ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಜುರಿ ಟೀಮ್​ ಇಂಡಿಯಾವನ್ನ ಬಾಧಿಸಿದಷ್ಟು ಭಾರತವನ್ನ ಯಾವ ಸರಣಿಯಲ್ಲೂ ಕಾಡಿಲ್ಲ. ಆರಂಭಿಕ ಪಂದ್ಯದಿಂದ ಕೊನೆಯ ಪಂದ್ಯದವರೆಗೂ ಇಂಜುರಿ ತಂಡದ ಬದಲಾವಣೆಯನ್ನ ಅನಿವಾರ್ಯವಾಗಿಸಿತ್ತು. ಮೊದಲ ಪಂದ್ಯವನ್ನಾಡಿದ ಕೇವಲ ಇಬ್ಬರು ಆಟಗಾರರು ಮಾತ್ರ ಅಂತಿಮ 4ನೇ ಟೆಸ್ಟ್​ ಪಂದ್ಯದ ತಂಡದಲ್ಲಿದ್ರು. ಒಟ್ಟು ​ಐವರು ಯುವ ಆಟಗಾರರು ಪ್ರತಿಷ್ಠೆಯ ಸರಣಿಯಲ್ಲಿ ಡೆಬ್ಯೂ ಮಾಡಿದ್ರು.

ಪ್ರತಿಷ್ಠೆಯ ಕಣದಲ್ಲಿ ಡೆಬ್ಯೂ ಮಾಡಿದ ಆಟಗಾರರು ಮಿಂಚು ಹರಿಸಿದ್ರು. ಪರಿಣಾಮ ಕಾಂಗರೂಗಳ ನಾಡಲ್ಲಿ ಟೀಮ್​ ಇಂಡಿಯಾ ದಿಗ್ವಿಜಯ ಸಾಧಿಸಿತು. ಆ ಬಳಿಕವೇ ಆರಂಭವಾಗಿದ್ದು, ಟೀಮ್​ಇಂಡಿಯಾ ಬೆಂಚ್​ ಸ್ಟ್ರೆಂಥ್​​​ನ ಚರ್ಚೆ! ಇದೀಗ ಇತಿಹಾಸದಲ್ಲೇ ಮೊದಲ ಬಾರಿಗೆ ಏಕಕಾಲಕ್ಕೆ ಎರಡು ಪ್ರತ್ಯೇಕ ಪ್ರವಾಸಗಳಿಗೆ ಪ್ರತ್ಯೇಕ ತಂಡಗಳನ್ನ ಬಿಸಿಸಿಐ ಆಯ್ಕೆ ಮಾಡೋದ್ರೊಂದಿಗೆ ಈ ಚರ್ಚೆ ಮತ್ತಷ್ಟು ಹೆಚ್ಚಿದೆ.

