2007ರಲ್ಲಿ ನಡೆದ ಉದ್ಘಟನಾ ಟಿ20 ವಿಶ್ವಕಪ್​​ಗೆ ಯುವರಾಜ್​ ಸಿಂಗ್​, ಕ್ಯಾಪ್ಟನ್​ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದರಂತೆ. ಹಾಗಂತ ಯುವಿಯೇ ಹೇಳಿದ್ದಾರೆ. 2007ರಲ್ಲಿ ಭಾರತ, ಏಕದಿನ ವಿಶ್ವಕಪ್​ ಸೋತಿತ್ತು. ನಂತರ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್​​ ನಡುವೆ ನಾಲ್ಕು ತಿಂಗಳ ದೀರ್ಘ ಪ್ರವಾಸ ಇತ್ತು. ತದ ನಂತರ ಟಿ20 ವಿಶ್ವಕಪ್ ಆಯೋಜನೆ. ಈ ವೇಳೆ ಗಂಗೂಲಿ, ದ್ರಾವಿಡ್​, ಸಚಿನ್​ ಸೇರಿದಂತೆ, ಹಿರಿಯ ಆಟಗಾರರು ವಿರಾಮಬೇಕು ಎಂದಿದ್ದರು. ಆಗ ಚುಟುಕು ಸಮರಕ್ಕೆ ನಾಯಕತ್ವದ ಗೊಂದಲ ಉಂಟಾಗಿತ್ತು. ಅದಕ್ಕಾಗಿ ಸಾಕಷ್ಟು ಒಳಜಗಳ ಕೂಡ ನಡೆದಿತ್ತು. ಈ ವೇಳೆ ನನಗೆ ತಂಡವನ್ನ ಮುನ್ನಡೆಸೋ ಜವಾಬ್ದಾರಿ ನೀಡುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಮಹೇಂದ್ರ ಸಿಂಗ್​ ಧೋನಿಗೆ ಪಟ್ಟ ನೀಡಲಾಯ್ತು ಎಂದು ಸಿಕ್ಸರ್​ ಕಿಂಗ್​ ಹೇಳಿದ್ದಾರೆ.

ಕತ್ತು ತಿರುಗಿಸುತ್ತೇನೆ ಎಂದಿದ್ದ ಫ್ಲಿಂಟಾಫ್​ಗೆ ಯುವಿ ಗುನ್ನಾ​​

2007ರಲ್ಲಿ ಯುವರಾಜ್​ ಸಿಂಗ್​​ ಒಂದೇ ಓವರ್​ನಲ್ಲಿ ಆರು ಸಿಕ್ಸರ್​ ಸಿಡಿಸಿದ್ದ ಸ್ಮರಣೀಯ ಕ್ಷಣವನ್ನ, ಯಾರೂ ತಾನೆ ಮರೆಯುತ್ತಾರೆ ಹೇಳಿ. ಆದರೆ ಈ ಓವರ್​​ಗೂ ಮುನ್ನ ಇಂಗ್ಲೆಂಡ್​ ಆಲ್​ರೌಂಡರ್ ಫ್ಲಿಂಟಾಫ್​​​ ನಡುವಿನ ಮಾತಿನ ಚಕಮಕಿಯನ್ನ, ಯುವಿ ಬಹಿರಂಗಪಡಿಸಿದ್ದಾರೆ. 18ನೇ ಓವರ್​ನಲ್ಲಿ ಫ್ಲಿಂಟಾಫ್​​​ಗೆ ಯುವಿ ಎರಡು​ ಬೌಂಡರಿ ಸಿಡಿಸಿದ್ದು, ಇಂಗ್ಲೆಂಡ್ ವೇಗಿಗೆ ಇಷ್ಟವಾಗಿರಲಿಲ್ಲವಂತೆ.!! ಹಾಗಾಗಿ ಯುವಿಯನ್ನು ಕರೆದ ಆ ಆಲ್​​ರೌಂಡರ್​, ನಿನ್ನ ಕತ್ತನ್ನು ತಿರುಗಿಸುತ್ತೇನೆ ಎಂದು ಕೆಣಕಿದ್ದ. ಆಗ ಖಡಕ್​ ರೀಪ್ಲೈ ಕೊಟ್ಟಿದ್ದ ಸಿಕ್ಸರ್​ ಕಿಂಗ್​, ನಾನು ಬ್ಯಾಟಿಂಗ್​​​​ ಮಾಡಿದ್ರೆ ಹೇಗಿರುತ್ತೆ ಅನ್ನೋದು ಗೊತ್ತು ತಾನೆ, ಅಂತ ವಾಗ್ಯುದ್ಧ ನಡೆಸಿದ್ರು. ಈ ಘಟನೆ ನಡೆದ ಮರು ಓವರ್​​ನಲ್ಲೇ, ಸ್ಟುವರ್ಟ್​​ ಬ್ರಾಡ್​ರ ಓವರ್​ನಲ್ಲಿ ಸಿಕ್ಸರ್​ಗಳ ಸುರಿಮಳೆ ಸುರಿಸಿದ್ರು. ಅದಾದ ಬಳಿಕ ನನ್ನ ಮೊದಲ ನೋಟವೇ ಫ್ಲಿಂಟಾಫ್​ ಕಡೆ ನೆಟ್ಟಿತ್ತು. ಅವರಿಗೆ ಚೀಕಿ ಸ್ಮೈಲ್​ ಮೂಲಕ, ಚಮಕ್​ ಕೊಟ್ಟಿದ್ದೆ ಎಂದಿದ್ದಾರೆ ಯುವಿ.

