ಟಿ-20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಅಂತೂ ಖಾತೆ ತೆರೆದಿದೆ. ಪಾಕಿಸ್ತಾನ, ನ್ಯೂಜಿಲೆಂಡ್ ಎದುರು ಸೋತ ಕೊಹ್ಲಿ ಸೇನೆ, ಆಫ್ಘನ್ ವಿರುದ್ಧ 66 ರನ್ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಸೆಮಿಫೈನಲ್ ಕನಸು ಕೊಂಚಮಟ್ಟಿಗೆ ಚಿಗುರಿಸಿಕೊಂಡಿದೆ. ಭಾರತಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಇದೆ. ಆದರೆ ಸಾಕಷ್ಟು ಜಟಿಲವಾಗಿದೆ. ಅದಕ್ಕಾಗಿ ನೆಟ್ ರನ್ರೇಟ್ ಲೆಕ್ಕಾಚಾರ ನಡೆಯುತ್ತಿದೆ.
ವಿಶ್ವಕಪ್ ಸೂಪರ್-12 ಗ್ರೂಪ್-2ರ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ, ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನ 4 ಪಂದ್ಯಗಳಲ್ಲಿ ಗೆದ್ದು, ಒಂದು ಪಂದ್ಯ ಬಾಕಿ ಇರುವಾಗಲೇ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಆಫ್ಘಾನಿಸ್ತಾನ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, ಎರಡರಲ್ಲಿ ಸೋತಿದೆ. 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, +1.481 ರನ್ರೇಟ್ ಹೊಂದಿದೆ. ಇನ್ನ ನ್ಯೂಜಿಲೆಂಡ್ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದೆ. 4 ಅಂಕ ಹೊಂದಿದ್ದು +0.816 ರನ್ರೇಟ್ನೊಂದಿಗೆ 3ನೇ ಸ್ಥಾನದಲ್ಲಿದೆ.
ಆಫ್ಘನ್ ವಿರುದ್ಧ ಭಾರತ 66ರನ್ಗಳ ಅಂತರ ಗೆಲುವು ದಾಖಲಿಸಿದ ಪರಿಣಾಮ, ಮೈನಸ್ನಲ್ಲಿದ್ದ ನೆಟ್ ರನ್ರೇಟ್ ಪ್ಲಸ್ ಆಗಿದೆ. ಮೈನಸ್ 1.609 ಇದ್ದ ನೆಟ್ ರನ್ ರೇಟ್ +0.073ಕ್ಕೆ ಏರಿದೆ. ಆದರೆ ನ್ಯೂಜಿಲೆಂಡ್ – ಭಾರತ ಇನ್ನೂ ಎರಡು ಪಂದ್ಯಗಳು ಆಡಬೇಕಿರುವ ಕಾರಣ, ಅಚ್ಚರಿ ಬೆಳವಣಿಗೆಗಳು ನಡೆದರೂ ಅಚ್ಚರಿ ಇಲ್ಲ. ಟೀಮ್ ಇಂಡಿಯಾ ಸೆಮಿಫೈನಲ್ ಬಾಗಿಲು ಬಡಿಯಬೇಕೆಂದರೆ ಸಾಕಷ್ಟು ಅವಕಾಶಗಳಿವೆ. ಆದ್ರೆ ಇದ್ರಲ್ಲಿ ಒಂದು ಅವಕಾಶ ಕೈ ತಪ್ಪಿದರೂ ಮನೆಗೆ ವಾಪಸ್ ಬರಬೇಕಾಗುತ್ತೆ.
ಹೇಗಿರಬೇಕು ಲೆಕ್ಕಾಚಾರ..?
- ಉಳಿದ ಎರಡೂ ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯ. ಒಂದು ಪಂದ್ಯ ಸೋತರೂ ಸೆಮಿಫೈನಲ್ ಬಾಗಿಲು ಮುಚ್ಚಿದಂತೆ.
