ಟೀಂ ಇಂಡಿಯಾದಲ್ಲಿ ಆ ಇಬ್ಬರು ಆಟಗಾರರ ವಿಚಾರದಲ್ಲಿ ಯಾಕೆ ಹೀಗೆ ಆಗ್ತಿದೆ?


ರವಿಚಂದ್ರನ್​ ಅಶ್ವಿನ್​, ಹನುಮ ವಿಹಾರಿ.. ಈ ಇಬ್ಬರು ಆಟಗಾರರನ್ನ ಟೀಮ್​ ಇಂಡಿಯಾ ಮ್ಯಾನೇಜ್​​ಮೆಂಟ್​ ಯಾವ ದೃಷ್ಟಿಯಲ್ಲಿ ನೋಡ್ತಾ ಇದೆ? ಸಾಮರ್ಥ್ಯ ಪ್ರೂವ್​ ಮಾಡಿದ್ರೂ ನಿರ್ಲಕ್ಷ್ಯ ಸರೀನಾ? ಈ ಎರಡು ಪ್ರಶ್ನೆಗಳು ಮತ್ತೆ ಚರ್ಚೆಯಲ್ಲಿ ಮುನ್ನೆಲೆಗೆ ಬಂದಿವೆ. ಹಾಗಾದ್ರೆ, ಈ ಇಬ್ಬರ ಭವಿಷ್ಯದ ಕತೆಯೇನು?

ಕಳೆದ ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್​ ಪಂದ್ಯವನ್ನ ಮರೆಯೋಕೆ ಸಾಧ್ಯವಿಲ್ಲ. 407 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಟೀಮ್​ ಇಂಡಿಯಾ 272 ರನ್​ಗಳಿಸುವಷ್ಟರಲ್ಲೇ 5 ವಿಕೆಟ್​ ಕಳೆದುಕೊಂಡು ಸೋಲಿನ ಹಾದಿ ತುಳಿದಿತ್ತು. ಆಗ ಕ್ರೀಸ್​ನಲ್ಲಿ ಜೊತೆಯಾದ ಆರ್​.ಅಶ್ವಿನ್​, ಹನುಮ ವಿಹಾರಿ ಜೋಡಿ ಆಸ್ಟ್ರೇಲಿಯಾ ವೇಗಿಗಳ ಬೆಂಕಿ ಬಿರುಗಾಳಿಯಂತಹ ಎಸೆತಗಳನ್ನ ದಿಟ್ಟ ಎದುರಿಸಿದ್ರು. ಅದರಲ್ಲಿ ಅದೆಷ್ಟೋ ಎಸೆತಗಳು ನೇರವಾಗಿ ಇಬ್ಬರ ದೇಹಕ್ಕೆ ತಗುಲಿದ್ವು. ಇಂಜುರಿ ಸಮಸ್ಯೆಯೂ ಕಾಡಿತ್ತು.

ಅಂದು ಅಷ್ಟು ನೋವಿನ ನಡುವೆಯೂ ಈ ಜೋಡಿ 40ಕ್ಕೂ ಹೆಚ್ಚು ಓವರ್​ ಎದುರಿಸಿ ದಿಟ್ಟ ಹೋರಾಟ ನಡೆಸಿತ್ತು. ವಿಪರ್ಯಾಸ ಎಂಬಂತೆ ಅಂದು ಹೀಗೆ ಹೋರಾಟ ಮಾಡಿ ಡ್ರಾಗೆ ಕಾರಣವಾದ ವಿಹಾರಿ ಹಾಗೂ ಅಶ್ವಿನ್​ ಈಗ ತಂಡದಲ್ಲಿ ತಮ್ಮ ಸ್ಥಾನಕ್ಕೆ ಹೋರಾಡ್ತಾ ಇದ್ದಾರೆ.