ಟೀಮ್​ ಇಂಡಿಯಾ ಬೆಂಚ್​ ಸ್ಟ್ರೆಂಥ್​​ ಹೆಚ್ಚಿದ್ದೇಗೆ..?
2018-19ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂದಿನ ಚೀಫ್​ ಸೆಲೆಕ್ಟರ್​ ಎಮ್​ಎಸ್​ಕೆ ಪ್ರಸಾದ್​ಗೆ ಎದುರಾದ ಪ್ರಶ್ನೆಯಿದು. ಇದಕ್ಕೆ ಪ್ರಸಾದ್​ ಉತ್ತರ ಗ್ರೇಗ್​ ಚಾಪೆಲ್​ ಅನ್ನೋದಾಗಿತ್ತು. ಚಾಪೆಲ್​ ಕೋಚ್​ ಆಗಿದ್ದ ಅವಧಿಯಲ್ಲಿ 10-15 ಬೌಲರ್​​ಗಳ ಆಡಿಷನ್​ ನಡೆಸುತ್ತಿದ್ದ ಚಾಪೆಲ್​ ಅದರಲ್ಲಿ 4 ಜನರನ್ನ ಸೆಲೆಕ್ಟ್​ ಮಾಡ್ತಿದ್ರಂತೆ. ಆದ್ರೆ, ಆಯ್ಕೆಯಾದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ರೂ ಕನ್ಸಿಸ್ಟೆನ್ಸಿ ಮೇಟೆನ್​ ಮಾಡುವಲ್ಲಿ ಎಡವುತ್ತಿದ್ರು. ಹೀಗಾಗಿ ನಾವು ತಳಮಟ್ಟದಿಂದಲೇ ಆಯ್ಕೆ ನಿರ್ಧಾರ ತೆಗೆದುಕೊಂಡೆವು ಅನ್ನೋದು ಪ್ರಸಾದ್​ ಹೇಳಿದ ಉತ್ತರವಾಗಿತ್ತು. ಆದ್ರೆ ತಾವು ಮಾಡಿದ್ದೇನು ಅನ್ನೋದನ್ನ ಪ್ರಸಾದ್​ ಅಲ್ಲಿ ರಿವೀಲ್​ ಮಾಡಿರಲಿಲ್ಲ. ಇದೀಗ ಆ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಭವಿಷ್ಯದ ಟೀಮ್​ ಇಂಡಿಯಾ ಕಟ್ಟಿದ ನಾಲ್ವರು ಮಾಜಿ ಕ್ರಿಕೆಟರ್ಸ್​..!
ಕೊನೆಯ ಬಾರಿ ವಿದೇಶಿ ಪ್ರವಾಸದಲ್ಲಿ ಟೀಮ್​ಇಂಡಿಯಾ ಪರ ಹೆಚ್ಚು ಮಂದಿ ಡೆಬ್ಯೂ ಮಾಡಿದಂದ್ರೆ ಅದು 1996ರ ಇಂಗ್ಲೆಂಡ್​​ ಪ್ರವಾಸದಲ್ಲಿ. ಆ ಸರಣಿಯಲ್ಲಿ ಪದಾರ್ಪಣೆ ಮಾಡಿದ ಇಬ್ಬರೇ ಇಂದಿನ ಟೀಮ್ ಇಂಡಿಯಾ ಬೆಂಚ್​​ ಸ್ಟ್ರೆಂಥ್​ನ ಪಿಲ್ಲರ್ಸ್​. ಕನ್ನಡಿಗ ರಾಹುಲ್​​ ದ್ರಾವಿಡ್​ ಅದರಲ್ಲಿ ಒಬ್ಬರಾದ್ರೆ, ಮುಂಬೈನ ಪರಾಸ್​ ಮಾಂಬ್ರೆ ಇನ್ನೊಬ್ರು..! ಅಲ್ಲದೆ ಆಯ್ಕೆ ಸಮಿತಿ ಮುಖ್ಯಸ್ಥ MSK ಪ್ರಸಾದ್​​, ಜೂನಿಯರ್​​ ಸೆಲೆಕ್ಷನ್​ ಕಮಿಟಿಯ ಮಾಜಿ ಮುಖ್ಯಸ್ಥ ಆಶಿಶ್​ ಕಪೂರ್​​ ಪಾತ್ರವೂ ಇದರಲ್ಲಿದೆ.

ಈ ನಾಲ್ವರಿಂದಲೇ ಸಾಧ್ಯವಾಗಿದ್ದು ಭವಿಷ್ಯದ ಟೀಮ್​ ಇಂಡಿಯಾ. ಜೊತೆಗೆ ಅಂದು ಲೋಧಾ ಕಮಿಟಿ ನೀಡಿದ್ದ ನಿರ್ದೇಶನಗಳು ಕೂಡ ಇದಕ್ಕೆ ಹೆಚ್ಚು ಸಹಾಯಕವಾದ್ವು. ಆರಂಭದಲ್ಲಿ ಅಂಡರ್​​ -19 ಹಾಗೂ ಅಂಡರ್​​ -16 ತಂಡಗಳ 36 ಪಂದ್ಯಗಳನ್ನ ನಡೆಸಲಾಗುತ್ತಿತ್ತು. ಈ ಪಂದ್ಯಗಳಲ್ಲಿ ತಂಡದ ಆಯ್ಕೆ ನಿರ್ಧರಿಸಬೇಕಿತ್ತು,. ಆದ್ರೆ, ಈ ನಾಲ್ವರು ಈ ನಿಯಮವನ್ನೇ ಬದಲಿಸಿದ್ರು. 36 ಪಂದ್ಯಗಳಿಂದ 150 ಆಟಗಾರರ ಆಯ್ಕೆ ಮಾಡುವ ನಿರ್ಧಾರಕ್ಕೆ ಬಂದರು. ಭವಿಷ್ಯದ ಭಾರತದ ನಿರ್ಮಾಣ ಕಾರ್ಯ ಆರಂಭವಾಗಿದ್ದು ಹೀಗೆ..!

ಹೇಗಿತ್ತು ಆಯ್ಕೆಯ ಆರಂಭಿಕ ಹಂತ.?
* ಕಿರಿಯರ ತಂಡದ 36 ಪಂದ್ಯದಿಂದ 150 ಆಟಗಾರರ ಆಯ್ಕೆ
* ತಲಾ 25 ಜನರನ್ನ ಒಳಗೊಂಡ 6 ತಂಡಗಳ ರಚನೆ
* ಜೋನಲ್​ ಕ್ರಿಕೆಟ್​ ಅಕಾಡೆಮಿಯಲ್ಲಿ ಒಂದು ತಿಂಗಳ ಕ್ಯಾಂಪ್
* ಅಲ್ಲಿ ಎನ್​ಸಿಎ ಕೋಚ್​ಗಳಿಂದ ಮಾರ್ಗದರ್ಶನ, ನಿರ್ದೇಶನ
* ಫಿಟ್​ನೆಸ್, ಪರ್ಫಾಮೆನ್ಸ್​​ ಆಧಾರದಲ್ಲಿ 50 ಆಟಗಾರರ ಆಯ್ಕೆ

