2006ರಲ್ಲಿ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿ ಭರವಸೆ ಮೂಡಿಸಿದ್ದ ರಾಬಿನ್​ ಉತ್ತಪ್ಪರನ್ನ ಟೀಮ್​ ಇಂಡಿಯಾದ ಖಾಯಂ ಪ್ಲೇಯರ್​ ಎಂದೇ ಭಾವಿಸಲಾಗಿತ್ತು. 2007ರ ವಿಶ್ವಕಪ್ ಅಂತ್ಯವರೆಗೂ ಅದೇ ಮಾತು ಇತ್ತು. ಆದರೆ ಎಲ್ಲರ ಊಹೆ ಆನಂತರದಲ್ಲಿ ತಪ್ಪಾಯಿತು.. ದಿನ ಕಳೆದಂತೆ ಉತ್ತಪ್ಪ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಹೋದ್ರು. ಅಂತಿಮ ಹಂತದಲ್ಲಿ ಅದು ತಲುಪಿದ್ದು, ಕೇವಲ 46 ಏಕದಿನ, 13 ಟಿ20 ಪಂದ್ಯಗಳಿಗೆ ಕರಿಯರ್​​ ಭಾಗಶಃ ಖತಂ ಅನ್ನೋ ಹಂತಕ್ಕೆ.

ಕೇವಲ 46 ಏಕದಿನ, 13 ಟಿ20 ಪಂದ್ಯಕ್ಕೆ ಚೊಚ್ಚಲ ಪಂದ್ಯದಲ್ಲೇ ಭರವಸೆ ಮೂಡಿಸಿದ್ದ ಆಟಗಾರನ ಕರಿಯರ್​​ ಅಂತ್ಯದ ದಾರಿ ಕಂಡಿದೆ. ಪ್ರತಿ 3 ಪಂದ್ಯಕ್ಕೆ ಬ್ಯಾಟಿಂಗ್​ ಆರ್ಡರ್​​ನಲ್ಲಿ ಮಾಡಿದ ಬದಲಾವಣೆ, ಇದಕ್ಕೆ ಕಾರಣ ಅನ್ನೋದು ಉತ್ತಪ್ಪ ಆರೋಪವೂ ಆಗಿದೆ. ಅದು ನಿಜ ಅನ್ನೋದು ವಿಶ್ಲೇಷಕರ ಅಭಿಪ್ರಾಯ ಕೂಡ.

‘ಸ್ಲಾಟ್​ ಬದಲಾವಣೆ ಅವಕಾಶದ ಕೊರತೆಗೆ ಕಾರಣ’
‘ಆರಂಭದ ದಿನಗಳಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದೆ. ನಂತರ ಮಧ್ಯಮ ಕ್ರಮಾಂಕದ ಆಟಗಾರ ಹಾಗೂ ಕೆಳ ಕ್ರಮಾಂಕದ ಆಟಗಾರನಾಗಿಯೂ ಕಣಕ್ಕಿಳಿದಿದ್ದೆ. ಹೀಗೆ ಭಿನ್ನ ವಿಭಿನ್ನವಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿದ ಕಾರಣದಿಂದ ಸರಿಯಾದ ರನ್ ಕಲೆ ಹಾಕಲಾಗಿದೆ. ತಂಡದಿಂದ ಹೊರಗುಳಿದೆ ಎನಿಸುತ್ತದೆ. ಬಹುಶಃ ಒಂದೇ ಕ್ರಮಾಂಕದಲ್ಲಿ ಆಡಿದ್ದರೆ ನೂರು ಇನ್ನೂರು ಪಂದ್ಯಗಳನ್ನು ಆಡುವ ಅವಕಾಶ ನನಗೂ ಬರುತ್ತಿತ್ತೇನೋ’
ರಾಬಿನ್​ ಉತ್ತಪ್ಪ, ಕ್ರಿಕೆಟಿಗ

ಇದು ತಂಡದಿಂದ ಕಡೆಗಣನೆ ಆಗಿದ್ದಕ್ಕೆ ಉತ್ತಪ್ಪ ಕಂಡುಕೊಂಡ ಉತ್ತರ. ಈಗ 36ನೇ ವಯಸ್ಸಿಗೆ ಕಾಲಿಟ್ಟಿರುವ ಉತ್ತಪ್ಪ ಪಾಲಿಗೆ ಮತ್ತೆ ಕಮ್​ಬ್ಯಾಕ್​ ಕನಸಿನ ಮಾತೇ ಬಿಡಿ.. ಆದ್ರೆ ಕೆಲ ವರ್ಷ ಆಡುವ ಅವಕಾಶ ಹೊದಿರುವ ಇನ್ನಿಬ್ಬರು ಕನ್ನಡಿಗರಿಗೂ ಕೂಡ ಉತ್ತಪ್ಪಗೆ ಆದ ಅನ್ಯಾಯವೇ ಟೀಮ್​ ಇಂಡಿಯಾದಲ್ಲಿ ರಿಪೀಟ್​​ ಆಗ್ತಿದೆ.