ಇಂಗ್ಲಿಷ್​ ಕೋಚಿಂಗ್​​ ಮಾಡೋದಕ್ಕೆ ರೆಡಿಯಾದ್ರಾ ಸಿಕ್ಸರ್​ ಕಿಂಗ್​​..?​

ಯುವರಾಜ್​ ಸಿಂಗ್​​ ಫ್ಯೂಚರ್​ನಲ್ಲಿ ಕೋಚ್​​ ಆಗ್ತಾರೆ ಅಂದುಕೊಂಡಿದ್ರೆ, ನಿಮ್ಮ ಊಹೆ ತಪ್ಪಾಗುತ್ತೆ. ಯೆಸ್..! ಹಾಗಂತ ಯುವಿ ಎಲ್ಲೂ ಹೇಳಿಲ್ಲ. ಆದರೆ ಅವರು ತೆಗೆದುಕೊಂಡ ನಿರ್ಧಾರವೇ, ಇದನ್ನು ಸೂಚಿಸುತ್ತೆ. ಮುಂದಿನ ಬ್ಯಾಚ್​ನ ಪಂಜಾಬ್​ ಕ್ರಿಕೆಟಿಗರಿಗೆ ಅಗತ್ಯ ಇಂಗ್ಲಿಷ್​ ಕೋಚಿಂಗ್​ ತೆಗೆದುಕೊಳ್ತಾರಂತೆ. ಆ ಮೂಲಕ ಅವರನ್ನ ಭಾಷಾ ಕೌಶಲ್ಯದಲ್ಲಿ ಪಳಗಿಸೋಕೆ ಮುಂದಾಗಿದ್ದಾರೆ. ಪಂಜಾಬ್ ತಂಡದಲ್ಲಿ ಅನೇಕ ಆಟಗಾರರು, ಇಂಗ್ಲಿಷ್ ಮೇಲೆ ಹಿಡಿತ ಸಾಧಿಸಿಲ್ಲ. ಹಾಗಾಗಿ ಇಂಗ್ಲಿಷ್​ ಪಾಠಗಳನ್ನ ನೀಡುವ ಮೂಲಕ, ಪಂದ್ಯಕ್ಕೆ ಹೇಗೆ ಸಿದ್ಧವಾಗಬೇಕೆಂಬ ಹುರುಪು ತುಂಬುತ್ತೇನೆ ಎಂದಿದ್ದಾರೆ. ಕೋಚಿಂಗ್ ಅನ್ನ ದೀರ್ಘಾವಧಿ ಮಾಡ್ತೇನೆ ಅನ್ನೋದಿಲ್ಲ.!! ಏಕೆಂದ್ರೆ ನನಗೂ ಬೇರೆ ಬೇರೆ ಕೆಲಸ ಇರುತ್ತೆ. ಯುವಕರೊಂದಿಗೆ ಒಂದು ತಿಂಗಳ ಕಾಲ ಕಳೆಯುತ್ತೇನೆ. ಆನ್​​​ಫೀಲ್ಡ್​​ನಲ್ಲಿ ಏನ್​ ಮಾತಾಡ್ತಾ ಇರ್ಬೇಕು. ಒಂದು ವೇಳೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಹೇಗೆಲ್ಲಾ ಮಾತಾಡಬೇಕು.. ಹೀಗೆ ಹಲವು ವಿಷಯಗಳ ಬಗ್ಗೆ ಕಲಿಸ್ತಾರಂತೆ ಯುವರಾಜ್.