ವಿರಾಟ್​ ಕೊಹ್ಲಿ ಕಮ್​ಬ್ಯಾಕ್, ಹನುಮ ವಿಹಾರಿ ಡ್ರಾಪ್​..!
ಜೊಹಾನ್ಸ್​ ಬರ್ಗ್​ ಟೆಸ್ಟ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅಲಭ್ಯರಾಗಿದ್ದ ಕಾರಣಕ್ಕೆ ಹನುಮ ವಿಹಾರಿ ಚಾನ್ಸ್​ ಪಡೆದುಕೊಂಡಿದ್ರು. ಆದ್ರೆ, ಕೇಪ್​ ಟೌನ್​ ಟೆಸ್ಟ್​ಗೆ ಕೊಹ್ಲಿ ಕಮ್​ಬ್ಯಾಕ್​ ಮಾಡಿದ್ದೇ ತಡ ವಿಹಾರಿ ಡ್ರಾಪ್​ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ಎಕ್ಸ್​​ ಟ್ರಾ ಪ್ಲೇಯರ್​ ಆಗೇ ಗುರುತಿಸಿಕೊಂಡಿರೋ ವಿಹಾರಿ, ಖಾಯಂ ಆಟಗಾರರ ಅಲಭ್ಯತೆಯಲ್ಲಿ ಮಾತ್ರ ಸ್ಥಾನ ಪಡೀತಿದ್ದಾರೆ. ಸತತ ವೈಫಲ್ಯ ಅನುಭವಿಸುತ್ತಿದ್ದರೂ ರಹಾನೆ, ಪೂಜಾರ ಮಾತ್ರ ಅವಕಾಶದ ಅವಕಾಶ ಪಡೀತಿದ್ದಾರೆ.

ಜಡೇಜಾ ಇದ್ದಿದ್ರೆ ಅಶ್ವಿನ್​ಗೆ ಸಿಗ್ತಿತ್ತಾ ಅವಕಾಶ?
‘ಅಶ್ವಿನ್​ ಸ್ಪಿನ್​ ಆಲ್​ರೌಂಡರ್​ ಸ್ಥಾನವನ್ನ ಸಮರ್ಥವಾಗಿ ತುಂಬಬಲ್ಲರು’ ಇದು ಮೊನ್ನೆ ಟೆಸ್ಟ್​ ನಾಯಕ ವಿರಾಟ್​ ಕೊಹ್ಲಿ ಹೇಳಿದ ಮಾತು. ಸ್ಥಾನವನ್ನ ತುಂಬಬಲ್ಲರು ಎಂಬ ಮಾತಿನ ಅರ್ಥವೇನು? ಹಾಗಾದ್ರೆ ಅಶ್ವಿನ್​ ಸಮರ್ಥ ಆಲ್​ರೌಂಡರ್​ ಅಲ್ವಾ? ಈ ಎರಡು ಪ್ರಶ್ನೆಗಳು ಈಗ ಹುಟ್ಟಿವೆ. ಜೊತೆಗೆ ಒಂದು ವೇಳೆ ಜಡೇಜಾ ಫಿಟ್​ ಇದ್ದಿದ್ರೆ, ಇಂಗ್ಲೆಂಡ್​ನಂತೆ ಅಶ್ವಿನ್​ ಸೌತ್​ ಆಫ್ರಿಕಾದಲ್ಲೂ ಬೆಂಚ್​ ವಾರ್ಮ್​ ಮಾಡ್ತಾ ಇದ್ರಾ..? ಎಂಬ ಚರ್ಚೆಗೆ ಕಾರಣವಾಗಿದೆ.

ಅಂತಿಮವಾಗಿ ಟೀಮ್​ ಇಂಡಿಯಾ ಈ ಇಬ್ಬರಿಂದ ಏನನ್ನ ಬಯಸ್ತಾಯಿದೆ ಅನ್ನೋದು ಪ್ರಶ್ನೆಯಾಗಿದೆ. ಟಫ್​ ಕಂಡೀಷನ್​ನಲ್ಲಿ ದಿಟ್ಟ ಹೋರಾಟ ನಡೆಸಿ ವಿಹಾರಿ ಗೆದ್ದಿದ್ದಾರೆ. ಅಶ್ವಿನ್​, ತಾನೆಂತ ಪ್ಲೇಯರ್​ ಅಂತಾ ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡರಲ್ಲೂ ಪ್ರೂವ್​ ಮಾಡಿದ್ದಾರೆ. ಹಾಗಿದ್ರೂ ಈ ಇಬ್ಬರು ಕಡೆಗಣನೆಗೆ ಒಳಗಾಗುತ್ತಲೇ ಇದ್ದಾರೆ. ಈ ಬಗ್ಗೆ ಎಷ್ಟೇ ಚರ್ಚೆ ನಡೆದ್ರೂ ಉತ್ತರವೇ ಸಿಗ್ತಿಲ್ಲ.

News First Live Kannada


Leave a Reply

Your email address will not be published. Required fields are marked *