- ನ್ಯೂಜಿಲೆಂಡ್ ಕೂಡ ಎರಡು ಪಂದ್ಯಗಳನ್ನ ಆಡಲಿದ್ದು, ಒಂದು ಪಂದ್ಯವಾದರೂ ಸೋಲಬೇಕಾಗುತ್ತೆ. ಎರಡೂ ಗೆದ್ದರೆ ಟೀಮ್ ಇಂಡಿಯಾ ಸೆಮೀಸ್ ಕನಸು ಭಗ್ನಗೊಳ್ಳಲಿದೆ. ಒಂದು ಪಂದ್ಯ ಸೋತರೆ ಭಾರತಕ್ಕೆ ಸೆಮೀಸ್ ಜೀವಂತ.
- ಒಂದು ವೇಳೆ ನ್ಯೂಜಿಲೆಂಡ್ ಉಳಿದೆರಡು ಪಂದ್ಯಗಳಲ್ಲಿ ಸೋತರೆ, ಸೆಮೀಸ್ಗಾಗಿ ಆಫ್ಘನ್ -ಟೀಮ್ ಇಂಡಿಯಾ ನಡುವೆ ನೆಟ್ ರನ್ರೇಟ್ ಲೆಕ್ಕಾಚಾರ ನಡೆಯುತ್ತೆ.
- ನಮೀಬಿಯಾ ಎದುರು ಕಿವೀಸ್ ಸೋತು, ಆಫ್ಘನ್ ವಿರುದ್ಧ ಗೆದ್ದರೆ, ಆಗ ಭಾರತ-ನ್ಯೂಜಿಲೆಂಡ್ ನಡುವೆ ರನ್ರೇಟ್ ಲೆಕ್ಕಾಚಾರ ನಡೆಯುತ್ತೆ.
- ಅಥವಾ ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ಗೆದ್ದು ಆಫ್ಘನ್ ವಿರುದ್ಧ ಸೋತಿದ್ದೇ ಆದರೆ ಆಗ ಮೂರು (ಕಿವೀಸ್, ಭಾರತ, ಆಫ್ಘನ್) ತಂಡಗಳ ನಡುವೆ ರನ್ರೇಟ್ ಲೆಕ್ಕಾಚಾರ ಎದುರಾಗುತ್ತೆ, ಇದರಲ್ಲಿ ಕಿವೀಸ್, ಆಫ್ಘನ್ಗಿಂತ ರನ್ರೇಟ್ ಹೆಚ್ಚಿದ್ದರೆ ಮಾತ್ರ ಭಾರತ ಸೆಮೀಸ್ಗೆ ಪ್ರವೇಶ ಪಡೆಯಲಿದೆ.
ಭಾರತಕ್ಕೆ ಗೆಲುವಿನ ಅಂತರಗಳು ಹೇಗಿರಬೇಕು..?
ಸ್ಕಾಟ್ಲೆಂಡ್-ನಮೀಬಿಯಾ ಎದುರು ಭಾರತ ಮೊದಲಿಗೆ ಬ್ಯಾಟಿಂಗ್ ನಡೆಸಿದರೆ 60 ರನ್ಗಳ ಅಂತರದಿಂದ ಗೆಲುವು ದಾಖಲಿಸಬೇಕು. ಆದರೆ ಚೇಸಿಂಗ್ ಮಾಡಿದ್ದೇ ಆದರೆ 13 ಓವರ್ಗಳ ಮೊದಲೇ ಚೇಸ್ ಮಾಡಬೇಕಿರೋದು ಅಗತ್ಯ. ಇದಿಷ್ಟೇ ಅಲ್ಲ, ಆಫ್ಘನ್-ಕಿವೀಸ್ ಕೂಡ ಉಳಿದ ಪಂದ್ಯಗಳಲ್ಲಿ ಭಾರಿ ಅಂತರದ ಗೆಲುವು ದಾಖಲಿಸಬಾರದು.
ಒಟ್ನಲ್ಲಿ ಇಷ್ಟೆಲ್ಲಾ ನಡೆದರೆ ಮಾತ್ರ ಟೀಮ್ ಇಂಡಿಯಾಗೆ ಸೆಮೀಸ್ ಆಸೆ ಜೀವಂತವಾಗಿರಲಿದೆ. ಇಲ್ಲಿ ಒಂದು ಅವಕಾಶ ಕೈ ತಪ್ಪಿದರೂ ಭಾರತದ ಸೆಮಿಫೈನಲ್ ಕನಸು ಭಗ್ನವಾಗಲಿದೆ.