ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-2 ಅಂತರದ ಹೀನಾಯ ಸೋಲನ್ನು ಕಂಡಿರುವ ಟೀಮ್ ಇಂಡಿಯಾ ಈಗ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸುವುದು ಪ್ರತಿಷ್ಠೆಯಾಗಿದೆ. ಆದರೆ, ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಸೋತಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಜೊತೆಗೆ ಹಲವು ಮಾಜಿ ಕ್ರಿಕೆಟಿಗರು ಕೂಡ ಟೀಕೆಗಳನ್ನ ಮಾಡ್ತಿದ್ದಾರೆ. ಅದರಲ್ಲೂ ಕೆಎಲ್ ರಾಹುಲ್ ನಾಯಕತ್ವದ ಕುರಿತು ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಕೂಡ ಈ ಕುರಿತು ಮಾತನಾಡಿದ್ದು, ಇಬ್ಬರ ಅಲಭ್ಯತೆ ತಂಡವನ್ನ ಕಾಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ‘ನಾಯಕ’ ವಿರಾಟ್ ಕೊಹ್ಲಿಯ ಅಲಭ್ಯತೆ ಸೋಲಿಗೆ ಕಾರಣವಾಯ್ತು ಎಂದಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿರುವ ರೋಹಿತ್ ಶರ್ಮಾ ಇಲ್ಲದೇ ಇರುವುದು ಟೀಮ್ ಇಂಡಿಯಾ ಸೋಲಿಗೆ ಒಂದು ಕಾರಣವಾದರೆ, ಮತ್ತೊಂದು ಕಾರಣ ತಂಡದಲ್ಲಿ ವಿರಾಟ್ ಕೊಹ್ಲಿ ಇದ್ದರೂ ಕೂಡ ಅವರು ನಾಯಕತ್ವ ನಿರ್ವಹಿಸದೇ ಇರುವುದು ಎಂದು ಸಲ್ಮಾನ್ ಬಟ್ ತಿಳಿಸಿದ್ದಾರೆ. ಒಂದುವೇಳೆ ಇಂತಹ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ಇದ್ದಿದ್ದರೆ ಟೀಮ್ ಇಂಡಿಯಾ ಜಯ ಸಾಧಿಸುತ್ತಿತ್ತು ಎಂದು ಸಲ್ಮಾನ್ ಬಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.