ಟಿ20 ವಿಶ್ವಕಪ್​ ಸೋಲಿನ ಬೆನ್ನಲ್ಲೇ ಪಾಕ್ ತಂಡದಲ್ಲಿ ಅಚ್ಚರಿಯ ಬೆಳವಣಿಗೆ! 4 ಆಟಗಾರರಿಗೆ ತಂಡದಿಂದ ಕೋಕ್ | Pakistan Test squad announced for Bangladesh series Haris Rauf Imran Butt Shahnawaz Dahani excluded


ಟಿ20 ವಿಶ್ವಕಪ್​ ಸೋಲಿನ ಬೆನ್ನಲ್ಲೇ ಪಾಕ್ ತಂಡದಲ್ಲಿ ಅಚ್ಚರಿಯ ಬೆಳವಣಿಗೆ! 4 ಆಟಗಾರರಿಗೆ ತಂಡದಿಂದ ಕೋಕ್

ಪಾಕ್ ಕ್ರಿಕೆಟಿಗರು

2021 ರ ಟಿ 20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರನ್ನು ಪಾಕಿಸ್ತಾನ ತಂಡದಿಂದ ಕೈಬಿಡಲಾಗಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಹ್ಯಾರಿಸ್ ರೌಫ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇವರಲ್ಲದೆ ಪಾಕಿಸ್ತಾನದ ಅನುಭವಿ ಲೆಗ್ ಸ್ಪಿನ್ನರ್‌ಗಳಾದ ಯಾಸಿರ್ ಶಾ ಮತ್ತು ಶಹನವಾಜ್ ದಹಾನಿ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಪಾಕಿಸ್ತಾನದ ಆಯ್ಕೆಗಾರರು ಸೋಮವಾರ ಆರಂಭಿಕ ಇಮಾಮ್-ಉಲ್-ಹಕ್ ಮತ್ತು ಆಫ್ ಸ್ಪಿನ್ನರ್ ಬಿಲಾಲ್ ಆಸಿಫ್ ಮರಳುವುದರೊಂದಿಗೆ 20 ಸದಸ್ಯರ ತಂಡವನ್ನು ಪ್ರಕಟಿಸಿದರು. ಕಮ್ರಾನ್ ಗುಲಾಮ್ ಕೂಡ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಯಾಸಿರ್ ಬದಲಿಗೆ ಬಿಲಾಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಆಯ್ಕೆಗಾರ ಮುಹಮ್ಮದ್ ವಾಸಿಂ ತಿಳಿಸಿದ್ದಾರೆ. ಯಾಸಿರ್ ಪ್ರಸ್ತುತ ಹೆಬ್ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ಗಾಯದಿಂದಾಗಿ ಅವರು ದೇಶೀಯ ಪ್ರಥಮ ದರ್ಜೆ ಪಂದ್ಯಾವಳಿಯ ಕ್ವೈಡ್-ಎ-ಅಜಮ್ ಟ್ರೋಫಿಯಲ್ಲೂ ಆಡಲು ಸಾಧ್ಯವಾಗುತ್ತಿಲ್ಲ. ಆಯ್ಕೆದಾರರು ಆಫ್ ಸ್ಪಿನ್ನರ್ ಸಾಜಿದ್ ಖಾನ್ ಮತ್ತು ಲೆಗ್ ಸ್ಪಿನ್ನರ್ ಜಾಹಿದ್ ಮಹಮೂದ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಆದರೆ ಯುವ ವೇಗಿ ಶಹನವಾಜ್ ದಹಾನಿ ಅವರನ್ನು ಪದಾರ್ಪಣೆ ಮಾಡಲು ಅವಕಾಶ ನೀಡದೆ ಕೈಬಿಡಲಾಗಿದೆ. ಅವರು ವೆಸ್ಟ್ ಇಂಡೀಸ್ ಪ್ರವಾಸದ ತಂಡದ ಭಾಗವಾಗಿದ್ದರು.

ಬಾಂಗ್ಲಾದೇಶದ ಪರಿಸ್ಥಿತಿ ನೋಡಿ ತಂಡ-ಪಾಕ್ ಆಯ್ಕೆ ಸಮಿತಿ ಆಯ್ಕೆ ಮಾಡಿದೆ
ಬಾಂಗ್ಲಾದೇಶ ಪ್ರವಾಸದಲ್ಲಿ, ಪಾಕಿಸ್ತಾನವು ನವೆಂಬರ್ 26 ರಿಂದ 30 ರವರೆಗೆ (ಚಿತ್ತಗಾಂಗ್) ಮೊದಲ ಟೆಸ್ಟ್ ಮತ್ತು ಡಿಸೆಂಬರ್ 4 ರಿಂದ 8 ರವರೆಗೆ (ಢಾಕಾ) ಎರಡನೇ ಟೆಸ್ಟ್ ಅನ್ನು ಆಡಬೇಕಾಗಿದೆ. ಮುಹಮ್ಮದ್ ವಾಸಿಮ್, ‘ನಾವು ಬಾಂಗ್ಲಾದೇಶದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಿದ್ದೇವೆ ಮತ್ತು ತಂಡದ ಆಡಳಿತದೊಂದಿಗೆ ಸಮಾಲೋಚಿಸಿದ ನಂತರ ಅವರ ಸಂಭಾವ್ಯ ಆಟಗಾರರನ್ನು ಆಯ್ಕೆ ಮಾಡಿದ್ದೇವೆ’ ಎಂದು ಹೇಳಿದರು. ‘ಬಾಂಗ್ಲಾದೇಶ ತನ್ನ ನೆಲದಲ್ಲಿ ಬಲಿಷ್ಠ ತಂಡವಾಗಿದೆ ಆದರೆ ಉತ್ತಮ ಪ್ರದರ್ಶನ ನೀಡುವ ಸಂಪನ್ಮೂಲ, ಪ್ರತಿಭೆ ಮತ್ತು ಅನುಭವ ನಮ್ಮಲ್ಲಿದೆ. ನಾವು ಇಲ್ಲಿ ವೇಗವನ್ನು ಕಂಡುಕೊಳ್ಳಲು ಬಯಸುತ್ತೇವೆ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯವರೆಗೂ ಅದನ್ನು ಮುಂದುವರಿಸಲು ಬಯಸುತ್ತೇವೆ ಎಂದಿದ್ದಾರೆ.

ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಅಬಿದ್ ಅಲಿ, ಅಜರ್ ಅಲಿ, ಬಿಲಾಲ್ ಆಸಿಫ್, ಫಹೀಮ್ ಅಶ್ರಫ್, ಫವಾದ್ ಆಲಂ, ಹಸನ್ ಅಲಿ, ಇಮಾಮ್-ಉಲ್-ಹಕ್, ಕಮ್ರಾನ್ ಗುಲಾಮ್ , ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ನವಾಜ್, ನಸೀಮ್ ಶಾ, ನೌಮನ್ ಅಲಿ, ಸಾಜಿದ್ ಖಾನ್, ಸರ್ಫರಾಜ್ ಅಹ್ಮದ್, ಸೌದ್ ಶಕೀಲ್, ಶಾಹೀನ್ ಶಾ ಅಫ್ರಿದಿ, ಜಾಹಿದ್ ಮಹಮೂದ್.

TV9 Kannada


Leave a Reply

Your email address will not be published. Required fields are marked *