2009ರಲ್ಲಿ ದ್ರಾವಿಡ್ ನೀಡಿದ್ದ​ ಸಲಹೆ ಸ್ಮರಿಸಿದ ರಹಾನೆ​..!

ಟೆಸ್ಟ್​ ತಂಡದ ಉಪನಾಯಕ ಅಜಿಂಕ್ಯಾ ರಹಾನೆ, ಟೀಮ್​ ಇಂಡಿಯಾದ ಆಧಾರ ಸ್ಥಂಭ. ಉಪ ನಾಯಕನಾಗಿ ತಂಡದ ಬೆನ್ನಿಗೆ ನಿಲ್ಲುವ ರಹಾನೆ, ತನ್ನ ಯಶಸ್ಸಿಗೆ ಕಾರಣ ಏನೆಂಬುದನ್ನ ವಿವರಿಸಿದ್ದಾರೆ. 2009ರಲ್ಲಿ ದ್ರಾವಿಡ್‌ ನೀಡಿದ್ದ ಸಲಹೆಯನ್ನ ಸ್ಮರಿಸಿರುವ ಜಿಂಕ್ಸ್​, ಆ ಸಲಹೆಗಳು ನನಗೆ ಸಾಕಷ್ಟು ಸ್ಫೂರ್ತಿ ನೀಡಿತ್ತು ಎಂದಿದ್ದಾರೆ. 2009ರಲ್ಲಿ ಚೆನ್ನೈನಲ್ಲಿ ನಡೆದಿದ್ದ ದುಲೀಪ್‌ ಟ್ರೋಫಿ ಫೈನಲ್​​ನಲ್ಲಿ ದಕ್ಷಿಣ ವಲಯದ ವಿರುದ್ಧ ನಾವು ಆಡಿದ್ದೆವು. ಈ ಪಂದ್ಯದಲ್ಲಿ ದ್ರಾವಿಡ್‌ ಕೂಡ ಆಡಿದ್ದರು. ನಾನು 165 ಹಾಗೂ 98 ರನ್‌ ಗಳಿಸಿದ್ದೆ. ಪಂದ್ಯದ ಬಳಿಕ ರಾಹುಲ್‌ ಬಾಯ್‌ ನನ್ನನ್ನು ಕರೆದು, ನೀನು ಉತ್ತಮವಾಗಿ ಆಡುತ್ತಿದ್ದೀಯ.!! ಮುಂದೆಯೂ ಹೀಗೆ ಆಟದ ಮೇಲೆ ಗಮನ ಹರಿಸು.. ಟೀಮ್ ಇಂಡಿಯಾಕ್ಕೆ ಸಹಜವಾಗಿಯೇ ಆಯ್ಕೆಯಾಗ್ತೀರಿ ಅಂತ ದ್ರಾವಿಡ್​ ಹೇಳಿದ್ರು. ಇಂತಹ ಸಲಹೆ ದಿಗ್ಗಜ ರಾಹುಲ್‌ ಬಾಯ್​ರಿಂದ ಪಡೆದಾಗ, ನಿಜಕ್ಕೂ ತುಂಬಾ ಪ್ರೇರಣೆ ಅನಿಸಿತ್ತು. ಇದಾದ ಬಳಿಕ ನಾನು ಸಾವಿರಕ್ಕೂ ಹೆಚ್ಚಿನ ರನ್‌ ಗಳಿಸಿದ್ದೆ. ಎರಡು ವರ್ಷಗಳ ಬಳಿಕ ಟೀಮ್ ಇಂಡಿಯಾಕ್ಕೆ ಆಯ್ಕೆಯಾದೆ ಎಂದಿದ್ದಾರೆ ರಹಾನೆ.