ಇದು ಯುವ ಆಟಗಾರರ ಆಯ್ಕೆಯ ಮೊದಲ ಸೆಲೆಕ್ಷನ್​ ಪ್ರೋಸೆಸ್​ ಆದ್ರೆ, 2ನೇ ಹಂತದಲ್ಲಿ 50 ಆಟಗಾರರನ್ನ 25 ಜನರಂತೆ ಎರಡು ತಂಡಗಳನ್ನ ರಚಿಸಿ 2 ತಿಂಗಳ ನ್ಯಾಷನಲ್​ ಕ್ಯಾಂಪ್​ಗೆ ಕಳಿಸೋದು 2ನೇ ಹೆಜ್ಜೆ. ಇಲ್ಲಿ ಟೆಸ್ಟ್​ ಪಾಸಾದ 15ರಿಂದ 20 ಆಟಗಾರರಿಗೆ ಸಿಕ್ಕಿದ್ದು ಮುಂದಿನ ಅವಕಾಶ. ಈ ಆಟಗಾರರನ್ನ ನೇರವಾಗಿ ಮಾನಿಟರ್​ ಮಾಡಿದ್ದು ಸೆಲೆಕ್ಷನ್​ ಕಮಿಟಿ ಹಾಗೂ ಎನ್​ಸಿಎ ಸಿಬ್ಬಂದಿ. ಇಲ್ಲಿ ಯಶಸ್ಸು ಕಂಡವರಿಗೆ ಅಂಡರ್​19 ಹಾಗೂ ಇಂಡಿಯಾ ಎ ತಂಡಗಳ ಟಿಕೆಟ್​ ಸಿಕಿದ್ದು..!

ಇದು ಸದ್ಯದ ಪ್ಲಾನ್​ ಆ್ಯಂಡ್ ಪ್ರೋಸೆಸ್​​ ಅಲ್ಲ. 2019ರ ವಿಶ್ವಕಪ್​ ವೇಳೆ ನಡೆದಿದ್ದ ಕಾರ್ಯಾಚರಣೆ ಇದು. ಈಗಿನ ಸಿರಾಜ್​, ಸೈನಿ, ಪೃಥ್ವಿ ಷಾ, ಶುಭ್​ಮನ್​ ಎಲ್ಲಾ ಈ ಪರೀಕ್ಷೆಗೆ ಒಳಗಾದವರೇ. ಹೀಗಾಗಿಯೇ ಇಂದು ಮ್ಯಾನೇಜ್​ಮೆಂಟ್​ಗೆ ಏಕ ಕಾಲಕ್ಕೆ ಎರಡು ಪ್ರವಾಸಗಳಿಗೆ ಎರಡು ಪ್ರತ್ಯೇಕ ತಂಡಗಳನ್ನ ಆಯ್ಕೆ ಮಾಡೋದಕ್ಕೆ ಸಾಧ್ಯವಾಗಿದ್ದು. ಬಾರ್ಡರ್​​-ಗವಾಸ್ಕರ್​ ಟ್ರೋಫಿಯನ್ನ ಟೀಮ್​ಇಂಡಿಯಾ ಜಯಿಸಿದ ಮೇಲೆ, ಆಸ್ಟ್ರೇಲಿಯನ್​ ಕೋಚ್​ ಜಸ್ಟೀನ್​ ಲ್ಯಾಂಗರ್​​ ಭಾರತೀಯರನ್ನ ಅಂಡರ್​ಎಸ್ಟಿಮೇಟ್​​ ಮಾಡಬೇಡಿ ಅಂದಿದ್ದು ಕೂಡ ಈ ಕಾರಣದಿಂದಲೇ.

ಒಟ್ಟಿನಲ್ಲಿ 2018ರಲ್ಲಿ ಆರಂಭವಾದ ಒಂದು ಕಾರ್ಯಾಚರಣೆ ಈಗ ಯಶಸ್ಸು ಕಂಡಿದೆ. ಇದೇ ಯೋಜನೆಯನ್ನ ಮುಂದುವರೆಸಿದ್ದೇ ಆದರಲ್ಲಿ ಟೀಮ್​ಇಂಡಿಯಾ ಹಲ ವರ್ಷಗಳ ಕಾಲ ವಿಶ್ವ ಕ್ರಿಕೆಟ್ ಲೋಕವನ್ನ ಆಳೋದ್ರಲ್ಲಿ ಅನುಮಾನವೇ ಇಲ್ಲ.

The post ಟೀಮ್ ಇಂಡಿಯಾ ‘ಬೆಂಚ್ ಸ್ಟ್ರೆಂಥ್’ ಮಾಡಲು ದ್ರಾವಿಡ್ ಏನೆಲ್ಲಾ ಮಾಡಿದ್ರು..? appeared first on News First Kannada.

Source: newsfirstlive.com

Source link