ಪಂದ್ಯದಿಂದ ಪಂದ್ಯಕ್ಕೆ ಬದಲಾಗ್ತಿದೆ ಬ್ಯಾಟಿಂಗ್​ ಆರ್ಡರ್​​
ಮನೀಷ್​, ರಾಹುಲ್​ ವೃತ್ತಿ ಬದುಕು ಸಂಕಷ್ಟದಲ್ಲಿ

ಈಗಾಗಲೇ ಕನ್ನಡಿಗ ರಾಬಿನ್​ ಉತ್ತಪ್ಪ ಬ್ಯಾಟಿಂಗ್​ ಆರ್ಡರ್​​​ ಬದಲಾವಣೆಯ ವ್ಯೂಹಕ್ಕೆ ಸಿಲುಕಿ ಅಲ್ಪ ಪಂದ್ಯಗಳಿಗೆ ಕ್ರಿಕೆಟ್​​​ಗೆ ಗುಡ್​ ಬೈ ಹೇಳುವಂತಾಗಿದೆ. ಇದೀಗ ಇನ್ನಿಬ್ಬರು ಕನ್ನಡಿಗರಾದ ಕೆಎಲ್​ ರಾಹುಲ್​, ಮನೀಷ್​ ಪಾಂಡೆಗೂ ಇದೇ ಸ್ಥಿತಿ ಬಂದೊದಗಿದೆ. ಇದ್ಯಾಕೆ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಪಡೆಯೋಕು ಮುಂಚೆ ವಿವಿಧ ಕ್ರಮಾಂಕದಲ್ಲಿ ರಾಹುಲ್​ ಮಾಡಿರುವ ಸಾಧನೆಯನ್ನ ಒಮ್ಮೆ ನೋಡಿ..

ವಿವಿಧ ಕ್ರಮಾಂಕಗಳಲ್ಲಿ ರಾಹುಲ್​ ಬ್ಯಾಟಿಂಗ್​
ಕ್ರಮಾಂಕ               ಪಂದ್ಯ                     ರನ್​
1                            46                       2352
2                            38                       1489
3                            17                         480
4                            09                         334
5                            10                         453
6                            02                          14

ಆರಂಭಿಕನಾಗಿ 1 ಹಾಗೂ 2ನೇ ಸ್ಲಾಟ್​ನಲ್ಲಿ ರಾಹುಲ್,​ ಸಾಲಿಡ್​​ ಪರ್ಫಾಮೆನ್ಸ್​ ನೀಡಬಲ್ಲರು ಅನ್ನೋದನ್ನ ಅಂಕಿ-ಅಂಶಗಳೇ ಹೇಳ್ತಿವೆ. ಆದ್ರೂ ರಾಹುಲ್​ ಸದ್ಯ ಟೀಮ್​ ಇಂಡಿಯಾದ ಆರಂಭಿಕನಲ್ಲ. ಕೆಲವೇ ಕೆಲವು ಪಂದ್ಯಗಳ ವೈಫಲ್ಯ ಹಾಗೂ ಸ್ಥಾನಕ್ಕಾಗಿ ಇರುವ ಪೈಪೋಟಿ ಓಪನರ್​​ ಆಗಿದ್ದ ಕೆಎಲ್​ರನ್ನ, ಮಿಡಲ್​ ಆರ್ಡರ್​​ ಬ್ಯಾಟ್ಸ್​ಮನ್​ ಆಗಿ ಪರಿವರ್ತಿಸಿವೆ. ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಂದ್ರೆ ರಾಹುಲ್​ಗಿದು ಅನಿವಾರ್ಯವೂ ಆಗಿದೆ.

ಹಲವು ಕ್ರಮಾಂಕಗಳಲ್ಲಿ ಬ್ಯಾಟಿಂಗ್​ ಮಾಡಿದ್ರೂ ರಾಹುಲ್,​ ತಂಡದಲ್ಲಿ ಕನ್ಸಿಸ್ಟೆಂಟ್​​ ಆಗಿ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆದ್ರೆ ಮನೀಷ್​ ಪಾಂಡೆ ಕತೆಯೇ ಬೇರೆ. ಪ್ಲೇಯಿಂಗ್​ ಇಲೆವೆನ್​ನ ಅವಿಭಾಜ್ಯ ಅಂಗವಾದ ಯಾವುದಾದರೂ ಆಟಗಾರ ಅಲಭ್ಯರಾದ್ರೆ, ಮಾತ್ರ ಅವಕಾಶ. ಬ್ಯಾಟಿಂಗ್​ ಆರ್ಡರ್​​ ಪಂದ್ಯದಿಂದ ಪಂದ್ಯಕ್ಕೆ ಬದಲಾಗೋದ್ರಲ್ಲಿ ಅನುಮಾನವೇ ಇಲ್ಲ.