ಚಾಪೆಲ್​ ಬಗ್ಗೆ ಆಸಕ್ತಿಕರ ವಿಷಯ ಹಂಚಿಕೊಂಡ ಸುರೇಶ್ ರೈನಾ​.!!

ಸುರೇಶ್ ರೈನಾರ ಆತ್ಮಚರಿತ್ರೆ ಬಿಲೀವ್ – ವಾಟ್ ಲೈಫ್ ಆ್ಯಂಡ್​ ಕ್ರಿಕೆಟ್ ಥಾಟ್​​ ಮಿ, ಎಂಬ ಪುಸ್ತಕದಲ್ಲಿ ಭಾರತದ ಮಾಜಿ ಕೋಚ್ ಗ್ರೆಗ್ ಚಾಪೆಲ್​​ರನ್ನ ಪ್ರಶಂಸಿಸಿದ್ದಾರೆ. 2005 ರಿಂದ 2007ರಲ್ಲಿ ಟೀಮ್​​ ಇಂಡಿಯಾ ಆಟಗಾರರು ಮತ್ತು ಚಾಪೆಲ್ ನಡುವೆ ಮನಸ್ಥಾಪ ಏರ್ಪಟ್ಟಿತ್ತು. ಆ ಸಮಯದಲ್ಲಿ ತಂಡದಿಂದ ಹೊರಹಾಕಲ್ಪಟ್ಟ ನಾಯಕ ಸೌರವ್ ಗಂಗೂಲಿಯನ್ನು ನಿಭಾಯಿಸಿದ ರೀತಿಗೆ, ಆಸ್ಟ್ರೇಲಿಯಾ ಕೂಡ ಪರಿಶೀಲನೆ ನಡೆಸಿತ್ತು. ಆದರೆ ವಿವಾದಗಳ ಹೊರತಾಗಿಯೂ ಚಾಪೆಲ್​, ಅಂದಿನ ಪೀಳಿಗೆಯ ನಿಜವಾದ ಆಟಗಾರರನ್ನು ರೂಪಿಸಿದ್ದಕ್ಕಾಗಿ ಸಾಕಷ್ಟು ಮನ್ನಣೆಗೆ ಅರ್ಹರು ಎಂದಿದ್ದಾರೆ.! 2011ರ ವಿಶ್ವಕಪ್​ ಗೆದ್ದಾಗ ತಿಳಿಯಿತು, ಚಾಪೆಲ್​ ಬಿತ್ತಿದ ಬೀಜ ಹೇಗೆ ಫಲ ನೀಡ್ತು ಅನ್ನೋದು. ಹಾಗಾಗಿ ವಿವಾದಗಳ ನಡುವೆಯೂ, ಎಲ್ಲೋ ಒಂದು ಕಡೆ ಭಾರತ ಹೇಗೆ ಗೆಲ್ಲಬೇಕು ಮತ್ತು ಗೆಲುವಿನ ಮಹತ್ವ ಏನು ಅನ್ನೋದನ್ನ ಕಲಿಸಿದ್ದಾರೆ. ಜೊತೆಗೆ ಬೃಹತ್​ ಮೊತ್ತ ಹೇಗೆ ಬೆನ್ನಟ್ಟಬೇಕು. ಒತ್ತಡದಿಂದ ಹೊರಬರೋದೇಗೆ ಎಂಬುದನ್ನ ಹೇಳಿಕೊಟ್ರು. ಅದರ ಕ್ರೆಡಿಟ್​ ಎಲ್ಲವೂ ಚಾಪೆಲ್​ ಮತ್ತು ರಾಹುಲ್​ ಭಾಯ್​ಗೆ ಸಲ್ಲಬೇಕು ಎಂದು, ರೈನಾ ತನ್ನ ಆತ್ಮಕಥೆಯಲ್ಲಿ ಬರೆದಿದ್ದಾರೆ.

