ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿದರೆ ಪಿಸಿಬಿಗೆ ಬ್ಲ್ಯಾಂಕ್ ಚೆಕ್ ನೀಡಲು ಒಬ್ಬ ಉದ್ಯಮಿ ತಯಾರಿದ್ದಾರೆ: ರಮೀಜ್ ರಾಜಾ | An Investor ready to give blank cheque to PCB if Pakistan beat India in T20 World Cup: Ramiz Raja

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿದರೆ ಪಿಸಿಬಿಗೆ ಬ್ಲ್ಯಾಂಕ್ ಚೆಕ್ ನೀಡಲು ಒಬ್ಬ ಉದ್ಯಮಿ ತಯಾರಿದ್ದಾರೆ: ರಮೀಜ್ ರಾಜಾ

ರಮೀಜ್ ರಾಜಾ

ಪಾಕಿಸ್ತಾನದ ಕ್ರಿಕೆಟ್ ವ್ಯವಸ್ಥೆ ತೀರ ಹದಗೆಟ್ಟಿದ್ದು ಅಲ್ಲಿನ ಕ್ರಿಕೆಟ್ ಮಂಡಳಿ (ಪಿಸಿಬಿ) ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಪಿಸಿಬಿ ಮುಖ್ಯಸ್ಥನ ಸ್ಥಾನಕ್ಕೆ ತಮ್ಮ ಸ್ನೇಹಿತ ಮತ್ತು ಹಿಂದೊಮ್ಮೆ ಜೊತೆ ಆಟಗಾರನಾಗಿದ್ದ ರಮೀಜ್ ರಾಜಾ ಅವರನ್ನು ತಂದು ಕೂರಿಸಿರುವುದೇನೋ ನಿಜ, ಆದರೆ ಯಾವುದೇ ಕ್ರಿಕೆಟಿಂಗ್ ರಾಷ್ಟ್ರ ಪಾಕಿಸ್ತಾನ ಪ್ರವಾಸ ಬೆಳಸಿ ದ್ವಿಪಕ್ಷೀಯ ಸರಣಿ ಆಡಲು ಸಿದ್ದವಿಲ್ಲದಿರುವಾಗ ಒಬ್ಬ ರಾಜಾ ಏನು ತಾನೆ ಮಾಡಲು ಸಾಧ್ಯ? ಆದರೆ, ಮಂಡಳಿಯ ಆರ್ಥಿಕ ಸ್ಥಿತಿ ಉತ್ತಮಪಡಿಸಲು ಅಲ್ಲಿನ ಉದ್ಯಮಿಯೊಬ್ಬರು ತಯಾರಾಗಿದ್ದಾರೆ ಎಂದು ರಾಜಾ ಹೇಳಿದ್ದಾರೆ. ಆದರೆ ಅವರದ್ದೊಂದು ಷರತ್ತಿದೆ. ಇಷ್ಟರಲ್ಲೇ ಶುರುವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಬೇಕು. ಇಂಡಿಯವನ್ನು ಸೋಲಿಸಿದರೆ ಪಿಸಿಬಿಗೆ ಅವರು ಬ್ಲ್ಯಾಂಕ್ ಚೆಕ್ ನೀಡಲು ತಯಾರಿದ್ದಾರೆ ಎಂದು ರಾಜಾ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ಅಕ್ಟೋಬರ್ 24 ರಂದು ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

‘ಪಿಸಿಬಿ ನಿರ್ವಹಣೆಗೆ ಶೇಕಡಾ 50 ರಷ್ಟು ಹಣವನ್ನು ಐಸಿಸಿ ನೀಡುತ್ತದೆ. ಐಸಿಸಿ ಒಟ್ಟು ಆದಾಯದ ಶೇಕಡಾ 90 ರಷ್ಟು ಹಣ ಇಂಡಿಯಾದಿಂದ ಹೋಗುತ್ತದೆ. ಒಂದು ಪಕ್ಷ ಇಂಡಿಯ ಐಸಿಸಿಗೆ ಫಂಡಿಂಗ್ ಮಾಡುವುದನ್ನು ನಿಲ್ಲಿಸಿದರೆ, ಪಿಸಿಬಿ ಕುಸಿದು ಬೀಳುವ ಸಾಧ್ಯತೆಯಿದೆ. ಯಾಕೆಂದರೆ ಪಿಸಿಬಿಯಿಂದ ಐಸಿಸಿಗೆ ಹೋಗುವ ಫಂಡಿಂಗ್ ಅಕ್ಷರಶಃ ಜೀರೋ. ಆದರೆ, ಪಿಸಿಬಿಯ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನಾನು ಕಟಿಬದ್ಧನಾಗಿದ್ದೇನೆ,’ ಎಂದು ರಾಜಾ ಹೇಳಿದ್ದಾರೆ.