ವಿವಿಧ ಕ್ರಮಾಂಕಗಳಲ್ಲಿ ಮನೀಷ್​​ ಬ್ಯಾಟಿಂಗ್​
ಕ್ರಮಾಂಕ                 ಪಂದ್ಯ                  ರನ್​
4                         17                     420
5                         22                     485
6                         14                     296
7                          1                        0

ಈವರೆಗೆ ಮನೀಷ್​ ಪಾಂಡೆಗೆ ಆಡಿದ 65 ಪಂದ್ಯಗಳಲ್ಲಿ ಬ್ಯಾಟಿಂಗ್​ ಅವಕಾಶ ಸಿಕ್ಕಿದ್ದೇ 54 ಇನ್ನಿಂಗ್ಸ್​​ಗಳಲ್ಲಿ. ಆ 54 ಇನ್ನಿಂಗ್ಸ್​​ಗಳನ್ನ ಆಡುವಾಗಲೇ 4 ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ್ದಾರೆ. ಹೀಗಾಗಿ ಉತ್ತಪ್ಪರಂತೇ ಮನೀಷ್​ಗೂ ರನ್​ ಬರ ಎದುರಾಗಿದೆ. ಹೀಗಾಗಿ ಉತ್ತಪ್ಪ ಹಾದಿಯಲ್ಲೇ ಮನೀಷ್​​ ಕರಿಯರ್​ ಕೂಡ ಅಂತ್ಯದ ಹಾದಿ ಹಿಡಿಯುತ್ತಾ ಅನ್ನೋದು, ಇದೀಗ ಚರ್ಚೆಗೆ ಕಾರಣವಾಗಿದೆ.

ಕರುಣ್​ ನಾಯರ್​ದು ಇದೇ ಕಥೆ, ಅದೇ ವ್ಯಥೆ..!
ಮನೀಷ್​​, ರಾಹುಲ್​ ಮಾತ್ರವಲ್ಲ, ವೀರೇಂದ್ರ ಸೆಹ್ವಾಗ್ ಬಳಿಕ ಟೆಸ್ಟ್​​​ನಲ್ಲಿ ತ್ರಿಶತಕ ಬಾರಿಸಿದ ಹೆಗ್ಗಳಿಕೆಯ ಕರುಣ್​ ನಾಯರ್​ದ್ದೂ ಇದೇ ಕಥೆ. ಟೆಸ್ಟ್​​ ಏಕದಿನ ಸೇರಿ 9 ಇನ್ನಿಂಗ್ಸ್​​ಗಳಲ್ಲಿ ಆಡಿರುವ ಕರುಣ್​, ಬರೋಬ್ಬರಿ 4 ಸ್ಲಾಟ್​​ಗಳಲ್ಲಿ ಬ್ಯಾಟ್​ ಬೀಸಿದ್ದಾರೆ ಅಂದರೆ ನಂಬಲೇಬೇಕು. 52.50ರ ಸರಾಸರಿ ಹೊಂದಿದ್ದರೂ ನಾಯರ್​​​ಗೆ ಟೀಮ್​ ಇಂಡಿಯಾ ಪರ ಆಡೋ ಕೊನೆಯ ಅವಕಾಶ ಸಿಕ್ಕಿದ್ದು, 2017ರಲ್ಲಿ.

ಕೇವಲ ಕರ್ನಾಟಕದ ಈ ಮೂವರು ಆಟಗಾರರು ಮಾತ್ರವಲ್ಲ. ಇನ್ನೂ ಹಲವು ಆಟಗಾರರ ಕರಿಯರ್​​ ಕೂಡ, ಬ್ಯಾಟಿಂಗ್​ ಕ್ರಮಾಂಕದ ಬದಲಾವಣೆಯಿಂದಲೇ ಮಂಕಾಗಿದೆ. ಈ ಬಗ್ಗೆ ಇದೀಗ ಉತ್ತಪ್ಪ ಬಹಿರಂಗ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ಮುಂದೆ ಆದ್ರೂ ಮ್ಯಾನೇಜ್​ಮೆಂಟ್​ ಈ ಸಮಸ್ಯೆಯ ಬಗ್ಗೆ ಗಮನ ಹರಿಸುತ್ತಾ ಅಥವಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ.

The post ಟೀಮ್ ಇಂಡಿಯಾದಲ್ಲಿ ರಾಜ್ಯದ ಕ್ರಿಕೆಟಿಗರಿಗೆ ಆಗ್ತಿದ್ಯಾ ಅನ್ಯಾಯ?- ಸಂಕಷ್ಟದಲ್ಲಿ ಮನೀಷ್​, ರಾಹುಲ್ appeared first on News First Kannada.

Source: newsfirstlive.com

Source link