ಗಂಗೂಲಿಯನ್ನ ಹಾಡಿ ಹೊಗಳಿದ ಕ್ರಿಕೆಟ್​ ಆಸ್ಟ್ರೇಲಿಯಾ ಸಿಇಒ

ಇತ್ತೀಚಿಗಷ್ಟೆ ಕ್ರಿಕೆಟ್ ಆಸ್ಟ್ರೇಲಿಯಾದ ನೂತನ ಸಿಇಒ ಆಗಿ ನೇಮಕವಾದ ನಿಕ್ ಹಾಕ್ಲೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಬಾಯ್ತುಂಬಾ ಹಾಡಿ ಹೊಗಳಿದ್ದಾರೆ. ಗ್ರೇಡ್​​ ಯೂಟ್ಯೂಬ್​​ ಚಾನೆಲ್​ನಲ್ಲಿ ಮಾತಾಡಿರುವ ಹಾಕ್ಲೆ, ಭಾರತದ ಮಾಜಿ ನಾಯಕ ಗಂಗೂಲಿಯಂತೆ ಹೆಚ್ಚು ಕಾಳಜಿ ಅಥವಾ ಉತ್ಸಾಹಭರಿತ ವ್ಯಕ್ತಿಯನ್ನು ಬೇರೆಲ್ಲೂ ನೋಡಿಲ್ಲ ಎಂದಿದ್ದಾರೆ. ಗಂಗೂಲಿ ನಿಜವಾಗಿಯೂ ಶ್ರೇಷ್ಠ ಮತ್ತು ಅತ್ಯಂತ ಮಾನವೀಯತೆಯುಳ್ಳ ವ್ಯಕ್ತಿ. ಜೊತೆಗೆ ಪ್ರಾಮಾಣಿಕ ವ್ಯಕ್ತಿ ಕೂಡ ಹೌದು.! ನಾನು ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆ ಎಂದರೆ, ಆಟದಿಂದ ಹಿಡಿದು ವ್ಯವಹಾರದವರೆಗೂ ಏನೇ ಆಗಲಿ, ತುಂಬಾ ಕಾಳಜಿ ವಹಿಸ್ತಾರೆ. ಅವರು ಏನು ಅನ್ನೋದನ್ನು ತೀರಾ ಹತ್ತಿರದಿಂದ ಬಲ್ಲೆ. ಹಾಗಾಗಿಯೇ ಈ ಮಾತು ಹೇಳಿದೆ. ಇಬ್ಬರೂ ಒಟ್ಟುಗೂಡಿ, ಕ್ರಿಕೆಟ್​ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದಿದ್ದಾರೆ ಹಾಕ್ಲೆ.

ಇವಿಷ್ಟು ಕ್ರಿಕೆಟ್​ ಲೋಕದ ಸದ್ಯದ ಟಾಪ್​ ನ್ಯೂಸ್​​​ಗಳು… ಮತ್ತಷ್ಟು ಇಂಟ್ರೆಸ್ಟಿಂಗ್​ ಸುದ್ದಿಗಳನ್ನ ನಾಳೆ ನಿಮ್ಮ ಮುಂದೆ ಇಡ್ತೀವಿ.

The post ‘ಟೀಮ್ ಇಂಡಿಯಾ ನಾಯಕ ಆಗ್ತೀನಿ ಅನ್ಕೊಂಡೆ.. ಆದ್ರೆ ಧೋನಿಗೆ ಪಟ್ಟ ಕಟ್ಟಿದ್ರು’ ಯುವಿ ನೋವು appeared first on News First Kannada.

Source: newsfirstlive.com

Source link

Leave a comment