಯಕ ಹಾರ್ದಿಕ್ ಅವರಿಗೆ ನೀಡಲಾಗುವುದು. ಇಲ್ಲಿಯವರೆಗೆ ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ಈ ಸ್ಥಾನದಲ್ಲಿದ್ದರು. ಆದರೆ ಬಹುಶಃ ಗಾಯ ಮತ್ತು ಕೊರೊನಾದಿಂದ ಚೇತರಿಸಿಕೊಂಡ ನಂತರ ತಂಡಕ್ಕೆ ವಾಪಸ್ಸಾಗುವ ರಾಹುಲ್​ಗೆ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಥಾನವನ್ನು ನೀಡುವ ಊಹಪೋಹಾಗಳು ಓಡಾಡುತ್ತಿವೆ.

ಹಾರ್ದಿಕ್ ಪಾಂಡ್ಯ ಉಪನಾಯಕ

ಟೀಮ್ ಇಂಡಿಯಾದಲ್ಲಿ ನಡೆಯುತ್ತಿರುವ ಈ ದೊಡ್ಡ ಬದಲಾವಣೆಯು ಗಾಯದ ನಂತರ ಹಾರ್ದಿಕ್ ಪಾಂಡ್ಯ ಅವರ ಪ್ರಚಂಡ ಮರಳುವಿಕೆ ಮತ್ತು ಕೆಎಲ್ ರಾಹುಲ್ ಅವರ ಗಾಯದೊಂದಿಗೆ ಸಂಬಂಧ ಹೊಂದಿದೆ. Insidesport.in ವರದಿಯ ಪ್ರಕಾರ, T20 ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡಲು ಭಾರತೀಯ ಆಯ್ಕೆಗಾರರು ಕುಳಿತಾಗ ಹಾರ್ದಿಕ್ ಪಾಂಡ್ಯ ಅವರನ್ನು ಉಪನಾಯಕ ಎಂದು ಘೋಷಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಬಿಸಿಸಿಐನ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿ Insidesport.in ವರದಿ ಮಾಡಿರುವ ಪ್ರಕಾರ, “ಹಾರ್ದಿಕ್ ವಿಶ್ವ ದರ್ಜೆಯ ಆಟಗಾರ ಮತ್ತು ಅವರು ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಮರಳಿರುವುದು ಸಂತೋಷವಾಗಿದೆ. ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಬೇಕೆ ಅಥವಾ ಬೇಡವೇ ಎಂಬುದು ಆಯ್ಕೆದಾರರಿಗೆ ಬಿಟ್ಟ ವಿಚಾರ. ಆದರೆ ಅವರು ಇನ್ನೂ ತಂಡದ ನಾಯಕರಲ್ಲಿ ಒಬ್ಬರು. ಆಲ್ ರೌಂಡರ್ ಆಗಿ, ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ರೀತಿಯಲ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರು ಅದ್ಭುತ ನಾಯಕತ್ವದ ಪ್ರತಿಭೆಯನ್ನು ಹೊಂದಿದ್ದಾರೆ ಮತ್ತು ನಾವು ಇದನ್ನು ಐಪಿಎಲ್‌ನಲ್ಲಿ ನೋಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಹಾರ್ದಿಕ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ

ಐಪಿಎಲ್ 2022 ರಲ್ಲಿ ಮೊದಲ ಬಾರಿಗೆ ಮಿಂಚಿದ ನಂತರ, ಐರ್ಲೆಂಡ್ ಪ್ರವಾಸದಲ್ಲಿ ಆಡಿದ ಟಿ 20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಇದರ ನಂತರ, ಅವರು ಪ್ರಸ್ತುತ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ T20 ಸರಣಿಯಲ್ಲಿ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಆಯ್ಕೆದಾರರು ಅವರ ನಾಯಕತ್ವದಲ್ಲಿ ನಂಬಿಕೆ ಹೊಂದಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಈ ಕಾರಣದಿಂದಾಗಿ, 2022 ರ ಟಿ 20 ವಿಶ್ವಕಪ್‌ಗೆ ಮೊದಲು ಕೆಎಲ್ ರಾಹುಲ್ ಬದಲಿಗೆ ಟೀಮ್ ಇಂಡಿಯಾದ ಉಪನಾಯಕತ್ವವನ್ನು ಹಾರ್ದಿಕ್​ಗೆ ಸಂಪೂರ್ಣವಾಗಿ ಹಸ್ತಾಂತರಿಸಲಾಗುತ್ತದೆ ಎಂಬ ಸುದ್ದಿಯೂ ಮುನ್ನೆಲೆಗೆ ಬರುತ್ತಿದೆ.

TV9 Kannada


Leave a Reply

Your email address will not be published. Required fields are marked *