‘ಟಿ20 ವಿಶ್ವಕಪ್ನಲ್ಲಿ ಇಂಡಿಯವನ್ನು ಪಾಕಿಸ್ತಾನ ಸೋಲಿಸಿದ್ದೇಯಾದರೆ ಪಿಸಿಬಿಗೆ ಬ್ಲ್ಯಾಂಕ್ ಚೆಕ್ ಒಬ್ಬ ಶ್ರೀಮಂತ ಇನ್ವೆಸ್ಟರ್ ತಯಾರಾಗಿದ್ದಾರೆ,’ ಅಂತ ಪಾಕಿಸ್ತಾನ ಆರಂಭ ಆಟಗಾರನಾಗಿದ್ದ ರಾಜಾ ಹೇಳಿದ್ದಾರೆ.

ಭಯೋತ್ಪಾದಕರ ದಾಳಿಯ ಸುಳಿವಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರವಾಸ ತೆರಳಿದ್ದ ನ್ಯೂಜಿಲೆಂಡ್ ಯಾವುದೇ ಪಂದ್ಯ ಆಡದೆ ಸ್ವದೇಶಕ್ಕೆ ಮರಳಿತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶ್ರೀಮಂತವಾಗಿದ್ದರೆ ಮತ್ತು ಹಣ ಹರಿದು ಬರುತ್ತಿದ್ದರೆ ಯಾವ ದೇಶವೂ ಪ್ರವಾಸದಿಂದ ಹಿಂದೆಗೆಯುವುದಿಲ್ಲ ಎಂದು ರಾಜಾ ಹೇಳಿದ್ದಾರೆ.

‘ಮಂಡಳಿಯ ಆರ್ಥಿಕ ಸ್ಥಿತಿ ಬಲವಾಗಿದ್ದರೆ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಂಥ ತಂಡಗಳು ನಮ್ಮೊಂದಿಗೆ ಆಡುವುದನ್ನು ಕಡೆಗಣಿಸುತ್ತಿರಲಿಲ್ಲ, ಅತ್ಯುತ್ತಮ ಕ್ರಿಕೆಟ್ ಟೀಮ್ ಮತ್ತು ಆರ್ಥಿಕವಾಗಿ ಸದೃಢವಾಗಿರುವ ಮಂಡಳಿಯನ್ನು ಹೊಂದುವುದು-ಎರಡು ಬಹು ದೊಡ್ಡ ಸವಾಲುಗಳಾಗಿವೆ,’ ಎಂದು ರಾಜಾ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾನಲ್ಲಿ 2007ರಲ್ಲಿ ನಡೆದ ಮೊಟ್ಟ ಮೊದಲ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ 2014 ಆವೃತ್ತಿಯಲ್ಲಿ ಫೈನಲ್ ತಲಪಿತ್ತು. ಭಾರತ ಮತ್ತು ಪಾಕಿಸ್ತಾನ ಇರುವ ಗ್ರೂಪ್ 2ರಲ್ಲಿ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಸಹ ಇದ್ದು, ಮೊದಲ ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ಗೆಲ್ಲುವ ಇನ್ನೆರಡು ಟೀಮ್​ಗಳು ಈ ಗ್ರೂಪ್ ಸೇರಲಿವೆ.

ಗ್ರೂಪ್ 1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಮತ್ತು ವೆಸ್ಟ್ ಇಂಡೀಸ್ ಜೊತೆ ಅರ್ಹತಾ ಸುತ್ತಿನಿಂದ ಬರುವ ಎರಡು ತಂಡಗಳಿವೆ. ಪುರುಷರ ಟಿ20 ವಿಶ್ವಕಪ್ ಅಕ್ಟೋಬರ್ 17 ರಿಂದ ಯುಎಈ ಮತ್ತು ಒಮನ್ ನಲ್ಲಿ ನಡೆಯಲಿದ್ದು ಫೈನಲ್ ಪಂದ್ಯವನ್ನು ನವೆಂಬರ್ 14 ರಂದು ದುಬೈನಲ್ಲಿ ಆಯೋಜಿಸಲಾಗುತ್ತದೆ.

ಇದನ್ನೂ ಓದಿ:  ಕೊಹ್ಲಿ ಪ್ರಸ್ತುತ ಕ್ರಿಕೆಟ್​ ದುನಿಯಾದ ನಿಜವಾದ ಕಿಂಗ್! ವಿರಾಟ್ ಆಟವನ್ನು ಹೊಗಳಿದ ಪಾಕ್ ಕ್ರಿಕೆಟರ್ ಶಾಹಿದ್ ಅಫ್ರಿದಿ

TV9 Kannada

Leave a comment

Your email address will not be published. Required fields are marked *